ಬ್ರಾಟಿಸ್ಲಾವಾ: ಪ್ರಧಾನಿ ನರೇಂದ್ರ ಮೋದಿ ಹಾಗೂ ಸ್ಲೊವಾಕಿಯಾ ಪ್ರಧಾನಿ ರಾಬರ್ಟ್ ಫಿಕೊ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ವಲಸೆ, ಡಿಜಿಟಲ್ ತಂತ್ರಜ್ಞಾನ ಹಾಗೂ ರಕ್ಷಣಾ ಕ್ಷೇತ್ರ ಸೇರಿದಂತೆ ಒಟ್ಟು 11 ಒಪ್ಪಂದಗಳಿಗೆ ಸೋಮವಾರ ಸಹಿ ಹಾಕಿದ್ದಾರೆ.
ಫ್ರಾನ್ಸ್ ಬಳಿಕ ಸ್ಲೊವಾಕಿಯಾ ಪ್ರವಾಸದಲ್ಲಿರುವ ಮೋದಿ ಭಾನುವಾರ ಇಲ್ಲಿಗೆ ಬಂದಿಳಿದರು.
'ಉಭಯ ದೇಶಗಳ ನಡುವಿನ ಸಂಬಂಧವನ್ನು ಸಮಗ್ರ ಪಾಲುದಾರಿಕೆಯ ಮಟ್ಟಕ್ಕೆ ಉನ್ನತೀಕರಿಸಿದ್ದೇವೆ. ಭಾರತ- ಯುರೋಪ್ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದದ ಆರಂಭಿಕ ಅನುಷ್ಠಾನಕ್ಕೆ ಸಮ್ಮತಿಸಲಾಗಿದೆ. ಎರಡೂ ದೇಶಗಳ ಕೈಗಾರಿಕೆಗಳು, ನವೋದ್ಯಮಗಳು ಹಾಗೂ ವ್ಯಾಪಾರಿಗಳು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ' ಎಂದು ಉಭಯ ನಾಯಕರು ತಿಳಿಸಿದ್ದಾರೆ.
ಇಂಧನ ಕ್ಷೇತ್ರದಲ್ಲಿನ ಸಹಕಾರವನ್ನು ಹೆಚ್ಚಿಸಲು ಒಪ್ಪಿಕೊಳ್ಳಲಾಗಿದೆ. ಎರಡೂ ದೇಶಗಳ ಜನರ ಅನುಕೂಲಕ್ಕಾಗಿ ಹಲವಾರು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಎಲ್ಲಾ ವಿವಾದಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳುವುದನ್ನು ಬೆಂಬಲಿಸುತ್ತೇವೆ' ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
'ರಕ್ಷಣಾ ಸಹಕಾರವು ಪರಸ್ಪರ ನಂಬಿಕೆಗೆ ಸಾಕ್ಷಿಯಾಗಿದೆ. ಇದು ರಕ್ಷಣಾ ಕೈಗಾರಿಕೆಗಳಿಗೆ ಹೊಸ ಆವೇಗವನ್ನು ನೀಡುತ್ತದೆ. ಭಾರತ- ಯುರೋಪ್ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದದ ಸಮ್ಮತಿಗಾಗಿ ರಾಬರ್ಟ್ ಫಿಕೊ ಅವರಿಗೆ ಕೃತಜ್ಞತೆಗಳು' ಎಂದು ಮೋದಿ ಹೇಳಿದರು.
1993ರಲ್ಲಿ ಸ್ಲೊವಾಕಿಯಾ ಸ್ವಾತಂತ್ರ್ಯ ಪಡೆದ ಬಳಿಕ ಆ ದೇಶಕ್ಕೆ ಭಾರತದ ಪ್ರಧಾನಿಯೊಬ್ಬರು ಭೇಟಿ ನೀಡುತ್ತಿರುವುದು ಇದೇ ಮೊದಲು.

