Dailyhunt
*ಮಹಿಳೆ ಮೌನಿಯಾಗಿರದೇ, ಹೆಚ್ಚು ಮಾತನಾಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌*

*ಮಹಿಳೆ ಮೌನಿಯಾಗಿರದೇ, ಹೆಚ್ಚು ಮಾತನಾಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌*

Pragativahini 3 weeks ago

ರ್ನಾಟಕ ರಾಜ್ಯ ಅಬಕಾರಿ ಇಲಾಖೆ ನೌಕರರ ಸಂಘದ ವತಿಯಿಂದ ಮಹಿಳಾ ದಿನಾಚರಣೆ

ಪ್ರಗತಿವಾಹಿನಿ ಸುದ್ದಿ: ಮಹಿಳೆಯರು ಜಾಸ್ತಿ ಮಾತನಾಡಬಾರದು ಎಂದು ಈ ಹಿಂದೆ ಹೇಳಲಾಗುತ್ತಿತ್ತು. ಆದರೆ, ನಾನು ಹೇಳಬಯಸುತ್ತೇನೆ ಮಹಿಳೆಯರು ಜಾಸ್ತಿ ಮಾತನಾಡಬೇಕು. ಬೇರೆಯವರನ್ನು ಪ್ರಶ್ನೆ ಮಾಡುವ ಮಟ್ಟಿಗೆ ಬೆಳೆಯಬೇಕು.

ಪುರುಷರ ಸಮಾನಾಗಿ ಬೆಳೆಯಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಂಭಾಗಣದಲ್ಲಿ ಕರ್ನಾಟಕ ರಾಜ್ಯ ಅಬಕಾರಿ ಇಲಾಖೆ ನೌಕರರ ಸಂಘದ ವತಿಯಿಂದ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಸಚಿವರು ಮಾತನಾಡಿದರು.

ಗೃಹಲಕ್ಷ್ಮೀ, ಶಕ್ತಿ ಯೋಜನೆಗಳು ಮಹಿಳೆಯರಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಟ್ಟಿದೆ. ಉಚಿತ ಬಸ್‌ ಪ್ರಯಾಣ ಇರುವುದರಿಂದ ಮಹಿಳಾ ನೌಕರರು ಕೂಡ ಜಾಸ್ತಿ ಆಗಿದ್ದಾರೆ. ಸುಮಾರು 1.25 ಕೋಟಿ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿದ್ದು, ಇದುವರೆಗೂ 58 ಸಾವಿರ ಕೋಟಿ ರೂಪಾಯಿಗಳನ್ನು ಫಲಾನುಭವಿಗಳ ಖಾತೆಗೆ ಹಾಕಲಾಗಿದೆ. ಪ್ರತಿಯೊಬ್ಬರಿಗೂ 56 ಸಾವಿರ ರೂಪಾಯಿ ಹಾಕಲಾಗಿದೆ ಎಂದರು.

ಮಹಿಳಾ ದಿನಾಚರಣೆ ಕೇವಲ ಒಂದು ದಿನ ಅಥವಾ ಮಾರ್ಚ್‌ ತಿಂಗಳಿಗೆ ಸೀಮಿತವಾಗದೆ ವರ್ಷವಿಡೀ ಮಾಡುವಷ್ಟು ಶಕ್ತರಾಗಿದ್ದೇವೆ. ಇಂದು ಭಾರತೀಯ ನಾರಿಯರು ಸಾಕಷ್ಟು ಮುಂದುವರಿದಿದ್ದಾರೆ. ಭಾರತ ದೇಶದಲ್ಲಿ ಗಂಡ ಸತ್ತ ಬಳಿಕ ಜೀವನ ಮಾಡುವುದೇ ಕಷ್ಟಕರ ಎಂಬ ಸನ್ನಿವೇಶ ಇತ್ತು. ಆದರೆ, ಇವತ್ತು ಪರಿಸ್ಥಿತಿ ಬದಲಾಗಿದೆ, ಇವತ್ತು ನಾವು ಸ್ವಾಭಿಮಾನಿಗಳಾಗಿ ಬದುಕುತ್ತಿದ್ದೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಬ್ರಿಟಿಷರ ಸಾಮ್ರಾಜ್ಯವನ್ನು ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಕರೆಯಲಾಗುತ್ತಿತ್ತು. ಆದರೆ, ಇಂಥವರ ವಿರುದ್ಧ ಹೋರಾಡಿದವರು ಕಿತ್ತೂರು ರಾಣಿ ಚೆನ್ನಮ್ಮ. ರಾಜರು, ಮಹಾರಾಜರು ಬ್ರಿಟಿಷರ ವಿರುದ್ಧ ಹೋರಾಡಲು ಹಿಂದೇಟು ಹಾಕುತ್ತಿದ್ದ ಕಾಲದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದರು. ಬ್ರಿಟಿಷರ ವಿರುದ್ಧದ ಹೋರಾಡಿದ ಪ್ರಪ್ರಥಮ ಮಹಿಳೆ ಎಂದು ಸಚಿವರು ಸ್ಮರಿಸಿದರು.

ಸಾಲ ಜಾಸ್ತಿ ಆಯಿತು ಅಂತ ಪುರುಷರು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿದ್ದೇವೆ. ಆದರೆ, ಮಹಿಳೆ ಮಕ್ಕಳಿಗಾಗಿ ಬದುಕು ಕಟ್ಟಿಕೊಳ್ಳುತ್ತಾಳೆ. ಮಹಿಳೆಯರಿಗೆ ಬದುಕುವ ಛಲ ಇರುತ್ತದೆ. ಇವತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯೇ ಪಾರತ್ಯ ಸಾಧಿಸುತ್ತಿದ್ದಾಳೆ. ಸರ್ಕಾರಿ ನೌಕರಿಯಲ್ಲಿ ಶೇಕಡ 52 ರಷ್ಟು ಮಹಿಳಾ ನೌಕರರಿದ್ದಾರೆ, ಇದೇ ಮಹಿಳೆಯರಿಗೆ ಇರುವ ಛಲ, ವಿಶ್ವಾಸ ಮತ್ತು ಶಕ್ತಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ತಿಳಿಸಿದರು.

ಕ್ರಿಕೆಟ್‌ ಅಂದರೆ ಕೇವಲ ಪುರುಷರ ಪ್ರಧಾನ ಕ್ರೀಡೆಯಾಗಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಕಳೆದ ವರ್ಷ ಭಾರತ ಮಹಿಳಾ ತಂಡ ಹಾಗೂ ಭಾರತ ಅಂಧರ ಮಹಿಳಾ ತಂಡಗಳು ವಿಶ್ವಕಪ್‌ ಟ್ರೋಫಿ ಗೆದ್ದುಕೊಂಡವು. ಮೊದಲು ಮಹಿಳಾ ಕ್ರಿಕೆಟ್‌ ಪಂದ್ಯಗಳಿಗೆ ಟಿಕೆಟ್‌ ತೆಗೆದುಕೊಳ್ಳಲು ಯಾರೂ ಮುಂದೆ ಬರುತ್ತಿರಲಿಲ್ಲ. ಆದರೆ, ಏಕದಿನ ಮಹಿಳಾ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯವನ್ನು ಸುಮಾರು 41 ರಿಂದ 50 ಕೋಟಿ ವೀಕ್ಷಕರು ನೋಡಿದ್ದಾರೆ. ಇದು ಹೆಮ್ಮೆಯ ಹಾಗೂ ಬದಲಾವಣೆಯ ಸಂಕೇತ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ತಿಳಿಸಿದರು.

ಬೇರೆಯವರಿಗೆ ಪ್ರೇರಣೆಯಾಗಿ

ನಮ್ಮಲ್ಲಿ ಹೆಣ್ಣುಮಕ್ಕಳು ಶ್ರೀಮಂತರು ಶ್ರೀಮಂತರಾಗಿ, ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ. ಇದನ್ನು ನಾವು ಬದಲಾಯಿಸೋಣ. ನಾವು ಬೇರೆಯವರಿಗೆ ಪ್ರೇರಣೆಯಾಗಿ ಮುಂದೆ ಬರಲು ಸಹಕರಿಸೋಣ ಎಂದು ಸಚಿವರು ತಿಳಿಸಿದರು.

ಈ ವೇಳೆ ಅಬಕಾರಿ ಇಲಾಖೆಯ ಅಪರ ಆಯುಕ್ತರಾದ ಬಸವರಾಜ್ ಸೋಮಣ್ಣನವರ್, ಅಬಕಾರಿ ನೌಕರರ ಸಂಘದ ಅಧ್ಯಕ್ಷರಾದ ಡಾ.ವೈ. ಮಂಜುನಾಥ್, ಸಾಹಿತಿ ಸುಧಾ ಬರಗೂರು, ಪ್ರಗತಿಪರ ರೈತರಾದ ಕವಿತಾ ಮಿಶ್ರಾ, ಅಬಕಾರಿ ಉಪ ಆಯುಕ್ತರಾದ ಮಾದೇಶ್, ಜಂಟಿ ಆಯುಕ್ತರಾದ ಸುರೇಶ್ ಕುಮಾರ್, ಶೈಲಜಾ ಕೋಟೆ, ಅಶ್ವಿನಿ ಹಾಗೂ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Pragativahini