ದೇಶವು 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದೆ. ಬ್ರಿಟಿಷರ ವಿರುದ್ಧ ಹೋರಾಡಿದ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಫಲವಾಗಿ ನಾವಿಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ದೇಶವನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡು ಭಾರತೀಯರನ್ನು ಅಡಿಯಾಳಾಗಿಸಿಕೊಂಡಿದ್ದ ಬ್ರಿಟಿಷರ ವಿರುದ್ಧ ಲೆಕ್ಕವಿಲ್ಲದಷ್ಟು ಜನ ಹೋರಾಡಿದ್ದಾರೆ.
ಕೆಲವರ ಹೋರಾಟ ಗಣನೆಗೆ ಬಂದೇ ಇಲ್ಲ. ಪರ್ವತ ಶ್ರೇಣಿಗಳು, ಗುಡ್ಡಗಾಡು ಪ್ರದೇಶಗಳಲ್ಲಿಯೂ ತಮ್ಮದೇ ಆದ ಶೈಲಿಯಲ್ಲಿ ಇಂಗ್ಲಿಷರ ವಿರುದ್ಧ ಹೋರಾಟ ನಡೆಸಿದವರಿದ್ದಾರೆ. ಅಂತಹ ವೀರರನ್ನು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ಸ್ಮರಿಸುವುದು ನಮ್ಮ ಹೊಣೆಯಾಗಿದೆ. ಅಂತಹ ಸಾಲಿನಲ್ಲಿ ನಿಲ್ಲುವವರೇ ಮಣಿಪುರದ ನಾಗಾಗಳ ರಾಣಿ ಗೈಡಿನ್ ಲಿಯು..
13ನೆ ವಯಸ್ಸಿಗೇ ಬ್ರಿಟಿಷರ ವಿರುದ್ಧ ಸೆಟೆದು ನಿಂತಿದ್ದ ಅವರು, ಶಾಲೆಯಲ್ಲಿ ಪಾಠ ಕಲಿಯುವ ಹಂತದಲ್ಲಿದ್ದಾಗಲೇ ಆಂಗ್ಲರಿಗೆ ಕಠಿಣ ಪಾಠ ಕಲಿಸಿದ್ದರು. ಸ್ವಾತಂತ್ರ್ಯವನ್ನು ವಯಸ್ಸು, ಲಿಂಗ ಅಥವಾ ಭೌಗೋಳಿಕ ಗಡಿಗಳಿಂದ ಬಂಧಿಸಲು ಸಾಧ್ಯವಿಲ್ಲ ಎಂದು ಸಾರಿ ಹೇಳಿದ್ದರು.
ಮಣಿಪುರದ ಮಂಜಿನಿಂದ ಆವೃತವಾದ ನಾಗಾ ಬೆಟ್ಟಗಳ ನಡುವೆ ಬುಡಕಟ್ಟು ಸಮುದಾಯದ ಯುವತಿ ಒಂದು ದಂಗೆಯ ನೇತೃತ್ವ ವಹಿಸಿ ಐತಿಹಾಸಿಕ ವ್ಯಕ್ತಿಯಾಗಿ ಹೊರಹೊಮ್ಮಿದರು. ತಮ್ಮ ಸಮುದಾಯದ ಜನರಿಗೆ ಒಬ್ಬ ಯೋಧೆಯಾಗಿ, ಆಧ್ಯಾತ್ಮಿಕ ದಾರಿದೀಪವಾಗಿಯೂ ನಿಂತಿದ್ದರು.
ಬೆಟ್ಟಗಳಲ್ಲಿ ಹುಟ್ಟಿಕೊಂಡ ಕ್ರಾಂತಿ
1915ರಲ್ಲಿ ನುಂಗ್‌ಕಾವೊ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ ಗೈಡಿನ್ ಲಿಯು, ಜೆಲಿಯಾಂಗ್‌ರಾಂಗ್ ಬುಡಕಟ್ಟು ಕುಟುಂಬಕ್ಕೆ ಸೇರಿದವರು. ಬೆಟ್ಟಗಳಲ್ಲಿನ ಜೀವನವು ಕಠಿಣವಾಗಿದ್ದರೂ ಶಾಂತಿಯುತವಾಗಿತ್ತು. ಹೊಸ ತೆರಿಗೆ, ಕಡ್ಡಾಯ ದುಡಿಮೆ ಮತ್ತು ಸ್ಥಳೀಯ ಸಂಪ್ರದಾಯಗಳಲ್ಲಿನ ಹಸ್ತಕ್ಷೇಪದ ಮೂಲಕ ಬ್ರಿಟಿಷ್ ಆಡಳಿತವು ತಮ್ಮ ಸಾಂಪ್ರದಾಯಿಕ ಜೀವನಶೈಲಿಗೆ ಅಡ್ಡಿಪಡಿಸಲು ಆರಂಭಿಸಿದ್ದು ಅವರ ಶಾಂತಿಗೆ ಭಂಗ ತಂದಿತ್ತು.
ಬ್ರಿಟಿಷರ ಈ ದೌರ್ಜನ್ಯದ ವಿರುದ್ಧ ಹೆರಕ ಚಳವಳಿ ಆರಂಭವಾಯಿತು. ಗೈಡಿನ್ ಸೋದರ ಸಂಬಂಧಿ ಹೈಪೌ ಸಡೊನಂಗ್ ಈ ಚಳವಳಿ ಆರಂಭಿಸಿದ್ದರು. ಪೂರ್ವಜರ ಸಂಪ್ರದಾಯವನ್ನು ಮರುಸ್ಥಾಪಿಸುವುದು ಮತ್ತು ಧಾರ್ಮಿಕ ಹಾಗೂ ರಾಜಕೀಯ ನೆಲೆಗಟ್ಟಿನಲ್ಲಿ ಬುಡಕಟ್ಟು ಜನರನ್ನು ಒಗ್ಗೂಡಿಸುವ ಉದ್ದೇಶವನ್ನು ಈ ಚಳವಳಿ ಹೊಂದಿತ್ತು. ಸ್ವಯಂ ಆಡಳಿತ ಮತ್ತು ಸಂಸ್ಕೃತಿಯ ಮರುಸ್ಥಾಪನೆ ಚಳವಳಿಯ ಉದ್ದೇಶವಾಗಿತ್ತು.
ಯೋಧನ ಮನೋಭಾವದ ನಾಯಕಿ
ಹೋರಾಟವನ್ನು ಹತ್ತಿರದಿಂದ ಗಮನಿಸುತ್ತಿದ್ದ 13ನೇ ವಯಸ್ಸಿನ ಗೈಡಿನ್ ಲಿಯು ಜಡೋನಾಂಗ್ ಚಳವಳಿಗೆ ನಿಷ್ಠಾವಂತ ಅನುಯಾಯಿಯಾಗಿ ಸೇರಿಕೊಂಡರು. ಗ್ರಾಮಸ್ಥರನ್ನು ಸಂಘಟಿಸುವುದು, ಏಕತೆಯ ಸಂದೇಶ ಪಸರಿಸುವುದು ಮತ್ತು ಬ್ರಿಟೀಷರ ಆಳ್ವಿಕೆಯನ್ನು ವಿರೋಧಿಸುವಂತೆ ತಮ್ಮ ಜನರನ್ನು ಪ್ರೇರೇಪಿಸಲು ಆರಂಭಿಸಿದರು.
1931ರಲ್ಲಿ ಜಡೋನಾಂಗ್ ಅವರನ್ನು ಮಾಟಗಾರ ಮತ್ತು ಬಂಡಾಯಗಾರ ಎಂದು ಕರೆದ ಬ್ರಿಟಿಷರು ಗಲ್ಲಿಗೇರಿಸಿದರು. ಕೂಡಲೇ ಚಳವಳಿಯ ನೇತೃತ್ವ ವಹಿಸಿಕೊಂಡ ಗೈಡಿನ್ ಲಿಯು, ತಮ್ಮ ಜನಾಂಗದ ಆಧ್ಯಾತ್ಮಿಕ ಪ್ರತಿರೋಧವನ್ನು ಸಶಸ್ತ್ರ ಹೋರಾಟವನ್ನಾಗಿ ಪರಿವರ್ತಿಸಿದರು. ಬುಡಕಟ್ಟು ಯೋಧರ ಪಡೆಯೊಂದಿಗೆ ಬ್ರಿಟಿಷ್ ನೆಲೆಗಳ ಮೇಲೆ ಗೆರಿಲ್ಲಾ ದಾಳಿ ಸಂಘಟಿಸಿದರು. ಶತ್ರುಗಳ ಸಾಮಗ್ರಿ ಸರಬರಾಜು ಮಾರ್ಗವನ್ನು ಬಂದ್ ಮಾಡಿ, ವಸಾಹತುಶಾಹಿ ಆಡಳಿತಕ್ಕೆ ತೆರಿಗೆ ಪಾವತಿಸುವುದನ್ನು ನಿಲ್ಲಿಸುವಂತೆ ಜನರನ್ನು ಹುರಿದುಂಬಿಸಿದರು.
ಬ್ರಿಟಿಷರು ತಮ್ಮನ್ನು ಭಯೋತ್ಪಾದಕಿ ಎಂದು ಕರೆದರೆ, ಅವರನ್ನು ನಂಬಿದ್ದ ಜನ 'ರಾಣಿ' ಎಂದು ಮೆರೆಸಿದರು.
16ನೇ ವಯಸ್ಸಿಗೆ ಸೆರೆ, ಎದೆಗುಂದದ ಗೈಡಿನ್
1932ರಲ್ಲಿ ಗೈಡಿನ್ ಸೆರೆಗೆ ಭಾರಿ ಕಾರ್ಯಾಚರಣೆ ಆರಂಭಿಸಿದ ಬ್ರಿಟಿಷರು, ಇಡೀ ಮಣಿಪುರವನ್ನು ಜಾಲಾಡಿ 16ನೇ ವಯಸ್ಸಿನಲ್ಲಿ ಅವರ ಕೈಗೆ ಕೋಳ ತೊಡಿಸಿದರು. ಬಂಧನಕ್ಕೂ ಮುನ್ನ, ಉತ್ತರದ ಕಚರ್ ಪರ್ವತ ಶ್ರೇಣಿಯಲ್ಲಿ ಬ್ರಿಟಿಷರ ವಿರುದ್ಧ ತೀವ್ರ ಹೋರಾಟ ನಡೆಸಿದ್ದರು. ಹಲವು ಸೈನಿಕರನ್ನು ಕೊಂದಿದ್ದರು. ಬಂಧಿಸಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.
ಜೈಲುವಾಸವೂ ಆಕೆಯ ದೃಢ ಸಂಕಲ್ಪವನ್ನು ಕುಗ್ಗಿಸಲಿಲ್ಲ. ಸುಮಾರು 14 ವರ್ಷಗಳ ಏಕಾಂತವಾಸ ಮತ್ತು ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತಾ ಸೆರೆಮನೆಯಲ್ಲೇ ತಮ್ಮ ಯೌವ್ವನ ಕಳೆದ ಆಕೆಯ ಧೈರ್ಯ ಜವಾಹರಲಾಲ್ ನೆಹರೂ ಅವರ ಗಮನ ಸೆಳೆದಿತ್ತು. 1937ರಲ್ಲಿ ಈಶಾನ್ಯ ಭಾರತಕ್ಕೆ ಭೇಟಿ ನೀಡಿದ್ದ ನೆಹರೂ, ಆಕೆಯನ್ನು ಭೇಟಿಯಾಗಿದ್ದರು. ಗೈಡಿನ್ ವ್ಯಕ್ತಿತ್ವದಿಂದ ಪ್ರಭಾವಿತರಾದ ಅವರು, 'ಪರ್ವತಗಳ ಮಗಳು' ಎಂದು ಕರೆದಿದ್ದರು. ಆಕೆಯ ಬಿಡುಗಡೆಗಾಗಿ ಹೋರಾಡಿದ್ದರು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರ ಅವರ ಬಿಡುಗಡೆಯಾಗಿತ್ತು.
ಸ್ವಾತಂತ್ರ್ಯದೊಂದಿಗೆ ಗೈಡಿನ್ ಅವರ ಸಮಾಜದ ಪರವಾದ ಕೆಲಸ ನಿಲ್ಲಲಿಲ್ಲ. ಬುಡಕಟ್ಟು ಅಸ್ಮಿತೆಯನ್ನು ರಕ್ಷಿಸಲು, ಶಿಕ್ಷಣ ಉತ್ತೇಜಿಸಲು ಮತ್ತು ಹೆರಕ ಚಳವಳಿಯನ್ನು ಸಾಂಸ್ಕೃತಿಕವಾಗಿ ಜನರನ್ನು ಒಗ್ಗೂಡಿಸುವ ಶಕ್ತಿಯನ್ನಾಗಿ ಬಲಪಡಿಸಲು ತಮ್ಮನ್ನು ತಾವು ತೊಡಗಿಸಿಕೊಂಡರು. ಭಾರತದಿಂದ ಪ್ರತ್ಯೇಕಗೊಳ್ಳಲು ಬಯಸುತ್ತಿದ್ದ ಉದಯೋನ್ಮುಖ ಬಂಡಾಯ ಗುಂಪುಗಳ ವಿರೋಧವಿದ್ದರೂ, ನಾಗಾ ಪ್ರದೇಶಗಳಲ್ಲಿ ಅಭಿವೃದ್ಧಿ ತರಲು ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡಿದರು. ಅವರ ಜೀವಮಾನದ ಸೇವೆಗಾಗಿ, 'ಪದ್ಮಭೂಷಣ' (1982) ಮತ್ತು 'ತಾಮ್ರಪತ್ರ ಸ್ವಾತಂತ್ರ್ಯ ಹೋರಾಟಗಾರ್ತಿ ಪ್ರಶಸ್ತಿ'ಯನ್ನು ನೀಡಿ ಗೌರವಿಸಲಾಗಿದೆ.
ಮರೆಯಲಾಗದ ಮಣಿಪುರದ ಮಾಣಿಕ್ಯ ರಾಣಿ ಗೈಡಿನ್ ಲಿಯು
1993ರಲ್ಲಿ ಗೈಡಿನ್ ಲಿಯು ಇಹಲೋಕ ತ್ಯಜಿಸಿದರು. ಆದರೆ, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಅತ್ಯಂತ ಧೈರ್ಯಶಾಲಿ ಹೋರಾಟಗಳ ಸಾಲಿನಲ್ಲಿ ಅವರ ಹೋರಾಟವೂ ನಿಲ್ಲುತ್ತದೆ. ಪ್ರಪಂಚದ ಅತ್ಯಂತ ಬಲಿಷ್ಠ ಸಾಮ್ರಾಜ್ಯಶಾಹಿಗಳೆಂದು ಪರಿಗಣಿಸಲಾದ ಬ್ರಿಟಿಷರ ವಿರುದ್ಧ ಹದಿಹರೆಯದ ಯುವತಿ ಸೆಟೆದು ನಿಂತ ರೀತಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವೀರತ್ವದ ದ್ಯೋತಕವಾಗಿದೆ.
ಗೈಡಿನ್ ಲಿಯು ಹೋರಾಟಕ್ಕೆ ಹೆಚ್ಚು ಮಹತ್ವ ಏಕೆ?
ಯುವಜನರ ಧ್ವನಿಗೆ ಬೆಲೆ ಸಿಗುತ್ತಿಲ್ಲ ಎಂಬ ಭಾವನೆ ಸಾಮಾನ್ಯವಾಗಿರುವ ಇಂದಿನ ದಿನಗಳಲ್ಲಿ, ಬದಲಾವಣೆಯು ಯಾವಾಗಲೂ ಧೈರ್ಯಶಾಲಿಗಳು ಮತ್ತು ಯುವಜನರಿಂದಲೇ ಆರಂಭವಾಗುತ್ತದೆ ಎಂಬುದನ್ನು ರಾಣಿ ಗೈಡಿನ್ ಲಿಯು ಅವರ ಜೀವನ ನಮಗೆ ನೆನಪಿಸುತ್ತದೆ. ಜೆನ್ ಝೀ ಹೋರಾಟಗಳು ಸದ್ದು ಮಾಡುತ್ತಿರುವ ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲೇ ಯುವ ಹೋರಾಟಗಾರರಿದ್ದರು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
ತಮ್ಮ 13ನೇ ವಯಸ್ಸಿನಲ್ಲಿ ಭಯವನ್ನು ಬದಿಗಿಟ್ಟು ಗೈಡಿನ್ ದಂಗೆಯ ಹಾದಿಯನ್ನು ಆರಿಸಿಕೊಂಡಿದ್ದರು. 16ನೇ ವಯಸ್ಸಿನಲ್ಲಿ ಜೀವಾವಧಿ ಶಿಕ್ಷೆಯನ್ನು ಹೆಮ್ಮೆಯಿಂದ ಎದುರಿಸಿದರು. ತಮ್ಮ ಜೀವನದ ಅಂತಿಮ ದಿನಗಳಲ್ಲೂ, ಬಾಲ್ಯದಿಂದಲೂ ಅವರನ್ನು ಮುನ್ನಡೆಸಿದ್ದ ಅದೇ ದೃಢ ನಂಬಿಕೆಯನ್ನು ಉಳಿಸಿಕೊಂಡಿದ್ದರು: ಸ್ವಾತಂತ್ರ್ಯಕ್ಕಾಗಿ ಎಂತಹ ತ್ಯಾಗವನ್ನಾದರೂ ಮಾಡಬಹುದು ಎಂಬ ನಂಬಿಕೆಯನ್ನು ಹೋರಾಟಗಾರರಲ್ಲಿ ತುಂಬಿದರು.
ಇಂದು ವಸ್ತುಸಂಗ್ರಹಾಲಯಗಳಲ್ಲಿ ಅವರ ಪ್ರತಿಮೆ ಮೌನವಾಗಿ ನಿಂತಿರಬಹುದು. ಆದರೆ, ಅವರ ಕಥೆ ಮಾತ್ರ ಆ ಬೆಟ್ಟಗುಡ್ಡಗಳ ನಡುವೆ ಇಂದಿಗೂ ಪ್ರತಿಧ್ವನಿಸುತ್ತಿದೆ. ತಮ್ಮ ಜನರ ಮೇಲಿನ ಪ್ರೀತಿ ಎದೆಯಲ್ಲಿ ಜ್ವಲಿಸುತ್ತಿದ್ದರೆ ಒಬ್ಬ ಯುವತಿಯೂ ಕ್ರಾಂತಿಯ ನೇತೃತ್ವ ವಹಿಸಬಲ್ಲಳು ಎಂಬುದಕ್ಕೆ ಗೈಡಿನ್ ಲಿಯು ಉದಾಹರಣೆಯಾಗಿದ್ದಾರೆ.
ಮಾಹಿತಿ: ಇಂಡಿಯಾ ಟುಡೇ ಮತ್ತು ಇತರೆ ಮೂಲಗಳು
-

