Dailyhunt Logo
  • Light mode
    Follow system
    Dark mode
    • Play Story
    • App Story
₹ 2,000ಕ್ಕಿಂತ ಹೆಚ್ಚಿನ ಯುಪಿಐ ಪಾವತಿಗೆ ಶುಲ್ಕ? ಎಂಡಿಆರ್‌ ಬಗ್ಗೆ ಪೂರ್ಣ ಮಾಹಿತಿ

₹ 2,000ಕ್ಕಿಂತ ಹೆಚ್ಚಿನ ಯುಪಿಐ ಪಾವತಿಗೆ ಶುಲ್ಕ? ಎಂಡಿಆರ್‌ ಬಗ್ಗೆ ಪೂರ್ಣ ಮಾಹಿತಿ

₹ 2,000ಕ್ಕಿಂತ ಹೆಚ್ಚಿನ ಯುಪಿಐ ಪಾವತಿಗಳಿಗೆ ಶುಲ್ಕ (ಎಂಡಿಆರ್‌) ವಿಧಿಸಬಹುದು ಎಂಬ ಸುದ್ದಿಯು ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ. ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿರುವ ತಿದ್ದುಪಡಿ ವಿಧೇಯಕದಲ್ಲಿ ಈ ಪ್ರಸ್ತಾವನೆ ಇದೆ ಎನ್ನಲಾಗಿದೆ. ಸದ್ಯ ಯಾವುದೇ ಹೊಸ ಶುಲ್ಕ ಜಾರಿಯಾಗಿಲ್ಲ.
ಹಾಗಾದರೆ ಎಂಡಿಆರ್‌ ಎಂದರೇನು? ಯಾರಿಗೆ ಇದು ಅನ್ವಯಿಸಬಹುದು? ಯುಪಿಐ ಬಳಕೆದಾರರ ಮೇಲೆ ಇದರ ಪರಿಣಾಮವೇನು? ಇಲ್ಲಿದೆ ವಿವರ.

₹2,000ಕ್ಕಿಂತ ಹೆಚ್ಚಿನ ಯುಪಿಐ ಪಾವತಿಗೆ ಶುಲ್ಕ ವಿಧಿಸಲಾಗುತ್ತದೆಯೇ?

ಸದ್ಯಕ್ಕೆ ಇಲ್ಲ. ₹2,000ಕ್ಕಿಂತ ಹೆಚ್ಚಿನ ಯುಪಿಐ ಪಾವತಿಗೆ ಯಾವುದೇ ಹೊಸ ಶುಲ್ಕ ಜಾರಿಯಾಗಿಲ್ಲ. ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿರುವ ತೆರಿಗೆ ಮತ್ತು ಇತರ ಕಾನೂನು ತಿದ್ದುಪಡಿ ಮಸೂದೆ-2026ರಲ್ಲಿ ಭವಿಷ್ಯದಲ್ಲಿ ಕೆಲವು ಆಯ್ದ ಡಿಜಿಟಲ್ ಪಾವತಿಗಳಿಗೆ ಮರ್ಚೆಂಟ್ ಡಿಸ್ಕೌಂಟ್ ರೇಟ್‌ (ಎಂಡಿಆರ್‌) ವಿಧಿಸಲು ಕಾನೂನುಬದ್ಧ ಅವಕಾಶ ಕಲ್ಪಿಸುವ ಉದ್ದೇಶ ಹೊಂದಿದೆ. ಅಂತಿಮವಾಗಿ ಯಾವ ವಹಿವಾಟಿಗೆ, ಎಷ್ಟು ಶುಲ್ಕ ವಿಧಿಸಬೇಕು ಎಂಬುದನ್ನು ಸರ್ಕಾರವೇ ಪ್ರತ್ಯೇಕವಾಗಿ ಅಧಿಸೂಚನೆ ಮೂಲಕ ಪ್ರಕಟಿಸಬೇಕಿದೆ.

ಅಂದರೆ, ಈಗಲೇ ಗೂಗಲ್ ಪೇ, ಫೋನ್ ಪೇ ಅಥವಾ ಭೀಮ್‌ ಮೂಲಕ ₹2,000ಕ್ಕಿಂತ ಹೆಚ್ಚಿನ ಹಣ ಪಾವತಿಸಿದರೆ ಯಾವುದೇ ಹೊಸ ಶುಲ್ಕ ವಿಧಿಸಲಾಗುವುದಿಲ್ಲ.

ಮರ್ಚೆಂಟ್ ಡಿಸ್ಕೌಂಟ್ ರೇಟ್‌ ಎಂದರೇನು?

ಮರ್ಚೆಂಟ್ ಡಿಸ್ಕೌಂಟ್ ರೇಟ್‌ (ಎಂಡಿಆರ್‌) ಎಂದರೆ ಡಿಜಿಟಲ್ ಪಾವತಿಯನ್ನು ಸ್ವೀಕರಿಸುವ ವ್ಯಾಪಾರಿ ತನ್ನ ಬ್ಯಾಂಕ್ ಅಥವಾ ಪಾವತಿ ಸೇವಾ ಸಂಸ್ಥೆ ಅಥವಾ ಫಿನ್‌ಟೆಕ್ ಕಂಪನಿಗೆ ಪಾವತಿಸುವ ಸೇವಾ ಶುಲ್ಕ.

ಸರಳವಾಗಿ ಹೇಳುವುದಾದರೆ, ನೀವು ಅಂಗಡಿಯಲ್ಲಿ ₹5,000 ಮೌಲ್ಯದ ವಸ್ತುವನ್ನು ಖರೀದಿಸಿ ಯುಪಿಐ ಮೂಲಕ ಪಾವತಿಸುತ್ತೀರಿ ಎಂದುಕೊಳ್ಳಿ. ಎಂಡಿಆರ್‌ಜಾರಿಯಲ್ಲಿದ್ದರೆ, ಆ ವಹಿವಾಟಿನ ಮೇಲೆ ನಿಗದಿತ ಪ್ರಮಾಣದ ಸೇವಾ ಶುಲ್ಕವನ್ನು ವ್ಯಾಪಾರಿಯೇ ತನ್ನ ಬ್ಯಾಂಕ್ ಅಥವಾ ಪಾವತಿ ಸೇವೆ ಒದಗಿಸುವ ಸಂಸ್ಥೆ (ಉದಾ: ಫೋನ್ ಪೇ, ಗೂಗಲ್ ಪೇ, ಪೇಟಿಎಂ) ಪಾವತಿಸಬೇಕಾಗುತ್ತದೆ. ಅಂದರೆ, ಎಂಡಿಆರ್‌ ಗ್ರಾಹಕರಿಂದ ನೇರವಾಗಿ ವಸೂಲಿ ಮಾಡುವ ಶುಲ್ಕವಲ್ಲ; ಇದು ವ್ಯಾಪಾರಿಗಳು ಭರಿಸುವ ಶುಲ್ಕ.

ಎಂಡಿಆರ್‌ ಯಾವ ಪಾವತಿಗಳಿಗೆ ಅನ್ವಯಿಸುತ್ತದೆ?

ಪ್ರಸ್ತುತ ಭಾರತದಲ್ಲಿ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಮೂಲಕ ನಡೆಯುವ ವಹಿವಾಟುಗಳಿಗೆ ಎಂಡಿಆರ್‌ ಅನ್ವಯಿಸುತ್ತದೆ. ಆದರೆ, 2020ರ ಜನವರಿಯಿಂದ ಯುಪಿಐ ವಹಿವಾಟುಗಳಿಗೆ ಎಂಡಿಆರ್‌ ಅನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಈ ಕ್ರಮದಿಂದ ವ್ಯಾಪಾರಿಗಳು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಯುಪಿಐ ಪಾವತಿಗಳನ್ನು ಸ್ವೀಕರಿಸಲು ಸಾಧ್ಯವಾಗಿದೆ. ಇದರ ಪರಿಣಾಮ ಯುಪಿಐ ಬಳಕೆ ವೇಗವಾಗಿ ಹೆಚ್ಚಾಗಿ, ಇಂದು ಅದು ದೇಶದ ಅತ್ಯಂತ ಜನಪ್ರಿಯ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿ ಬೆಳೆದಿದೆ.

ಸರ್ಕಾರ ಮತ್ತೆ ಎಂಡಿಆರ್‌ ಬಗ್ಗೆ ಯಾಕೆ ಚಿಂತನೆ ನಡೆಸುತ್ತಿದೆ?

ಕಳೆದ ಕೆಲವು ವರ್ಷಗಳಲ್ಲಿ ಯುಪಿಐ ವಹಿವಾಟುಗಳು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿವೆ. 2026ರ ಜುಲೈ ತಿಂಗಳಲ್ಲಿ ಮಾತ್ರ ಸುಮಾರು 23.7 ಬಿಲಿಯನ್ ವಹಿವಾಟುಗಳು ನಡೆದಿದ್ದು, ಅವುಗಳ ಒಟ್ಟು ಮೌಲ್ಯ ₹29.9 ಲಕ್ಷ ಕೋಟಿಯಷ್ಟಿದೆ.

ಇಷ್ಟು ದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ನಿರ್ವಹಿಸಲು ಬ್ಯಾಂಕುಗಳು, ಪಾವತಿ ಸೇವಾ ಸಂಸ್ಥೆಗಳು ಮತ್ತು ಫಿನ್‌ಟೆಕ್ ಕಂಪನಿಗಳು ಸರ್ವರ್ ಮೂಲಸೌಕರ್ಯ, ಸೈಬರ್ ಭದ್ರತೆ, ವಂಚನೆ ತಡೆ ವ್ಯವಸ್ಥೆ, ತಾಂತ್ರಿಕ ನಿರ್ವಹಣೆ ಹಾಗೂ ಹೊಸ ತಂತ್ರಜ್ಞಾನ ಅಭಿವೃದ್ಧಿಗೆ ನಿರಂತರವಾಗಿ ಹೂಡಿಕೆ ಮಾಡಬೇಕಾಗುತ್ತದೆ.

ಆದರೆ, 2020ರಿಂದ ಯುಪಿಐ ವಹಿವಾಟುಗಳಿಗೆ ಎಂಡಿಆರ್‌ ರದ್ದಾಗಿರುವುದರಿಂದ ಈ ಸಂಸ್ಥೆಗಳಿಗೆ ಪ್ರತಿ ವಹಿವಾಟಿನಿಂದ ಯಾವುದೇ ನೇರ ಆದಾಯ ಸಿಗುತ್ತಿಲ್ಲ. ಹೀಗಾಗಿ, ಕನಿಷ್ಠ ಹೆಚ್ಚಿನ ಮೌಲ್ಯದ ಅಥವಾ ಆಯ್ದ ವ್ಯಾಪಾರಿಗಳ ಯುಪಿಐ ವಹಿವಾಟುಗಳಿಗೆ ಎಂಡಿಆರ್‌ ಮರುಜಾರಿಗೊಳಿಸಿದರೆ ಪಾವತಿ ವ್ಯವಸ್ಥೆಯನ್ನು ಇನ್ನಷ್ಟು ಸದೃಢಗೊಳಿಸಲು ಅಗತ್ಯವಾದ ಆದಾಯ ದೊರೆಯಲಿದೆ ಎಂದು ಬ್ಯಾಂಕುಗಳು ಹಾಗೂ ಫಿನ್‌ಟೆಕ್ ವಲಯವು ಹಲವು ವರ್ಷಗಳಿಂದ ಸರ್ಕಾರಕ್ಕೆ ಮನವಿ ಮಾಡುತ್ತಿದೆ.

ತಿದ್ದುಪಡಿ ಮಸೂದೆಯಲ್ಲಿ ಏನಿದೆ?

ತೆರಿಗೆ ಮತ್ತು ಇತರ ಕಾನೂನು ತಿದ್ದುಪಡಿ ಮಸೂದೆ-2026 ಯುಪಿಐ ವಹಿವಾಟುಗಳಿಗೆ ನೇರವಾಗಿ ಎಂಡಿಆರ್‌ ವಿಧಿಸುವುದಿಲ್ಲ. ಬದಲಿಗೆ, ಯಾವ ಡಿಜಿಟಲ್ ಪಾವತಿ ವಿಧಾನಗಳಿಗೆ ಶುಲ್ಕ ವಿನಾಯಿತಿ ನೀಡಬೇಕು ಮತ್ತು ಯಾವ ವಹಿವಾಟುಗಳಿಗೆ ಎಂಡಿಆರ್‌ ಅನ್ವಯಿಸಬೇಕು ಎಂಬುದನ್ನು ಸರ್ಕಾರ ಅಧಿಸೂಚನೆ ಮೂಲಕ ನಿರ್ಧರಿಸುವ ಅಧಿಕಾರವನ್ನು ನೀಡುತ್ತದೆ.

ಅಂದರೆ, ಎಷ್ಟು ಎಂಡಿಆರ್‌ ವಿಧಿಸಬೇಕು, ಯಾವ ವ್ಯಾಪಾರಿಗಳಿಗೆ ಅನ್ವಯಿಸಬೇಕು, ಯಾವ ರೀತಿಯ ವಹಿವಾಟುಗಳಿಗೆ ವಿನಾಯಿತಿ ನೀಡಬೇಕು ಎಂಬುದನ್ನು ಸರ್ಕಾರ ನಂತರ ಪ್ರತ್ಯೇಕವಾಗಿ ಪ್ರಕಟಿಸಬಹುದು. ಹೀಗಾಗಿ, ಈ ಮಸೂದೆ ಅಂಗೀಕಾರವಾದರೂ ಯುಪಿಐಗೆ ತಕ್ಷಣವೇ ಶುಲ್ಕ ಜಾರಿಯಾಗುವುದಿಲ್ಲ.

₹2,000 ಮಿತಿ ಹೇಗೆ?

ಕೇಂದ್ರ ಸರ್ಕಾರ ₹2,000 ಮಿತಿಯನ್ನು ಅಧಿಕೃತವಾಗಿ ಘೋಷಿಸಿಲ್ಲ. ಆದರೆ, ವಿವಿಧ ಮಾಧ್ಯಮ ವರದಿಗಳ ಪ್ರಕಾರ ಸರ್ಕಾರ ₹2,000ಕ್ಕಿಂತ ಹೆಚ್ಚಿನ ಯುಪಿಐ ವಹಿವಾಟುಗಳು ಹಾಗೂ ದೊಡ್ಡ ವ್ಯಾಪಾರಿಗಳಿಗೆ (ಲಾರ್ಜ್ ಮರ್ಚೆಂಟ್ಸ್‌) ಮಾಡುವ ಪಾವತಿಗಳಿಗೆ ಮಾತ್ರ ಎಂಡಿಆರ್‌ ವಿಧಿಸುವ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ.

ಅಂದರೆ, ದಿನನಿತ್ಯದ ಸಣ್ಣ ಮೊತ್ತದ ಯುಪಿಐ ಪಾವತಿಗಳಿಗೆ ಬದಲಾಗಿ, ಹೆಚ್ಚಿನ ಮೌಲ್ಯದ ವ್ಯಾಪಾರ ವಹಿವಾಟುಗಳ ಮೇಲಷ್ಟೇ ಎಂಡಿಆರ್‌ ಅನ್ವಯಿಸುವ ಮಾದರಿಯನ್ನು ಸರ್ಕಾರ ಪರಿಗಣಿಸುತ್ತಿದೆ. ಆದರೆ, ಈ ಕುರಿತು ಇನ್ನೂ ಯಾವುದೇ ಅಂತಿಮ ನಿರ್ಧಾರ ಅಥವಾ ಅಧಿಕೃತ ಅಧಿಸೂಚನೆ ಹೊರಬಿದ್ದಿಲ್ಲ.

ಎಂಡಿಆರ್‌ ದರ ಎಷ್ಟಿರಬಹುದು?

ಸದ್ಯಕ್ಕೆ ಯುಪಿಐ ವಹಿವಾಟುಗಳಿಗೆ ಎಷ್ಟು ಎಂಡಿಆರ್‌ ವಿಧಿಸಬಹುದು ಎಂಬುದರ ಕುರಿತು ಸರ್ಕಾರ ಯಾವುದೇ ಅಧಿಕೃತ ದರವನ್ನು ಪ್ರಕಟಿಸಿಲ್ಲ. ಆದರೆ, ಮೂಲಗಳ ಪ್ರಕಾರ ಶೇ 0.25ರಿಂದ ಶೇ 0.50ರವರೆಗೆ ಎಂಡಿಆರ್‌ ವಿಧಿಸುವ ಸಾಧ್ಯತೆಯ ಇದೆ. ಕೆಲವು ವರದಿಗಳಲ್ಲಿ 5ರಿಂದ 7 ಬೇಸಿಸ್ ಪಾಯಿಂಟ್‌ಗಳು (ಒಂದು ಬೇಸಿಸ್ ಪಾಯಿಂಟ್‌ = ಶೇ 0.01) ದರದ ಪ್ರಸ್ತಾಪವೂ ಕೇಳಿಬಂದಿದೆ.

ಆದರೆ ಇವೆಲ್ಲವೂ ಸದ್ಯದ ಚರ್ಚೆಗಳು ಮಾತ್ರ. ಅಂತಿಮ ಎಂಡಿಆರ್‌ ದರ, ಅದು ಅನ್ವಯಿಸುವ ವಹಿವಾಟುಗಳು ಹಾಗೂ ಜಾರಿಗೆ ಬರುವ ದಿನಾಂಕವನ್ನು ಸರ್ಕಾರದ ಅಧಿಕೃತ ಅಧಿಸೂಚನೆಯೇ ನಿರ್ಧರಿಸಲಿದೆ.

₹2,000 ಮಿತಿಯನ್ನು ಯಾಕೆ ಆಯ್ಕೆ ಮಾಡಬಹುದು?

ಹಣಕಾಸು ವಿಶ್ಲೇಷಕರ ಪ್ರಕಾರ, ₹2 ,000ಕ್ಕಿಂತ ಹೆಚ್ಚಿನ ಯುಪಿಐ ವಹಿವಾಟುಗಳು ಒಟ್ಟು ವಹಿವಾಟುಗಳ ಸಂಖ್ಯೆಯಲ್ಲಿ ಕೇವಲ ಶೇ 4ರಷ್ಟಿದ್ದರೂ, ಅವುಗಳ ಮೌಲ್ಯ ಒಟ್ಟು ಯುಪಿಐ ವಹಿವಾಟಿನ ಶೇ 67ರಿಂದ 70ರಷ್ಟಿದೆ.

ಈ ಕಾರಣದಿಂದಲೇ ₹ 2,000 ಮಿತಿಯನ್ನು ಪರಿಗಣಿಸಲಾಗುತ್ತಿದೆ ಎನ್ನಲಾಗಿದೆ. ಇದರಿಂದ ದಿನನಿತ್ಯದ ಸಣ್ಣ ಮೊತ್ತದ ಯುಪಿಐ ಪಾವತಿಗಳು ಶುಲ್ಕದಿಂದ ಹೊರಗೇ ಉಳಿಯುವ ಸಾಧ್ಯತೆ ಇದೆ. ಅದೇ ವೇಳೆ, ಹೆಚ್ಚಿನ ಮೌಲ್ಯದ ವ್ಯಾಪಾರ ವಹಿವಾಟುಗಳಿಗೆ ಮಾತ್ರ ಎಂಡಿಆರ್‌ ಅನ್ವಯಿಸಿದರೆ, ಪಾವತಿ ವ್ಯವಸ್ಥೆಯನ್ನು ನಿರ್ವಹಿಸುವ ಬ್ಯಾಂಕುಗಳು ಮತ್ತು ಫಿನ್‌ಟೆಕ್ ಸಂಸ್ಥೆಗಳಿಗೆ ಉತ್ತಮ ಆದಾಯ ದೊರೆಯಬಹುದು. ಹೀಗಾಗಿ, ಸಾಮಾನ್ಯ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಹಾಕದೆ ಪಾವತಿ ವ್ಯವಸ್ಥೆಯನ್ನು ಆರ್ಥಿಕವಾಗಿ ಸದೃಢಗೊಳಿಸುವುದು ಈ ಮಾದರಿಯ ಉದ್ದೇಶವಾಗಿದೆ.

ಗ್ರಾಹಕರು ಎಂಡಿಆರ್‌ ಪಾವತಿಸಬೇಕೇ?

ನೇರವಾಗಿ ಇಲ್ಲ. ಎಂಡಿಆರ್‌ ಎನ್ನುವುದು ಗ್ರಾಹಕರು ಅಲ್ಲ, ಡಿಜಿಟಲ್ ಪಾವತಿಯನ್ನು ಸ್ವೀಕರಿಸುವ ವ್ಯಾಪಾರಿಗಳು ಪಾವತಿಸುವ ಸೇವಾ ಶುಲ್ಕವಾಗಿದೆ.

ಆದರೆ, ಕೆಲವು ವ್ಯಾಪಾರಿಗಳು ಈ ಹೆಚ್ಚುವರಿ ವೆಚ್ಚವನ್ನು ಉತ್ಪನ್ನದ ಬೆಲೆಯಲ್ಲಿ ಸೇರಿಸುವುದು ಅಥವಾ ಸೇವಾ ಶುಲ್ಕದ ರೂಪದಲ್ಲಿ ಪರೋಕ್ಷವಾಗಿ ಗ್ರಾಹಕರ ಮೇಲೆ ವರ್ಗಾಯಿಸುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಲಾಗುವುದಿಲ್ಲ. ಆದರೆ, ಸರ್ಕಾರದ ಅಧಿಕಾರಿಗಳ ಪ್ರಕಾರ ಎಂಡಿಆರ್‌ ದರ ಕಡಿಮೆ ಇರುವುದರಿಂದ ಎಲ್ಲ ವ್ಯಾಪಾರಿಗಳೂ ಈ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆ ಕಡಿಮೆ.

ವ್ಯಕ್ತಿಯಿಂದ ವ್ಯಕ್ತಿಗೆ (ಪಿ2ಪಿ) ಯುಪಿಐ ಹಣ ವರ್ಗಾವಣೆಗೆ ಶುಲ್ಕ ಬರಲಿದೆಯೇ?

ಸದ್ಯದ ಚರ್ಚೆಗಳ ಪ್ರಕಾರ, ಇಲ್ಲ. ಸ್ನೇಹಿತರು, ಕುಟುಂಬದವರು ಅಥವಾ ಇತರರಿಗೆ ಯುಪಿಐ ಮೂಲಕ ನೇರವಾಗಿ ಹಣ ವರ್ಗಾಯಿಸುವ ವ್ಯಕ್ತಿಯಿಂದ ವ್ಯಕ್ತಿಗೆ (ಪರ್ಸನ್ ಟು ಪರ್ಸನ್ ಪಿ2ಪಿ) ವಹಿವಾಟುಗಳಿಗೆ ಎಂಡಿಆರ್‌ ಅನ್ವಯಿಸುವ ಸಾಧ್ಯತೆ ಇಲ್ಲ. ಸದ್ಯ ವ್ಯಾಪಾರಿಗಳಿಗೆ ಮಾಡುವ ಹೆಚ್ಚಿನ ಮೌಲ್ಯದ ಯುಪಿಐ ಪಾವತಿಗಳಿಗೆ ಮಾತ್ರ ಎಂಡಿಆರ್‌ ವಿಧಿಸುವ ಸಾಧ್ಯತೆ ಇದೆ. ಆದರೆ, ಈ ಕುರಿತು ಅಂತಿಮ ನಿರ್ಧಾರವನ್ನು ಸರ್ಕಾರದ ಅಧಿಕೃತ ಅಧಿಸೂಚನೆಯೇ ಸ್ಪಷ್ಟಪಡಿಸಲಿದೆ.

ಸಣ್ಣ ವ್ಯಾಪಾರಿಗಳಿಗೂ ಎಂಡಿಆರ್‌ ಅನ್ವಯಿಸುತ್ತದೆಯೇ?

ಸದ್ಯಕ್ಕೆ ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರವಾಗಿಲ್ಲ. ಆದರೆ, ವಿವಿಧ ಮಾಧ್ಯಮ ವರದಿಗಳ ಪ್ರಕಾರ ವಾರ್ಷಿಕ ವಹಿವಾಟು ಹೆಚ್ಚಿನ ದೊಡ್ಡ ವ್ಯಾಪಾರಿಗಳಿಗೆ ಮಾತ್ರ ಎಂಡಿಆರ್‌ ಅನ್ವಯಿಸುವ ಸಾಧ್ಯತೆ ಇದೆ. ಸಣ್ಣ ಅಂಗಡಿಗಳು, ಕಿರಾಣಿ ಮಳಿಗೆಗಳು ಹಾಗೂ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ ವಿನಾಯಿತಿ ನೀಡುವ ಆಯ್ಕೆಯನ್ನೂ ಸರ್ಕಾರ ಪರಿಶೀಲಿಸುತ್ತಿದೆ ಎನ್ನಲಾಗಿದೆ. ಆದರೆ, ಯಾವ ವರ್ಗದ ವ್ಯಾಪಾರಿಗಳಿಗೆ ಎಂಡಿಆರ್‌ ಅನ್ವಯಿಸಲಿದೆ ಎಂಬುದು ಸರ್ಕಾರದ ಅಂತಿಮ ಅಧಿಸೂಚನೆಯ ನಂತರವೇ ಸ್ಪಷ್ಟವಾಗಲಿದೆ.

ಪೇಟಿಎಂ, ಫೋನ್‌ಪೇ, ಗೂಗಲ್ ಪೇ ಸೇರಿದಂತೆ ಯುಪಿಐ ಬಳಕೆದಾರರ ಮೇಲೆ ಪರಿಣಾಮ ಏನು?

ಸಾಮಾನ್ಯ ಯುಪಿಐ ಬಳಕೆದಾರರಿಗೆ ಸದ್ಯ ಯಾವುದೇ ಬದಲಾವಣೆ ಇಲ್ಲ. ಪೇಟಿಎಂ, ಫೋನ್‌ಪೇ, ಗೂಗಲ್ ಪೇ, ಸೂಪರ್‌ ಮನಿ, ನವಿ, ಭೀಮ್ ಸೇರಿದಂತೆ ಎಲ್ಲ ಯುಪಿಐ ಆಯಪ್‌ಗಳ ಮೂಲಕ ನಡೆಯುವ ಪಾವತಿಗಳು ಹಿಂದಿನಂತೆಯೇ ಉಚಿತವಾಗಿವೆ.

ಒಂದು ವೇಳೆ ಸರ್ಕಾರ ಎಂಡಿಆರ್‌ ಜಾರಿಗೊಳಿಸಿದರೂ, ಅದು ಆಯ್ದ ವಹಿವಾಟುಗಳಿಗೆ ಮಾತ್ರ ಅನ್ವಯಿಸುವ ಸಾಧ್ಯತೆ ಇದೆ. ಹೀಗಾಗಿ, ದಿನನಿತ್ಯದ ಸಣ್ಣ ಮೊತ್ತದ ಯುಪಿಐ ಪಾವತಿಗಳು ಹಾಗೂ ವ್ಯಕ್ತಿಯಿಂದ ವ್ಯಕ್ತಿಗೆ ಹಣ ವರ್ಗಾವಣೆಗಳು ಮುಂದೆಯೂ ಉಚಿತವಾಗಿಯೇ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ.

ಪಾವತಿ ಸಂಸ್ಥೆಗಳಿಗೆ ಇದರಿಂದ ಏನು ಲಾಭ?

ಎಂಡಿಆರ್‌ ಜಾರಿಯಾದರೆ ಬ್ಯಾಂಕುಗಳು, ಹಣಕಾಸು ತಂತ್ರಜ್ಞಾನ (ಫಿನ್‌ಟೆಕ್) ಸಂಸ್ಥೆಗಳು ಹಾಗೂ ಡಿಜಿಟಲ್ ಪಾವತಿ ಸೇವೆ ಒದಗಿಸುವ ಸಂಸ್ಥೆಗಳಿಗೆ ಹೊಸ ಆದಾಯದ ಮೂಲ ಸಿಗಲಿದೆ. ಇದರಿಂದ ಸೈಬರ್ ಭದ್ರತೆ, ತಾಂತ್ರಿಕ ಮೂಲಸೌಕರ್ಯ, ವಂಚನೆ ತಡೆ ವ್ಯವಸ್ಥೆ ಹಾಗೂ ಹೊಸ ತಂತ್ರಜ್ಞಾನ ಅಭಿವೃದ್ಧಿಗೆ ಹೆಚ್ಚಿನ ಹೂಡಿಕೆ ಮಾಡಲು ಅವಕಾಶ ದೊರೆಯಬಹುದು. ಪರಿಣಾಮವಾಗಿ, ದೇಶದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಇನ್ನಷ್ಟು ಸುರಕ್ಷಿತ ಮತ್ತು ಸದೃಢಗೊಳಿಸಲು ನೆರವಾಗಲಿದೆ.

ಕೆಲವು ಹಣಕಾಸು ಸಂಸ್ಥೆಗಳ ಅಂದಾಜಿನ ಪ್ರಕಾರ, ಆಯ್ದ ಯುಪಿಐ ವಹಿವಾಟುಗಳಿಗೆ ಎಂಡಿಆರ್‌ ಜಾರಿಯಾದರೆ ವರ್ಷಕ್ಕೆ ₹5,000 ಕೋಟಿಯಿಂದ ₹10,000 ಕೋಟಿವರೆಗೆ ಹೆಚ್ಚುವರಿ ಆದಾಯ ಸಿಗುವ ಸಾಧ್ಯತೆ ಇದೆ.

ಈಗ ಯುಪಿಐ ಬಳಕೆದಾರರು ಏನು ಮಾಡಬೇಕು?

ಸದ್ಯ ಯಾವುದೇ ಆತಂಕದ ಅಗತ್ಯವಿಲ್ಲ. ಯುಪಿಐ ಮೂಲಕ ಹಣ ಪಾವತಿಸುವ ವಿಧಾನದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪೇಟಿಎಂ, ಫೋನ್‌ಪೇ, ಗೂಗಲ್ ಪೇ, ಭೀಮ್ ಸೇರಿದಂತೆ ಎಲ್ಲ ಯುಪಿಐ ಆಯಪ್‌ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.

ಒಂದು ವೇಳೆ ಎಂಡಿಆರ್‌ ಜಾರಿಗೊಳಿಸಬೇಕಾದರೆ, ಮೊದಲು ಸರ್ಕಾರ ಅಂತಿಮ ನಿಯಮಗಳನ್ನು ಪ್ರಕಟಿಸಬೇಕು. ಎಷ್ಟು ದರ ವಿಧಿಸಲಾಗುತ್ತದೆ, ಯಾವ ವ್ಯಾಪಾರಿಗಳಿಗೆ ಅನ್ವಯಿಸುತ್ತದೆ, ಯಾವ ವಹಿವಾಟುಗಳಿಗೆ ವಿನಾಯಿತಿ ಇರುತ್ತದೆ ಹಾಗೂ ಯಾವ ದಿನಾಂಕದಿಂದ ಜಾರಿಗೆ ಬರಲಿದೆ ಎಂಬುದನ್ನು ಅಧಿಕೃತವಾಗಿ ಪ್ರಕಟಿಸಿದ ಬಳಿಕವೇ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಅಲ್ಲಿಯವರೆಗೆ ಯುಪಿಐ ಬಳಕೆದಾರರು ಯಾವುದೇ ಹೆಚ್ಚುವರಿ ಶುಲ್ಕದ ಬಗ್ಗೆ ಆತಂಕಪಡಬೇಕಿಲ್ಲ.

‌ಯುಪಿಐಗೆ ಎಂಡಿಆರ್‌ ಜಾರಿಯಾಗಲಿದೆ ಎಂಬ ಸುದ್ದಿಯಿಂದ ಹಲವು ಗೊಂದಲಗಳು ಸೃಷ್ಟಿಯಾಗಿವೆ. ಆದರೆ, ಸದ್ಯ ಯುಪಿಐ ವಹಿವಾಟುಗಳಿಗೆ ಯಾವುದೇ ಹೊಸ ಶುಲ್ಕ ಜಾರಿಯಾಗಿಲ್ಲ. ಕೇಂದ್ರ ಸರ್ಕಾರ ಕೇವಲ ಆಯ್ದ ಡಿಜಿಟಲ್ ಪಾವತಿಗಳಿಗೆ ಭವಿಷ್ಯದಲ್ಲಿ ಎಂಡಿಆರ್‌ ವಿಧಿಸುವ ಅವಕಾಶ ಕಲ್ಪಿಸುವ ಕಾನೂನು ತಿದ್ದುಪಡಿಯನ್ನು ಪ್ರಸ್ತಾಪಿಸಿದೆ. ಯಾವ ವಹಿವಾಟುಗಳಿಗೆ ಎಂಡಿಆರ್‌ ಅನ್ವಯಿಸಬೇಕು, ಎಷ್ಟು ದರ ವಿಧಿಸಬೇಕು, ಯಾವ ವ್ಯಾಪಾರಿಗಳಿಗೆ ಇದು ಅನ್ವಯಿಸಬೇಕು ಮತ್ತು ಯಾವ ದಿನಾಂಕದಿಂದ ಜಾರಿಗೆ ತರಬೇಕು ಎಂಬುದನ್ನು ಸರ್ಕಾರದ ಅಧಿಕೃತ ಅಧಿಸೂಚನೆಯೇ ಅಂತಿಮಗೊಳಿಸಲಿದೆ. ಅಲ್ಲಿಯವರೆಗೆ ಗೂಗಲ್ ಪೇ, ಫೋನ್‌ಪೇ, ಪೇಟಿಎಂ, ಭೀಮ್ ಸೇರಿದಂತೆ ಎಲ್ಲ ಯುಪಿಐ ಸೇವೆಗಳು ಈಗಿನಂತೆಯೇ ಉಚಿತವಾಗಿ ಕಾರ್ಯನಿರ್ವಹಿಸುತ್ತವೆ.

ಆಧಾರ: ಕೇಂದ್ರ ಹಣಕಾಸು ಸಚಿವಾಲಯ, ಭಾರತೀಯ ರಾಷ್ಟ್ರೀಯ ಪಾವತಿ ನಿಗಮ, ಮತ್ತು ರಾಯಿಟರ್ಸ್

Dailyhunt
Disclaimer: This content has not been generated, created or edited by Dailyhunt. Publisher: Prajavani