Dailyhunt Logo
  • Light mode
    Follow system
    Dark mode
    • Play Story
    • App Story
*ಸಾಮೂಹಿಕ ನಕಲಾಗಿದೆ SIR ಅಕ್ರಮ; ರಾಜ್ಯ ಸಿಇಒಗೆ ಬಿಜೆಪಿ ದೂರು : ಕೇಂದ್ರ ಸಚಿವ ಪ್ರಲ್ಹಾದ ಜೋಶಿ*

*ಸಾಮೂಹಿಕ ನಕಲಾಗಿದೆ SIR ಅಕ್ರಮ; ರಾಜ್ಯ ಸಿಇಒಗೆ ಬಿಜೆಪಿ ದೂರು : ಕೇಂದ್ರ ಸಚಿವ ಪ್ರಲ್ಹಾದ ಜೋಶಿ*

Pragativahini 6 days ago

ಪ್ರಗತಿವಾಹಿನಿ ಸುದ್ದಿ: ಹುಬ್ಬಳ್ಳಿ: ರಾಜ್ಯದಲ್ಲಿ SIR ಪ್ರಕ್ರಿಯೆ ಸಾಮೂಹಿಕ ನಕಲು ಎನ್ನುವಂತಿದ್ದು, ರಾಜಾರೋಷವಾಗಿ ನಡೆಯುತ್ತಿರುವ SIR ಅಕ್ರಮ-ಹಗರಣಕ್ಕೆ ಬ್ರೇಕ್‌ ಹಾಕಲು ಇಷ್ಟರಲ್ಲೇ ರಾಜ್ಯ ಸಿಇಒ ಅವರ ಬಳಿ ಬಿಜೆಪಿ ನಿಯೋಗ ತೆರಳಲಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಶನಿವಾರ ಮಾದ್ಯಮದವರೊಂದಿಗೆ ಮಾತನಾಡಿ, ಕರ್ನಾಟಕದ ಕೇಂದ್ರ ಸಚಿವರುಗಳು ಹಾಗೂ ಬಿಜೆಪಿ ಪ್ರಮುಖರು ಸೇರಿ ರಾಜ್ಯ ಚುನಾವಣಾ ಆಯೋಗದ ಸಿಇಒ ಅವರನ್ನು ಭೇಟಿ ಮಾಡುತ್ತೇವೆ. ಅಕ್ರಮಗಳ ಬಗ್ಗೆ ದಾಖಲೆ ಸಮೇತ ಗಮನ ಸೆಳೆಯಲಿದ್ದೇವೆ ಎಂದು ಹೇಳಿದರು.

ರಾಜ್ಯದಾದ್ಯಂತ ಮಸೀದಿ, ಸಮುದಾಯ ಭವನ, ಸಾರ್ವಜನಿಕ ಪ್ರದೇಶಗಳಲ್ಲಿ SIR ಪ್ರಕ್ರಿಯೆ ಸಾಮೂಹಿಕವಾಗಿ ನಡೆಯುತ್ತಿದೆ. ಇದೊಂದು ರೀತಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆದಂತಹ ರೀತಿಯಲ್ಲಿದೆ. ಬಿಎಲ್‌ಒಗಳು ಯಾರಿಗೂ ಹೆದರದೆ ಅಕ್ರಮವೆಸಗುತ್ತಿದ್ದಾರೆ ಎಂದು ಪ್ರಲ್ಹಾದ ಜೋಶಿ ಗಂಭೀರ ಆರೋಪ ಮಾಡಿದರು.

ಎಲ್ಲೆಡೆಯೂ ಸಾಮೂಹಿಕವಾಗಿ ಕರಪತ್ರ ಹಂಚಿದಂತೆ SIR ಫಾರ್ಮ್‌ಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಹಂಚುತ್ತಿದ್ದಾರೆ. ತಕರಾರು ಮಾಡಿದರೂ ಸಿಬ್ಬಂದಿ ಕ್ಯಾರೇ ಎನ್ನುತ್ತಿಲ್ಲ. ʼದಿಲ್ಲಿಗೆ ಬೇಕಾದರೂ ಹೇಳಿʼರೆಂದು ದಿಟ್ಟತನ ಪ್ರದರ್ಶಿಸುತ್ತಿರುವುದು ಕಂಡುಬಂದಿದೆ. ಇದೆಲ್ಲದರ ಬಗ್ಗೆಯೂ ರಾಜ್ಯ ಮುಖ್ಯ ಚುನಾವಣಾ ಆಯುಕ್ತರ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಹುಬ್ಬಳ್ಳಿ-ಧಾರವಾಡದ ವಾರ್ಡ್‌ ಸಂಖ್ಯೆ 66, ಬೂತ್‌ ನಂ.55, ಮುಲ್ಲಾನ ಓಣಿ ಹೀಗೆ ಅನೇಕ ಕಡೆ SIR ಅರ್ಜಿಗಳ ಸಾಮೂಹಿಕ ವಿತರಣೆ ನಡೆದಿದೆ. ಇನ್ನು ಸವಣೂರು ಬೂತ್‌ ನಂ.184, 185, 186ರಲ್ಲಿ, ಬಂಕಾಪುರ ಮಸೀದಿಗಳಲ್ಲಿ ಪ್ರಕ್ರಿಯೆ ನಡೆದಿದೆ. ವಾಟ್ಸಪ್‌ಗಳಲ್ಲಿ ರಾಜಾರೋಷವಾಗಿ ಫೋಟೊ ಸಮೇತ ಹಾಕಿಕೊಂಡಿದ್ದಾರೆ. ಈ ಬಗ್ಗೆ ದಾಖಲೆಗಳಿವೆ. ಸಾಕ್ಷ್ಯ ಸಮೇತ ಚುನಾವಣಾ ಆಯುಕ್ತರಿಗೆ ಸಲ್ಲಿಸುತ್ತೇವೆ ಎಂದರು.

SIR ಕುರಿತು ದೇಶಾದ್ಯಂತ ಸುಪ್ರೀಂ ಕೋರ್ಟ್‌ವರೆಗೆ ಹೋದರೂ ಕೋರ್ಟ್‌ ಸಂವಿಧಾನವನ್ನು ಎತ್ತಿ ಹಿಡಿದಿದೆ. ಹಾಗಾಗಿ ಇದರಲ್ಲಿ ಯಾರೂ ಯಾರಿಗೂ ಹೆದರಬೇಕಿಲ್ಲ. ಅಧಿಕಾರಿಗಳು ಮತ್ತು ಸಿಬ್ಬಂದಿ ಅವರವರ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಸೂಚ್ಯವಾಗಿ ಹೇಳಿದರು ಪ್ರಲ್ಹಾದ ಜೋಶಿ.

ಮನೆ ಮನೆಗೇ ಹೋಗಿ SIR ಮಾಡಿ:
ರಾಜ್ಯದಲ್ಲಿ SIR ಪ್ರಕ್ರಿಯಲ್ಲಿ ತೊಡಗಿರುವ ಯಾವುದೇ ಅಧಿಕಾರಿ, ಸಿಬ್ಬಂದಿ ಪ್ರತಿ ಮನೆ ಮನೆಗೇ ಹೋಗಿ ಸರಿಯಾದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಯಾರ ಒತ್ತಡಕ್ಕೂ ಒಳಗಾಗಬೇಕಿಲ್ಲ ಎಂದು ಹೇಳಿದರು.

ಆಯೋಗ ಸಮಯ ವಿಸ್ತರಿಸಬಹುದು:
SIR ಪ್ರಕ್ರಿಯೆಯಲ್ಲಿ ತೊಡಗಿದ ಸಿಬ್ಬಂದಿ ನಿತ್ಯವೂ ತಮಗೆ ಸಾಧ್ಯವಾದಷ್ಟು ಮನೆಗಳನ್ನು ಭೇಟಿ ಮಾಡಿ ಪಾರದರ್ಶಕವಾಗಿ ಮಾಹಿತಿ ಪಡೆದು ಪರಿಷ್ಕರಿಸಲಿ. ಒತ್ತಡದಲ್ಲಿ ನಿರ್ವಹಿಸಬೇಕಿಲ್ಲ. ಕಾಲಮಿತಿ ಕಡಿಮೆ ಎನಿಸಿದರೆ ಚುನಾವಣಾ ಆಯೋಗ ಹೆಚ್ಚಿನ ಸಮಯ ಸಹ ನೀಡಬಹುದು ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

2010ರಲ್ಲಿ ಮತದಾರರ ಪಟ್ಟಿಯಿಂದ ಯಾವುದೇ ಹೆಸರು ತೆಗೆಯದಂತೆ ಆದೇಶ ಮಾಡಿಟ್ಟಿದ್ದರು. ಮತಪಟ್ಟಿಯಲ್ಲಿ ಯಾರಾದರೂ ಹೆಸರು ತೆಗೆಯಬೇಕಿದ್ದರೆ, ಸೇರಿಸಬೇಕಿದ್ದರೆ ಸ್ವಯಂ ಆಗಿ ಅರ್ಜಿ ಕೊಡಬೇಕಿತ್ತು ಎಂದ ಸಚಿವರು, ನಾವು ಯಾರನ್ನೂ ತೆಗೆಯಿರಿ ಅಥವಾ ಸೇರಿಸಿ ಎಂದಿಲ್ಲ. ಹಿಂದೂ, ಮುಸಲ್ಮಾನ್‌, ಸಿಖ್‌, ಕ್ರಿಶ್ಚಿಯನ್‌ ಯಾವುದೇ ಜಾತಿ-ಧರ್ಮದವರಿರಲಿ ಸರಿಯಾದ ರೀತಿ ಮಾಹಿತಿ ದಾಖಲು ಮಾಡಿ ಎಂದಿದ್ದೇವೆ ಎಂದು ಸ್ಪಷ್ಟಪಡಿಸಿರು.

ಬಿಎಲ್‌ಒಗಳು ಅಕ್ರಮದಲ್ಲಿ ಸಿಲುಕಿಕೊಳ್ಳಬೇಡಿ:
ಮೃತಪಟ್ಟವರು, ಸ್ಥಳಾಂತರವಾದವರು ಮತ್ತು ಅಕ್ರಮ ವಲಸಿಗರ ಪರಿಷ್ಕರಣೆ ಮಾತ್ರ ಆಗಬೇಕಿದೆ. ಹಾಗಾಗಿ ಯಾವುದೇ ಬಿಎಲ್‌ಒಗಳು ಮತ್ತು SIR ಸಿಬ್ಬಂದಿ ಅನಾವಶ್ಯಕ ಅಕ್ರಮದಲ್ಲಿ ತೊಡಗಿ ಸಿಲುಕಿಕೊಳ್ಳಬಾರದು ಎಂದು ಸಚಿವ ಪ್ರಲ್ಹಾದ ಜೋಶಿ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಮತ್ತಿತರರಿದ್ದರು.

*ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಕೃಷ್ಣಾ, ದೂಧಗಂಗಾ ನದಿಗಳಿಗೆ 5 ಅಡಿಯಷ್ಟು ನೀರು ಏರಿಕೆ; ಬತ್ತಿದ್ದ ವೇದಗಂಗಾ ಒಡಲು ತುಂಬಿ ಹರಿವು*

Dailyhunt
Disclaimer: This content has not been generated, created or edited by Dailyhunt. Publisher: Pragativahini