Dailyhunt Logo
  • Light mode
    Follow system
    Dark mode
    • Play Story
    • App Story
108 ಆಂಬುಲೆನ್ಸ್ ನೌಕರರ ವೇತನ ಪರಿಷ್ಕರಣೆ, ಏಕರೂಪ ವೇತನಕ್ಕೆ ಎಚ್ಚರಿಕೆ

108 ಆಂಬುಲೆನ್ಸ್ ನೌಕರರ ವೇತನ ಪರಿಷ್ಕರಣೆ, ಏಕರೂಪ ವೇತನಕ್ಕೆ ಎಚ್ಚರಿಕೆ

ಬೆಂಗಳೂರು: ವಾರ್ಷಿಕ ವೇತನ ಪರಿಷ್ಕರಣೆ, ಏಕರೂಪದ ವೇತನ ಸೇರಿ ವಿವಿಧ ಬೇಡಿಕೆಗಳನ್ನು 15 ದಿನಗಳೊಳಗೆ ಈಡೇರಿಸದಿದ್ದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ 108 ಆಂಬುಲೆನ್ಸ್ ನೌಕರರು ಎಚ್ಚರಿಕೆ ನೀಡಿದ್ದಾರೆ. ‌ ವಾರ್ಷಿಕ ವೇತನ ಪರಿಷ್ಕರಣೆ, ‌ಆಂಬುಲೆನ್ಸ್‌ ಕಾರ್ಯಾಚರಣೆಗೆ ಮೂರು ಪಾಳಿ ವ್ಯವಸ್ಥೆ ಜಾರಿಗೊಳಿಸಬೇಕು.

ಅಲ್ಲದೇ ಪ್ರಸ್ತುತ ವಲಯಾಧಾರಿತ ವೇತನ ವ್ಯವಸ್ಥೆಯನ್ನು ಹಿಂಪಡೆದು ರಾಜ್ಯದಾದ್ಯಂತ ಏಕರೂಪದ ವೇತನ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ನೌಕರರು ಸರ್ಕಾರವನ್ನು ಆಗ್ರಹಿಸಿದ್ದಾರೆ.

'ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ₹50 ಲಕ್ಷ ಪರಿಹಾರ, ಹಿರಿತನದ ಆಧಾರದ ಮೇಲೆ ವೇತನ ನಿಗದಿ, ಕಾರ್ಮಿಕ ನಿಯಮಗಳಂತೆ ತಿಂಗಳ 7ನೇ ತಾರೀಖಿನೊಳಗೆ ಸಂಬಳ ಪಾವತಿ ಮತ್ತು ಆಂಬುಲೆನ್ಸ್ ಸಿಬ್ಬಂದಿಗೆ ವಿಶ್ರಾಂತಿ ಕೊಠಡಿಗಳು ಒದಗಿಸಬೇಕು' ಎಂದು ಸುವರ್ಣ ಕರ್ನಾಟಕ ಆರೋಗ್ಯ ಕವಚ (108) ನೌಕರರ ಸಂಘದ ಉಪಾಧ್ಯಕ್ಷ ಪರಮಶಿವ ಅವರು ಮನವಿ ಮಾಡಿದ್ದಾರೆ.

'ಕಂಪನಿ ವೇತನ ನೀಡದಿದ್ದರೆ ಸರ್ಕಾರ ಪ್ರಶ್ನಿಸಬೇಕು. 700 ವಾಹನಗಳು ಕಾರ್ಯಾಚರಣೆ ನಡೆಸುತ್ತಿದ್ದು, ಇವುಗಳಿಗೆ ಸಮಯ ನಿಗದಿ ಮಾಡಬೇಕು. ಗ್ರಾಮೀಣ ಪ್ರದೇಶದಿಂದ ಚಾಲಕರು ಕೆಲಸಕ್ಕೆ ಬರಬೇಕು. ಇದರಿಂದ ಸಾಕಷ್ಟು ತೊಂದರೆ ಉಂಟಾಗುತ್ತಿದೆ' ಎಂದು ತಿಳಿಸಿದರು.

ಸಾಮೂಹಿಕ ರಾಜೀನಾಮೆ ಎಚ್ಚರಿಕೆಗೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ಯು.ಟಿ. ಖಾದರ್, 'ಪ್ರತಿಭಟನೆಯಿಂದ ತುರ್ತು ಸೇವೆಗಳಿಗೆ ಅಡಚಣೆಯಾದರೆ ಅಥವಾ ರೋಗಿಗಳಿಗೆ ಕಷ್ಟವಾದರೆ ಕಾರ್ಮಿಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. 108 ಆಂಬುಲೆನ್ಸ್‌ ಸೇವೆಯನ್ನು ನಿರ್ವಹಿಸುವ ಖಾಸಗಿ ಕಂಪನಿಯೇ ಕಾರ್ಮಿಕರ ನಿರ್ವಹಣೆ, ಸಂಬಳ ಪಾವತಿ ಮತ್ತು ಸೇವಾ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿ ಹೊತ್ತಿದೆ' ಎಂದು ಅವರು ಹೇಳಿದರು.

'ಚಾಲಕರಿಗೆ ಸಮಸ್ಯೆಗಳಿದ್ದರೆ ಮೊದಲು ಕಂಪನಿ ಪ್ರತಿನಿಧಿಯ ಜತೆ ಮಾತನಾಡಬೇಕು. ಕಂಪನಿ ಪರಿಹರಿಸದಿದ್ದರೆ ಸರ್ಕಾರವನ್ನು ಸಂಪರ್ಕಿಸಬಹುದು. ಆಂಬುಲೆನ್ಸ್ ನೌಕರರು ನಮ್ಮ ಸಹೋದರರಂತೆ. ಆದರೆ, ರೋಗಿಗಳ ಆರೋಗ್ಯ ಮತ್ತು ಸುರಕ್ಷತೆಯೇ ಮೊದಲ ಆದ್ಯತೆ' ಎಂದು ತಿಳಿಸಿದರು.

260909-4-85673139

Dailyhunt
Disclaimer: This content has not been generated, created or edited by Dailyhunt. Publisher: Prajavani