Dailyhunt
*ಮದ್ಯದಿಂದ ಬರುವ ಆದಾಯ 34 ಸಾವಿರ ಕೋಟಿ, ದುಷ್ಪರಿಣಾಮದಿಂದ ನಷ್ಟ 51 ಸಾವಿರ ಕೋಟಿ!!*

*ಮದ್ಯದಿಂದ ಬರುವ ಆದಾಯ 34 ಸಾವಿರ ಕೋಟಿ, ದುಷ್ಪರಿಣಾಮದಿಂದ ನಷ್ಟ 51 ಸಾವಿರ ಕೋಟಿ!!*

Pragativahini 1 week ago

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯ ಅಬಕಾರಿ ಸುಧಾರಣೆಗಳು (2026) ಎಂಬ ಕರಡನ್ನು ಸಾರ್ವಜನಿಕರ ಸಮಾಲೋಚನೆಗಾಗಿ ಬಿಡುಗಡೆ ಮಾಡಿದೆ.

ನೀತಿಯು ಜನಕೇಂದ್ರಿತವಾಗಿದ್ದು, ದರವು ಮದ್ಯ ಕುಡಿತದಿಂದ ಉಂಟಾಗುವ ನೈಜ ಸಾಮಾಜಿಕ ಪರಿಣಾಮಗಳ ಮಾನದಂಡವನ್ನು ಆಧರಿಸಿದೆ.

ವಾರ್ಷಿಕವಾಗಿ ಮದ್ಯದಿಂದ ₹34,600 ಕೋಟಿ ಆದಾಯ ಉತ್ಪಾದಿಸುತ್ತದೆ. ರಸ್ತೆ ಅಪಘಾತ, ಕೌಟುಂಬಿಕ ಹಿಂಸಾಚಾರ, ಯಕೃತ್‌ಗೆ ಸಂಬಂಧಿಸಿದ ರೋಗಗಳು, ಮದ್ಯ ಸೇವೆನೆಯಿಂದಾಗುವ ಕಾಯಿಲೆಗಳು ಹಾಗೂ ಕುಟುಂಬದ ಆದಾಯ ನಷ್ಟಗಳೆಲ್ಲವೂ ಸಾಮಾಜಿಕ ಹಾನಿಯಡಿ ಬರುತ್ತವೆ. ಇವೆಲ್ಲದರ ಒಟ್ಟಾರೆ ನಷ್ಟ ₹51,000 ಕೋಟಿ ಎಂದು ಅಂದಾಜಿಸಲಾಗಿದೆ.

ನೀತಿಯು ಶುದ್ಧ ಆಲ್ಕೋಹಾಲ್‌ ಆಧಾರಿತ ತೆರಿಗೆ ವ್ಯವಸ್ಥೆಯನ್ನು (ಮದ್ಯದಲ್ಲಿರುವ ಶುದ್ಧ ಆಲ್ಕೋಹಾಲ್‌ ಅಂಶ+ವ್ಯಾಟ್‌) ಒಳಗೊಂಡಿದ್ದು, ಕ್ಯೂಆರ್‌ ಆಧಾರಿತ ಪೂರೈಕೆ ವ್ಯವಸ್ಥೆ ಹಾಗೂ ಡಿಜಿಟಲ್‌ ಟ್ರ್ಯಾಕ್‌ ಆಯಂಡ್‌ ಟ್ರೇಸ್‌ ತಂತ್ರಜ್ಞಾನವನ್ನು ಒಳಗೊಂಡಿದೆ. ಸರಳೀಕೃತ ಡಿಜಿಟಲ್‌ ಪರವಾನಗಿ, ಪ್ರಾಮಾಣೀಕೃತ ಆರೋಗ್ಯ ಎಚ್ಚರಿಕೆಗಳು ಸೇರಿವೆ. ಜೊತೆಗೆ ಚಿಲ್ಲರೆ ವ್ಯಾಪಾರವು ಕೋಟಾ ಆಧಾರಿತ ವ್ಯವಸ್ಥೆಯಿಂದ ನೋಂದಣಿ ಆಧಾರಿತ ವ್ಯವಸ್ಥೆಗೆ ಬದಲಾಗಲಿದೆ. ಶಾಲೆಗಳು ಹಾಗೂ ಆಸ್ಪತ್ರೆಗಳ ಸಮೀಪದ ಪ್ರದೇಶಗಳಲ್ಲಿ ನಿರ್ಬಂಧವಿರಲಿದೆ.

ಹೆಚ್ಚುವರಿಯಾಗಿ, ಅಬಕಾರಿ ಆದಾಯದ ಒಂದು ಭಾಗವನ್ನು ಮದ್ಯವರ್ಜನ ಸೇವೆಗಳಿಗೆ, ರಸ್ತೆ ಸುರಕ್ಷತೆಗೆ, ಕೌಟುಂಬಿಕ ಹಿಂಸಾಚಾರ ತಡೆಗೆ ಮತ್ತು ಮದ್ಯ ಸೇವನೆಯ ದುಷ್ಪರಿಣಾಮಗಳ ಕುರಿತು ಯುವಕರಿಗೆ ಜಾಗೃತಿ ಮೂಡಿಸುವ ಅಭಿಯಾನಗಳಿಗೆ ಮೀಸಲಿಡಲಾಗುವುದು.

ಸುಧಾರಣೆಗಳ ನೀತಿಯಡಿ ಮುಖ್ಯವಾಗಿ ಮುಂದಿನ 6 ವರ್ಷಗಳಲ್ಲಿ ಮದ್ಯ ಸೇವನೆಯ ಪ್ರಮಾಣವನ್ನು 8-9%ಗೆ ಇಳಿಕೆ ಮಾಡುವ ಗುರಿಯನ್ನು ಹೊಂದಲಾಗಿದೆ. ಕಡಿಮೆ ಪ್ರಮಾಣದ ಆಲ್ಕೋಹಾಲ್‌ ಇರುವ ಮದ್ಯಕ್ಕೆ ಉತ್ತೇಜನ ನೀಡುವುದು, ಸರಳೀಕೃತ ತೆರಿಗೆ ವ್ಯವಸ್ಥೆ ಜಾರಿ ಮಾಡುವುದು ಹಾಗೂ ಅಕ್ರಮ ವ್ಯಾಪಾರಕ್ಕೆ ಕಡಿವಾಣ ಹಾಕುವುದು ಕೂಡ ಸೇರಿವೆ.

ಕರ್ನಾಟಕ ಸರ್ಕಾರವು ನೀತಿಯ ಅನುಷ್ಠಾನಕ್ಕೂ ಮುನ್ನ ಸಮಾಲೋಚನೆಗೆ ಮಹತ್ವ ನೀಡಿದ್ದು, ಸಾರ್ವಜನಿಕರಿಂದ, ವ್ಯಾಪಾರಿಗಳಿಂದ, ತಜ್ಞರಿಂದ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದೆ. ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಅಧಿಕೃತ ಸಮಾಲೋಚನಾ ಪೋರ್ಟಲ್‌ (https://www.civis.vote/consultations/1524/read)ಗೆ ಭೇಟಿ ನೀಡಿ ಅಥವಾ ವಾಟ್ಸಾಪ್‌ ಚಾಟ್‌ಬಾಟ್‌ ಮೂಲಕ ಸಂಪರ್ಕಿಸಿ. ಚಾಟ್‌ಬಾಟ್‌ಗಾಗಿ "karnatakaexcise" ಎಂಬ ಕೀವರ್ಡ್‌ಅನ್ನು https://wa.link/uv7q49 ಲಿಂಕ್‌ಗೆ ಕಳುಹಿಸಿ.

Dailyhunt
Disclaimer: This content has not been generated, created or edited by Dailyhunt. Publisher: Pragativahini