Dailyhunt Logo
  • Light mode
    Follow system
    Dark mode
    • Play Story
    • App Story
*ವಿದ್ಯುತ್ ಉಳಿತಾಯದ ಪಾಠ ಬರೆದ ಮುಖ್ಯ ಕಾರ್ಯದರ್ಶಿ;* *ವಿಧಾನಸೌಧದಲ್ಲಿ ಜಾರಿಯಾಗುವುದೇ?*

*ವಿದ್ಯುತ್ ಉಳಿತಾಯದ ಪಾಠ ಬರೆದ ಮುಖ್ಯ ಕಾರ್ಯದರ್ಶಿ;* *ವಿಧಾನಸೌಧದಲ್ಲಿ ಜಾರಿಯಾಗುವುದೇ?*

Pragativahini 3 weeks ago

ವಿದ್ಯುತ್ ಉಳಿತಾಯದ ಪಾಠ ಬರೆದ ಮುಖ್ಯ ಕಾರ್ಯದರ್ಶಿ; ವಿಧಾನಸೌಧದಲ್ಲಿ ಜಾರಿಯಾಗುವುದೇ?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ವಿದ್ಯುತ್ ಉಳಿತಾಯದ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ ಅವರು ಮಾಧ್ಯಮಗಳಲ್ಲಿ ಬರೆದಿರುವ ಲೇಖನ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ವಿದ್ಯುತ್ ಸಂರಕ್ಷಣೆ ಕುರಿತು ಅವರು ನೀಡಿರುವ ಸಲಹೆಗಳು ಜನಸಾಮಾನ್ಯರಿಗೆ ಮಾತ್ರವಲ್ಲ, ಸರ್ಕಾರಿ ಕಚೇರಿಗಳಿಗೂ ಮಾದರಿಯಾಗುವಂತಿವೆ.

ಆದರೆ, ಇದೇ ಸಲಹೆಗಳು ಅವರು ಕಾರ್ಯನಿರ್ವಹಿಸುವ ಆಡಳಿತದ ಕೇಂದ್ರವಾದ ವಿಧಾನಸೌಧದಲ್ಲಿಯೇ ಎಷ್ಟರ ಮಟ್ಟಿಗೆ ಪಾಲನೆಯಾಗುತ್ತಿವೆ ಎಂಬ ಪ್ರಶ್ನೆ ಈಗ ಕೇಳಿಬರುತ್ತಿದೆ.

ವಿಧಾನಸೌಧದ ನೂರಾರು ಕೊಠಡಿಗಳಲ್ಲಿ ಪ್ರತಿದಿನ ಬೆಳಿಗ್ಗೆ ಸುಮಾರು 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಲೈಟ್, ಫ್ಯಾನ್ ಹಾಗೂ ಏರ್ ಕಂಡೀಷನರ್‌ಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುತ್ತವೆ. ಕೊಠಡಿಯಲ್ಲಿ ಸಚಿವರು, ಅಧಿಕಾರಿಗಳು ಅಥವಾ ಸಿಬ್ಬಂದಿ ಇದ್ದಾರೆಯೇ ಇಲ್ಲವೇ ಎಂಬುದನ್ನು ಲೆಕ್ಕಿಸದೆ ಬಹುತೇಕ ವಿದ್ಯುತ್ ಉಪಕರಣಗಳು ದಿನವಿಡೀ ಚಾಲನೆಯಲ್ಲಿರುವುದು ಸಾಮಾನ್ಯ ದೃಶ್ಯವಾಗಿದೆ.

ಮಾಹಿತಿಯ ಪ್ರಕಾರ, ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿ ಎಲ್ಲ ಕೊಠಡಿಗಳ ಸ್ವಿಚ್‌ಗಳನ್ನು ಒಂದೇ ಬಾರಿ ಆನ್ ಮಾಡುತ್ತಾರೆ. ಸಂಜೆ ಕಚೇರಿ ಮುಗಿಯುವವರೆಗೆ ಅವು ಹಾಗೆಯೇ ಇರುತ್ತವೆ. ಸಚಿವರು ಅಥವಾ ಹಿರಿಯ ಅಧಿಕಾರಿಗಳು ಬೆಂಗಳೂರಿನ ಹೊರಗೆ ಪ್ರವಾಸದಲ್ಲಿದ್ದ ದಿನಗಳಲ್ಲಿಯೂ ಇದೇ ಪದ್ಧತಿ ಮುಂದುವರಿಯುತ್ತದೆ.

ಅಗತ್ಯವಿದ್ದರೆ ಒಂದು ಅಥವಾ ಎರಡು ದೀಪಗಳನ್ನು ಮಾತ್ರ ಬಳಸಬಹುದಾದ ಸಂದರ್ಭಗಳಲ್ಲಿಯೂ ಎಲ್ಲ ಲೈಟ್‌ಗಳು, ಫ್ಯಾನ್‌ಗಳು ಮತ್ತು ಎಸಿಗಳು ಕಾರ್ಯನಿರ್ವಹಿಸುತ್ತಿರುವುದು ವಿದ್ಯುತ್ ವ್ಯರ್ಥಕ್ಕೆ ಕಾರಣವಾಗಿದೆ. ಶೌಚಾಲಯಗಳಲ್ಲಿಯೂ ದಿನವಿಡೀ ದೀಪಗಳು ಉರಿಯುತ್ತಿರುವುದು ಸಾಮಾನ್ಯವಾಗಿದೆ.

ಈ ಪರಿಸ್ಥಿತಿ ವಿಧಾನಸೌಧಕ್ಕೆ ಮಾತ್ರ ಸೀಮಿತವಾಗಿಲ್ಲ. ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲೆ ಹಾಗೂ ತಾಲೂಕು ಮಟ್ಟದ ಅನೇಕ ಸರ್ಕಾರಿ ಕಚೇರಿಗಳಲ್ಲಿಯೂ ಸಿಬ್ಬಂದಿ ಇಲ್ಲದಿದ್ದರೂ ಬೆಳಗ್ಗೆಯಿಂದ ಸಂಜೆವರೆಗೆ ಲೈಟ್ ಮತ್ತು ಫ್ಯಾನ್‌ಗಳು ನಿರಂತರವಾಗಿ ಚಾಲನೆಯಲ್ಲಿರುವುದು ಕಂಡುಬರುತ್ತಿದೆ.

ಆಡಳಿತದಲ್ಲಿ ದಕ್ಷತೆ ಮತ್ತು ಅಭಿವೃದ್ಧಿಪರ ದೃಷ್ಟಿಕೋನಕ್ಕಾಗಿ ಹೆಸರಾಗಿರುವ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ ಅವರು ಈ ಹಿಂದೆ ಕಾರ್ಯನಿರ್ವಹಿಸಿದ ಇಲಾಖೆಗಳಲ್ಲಿ ಹಲವು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಿದ್ದಾರೆ. ವಿದ್ಯುತ್ ಉಳಿತಾಯದ ಬಗ್ಗೆ ಅವರು ತೋರಿಸಿರುವ ಕಾಳಜಿಯೂ ಅದೇ ರೀತಿಯಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಈಗ ಅವರ ಲೇಖನದ ಸಂದೇಶ ಕೇವಲ ಕಾಗದಕ್ಕೆ ಸೀಮಿತವಾಗದೆ, ವಿಧಾನಸೌಧದಿಂದಲೇ ಅನುಷ್ಠಾನಗೊಳ್ಳಬೇಕೆಂಬ ನಿರೀಕ್ಷೆ ವ್ಯಕ್ತವಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಅಗತ್ಯವಿಲ್ಲದ ಲೈಟ್, ಫ್ಯಾನ್ ಹಾಗೂ ಎಸಿಗಳನ್ನು ಬಂದ್ ಮಾಡುವ ಕುರಿತು ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿಗೊಳಿಸಿ, ಹೊಣೆಗಾರಿಕೆ ನಿಗದಿಪಡಿಸಿದರೆ ಸರ್ಕಾರದ ವಿದ್ಯುತ್ ವೆಚ್ಚದಲ್ಲಿ ಗಣನೀಯ ಉಳಿತಾಯ ಸಾಧ್ಯವಾಗುವುದರ ಜೊತೆಗೆ, ಜನತೆಗೆ ನೀಡುತ್ತಿರುವ ಸಂದೇಶಕ್ಕೂ ಹೆಚ್ಚಿನ ವಿಶ್ವಾಸಾರ್ಹತೆ ಸಿಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

(ಸೂಚನೆ: AI ಚಿತ್ರವಾಗಿದ್ದು, grammatical mistakes ಇವೆ)

Dailyhunt
Disclaimer: This content has not been generated, created or edited by Dailyhunt. Publisher: Pragativahini