Wednesday, 27 Jan, 7.27 pm ಪ್ರಜಾವಾಣಿ

ಜಿಲ್ಲೆ
35 ಸಾವಿರ ಎಲ್‌ಇಡಿ ಬಲ್ಬ್‌ ಅಳವಡಿಕೆ ಶೀಘ್ರ

'ಪ್ರಜಾವಾಣಿ'ಯ ಕಲಬುರ್ಗಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಫೊನ್‌ ಇನ್‌ ಕಾರ್ಯಕ್ರಮದಲ್ಲಿ ನಗರದ ನಿವಾಸಿಗಳಿಂದ ಸಾಕಷ್ಟು ಕರೆಗಳು ಬಂದವು. ನಗರದ ಸ್ವಚ್ಛತೆ, ಸೌಂದರ್ಯೀಕರಣ, ರಸ್ತೆ- ಚರಂಡಿ ದುರಸ್ತಿ ಸೇರಿದಂತೆ ಹಲವು ಸಮಸ್ಯೆಗಳನ್ನು ಜನ ಹೇಳಿಕೊಂಡರು. ಪಾಲಿಕೆ ಆಯುಕ್ತ ಸ್ನೇಹಲ್‌ ಸುಧಾಕರ ಲೋಖಂಡೆ ಅವರು ಎಲ್ಲರ ಕರೆಗಳಿಗೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.

*

ಕಲಬುರ್ಗಿ: ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಹಳೆಯ ಬೀದಿ ದೀಪಗಳನ್ನು ಬದಲಾಯಿಸಿ ಹೊಸದಾಗಿ 35,199 ಎಲ್‌ಇಡಿ ದೀಪಗಳನ್ನು ಅಳವಡಿಸಲು ಪಾಲಿಕೆ ಯೋಜನೆ ರೂಪಿಸಿದ್ದು, ಎಂಟು ತಿಂಗಳಲ್ಲಿ ಇದು ಅನುಷ್ಠಾನಕ್ಕೆ ಬರಲಿದೆ. ಇದಕ್ಕೆ ಅಂದಾಜು ₹ 51 ಕೋಟಿ ವೆಚ್ಚ ತಗುಲಲಿದೆ. ಇದದ ವಿದ್ಯುತ್ ಉಳಿತಾಯವೂ ಆಗಲಿದೆ ಎಂದು ಪಾಲಿಕೆ ಕಮಿಷನರ್‌ ಸ್ನೇಹಲ್ ಸುಧಾಕರ ಲೋಖಂಡೆ ಮಾಹಿತಿ ನೀಡಿದರು.

ಫೋನ್ ಇನ್ ಕಾರ್ಯಕ್ರಮದಲ್ಲಿ ಬೀದಿ ದೀಪಗಳ ಸಮಸ್ಯೆಗೆ ಸಂಬಂಧಿಸಿದಂತೆ ಜನರ ಪ್ರಶ್ನೆಗಳಿಗೆ ಉತ್ತರಿಸದ ಅವರು, ನಗರದಾದ್ಯಂತ ಒಟ್ಟು 36,515 ಬಲ್ಬ್‌ಗಳ ಅವಶ್ಯಕತೆ ಇದೆ. ಈಗಾಗಲೇ 1,316 ಎಲ್‌ಇಡಿ ಬಲ್ಬ್‌ ಅಳವಡಿಸಲಾಗಿದೆ. ಉಳಿದ ಬಲ್ಬ್‌ಗಳ ಅಳವಡಿಕೆಗೆ ಕೆಲವೇ ದಿನಗಳಲ್ಲಿ ಟೆಂಡರ್‌ ಕರೆಯಲಾಗುವುದು. ವಿದ್ಯುತ್ ದೀಪಗಳನ್ನು ಅಳವಡಿಸುವ ಕಂಪನಿಯೇ ಇವುಗಳನ್ನು ಏಳು ವರ್ಷಗಳವರೆಗೆ ನಿರ್ವಹಣೆ ಮಾಡಲಿದೆ. ಇದಕ್ಕಾಗಿ ಪಾಲಿಕೆಯ ಕಚೇರಿಯಲ್ಲಿ ಒಂದು ಕೊಠಡಿಯನ್ನು ಮೀಸಲಾಗಿಡಲಾಗುವುದು. ವಿದ್ಯುತ್ ದೀಪ ಕೆಟ್ಟುಹೋದ ಬಗ್ಗೆ ದೂರು ಬಂದ ತಕ್ಷಣ ಅವುಗಳನ್ನು ಬದಲಾಯಿಸಲು ಅಗತ್ಯ ಬಲ್ಬ್‌ಗಳನ್ನೂ ಸಂಗ್ರಹಿಸಲಾಗುತ್ತದೆ. ಇದರಿಂದಾಗಿ ಮುಂದಿನ ಏಳು ವರ್ಷಗಳವರೆಗೆ ಪಾಲಿಕೆ ವಿದ್ಯುತ್‌ ದೀಪಕ್ಕಾಗಿ ಹಣ ಖರ್ಚು ಮಾಡುವ ಪ್ರಸಂಗ ಬರುವುದಿಲ್ಲ ಎಂದರು.

₹600 ಕೋಟಿ ವೆಚ್ಚದಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿರಂತರ ಕುಡಿಯುವ ನೀರು ಯೋಜನೆಯನ್ನು ಎಲ್‌ ಅಂಡ್ ಟಿ ಕಂಪನಿಗೆ ಗುತ್ತಿಗೆ ನೀಡಲಾಗಿದ್ದು, ಬೆಣ್ಣೆತೊರಾದಿಂದ ನೀರು ತರಲು ಸರ್ವೆ ಕಾರ್ಯ ನಡೆದಿದೆ ಎಂದು ಮಾಹಿತಿ ನೀಡಿದರು.

ಫೋನ್‌ ಇನ್‌ ಕಾರ್ಯಕ್ರಮದ ಆಯ್ದ ಕರೆಗಳನ್ನು ಇಲ್ಲಿ ನೀಡಲಾಗಿದೆ.

* ಬಸವರಾಜ, ಪ್ರಗತಿ ಕಾಲೊನಿ: ಕಾಲೊನಿಯ ಈಸು ಗಾರ್ಡನ್ ಅಭಿವೃದ್ಧಿ ಕಾಮಗಾರಿಯನ್ನು ಏಕಾಏಕಿ ನಿಲ್ಲಿಸಿದ್ದಾರೆ. ಇದಕ್ಕೆ ಕಾರಣವೇನೆಂದು ಗೊತ್ತಾಗಲಿಲ್ಲ.

-ಅಭಿವೃದ್ಧಿ ಕಾಮಗಾರಿ ಏಕೆ ನಿಂತಿದೆ ಎಂಬುದರ ವಿವರ ಪಡೆದು ಕ್ರಮ ಕೈಗೊಳ್ಳುವಂತೆ ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರಿಗೆ ತಿಳಿಸುತ್ತೇನೆ.

* ಸ್ನೇಹಾ ಕಟ್ಟಿಮನಿ: ಕಲಬುರ್ಗಿಯ ಸಾಯಿಮಂದಿರದ ಹಿಂಭಾಗದಲ್ಲಿ ನಾಲ್ಕೈದು ಕಾಲೊನಿಗಳಿಗೆ ಒಂದೇ ಒಂದು ಉದ್ಯಾನವಿದ್ದು, ಅದನ್ನು ಭೂಗಳ್ಳರು ಒತ್ತುವರಿ ಮಾಡಿಕೊಂಡು ಅಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಇನ್ನು ಕೆಲವರು ಅಕ್ರಮವಾಗಿ ಮನೆ ಕಟ್ಟಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ?

-ಆ ಉದ್ಯಾನ ಒತ್ತುವರಿ ಬಗ್ಗೆ ನನಗೆ ಮಾಹಿತಿ ಇದ್ದು, ಈಗಾಗಲೇ ಪಾಲಿಕೆ ವಲಯಾಧಿಕಾರಿ ಒತ್ತುವರಿದಾರರಿಗೆ ನೋಟಿಸ್ ನೀಡಿದ್ದಾರೆ. ಮತ್ತೊಂದು ನೋಟಿಸ್ ನೀಡಿದ ಬಳಿಕ ಅವರನ್ನು ತೆರವುಗೊಳಿಸಿ ಆ ಉದ್ಯಾನವನ್ನು ಸ್ವಚ್ಛ ಮಾಡಿಕೊಡಲಾಗುವುದು.

* ರಾಧಾ ಜಿ., ಕೀರ್ತಿನಗರ: ಬಡಾವಣೆಯಲ್ಲಿ ಕಸ ಸ್ವಚ್ಛತೆ ಸರಿಯಾಗಿ ಆಗುತ್ತಿಲ್ಲ. ಚರಂಡಿಯನ್ನೂ ಸ್ವಚ್ಛಗೊಳಿಸುವುದಿಲ್ಲ

-ನಿಮ್ಮ ಬಡಾವಣೆಯ ಸ್ಯಾನಿಟರಿ ಇನ್‌ಸ್ಪೆಕ್ಟರ್‌ಗೆ ಈ ಬಗ್ಗೆ ದೂರು ನೀಡಿ. ನಾನೂ ವಲಯಾಧಿಕಾರಿಗಳಿಗೆ ಸೂಚನೆ ನೀಡುತ್ತೇನೆ.

* ಮಂಜುನಾಥ ನಾಲವಾರಕರ, ಕರವೇ ಜಿಲ್ಲಾ ಅಧ್ಯಕ್ಷ: 2005ರಲ್ಲಿ ಮಹಾತ್ಮ ಗೌತಮ ಬುದ್ಧರ ಮೂರ್ತಿಯನ್ನು ಪ್ರತಿಷ್ಠಾಪಿಸಲು ಪಾಲಿಕೆಯಿಂದ ₹ 5.80 ಲಕ್ಷ ಹಣ ಬಿಡುಗಡೆ ಮಾಡಲಾಗಿತ್ತು. 15 ವರ್ಷಗಳಾದರೂ ಇನ್ನೂ ಮೂರ್ತಿ ನಿರ್ಮಾಣವಾಗಿಲ್ಲ ಏಕೆ?

-ಹಿಂದಿನ ಯೋಜನೆಯಾಗಿರುವುದರಿಂದ ಏನಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಈ ವಿಚಾರವನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ.

* ಗಿರೀಶ ಭಜಂತ್ರಿ: ನಗರದ ನಾಲ್ಕು ಕಡೆ ಅಲೆಮಾರಿ, ಅರೆಅಲೆಮಾರಿ ಹಾಗೂ ಸೂಕ್ಷ್ಮ ಸಮುದಾಯದ ಜನ ವಾಸಿಸುತ್ತಿದ್ದಾರೆ. ಅಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಸಮರ್ಪಕವಾಗಿಲ್ಲ.

-ಇಂಥ ಸಮುದಾಯಗಳಿಗಾಗಿ ಶೇ 22ರ ಯೋಜನೆ ಅಡಿ ಅನುದಾನ ಒದಗಿಸಲು ಅವಕಾಶವಿದೆ. ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.

* 55ನೇ ವಾರ್ಡಿನಲ್ಲಿ ರಸ್ತೆಗಳ ಹೆಸರು ಗುರುತಿಸಿಲ್ಲ ಏಕೆ?

-ನಗರದಲ್ಲಿ ಎಲ್ಲೆಲ್ಲಿ ಮುಖ್ಯರಸ್ತೆ- ಅಡ್ಡರಸ್ತೆಗಳಿಗೆ ಹೆಸರಿಲ್ಲವೋ ಎಲ್ಲವನ್ನೂ ಗಮನಿಸಿ, ಬೋರ್ಡ್‌ ಅಳವಡಿಸುವ ಕೆಲಸನ್ನು ಶೀಘ್ರ ಕೈಗೆತ್ತಿಕೊಳ್ಳಲಾಗುವುದು.

* ವೇದನಂದಾ: ಗಂಜ್‌ ಕಾಲೊನಿಯಲ್ಲಿನ ಹಳೆಯ ಚರಂಡಿಗಳು ತೀರ ಚಿಕ್ಕದಾಗಿವೆ. ಈಗ ಜನವಸತಿ ಹೆಚ್ಚಾಗಿದ್ದು ಮಲಿನ ನೀರು ದಾಟುತ್ತಿಲ್ಲ. ಸೊಳ್ಳೆಗಳು ಉತ್ಪತ್ತಿಯಾಗಿ ರೋಗಗಳು ಹೆಚ್ಚಾಗಿವೆ.

-ಗಂಜ್‌ ಕಾಲೊನಿಯ ನಗರೇಶ್ವರ ಸ್ಕೂಲ್‌ ಎದುರಿನ ಚರಂಡಿ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. 15ನೇ ಹಣಕಾಸು ಯೋಜನೆ ಅಡಿ ಈಗಾಗಲೇ ಕೆಲವು ಕಡೆ ಚರಂಡಿ ಮರು ನಿರ್ಮಾಣ ನಡೆದಿದೆ. ಗಂಜ್‌ ಪ್ರದೇಶವನ್ನೂ ಆದ್ಯತೆ ಮೇಲೆ ಪರಿಗಣಿಸಲಾಗುವುದು.

* ಈಶ್ವರ: ಹಳೆ ಜೇವರ್ಗಿ ರಸ್ತೆಯಲ್ಲಿ ಬಯಲಿಗೇ ಗೋ ಮಾಂಸ ಮಾರಾಟ ಮಾಡುತ್ತಾರೆ. ಅದರ ತ್ಯಾಜ್ಯವನ್ನೂ ವಿಲೇವಾರಿ ಮಾಡುವುದಿಲ್ಲ. ಇದರಿಂದ ಜನರಿಗೆ ತೊಂದರೆಯಾಗುತ್ತಿದ್ದು, ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು.

- ಸೂಕ್ತ ಸ್ಥಳಗಳಲ್ಲಿ ಮತ್ತು ಸುರಕ್ಷಿತವಾಗಿ ಜಾಗದಲ್ಲಿ ಮಾತ್ರ ಮಾಂಸ ಮಾರಾಟಕ್ಕೆ ಅನುಮತಿ ನೀಡಲಾಗುತ್ತದೆ. ಒಂದು ವೇಳೆ ಅನುಮತಿ ಪಡೆಯದೇ ಮಾಂಸ ಮಾರಾಟ ಮಾಡುತ್ತಿರುವುದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು. ಪಾಲಿಕೆಯ ಆರೋಗ್ಯಾಧಿಕಾರಿ ಹಾಗೂ ಆಹಾರ ನಿರೀಕ್ಷಕರಿಗೆ ಸೂಚನೆ ನೀಡಲಾಗುವುದು.

* ಸ್ವಾಮಿರಾವ್‌ ಕುಲಕರ್ಣಿ: ಮಹಾಲಕ್ಷ್ಮಿ ಲೇಔಟ್‌ನಲ್ಲಿ ಚರಂಡಿ ನಿರ್ಮಾಣಕ್ಕಾಗಿ ಸಿಸಿ ರಸ್ತೆ ಅಗೆದು ಹಾಗೇ ಬಿಟ್ಟಿದ್ದಾರೆ. ಹಿರಿಯರು ನಡೆದಾಡಲು, ಮಕ್ಕಳು ಆಟವಾಡಲು ತೊಂದರೆಯಾಗುತ್ತಿದೆ. ಕೂಡಲೇ ಕ್ರಮ ಕೈಗೊಳ್ಳಿ.

-ಕಾಮಗಾರಿ ಮುಗಿದಿದ್ದರೆ ರಸ್ತೆಯನ್ನು ಕೂಡಲೇ ದುರಸ್ತಿ ಮಾಡಲು ಸೂಚಿಸುತ್ತೇನೆ. ಹಲವು ಕಡೆ ನಲ್ಲಿ ಸಂಪರ್ಕ ಕೂಡ ಕಡಿತಗೊಂಡ ಬಗ್ಗೆ ದೂರು ಬಂದಿದ್ದು, ಅದನ್ನೂ ಸರಿ ಮಾಡಲಾಗುವುದು.

* ನಾರಾಯಣ ಎಂ. ಜೋಶಿ: ಮುಖ್ಯ ರಸ್ತೆಯಿಂದ ಒಳರಸ್ತೆಗೆ ಹೋಗುವ ದಾರಿಯಲ್ಲಿ ಮಾರ್ಗಸೂಚಿ ಫಲಕಗಳನ್ನೇ ಹಾಕಿಲ್ಲ. ಇದರಿಂದಾಗಿ ಅಂಚೆ, ಕೊರಿಯರ್‌ನವರಿಗೆ ಬಡಾವಣೆ ಗುರುತಿಸಲು ಕಷ್ಟವಾಗುತ್ತಿದೆ.

-ಫಲಕಗಳನ್ನು ಪ್ರಮುಖ ಒಳರಸ್ತೆಗಳಲ್ಲಿ ಹಾಕಿಸುವ ಚಿಂತನೆ ಇದ್ದು, ಕೆಲವೇ ದಿನಗಳಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ.

* ಲಕ್ಷ್ಮಿಕಾಂತ ಮಾಲಿಪಾಟೀಲ: ಆಟೊ ಚಾಲಕರಿಗಾಗಿ ವಸತಿ ಕೊಡುವುದಾಗಿ ಪಾಲಿಕೆ ಭರವಸೆ ನೀಡಿತ್ತು. ಆ ಪ್ರಕ್ರಿಯೆ ಎಲ್ಲಿಗೆ ಬಂತು?

ಕಲಬುರ್ಗಿ ಹೊರವಲಯದ ಕೆಸರಟಗಿ ಬಳಿ ನಿರ್ಮಿಸಿರುವ ಮನೆಗಳ ಹಕ್ಕುಪತ್ರಗಳನ್ನು ವಿತರಿಸಲಾಗಿದ್ದು, ಸ್ವಾಧೀನಪತ್ರ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ.

ಹಂದಿ ನಿಯಂತ್ರಣಕ್ಕೆ ಕ್ರಮ

ನಗರದಲ್ಲಿ ಹಂದಿಗಳನ್ನು ಸ್ಥಳಾಂತರಿಸಲು ಹುಬ್ಬಳ್ಳಿಯಿಂದ ತಂಡ ಕರೆಸಲಾಗಿದ್ದು, ಈಗಾಗಲೇ ಬಹಳಷ್ಟು ಹಂದಿಗಳನ್ನು ಸಾಗಿಸಿದ್ದಾರೆ. ಇನ್ನೂ ಹಲವು ಬಡಾವಣೆಗಳಲ್ಲಿ ಹಾವಳಿ ಇದ್ದು, ಅಲ್ಲಿಯ ತಂಡಕ್ಕೆ ನಿರಂತರವಾಗಿ ಬರುವಂತೆ ತಿಳಿಸಲಾಗಿದೆ ಎಂದು ಸ್ನೇಹಲ್ ಓದುಗರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಕೊಡಗು ಮತ್ತು ಗೋವಾದಲ್ಲಿ ಹಂದಿ ಮಾಂಸಕ್ಕೆ ಬೇಡಿಕೆ ಇದೆ. ಅಲ್ಲಿಯ ಹಂದಿ ಮಾರಾಟಗಾರರನ್ನು ಕರೆಸಲು ಪ್ರಯತ್ನ ನಡೆಸಿದ್ದೆವು. ಆದರೆ, ಅವರಿಗೆ ಕಲಬುರ್ಗಿ ಬಹಳ ದೂರದ ಪ್ರದೇಶವಾಗುವುದರಿಂದ ಇಲ್ಲಿಗೆ ಬರಲು ಆಸಕ್ತಿ ತೋರಿಸುತ್ತಿಲ್ಲ. ಆದ್ದರಿಂದ ಹುಬ್ಬಳ್ಳಿಯವರನ್ನೇ ಕರೆಸುತ್ತಿದ್ದೇವೆ.

ಸುನಿಲ್‌ಕುಮಾರ್‌ ಅವರು ಪಾಲಿಕೆ ಆಯುಕ್ತರಾಗಿದ್ದ ಸಂದರ್ಭದಲ್ಲಿ ನಗರದ ಹೊರವಲಯದಲ್ಲಿ ಏಳು ಎಕರೆ ಜಾಗ ಖರೀದಿಸಿ ಅಲ್ಲಿ ಹಂದಿಗಳನ್ನು ಸಾಗಿಸುವ ಪ್ರಸ್ತಾವ ಸಿದ್ಧಪಡಿಸಿದ್ದರು. ಆದರೆ, ಅದಕ್ಕೆ ಒಪ್ಪಿಗೆ ಸಿಕ್ಕಿರಲಿಲ್ಲ. ಹಂದಿಗಳನ್ನು ನಗರದಲ್ಲಿ ಬಿಡುವ ಮಾಲೀಕರ ವಿರುದ್ಧ ನಾನು ಅಧಿಕಾರ ವಹಿಸಿಕೊಂಡ ಬಳಿಕ ಎರಡು ಪ್ರಕರಣಗಳನ್ನು ದಾಖಲಿಸಿದ್ದೇನೆ ಎಂದು ವಿವರಿಸಿದರು.

ಕಾಮಗಾರಿ ಪೂರ್ಣಗೊಳಿಸಲು ಸೂಚನೆ

ಚರಂಡಿಗಳ ನಿರ್ಮಾಣಕ್ಕಾಗಿ ರಸ್ತೆಯನ್ನು ಅಗೆದು ಹಲವು ಕಡೆ ಬಿಡಲಾಗಿದೆ. ಅಲ್ಲಿ ಮತ್ತೆ ಪಕ್ಕಾ ರಸ್ತೆಗಳನ್ನು ನಿರ್ಮಿಸಲು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದರು.

ಸಾಹಿತಿ ಸ್ವಾಮಿರಾವ ಕುಲಕರ್ಣಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 'ಲಾಲಗೇರಿಯಿಂದ ಶಹಾಬಜಾರ್ ನಾಕಾಕ್ಕೆ ತೆರಳುವ ಅಗ್ನಿಶಾಮಕ ಠಾಣೆ ಎದುರಿನ ರಸ್ತೆಯಲ್ಲಿ ಈಗಷ್ಟೇ ಚರಂಡಿ ಕೆಲಸ ಮುಗಿದಿದೆ. ಅಲ್ಲಿ ತಕ್ಷಣ ಪಕ್ಕಾ ರಸ್ತೆಯನ್ನು ನಿರ್ಮಿಸಲಾಗುವುದು. ನಗರದ ಯಾವುದೇ ಭಾಗದಲ್ಲಿಯೂ ಚರಂಡಿ, ಒಳಚರಂಡಿ ಕೆಲಸ ಮುಗಿದ ಬಳಿಕ ರಸ್ತೆಗಳನ್ನು ದುರಸ್ತಿ ಮಾಡಿಕೊಡಬೇಕು' ಎಂದು ಸೂಚನೆ ನೀಡುತ್ತೇನೆ ಎಂದರು.

ಬೀದಿನಾಯಿಗಳ ಹಾವಳಿ

ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆಯೂ ಕೆಲ ಓದುಗರು ಗಮನ ಸೆಳೆದರು.

ಪ್ರಾಣಿ ಕಲ್ಯಾಣ ಮಂಡಳಿ ನಿಯಮಾವಳಿಯಂತೆಯೇ ನಾವು ಕ್ರಮ ಕೈಗೊಳ್ಳಬೇಕಾಗುತ್ತದೆ. ನಗರದಲ್ಲಿ ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ನಡೆಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ₹20 ಲಕ್ಷ ಮೀಸಲಿಟ್ಟಿದ್ದು, ಟೆಂಡರ್‌ ಪ್ರಕ್ರಿಯೆ ನಡೆದಿದೆ. ಹುಚ್ಚುನಾಯಿಗಳನ್ನು ಗುರುತಿಸಿ ಅವುಗಳನ್ನು ಸಂಹಾರ ನಡೆಸುವ ನಿರ್ಧಾರವನ್ನು ಗುತ್ತಿಗೆ ಪಡೆದವರೇ ಮಾಡಲಿದ್ದಾರೆ. ಈ ಪ್ರಕ್ರಿಯೆ ಕೆಲದಿನಗಳಲ್ಲಿ ಆರಂಭವಾಗಲಿದೆ ಎಂದು ಹೇಳಿದರು.

ಅಂಕಲ್‌ ಉದ್ಯಾನ ಬೇಕು!

ಸ್ವಾಮಿ ವಿವೇಕಾನಂದ ನಗರದ ಖಾದ್ರಿಚೌಕ್‌ ಬಳಿ ಸಾರ್ವಜನಿಕ ಉದ್ಯಾನವಿದೆ. ಅದರ ಕಾಂಪೌಂಡ್‌ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಮಕ್ಕಳ ಆಟಕ್ಕೂ ಅವಕಾಶವಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮಿಲೇನಿಯಂ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಪೂರ್ವಿ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ನೇಹಲ್‌, 'ಕಾಮಗಾರಿ ಮಾಡುತ್ತಿರುವ ಅಧಿಕಾರಿ ಹಾಗೂ ಗುತ್ತಿಗೆದಾರರ ಗಮನಕ್ಕೆ ತಂದು ಶೀಘ್ರ ಕೆಲಸ ಪೂರ್ಣಗೊಳಿಸಲಾಗುವುದು' ಎಂದು ಭರವಸೆ ನೀಡಿದರು.

ಕನ್ನಡ ಫಲಕಗಳನ್ನೇ ಹಾಕಿ

ನಗರದ ಹಲವು ಮಳಿಗೆಗಳ ಬೋರ್ಡ್‌ನಲ್ಲಿ ಕನ್ನಡವೇ ಕಾಣುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕರವೇ ಮುಖಂಡ ಚನ್ನವೀರ ಗೌರೆ ಕೋರಿದರು.

ಫಲಕ ಹಾಕುವುದಕ್ಕೆ ಪಾಲಿಕೆ ನಿಯಮ ಮಾಡಿದ್ದು ಅದನ್ನು ಎಲ್ಲ ಮಳಿಗೆಗಳವರೂ ಪಾಲಿಸಲೇಬೇಕು. ಜಾಗೃತಿ ಮೂಡಿಸುವ ಕೆಲಸವನ್ನು ಸಂಘಟನೆಗಳವರೂ ಮಾಡಬೇಕು ಎಂದು ಆಯುಕ್ತರು ಹೇಳಿದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top