Dailyhunt
2 ದಿನ ಕಳೆದರೂ ವಿದ್ಯಾರ್ಥಿನಿ ಪತ್ತೆಯಿಲ್ಲ

2 ದಿನ ಕಳೆದರೂ ವಿದ್ಯಾರ್ಥಿನಿ ಪತ್ತೆಯಿಲ್ಲ

ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಬಳಿಯಿಂದ ನಾಪತ್ತೆಯಾಗಿರುವ ಕೇರಳದ ವಿದ್ಯಾರ್ಥಿನಿ ಎರಡು ದಿನ ಕಳೆದರೂ ಪತ್ತೆಯಾಗಿಲ್ಲ. ಬಾಲಕಿಗಾಗಿ ರಕ್ಷಣಾ ತಂಡ ಶೋಧ ಮುಂದುವರಿಸಿದೆ.

ಪೊಲೀಸರು, ಅಗ್ನಿಶಾಮಕ ದಳ, ಅರಣ್ಯ ಸಿಬ್ಬಂದಿ ಸೇರಿ 100ಕ್ಕೂ ಹೆಚ್ಚು ಜನ ಮಾಣಿಕ್ಯಧಾರಾ ಜಲಪಾತದ ಕಡಿದಾದ ಪ್ರದೇಶದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

ಒಂದೆಡೆ ಕಡಿದಾದ ಪ್ರಪಾತಕ್ಕೆ ಹಗ್ಗ ಕಟ್ಟಿಕೊಂಡು ಇಳಿದು ಶೋಧ ನಡೆಸಿದರು. ಮತ್ತೊಂದೆಡೆ ಡ್ರೋಣ್‌ಗಳ ಮೂಲಕವೂ ಹುಡುಕಾಟ ನಡೆಸಿದರು.

ಸುತ್ತಮುತ್ತಲ ಶೋಲಾ ಕಾಡಿನಲ್ಲೂ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಬಾಲಕಿಯ ಪೋಷಕರು ಮತ್ತು ಅವರ ಸಂಬಂಧಿಕರು ಸ್ಥಳದಲ್ಲೇ ಮಗಳಿಗಾಗಿ ಕಾಯುತ್ತಿದ್ದಾರೆ. ಬಾಲಕಿಯ ಶೋಧ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆಯಲು ಕೇರಳದಿಂದ ಮೂವರು ಪೊಲೀಸ್ ಸಿಬ್ಬಂದಿ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

'ಬಾಲಕಿ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಹುಡುಕಾಟ ಮುಂದುವರಿದಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರಕುಮಾರ್ ದಯಾಮ '‍ಪ್ರಜಾವಾಣಿ'ಗೆ ತಿಳಿಸಿದರು.

ಕೇರಳದ ಪಾಲಕ್ಕಾಡಿನಿಂದ ಬಂದಿದ್ದ 40 ಜನರ ತಂಡದಲ್ಲಿ ವಿದ್ಯಾರ್ಥಿನಿ ಕೂಡ ಬಂದಿದ್ದರು. ಮಂಗಳವಾರ ಸಂಜೆಯಿಂದ ನಾಪತ್ತೆಯಾಗಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani