ನವದೆಹಲಿ (ಪಿಟಿಐ): ಸಗಟು ಹಣದುಬ್ಬರ ಪ್ರಮಾಣವು ಏಪ್ರಿಲ್‌ನಲ್ಲಿ 42 ತಿಂಗಳ ಗರಿಷ್ಠ ಮಟ್ಟವಾದ ಶೇಕಡ 8.3ಕ್ಕೆ ತಲುಪಿದೆ. ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಣಾಮವಾಗಿ ಇಂಧನ ಬೆಲೆಯಲ್ಲಿ ಆದ ಏರಿಕೆಯು ಸಗಟು ಹಣದುಬ್ಬರ ಪ್ರಮಾಣದ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ.
ಮಾರ್ಚ್ ತಿಂಗಳಲ್ಲಿ ಸಗಟು ಹಣದುಬ್ಬರ ಪ್ರಮಾಣವು ಶೇ 3.88ರಷ್ಟು ಇತ್ತು. ಇದು ಹಿಂದಿನ ವರ್ಷದ ಏಪ್ರಿಲ್ ತಿಂಗಳಲ್ಲಿ ಶೇ 0.85ರಷ್ಟು ಇತ್ತು.
ಇಂಧನ ಮತ್ತು ವಿದ್ಯುತ್ ವಿಭಾಗದಲ್ಲಿ ಸಗಟು ಹಣದುಬ್ಬರ ಪ್ರಮಾಣವು 42 ತಿಂಗಳ ಗರಿಷ್ಠ ಮಟ್ಟವಾದ ಶೇ 24.71ಕ್ಕೆ ಹೆಚ್ಚಾಗಿದೆ. ಇದು ಮಾರ್ಚ್‌ನಲ್ಲಿ ಶೇ 1.05ರಷ್ಟು ಮಾತ್ರ ಇತ್ತು. ಕಚ್ಚಾ ಪೆಟ್ರೋಲಿಯಂ ಉತ್ಪನ್ನದ ಹಣದುಬ್ಬರ ಪ್ರಮಾಣ ಶೇ 88.06ರಷ್ಟು ಆಗಿದೆ. ಇದು 2021ರ ಅಕ್ಟೋಬರ್ ನಂತರದ ಗರಿಷ್ಠ ಮಟ್ಟ.
ಪಶ್ಚಿಮ ಏಷ್ಯಾದಲ್ಲಿನ ಸಮರವು ಹೊರ್ಮುಜ್ ಜಲಸಂಧಿಯ ಮೂಲಕ ಕಚ್ಚಾ ಪೆಟ್ರೋಲಿಯಂ ಸಾಗಣೆಗೆ ಅಡ್ಡಿ ಉಂಟುಮಾಡಿದೆ. ಇದರಿಂದಾಗಿ ಭಾರತಕ್ಕೆ ಆಮದು ಕಷ್ಟವಾಗುತ್ತಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲದ ಬೆಲೆಯು ಹೆಚ್ಚಳ ಆಗಿರುವುದು ಕೂಡ ತೈಲ ಆಮದನ್ನು ದುಬಾರಿ ಆಗಿಸಿದೆ.
'ಖನಿಜ ತೈಲ, ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಮೂಲ ಲೋಹಗಳು, ತಯಾರಿಕೆಯಲ್ಲಿ ಬಳಸುವ ಉತ್ಪನ್ನಗಳು ಹಾಗೂ ಆಹಾರೇತರ ಉತ್ಪನ್ನಗಳ ಬೆಲೆಯಲ್ಲಿನ ಹೆಚ್ಚಳದ ಪರಿಣಾಮವಾಗಿ ಏಪ್ರಿಲ್‌ನಲ್ಲಿ
ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಏಪ್ರಿಲ್‌ನಲ್ಲಿ ಎಲ್‌ಪಿಜಿ ಬೆಲೆ ಹೆಚ್ಚಳವು ಶೇ 10.92ರಷ್ಟು ಆಗಿದೆ. ಸಗಟು ಪೆಟ್ರೋಲ್ ಬೆಲೆ ಏರಿಕೆಯು ಶೇ 32.40ರಷ್ಟು ಆಗಿದೆ. ಡೀಸೆಲ್ ಸಗಟು ಬೆಲೆಯು ಶೇ 25.19ರಷ್ಟು ಹೆಚ್ಚಾಗಿದೆ.
ಮೇ ತಿಂಗಳಲ್ಲಿ ಸಗಟು ಹಣದುಬ್ಬರ ಪ್ರಮಾಣವು ಶೇ 9ಕ್ಕೆ ಹೆಚ್ಚುವ ಸಾಧ್ಯತೆ ಇದೆ ಎಂದು ಇಂಡಿಯಾ ರೇಟಿಂಗ್ಸ್ ಆಯಂಡ್ ರಿಸರ್ಚ್ ಸಂಸ್ಥೆ ನಿರ್ದೇಶಕಿ ಮೇಘಾ ಅರೋರ ಅವರುಹೇಳಿದ್ದಾರೆ.
ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಬೆಲೆಯು ಲೀಟರಿಗೆ ₹5ರಷ್ಟು ಜಾಸ್ತಿ ಆಗುವ ನಿರೀಕ್ಷೆ ಇದೆ ಎಂದು ಬ್ರೋಕರೇಜ್ ಸಂಸ್ಥೆ ಬಾಕ್ಲೇಸ್ ಅಂದಾಜು ಮಾಡಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-51-1291213388

