Dailyhunt
*ವ್ಯಾಪಾರ ದ್ವೇಷ: ಪಕ್ಕದಲ್ಲಿದ್ದ ಫರ್ನಿಚರ್ ಅಂಗಡಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಮೂವರು ಅರೆಸ್ಟ್*

*ವ್ಯಾಪಾರ ದ್ವೇಷ: ಪಕ್ಕದಲ್ಲಿದ್ದ ಫರ್ನಿಚರ್ ಅಂಗಡಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಮೂವರು ಅರೆಸ್ಟ್*

Pragativahini 1 month ago

ಪ್ರಗತಿವಾಹಿನಿ ಸುದ್ದಿ: ಕಿಡಿಗೇಡಿಗಳು ಫರ್ನಿಚರ್ ಅಂಗಡಿಯೊಂದಕ್ಕೆ ಬೆಂಕಿ ಹಚ್ಚಿದ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಮಗಳೂರುನಗರದ ಐ.ಜಿ ರಸ್ತೆಯಲ್ಲಿರುವ ಫರ್ನಿಚರ್ ಅಂಗಡಿಗೆ ಉದ್ದೇಶಪೂರ್ವಕವಾಗಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.

ವ್ಯಾಪಾರ ದ್ವೇಷವೇ ಕೃತ್ಯಕ್ಕೆ ಕಾರಣ ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.

​ಎ.ಆರ್. ಫರ್ನಿಚರ್ ಅಂಗಡಿಯಲ್ಲಿ ಅನಿರೀಕ್ಷಿತವಾಗಿ ಬೆಂಕಿ ಕಾಣಿಸಿಕೊಂಡಿತ್ತು. ಈ ದುರ್ಘಟನೆಯಲ್ಲಿ ಅಂಗಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಫರ್ನಿಚರ್ ಸಾಮಗ್ರಿಗಳು ಸಂಪೂರ್ಣವಾಗಿ ಭಸ್ಮವಾಗಿದ್ದವು. ​ಪೊಲೀಸ್ ತನಿಖೆಯಲ್ಲಿ ಎ.ಆರ್ ಫರ್ನಿಚರ್ ಅಂಗಡಿಯ ಪಕ್ಕದಲ್ಲೇ ಮಹಾರಾಜ ಫರ್ನಿಚರ್ ಎಂಬ ಅಂಗಡಿ ಇದೆ. ತನ್ನ ಅಂಗಡಿಯಲ್ಲಿ ವ್ಯಾಪಾರವಿಲ್ಲ, ಆದರೆ, ಪಕ್ಕದ ಎ.ಆರ್ ಫರ್ನಿಚರ್ ಅಂಗಡಿಯಲ್ಲಿ ಉತ್ತಮ ವ್ಯಾಪಾರ ನಡೆಯುತ್ತಿದೆ ಎಂಬ ಅಸೂಯೆ ಮತ್ತು ದ್ವೇಷವೇ ಈ ಕೃತ್ಯವೆಸಗಿರುವುದು ಬೆಳಕಿಗೆ ಬಂದಿದೆ.

ಮಹಾರಾಜ ಫರ್ನಿಚರ್ ಮಾಲೀಕ ಹ್ಯಾರಿಸ್, ಎ.ಆರ್. ಫರ್ನಿಚರ್ ಅಂಗಡಿಯನ್ನು ನಾಶಪಡಿಸಲು ಸಂಚು ರೂಪಿಸಿದ್ದ. ಇದಕ್ಕಾಗಿ ಸಾದ್ ಮತ್ತು ಯಾಕೂಬ್ ಎಂಬುವವರಿಗೆ 20 ಸಾವಿರ ರೂಪಾಯಿ ಹಣ ನೀಡಿ, ಅವರಿಂದಲೇ ಬೆಂಕಿ ಹಚ್ಚಿಸಿದ್ದಾರೆ ಎಂಬುದು ವಿಚಾರಣೆಯಲ್ಲಿ ದೃಢಪಟ್ಟಿದೆ.

ಪ್ರಕರಣ ಕೈಗೆತ್ತಿಕೊಂಡ ಚಿಕ್ಕಮಗಳೂರು ನಗರ ಠಾಣೆಯ ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿ ಕೃತ್ಯದ ಸತ್ಯಾಂಶ ಹೊರ ತೆಗೆದಿದ್ದಾರೆ. ಮಹಾರಾಜ ಫರ್ನಿಚರ್ ಮಾಲೀಕ ಹಾಗೂ ಬೆಂಕಿ ಹಚ್ಚಿದ ಆರೋಪಿಗಳನ್ನು ಬಂಧಿಸಿದ್ದಾರೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Pragativahini