Dailyhunt Logo
  • Light mode
    Follow system
    Dark mode
    • Play Story
    • App Story
*ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಸನ್ನದ್ಧರಾಗಿರಬೇಕು: ಡಿಸಿ ಮೊಹಮ್ಮದ್ ರೋಷನ್*

*ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಸನ್ನದ್ಧರಾಗಿರಬೇಕು: ಡಿಸಿ ಮೊಹಮ್ಮದ್ ರೋಷನ್*

Pragativahini 1 week ago

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಳೆದ ಮೂರು ದಿನಗಳಿಂದ ನೆರೆಯ ಮಹಾರಾಷ್ಟ್ರ ಹಾಗೂ ಬೆಳಗವಾಇ ಜಿಲ್ಲೆಯ ಒಂಭತ್ತು ತಾಲೂಕುಗಳಲ್ಲಿ ವ್ಯಾಪಕ ಮಳೆ ಆಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ನದಿ ಪಾತ್ರದ ಗ್ರಾಮಗಳಲ್ಲಿ ಎದುರಾಗಬಹುದಾದ ಸಂಭವನೀಯ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಅಧಿಕಾರಿಗಳು ಸನ್ನದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ‌ ಸಭಾಂಗಣದಲ್ಲಿ ಮಂಗಳವಾರ (ಜು.7) ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ನದಿ ಪಾತ್ರಗಳಲ್ಲಿ ಮಳೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸೇತುವೆಗಳು ಮುಳಗುವ‌ ಭೀತಿ‌ ಇದ್ದು ಅಂತಹ ಸೇತುವೆಗಳ ಮೇಲೆ ಜನ, ಜಾನುವಾರು ಸಂಚಾರ ನಿರ್ಬಂಧಿಸಬೇಕು. ಈ ಕಾರ್ಯಕ್ಕೆ ಪೋಲಿಸ್ ಇಲಾಖೆ ಸಹಕಾರ ಪಡೆಯಲು ತಿಳಿಸಿದರು.

ಸಂಭವನೀಯ ಪ್ರವಾಹ ಎದುರಾದಲ್ಲಿ ನದಿ ಪಾತ್ರದಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಬೋಟಗಳ ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕು. ಎಸ್.ಡಿ.ಆರ್.ಎಫ್ ಹಾಗೂ ಅಗ್ನಿ ಶಾಮಕ ತಂಡಗಳು ಪ್ರವಾಹದಂತಹ ಪರಿಸ್ಥಿತಿಯನ್ನು ಎದುರಿಸಲು ಸದಾ ಸನ್ನದ್ಧವಾಗಿರಬೇಕು. ತಹಶಿಲ್ದಾರರುಗಳು ಎಸ್.ಡಿ.ಆರ್.ಎಫ್. ತಂಡದೊಂದಿಗೆ ನಿರಂತರ ಸಮನ್ವಯ ಸಾಧಿಸಿ, ಅಗತ್ಯವಿದ್ದಲ್ಲಿ ಕೂಡಲೇ ಮಾಹಿತಿ ನೀಡಲು ಸೂಚಿಸಿದರು.

ಜಿಲ್ಲೆಯಲ್ಲಿ ಕ್ರಮೇಣ ಮಳೆ‌ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೂಡಲೆ ಜಿಲ್ಲಾ ಹಾಗೂ ತಾಲೂಕು‌ ಮಟ್ಟದಲ್ಲಿ ಸಹಾಯವಾಣಿ ಕೇಂದ್ರ ಸ್ಥಾಪಿಸಲು ತಿಳಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕಂಬ, ವಿದ್ಯುತ್ ಪರಿವರ್ತಕ ಹಾಗೂ ವಿದ್ಯುತ್ ತಂತಿಗಳ ದುರಸ್ತಿ ಕಾರ್ಯ ಕೈಗೊಳ್ಳಬೇಕು.

ಗ್ರಾಮೀಣ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಶಿಥಿಲಾವಸ್ಥೆಯಲ್ಲಿರುವಂತಹ ಮನೆಗಳನ್ನು ಗುರುತಿಸಿ ಮಳೆ ಹೆಚ್ಚಾದಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ ನೀಡಬೇಕು. ಭಾಗಶ: ಹಾಗೂ ಪೂರ್ಣ ಮನೆ ಹಾನಿಗಳ ಸಮೀಕ್ಷಾ ಕಾರ್ಯ ಕೈಗೊಳ್ಳಬೇಕು. ಜಾನುವಾರುಗಳಿಗೆ ಮೇವು ಕೊರತೆ ಆಗದಂತೆ ನಿಗಾವಹಿಸಲು ತಿಳಿಸಿದರು.

ಜಿಲ್ಲೆಯಲ್ಲಿ ಅತೀವೃಷ್ಠಿಯಿಂದಾಗಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಗುರುತಿಸಲಾದ 397 ಕಾಳಜಿ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯಗಳ ಕುರಿತು ಪರಿಶೀಲಿಸಬೇಕು.

ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ‌ಮಳೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಅಲ್ಲಿನ ಜಲಾಶಯಗಳಿಂದ ನೀರು ಬಿಡುಗಡೆ ಮಾಡಲಾಗುತ್ತಿದೆ. ಈ ಕುರಿತು ಅಲ್ಲಿನ ಅಧಿಕಾರಿಗಳೊಂದಿಗೆ ನಿರಂತರ‌ ಸಂಪರ್ಕ ಸಾಧಿಸಲು ಜಿಲ್ಲೆಯ ಓರ್ವ‌ ಅಧಿಕಾರಿಯನ್ನು

ನೇಮಿಸಿ ನಿರಂತರ‌ ಮಾಹಿತಿ‌ ಪಡೆಯಲು ತಿಳಿಸಿದರು.

ಮಳೆಯಿಂದಾಗಿ ಹರಡಬಹುದಾದ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಜಾಗೃತಿ ಮೂಡಿಸಬೇಕು. ಸಂಭವನೀಯ‌ ಪ್ರವಾಹ ಪ್ರದೇಶಗಳಲ್ಲಿ ಬೇಕಾಗಬಹುದಾದ ಜೌಷಧಿಗಳ ದಾಸ್ತಾನು ಮಾಡಿಕೊಳ್ಳಬೇಕು. ಡೆಂಗ್ಯೂ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾದ ಪರೀಕ್ಷೆಗಳ ವರದಿ ನೀಡುವುದರ‌ ಜೊತೆಗೆ ಕುಡಿಯಲು ಯೋಗ್ಯವಲ್ಲದ‌ ನೀರಿನ ಮೂಲಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ ಅವರು ಸೂಚಿಸಿದರು.

ಜಿಲ್ಲೆಯಲ್ಲಿ ಸಂಭವನೀಯ ಪ್ರವಾಹ ಪರಿಸ್ಥಿತಿಯಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಎಸ್.ಡಿ.ಆರ್.ಎಫ್.‌ನ 5, ಅಗ್ನಿಶಾಮಕ ಇಲಾಖೆಯ 9, ತಾಲೂಕಿನಲ್ಲಿ 27 ಸೇರಿದಂತರ ಒಟ್ಟು 41 ಬೋಟುಗಳು‌ ಲಭ್ಯವಿರುತ್ತವೆ. ಸಂಭವನೀಯ ಪ್ರವಾಹ ಸಂದರ್ಭದಲ್ಲಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಜಿಲ್ಲೆಯಲ್ಲಿ 397 ಪರಿಹಾರ ಕೇಂದ್ರ ಹಾಗೂ 129 ಗೋಶಿಬಿರಗಳನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಪೋಲಿಸ್ ಆಯುಕ್ತ ಭೋರಸೆ ಗುಲಾಬರಾವ್ ಭೂಷಣ, ಜಿಲ್ಲಾ‌ ಪೋಲಿಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಪ್ರಶಿಕ್ಷಣಾರ್ಥಿ ಆಯ್.ಎ.ಎಸ್. ಅಧಿಕಾರಿ ರೋಹಿತ್ ಸಿಂಗ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ತಹಶೀಲ್ದಾರರು ಹಾಜರಿದ್ದರು.

*ರೈತರ ಕುಟುಂಬಗಳ ಸಂಕಷ್ಟಕ್ಕೆ ಸ್ಪಂದಿಸಿದ ಲಕ್ಷ್ಮೀ ಹೆಬ್ಬಾಳಕರ್: ಪರಿಹಾರದ ಚೆಕ್ ವಿತರಣೆ, ಸಾಂತ್ವನ*

Dailyhunt
Disclaimer: This content has not been generated, created or edited by Dailyhunt. Publisher: Pragativahini