Dailyhunt
₹ 3.67 ಲಕ್ಷಕ್ಕೆ ಮೃತದೇಹ ಒತ್ತೆ; ಆಸ್ಪತ್ರೆ ವಿರುದ್ಧ ಎಫ್‌ಐಆರ್

₹ 3.67 ಲಕ್ಷಕ್ಕೆ ಮೃತದೇಹ ಒತ್ತೆ; ಆಸ್ಪತ್ರೆ ವಿರುದ್ಧ ಎಫ್‌ಐಆರ್

ಬೆಂಗಳೂರು: ಕೋವಿಡ್‌ನಿಂದ ನಿಧನರಾಗಿದ್ದ ರೋಗಿಯ ಮೃತದೇಹ ಒತ್ತೆ ಇಟ್ಟುಕೊಂಡು ₹ 3.67 ಲಕ್ಷ ಚಿಕಿತ್ಸಾ ಶುಲ್ಕ ಪಾವತಿಸುವಂತೆ ಪಟ್ಟು ಹಿಡಿದಿದ್ದ ಆರೋಪದಡಿ ಇಲ್ಲಿನ ಚನ್ನಸಂದ್ರದ ಪಾಥ್‌ವೇ ಆಸ್ಪತ್ರೆ ವಿರುದ್ಧ ರಾಜರಾಜೇಶ್ವರಿನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ರೋಗಿಯ ಚಿಕಿತ್ಸೆಗೆ ಬೇಕಾಬಿಟ್ಟಿ ದರ ವಿಧಿಸಿ, ಶುಲ್ಕ ವಸೂಲಿಗಾಗಿ ಮೃತದೇಹ ಒತ್ತೆಯಾಗಿಟ್ಟುಕೊಂಡು ಕುಟುಂಬಸ್ಥರಿಗೆ ಕಿರುಕುಳ ನೀಡುವ ಕೆಲಸವನ್ನು ಕೆಲವು ಆಸ್ಪತ್ರೆಗಳು ಮಾಡುತ್ತಿದ್ದವು. ಇಂಥ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಸಂಘಟನೆಗಳು ಒತ್ತಾಯಿಸಿದ್ದವು.

ಮೃತದೇಹ ಹಸ್ತಾಂತರ ಸಂಬಂಧ ಆದೇಶ ಹೊರಡಿಸಿದ್ದ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌, 'ಶುಲ್ಕ ಪಾವತಿಸಿಲ್ಲವೆಂದು ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲು ನಿರಾಕರಿಸುವಂತಿಲ್ಲ.


ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

ಶುಲ್ಕಕ್ಕಾಗಿ ಒತ್ತಡ ಹೇರುವಂತಿಲ್ಲ. ಈ ರೀತಿ ಮಾಡಿದರೆ, ಆಸ್ಪತ್ರೆ ನೋಂದಣಿ ರದ್ದುಪಡಿಸಲಾಗುವುದು' ಎಂದು ಎಚ್ಚರಿಕೆ ನೀಡಿದ್ದರು.

ಇದರ ಬೆನ್ನಲ್ಲೇ ಪಾಥ್‌ವೇ ಆಸ್ಪತ್ರೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮೃತದೇಹ ಒತ್ತೆಯಾಗಿಟ್ಟುಕೊಂಡಿದ್ದರ ವಿರುದ್ಧ ರಾಜ್ಯದಲ್ಲಿ ದಾಖಲಾದ ಮೊದಲ ಪ್ರಕರಣ ಇದಾಗಿದೆ.

'ಕೊರೊನಾ ಸೋಂಕಿತರಾಗಿದ್ದ ಲಕ್ಷ್ಮಿನಾರಾಯಣ (45) ಎಂಬುವರು ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ಮೃತಪಟ್ಟಿದ್ದರು. ಚಿಕಿತ್ಸೆಗೆ ಶುಲ್ಕ ಪಾವತಿಸಿಲ್ಲವೆಂದು ಆಸ್ಪತ್ರೆಯವರು ಸಂಬಂಧಿಕರಿಗೆ ಮೃತದೇಹ ನೀಡಿರಲಿಲ್ಲ. ಮೃತರ ಸಂಬಂಧಿ ಗೀತಾ ದೂರು ನೀಡಿದ್ದರು' ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ತಿಳಿಸಿದರು.

'ವ್ಯಕ್ತಿಯ ಅಕ್ರಮ ಬಂಧನ (ಐಪಿಸಿ 342), ಅವಾಚ್ಯ ಶಬ್ದಗಳಿಂದ ನಿಂದನೆ (ಐಪಿಸಿ 504), ಜೀವ ಬೆದರಿಕೆ (ಐಪಿಸಿ 506), ಸರ್ಕಾರಿ ಅಧಿಕಾರಿ ಆದೇಶ ಪಾಲಿಸದಿರುವುದು (ಐಪಿಸಿ 188) ಹಾಗೂ ಅಪರಾಧ ಸಂಚು (ಐಪಿಸಿ 34) ಆರೋಪದಡಿ ಆಸ್ಪತ್ರೆ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ' ಎಂದೂ ಹೇಳಿದರು.

₹ 4.50 ಲಕ್ಷ ಪಾವತಿಸಿದ್ದ ಕುಟುಂಬ: 'ಲಕ್ಷ್ಮಿನಾರಾಯಣ ಅವರನ್ನು ಪಾಥ್‌ವೇ ಆಸ್ಪತ್ರೆಗೆ ಮೇ 17ರಂದು ದಾಖಲಿಸಲಾಗಿತ್ತು. ಅವರ ಚಿಕಿತ್ಸೆಗಾಗಿ ಕುಟುಂಬಸ್ಥರು ₹ 4.50 ಲಕ್ಷವನ್ನು ಆಸ್ಪತ್ರೆಗೆ ಪಾವತಿಸಿದ್ದರು' ಎಂದು ಸಂಜೀವ್ ಪಾಟೀಲ ಹೇಳಿದರು.

'ರೋಗಿ ಮೃತಪಡುತ್ತಿದ್ದಂತೆ ಆಸ್ಪತ್ರೆಯವರು, ಬಾಕಿ ₹ 3.67 ಲಕ್ಷ ಶುಲ್ಕ ಪಾವತಿಸುವಂತೆ ಸೂಚಿಸಿದ್ದರು. ಹಣವಿಲ್ಲವೆಂದು ಕುಟುಂಬಸ್ಥರು ಹೇಳಿದಾಗ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದರು. ಈ ವಿಷಯ ಗೊತ್ತಾದ ಗೀತಾ ಅವರು ಆಸ್ಪತ್ರೆಗೆ ಹೋಗಿ ವಿಚಾರಿಸಿದ್ದರು. ಅವರನ್ನೂ ಆಸ್ಪತ್ರೆಯವರು ನಿಂದಿಸಿದ್ದರು. ಗೀತಾ ಅವರು ಠಾಣೆಗೆ ಬಂದು ದೂರು ನೀಡಿದ್ದರು. ಪೊಲೀಸರೇ ಆಸ್ಪತ್ರೆಗೆ ಹೋಗಿ ಮೃತದೇಹ ಕೊಡಿಸಿದ್ದಾರೆ' ಎಂದರು.

Dailyhunt
Disclaimer: This content has not been generated, created or edited by Dailyhunt. Publisher: Prajavani