Dailyhunt Logo
  • Light mode
    Follow system
    Dark mode
    • Play Story
    • App Story
45 ದಿನಗಳ ಕದನ ವಿರಾಮ ಪ್ರಸ್ತಾವ ಇರಾನ್‌ನಿಂದ ತಿರಸ್ಕಾರ

45 ದಿನಗಳ ಕದನ ವಿರಾಮ ಪ್ರಸ್ತಾವ ಇರಾನ್‌ನಿಂದ ತಿರಸ್ಕಾರ

ದುಬೈ, ಟೆಹರಾನ್‌: 45 ದಿನಗಳ ಕದನ ವಿರಾಮ ಘೋಷಿಸುವ ಪ್ರಸ್ತಾವವನ್ನು ಇರಾನ್‌ ಸಾರಾಸಗಟವಾಗಿ ತಿರಸ್ಕರಿಸಿದೆ.

'ನಮಗೆ ಯುದ್ಧವು ಶಾಶ್ವತವಾಗಿ ಕೊನೆಗೊಳ್ಳುವುದು ಮುಖ್ಯ. ಕೇವಲ ಕದನ ವಿರಾಮವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ' ಎಂದು ಪಾಕಿಸ್ತಾನದ ಮೂಲಕ ತನ್ನ ನಿಲುವು ತಿಳಿಸಿದೆ.

'ಭವಿಷ್ಯದಲ್ಲಿ ನಮ್ಮ ಮೇಲೆ ಮತ್ತೊಮ್ಮೆ ದಾಳಿ ನಡೆಸುವುದಿಲ್ಲ ಎನ್ನುವ ಖಾತರಿಯೊಂದಿಗೆ ಯುದ್ಧ ಅಂತ್ಯಗೊಳಿಸುವ ಪ್ರಸ್ತಾವವನ್ನು ಮಾತ್ರವೇ ನಾವು ಒಪ್ಪಿಕೊಳ್ಳುತ್ತೇವೆ' ಎಂದು ಇರಾನ್‌ನ ರಾಜತಾಂತ್ರಿಕ ಮಿಷನ್‌ನ ಮುಖ್ಯಸ್ಥ ಮುಜತಬಾ ಫಿರದೈಸಿ ಪೈರ ತಿಳಿಸಿದ್ದಾರೆ.

ಇಬ್ಬರು ರೆವಲ್ಯೂಷನರಿ ಗಾರ್ಡ್‌ ಕಮಾಂಡರ್‌ಗಳ ಹತ್ಯೆ ಮತ್ತು ಪೆಟ್ರೋಕೆಮಿಕಲ್ ಘಟಕದ ಮೇಲೆ ಇಸ್ರೇಲ್‌ ದಾಳಿ ನಡೆಸಿದ ಬೆನ್ನಲ್ಲೇ ಇರಾನ್‌ ಪ್ರಸ್ತಾವವನ್ನು ತಿರಸ್ಕರಿಸಿದೆ.

ಹೊರ್ಮುಜ್‌ ಜಲಸಂಧಿಯನ್ನು ಮತ್ತೆ ಮುಕ್ತಗೊಳಿಸುವುದು ಹಾಗೂ 45 ದಿನಗಳ ಕಾಲ ಕದನವಿರಾಮ ಘೋಷಿಸುವ ಪ್ರಸ್ತಾವವನ್ನು ಅಮೆರಿಕ ಮತ್ತು ಇರಾನ್‌ಗೆ ಸೋಮವಾರ ಸಲ್ಲಿಸಲಾಗಿತ್ತು.

ಕದನ ವಿರಾಮಕ್ಕೆ ಮಧ್ಯಸ್ಥಿಕೆ ಪಾತ್ರ ವಹಿಸಿರುವ ಈಜಿಪ್ಟ್‌, ಪಾಕಿಸ್ತಾನ, ಟರ್ಕಿಯಿಂದ ಈ ಪ್ರಸ್ತಾವ ಸಿದ್ಧಗೊಂಡಿತ್ತು. 45 ದಿನಗಳ ಅವಧಿಯಲ್ಲಿ ಶಾಶ್ವತ ಕದನ ವಿರಾಮ ಸ್ಥಾಪಿಸಲು ಸಾಕಷ್ಟು ಸಮಯಾವಕಾಶ ದೊರೆಯಲಿದೆ ಎನ್ನುವುದು ಈ ಪ್ರಸ್ತಾವದ ಆಶಯವಾಗಿತ್ತು.

ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್‌ ಅರಾಘ್ಚಿ, ಅಮೆರಿಕದ ಪಶ್ಚಿಮ ಏಷ್ಯಾದ ರಾಯಭಾರಿ ಸ್ಟೀವ್‌ ವಿಟ್ಕೋಫ್‌ ಅವರಿಗೆ ಈ ಪ್ರಸ್ತಾವ ಕಳುಹಿಸಿಕೊಡಲಾಗಿತ್ತು.

ಯುದ್ಧವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಎರಡು ಹಂತದಲ್ಲಿ ಒಪ್ಪಂದ ನಡೆಯಲಿದೆ ಎಂದು ಪ್ರಸ್ತಾವದಲ್ಲಿ ಉಲ್ಲೇಖಿಸಲಾಗಿತ್ತು.

ಈ ಪ್ರಸ್ತಾವ ಕುರಿತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್‌ ಮಾರ್ಷಲ್‌ ಆಸೀಮ್‌ ಮುನೀರ್‌ ಅವರು ಭಾನುವಾರ ರಾತ್ರಿಯೇ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವಾನ್ಸ್‌, ಸ್ಟೀವ್‌ ವಿಟ್ಕೋಫ್ ಹಾಗೂ ಅಬ್ಬಾಸ್‌ ಅರಾಘ್ಚಿ ಜೊತೆಗೂ ಮಾತುಕತೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.

'ಇಸ್ಲಾಮಾಬಾದ್‌ ಒಪ್ಪಂದ'ದ ಹೆಸರಿನಲ್ಲಿ ಜಲಸಂಧಿಗೆ ಪ್ರಾದೇಶಿಕ ಚೌಕಟ್ಟು ವಿಧಿಸುವುದನ್ನು ಪ್ರಸ್ತಾವದಲ್ಲಿ ವ್ಯಕ್ತಪಡಿಸಲಾಗಿತ್ತು.

ಇರಾನ್‌ ಬೇಡಿಕೆಯೇನು?

ಇರಾನ್‌ ಮೊದಲಿನಿಂದಲೂ ಶಾಶ್ವತ ಕದನ ವಿರಾಮ ಬಯಸುತ್ತಿದ್ದು, ಅಮೆರಿಕ ಹಾಗೂ ಇಸ್ರೇಲ್‌ನಿಂದ ಭವಿಷ್ಯದಲ್ಲಿ ಯಾವುದೇ ರೀತಿಯ ದಾಳಿ ನಡೆಯುವುದಿಲ್ಲ ಎಂಬ ಖಾತರಿ ಬೇಕಿದೆ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿದೆ. ಈ ಕುರಿತು ಪಾಕಿಸ್ತಾನ, ಟರ್ಕಿ, ಈಜಿಪ್ಟ್‌ಗೆ ಈ ಸಂದೇಶವನ್ನು ರವಾನಿಸಿದೆ.

‍ಆರ್ಥಿಕ ದಿಗ್ಬಂಧನವನ್ನು ಹಿಂದಕ್ಕೆ ಪಡೆಯುವ ಬದಲಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವುದಿಲ್ಲ ಎಂಬ ಇರಾನ್‌ನ ಬದ್ಧತೆಯ ಒಪ್ಪಂದವು ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

ಯುಎಇ ಮೇಲೆ ಇರಾನ್‌ ಡ್ರೋನ್‌ ದಾಳಿ: ಸಂಯುಕ್ತ ಅರಬ್‌ ಒಕ್ಕೂಟದ ಫುಜೈರಾ ಪಟ್ಟಣದಲ್ಲಿದ್ದ ಟೆಲಿ ಕಮ್ಯುನಿಕೇಷನ್‌ ಕಟ್ಟಡದ ಮೇಲೆ ಇರಾನ್‌ ಡ್ರೋನ್‌ ದಾಳಿ ನಡೆಸಿದ್ದು, ಕಟ್ಟಡಕ್ಕೆ ಹಾನಿಯಾಗಿದೆ ಎಂದು ಸರ್ಕಾರಿ ಸ್ವಾಮ್ಯದ 'ಡಬ್ಲ್ಯುಎಎಂ' ಸುದ್ದಿಸಂಸ್ಥೆ ವರದಿ ಮಾಡಿದೆ. ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾಗಿದ್ದು, ದಾಳಿಯಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ ಎಂದು ಮೂಲಗಳು ಖಚಿತಪಡಿಸಿವೆ.

 ಮಜೀದ್‌ ಖಾದೇಮಿ

ಗುಪ್ತಚರ ವಿಭಾಗದ ಮುಖ್ಯಸ್ಥನ ಹತ್ಯೆ

ದುಬೈ/ಜೆರುಸಲೇಂ: ಅಮೆರಿಕ ಹಾಗೂ ಇಸ್ರೇಲ್‌ ಸೋಮವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್‌ನ ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕೋರ್‌ನ (ಐಆರ್‌ಜಿಸಿ) ಗುಪ್ತಚರ ವಿಭಾಗದ ಮುಖ್ಯಸ್ಥ ಮೇಜರ್‌ ಜನರಲ್‌ ಮಜೀದ್‌ ಖಾದೇಮಿ ಸಾವಿಗೀಡಾಗಿದ್ದಾರೆ. ಸೋಮವಾರ ಬೆಳಿಗ್ಗೆ ಟೆಹರಾನ್‌ನ ವಿವಿಧ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಅನೇಕ ವೈಮಾನಿಕ ದಾಳಿಗಳನ್ನು ನಡೆಸಲಾಗಿದೆ. ಈ ವೇಳೆ ಮಜೀದ್‌ ಹತರಾಗಿದ್ದಾರೆ. ಮಜೀದ್‌ ಅವರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್‌ ಕಾಟ್ಜ್‌ ಘೋಷಿಸಿದ್ದಾರೆ.

'ಒಪ್ಪಂದಕ್ಕೆ ಬರಲು ಇಂದು ಗಡುವು ಅಂತಿಮ'

ಕದನ ವಿರಾಮ ಪ್ರಸ್ತಾವದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಪ್ರತಿಕ್ರಿಯಿಸಿದ್ದು 'ಒಪ್ಪಂದಕ್ಕೆ ಬರುವಂತೆ ಇರಾನ್‌ಗೆ ನಾನು ಮಂಗಳವಾರದವರೆಗೆ ನೀಡಿದ ಗಡುವು ಅಂತಿಮವಾದುದು' ಎಂದಿದ್ದಾರೆ. 'ಅವರೊಂದು (ಇರಾನ್‌) ಪ್ರಸ್ತಾವ ಸಲ್ಲಿಸಿದ್ದಾರೆ. ಅದು ಕೂಡ ಮುಖ್ಯವಾದ ಪ್ರಸ್ತಾವವೇ. ಇದೊಂದು ಪ್ರಮುಖ ಹೆಜ್ಜೆ ಕೂಡ. ಆದರೆ ಅದು ಅಷ್ಟೊಂದು ಚೆನ್ನಾಗಿಲ್ಲ. ಇರಾನ್‌ ಯುದ್ಧವನ್ನು ಬಹಳ ಬೇಗ ಮುಗಿಸಬಹುದು. ಅವರು ಏನು ಮಾಡಬೇಕು ಎಂದು ಅವರಿಗೆ ತಿಳಿದಿದೆ. ಅದನ್ನು ಅವರು ಮಾಡಿದರೆ ಯುದ್ಧ ನಿಲ್ಲುತ್ತದೆ. ಅವರು ಪ್ರಾಮಾಣಿಕವಾಗಿಯೇ ಮಾತುಕತೆ ನಡೆಸುತ್ತಿದ್ದಾರೆ' ಎಂದು ಶ್ವೇತ ಭವನದ ವಾರ್ಷಿಕ ಈಸ್ಟರ್‌ ಕಾರ್ಯಕ್ರಮದಲ್ಲಿ ಹೇಳಿದರು.

ಯುದ್ಧ ಮುಂದುವರಿಯಲಿದೆ: ಇರಾನ್ ಸೇನೆ ವಕ್ತಾರ

'ಇರಾನ್‌ನ ರಾಜಕೀಯ ನಾಯಕರು ಬಯಸುವವರೆಗೂ ಅಮೆರಿಕ ಹಾಗೂ ಇಸ್ರೇಲ್ ವಿರುದ್ಧ ಯುದ್ಧ ಮುಂದುವರಿಯಲಿದೆ' ಎಂದು ಇರಾನ್‌ನ ಸೇನೆಯ ವಕ್ತಾರರು ತಿಳಿಸಿದ್ದಾರೆ. 'ಶತ್ರುಗಳು ಖಂಡಿತವಾಗಿಯೂ ವಿಷಾದಿಸಬೇಕು. ಈ ಯುದ್ಧದ ನಂತರ ನಾವು ಸುರಕ್ಷಿತ ಹಂತಕ್ಕೆ ತಲುಪಬೇಕು ಮತ್ತೊಂದು ಯುದ್ಧಕ್ಕೆ ಸಾಕ್ಷಿಯಾಗಬಾರದು' ಎಂದು ಸೇನಾ ವಕ್ತಾರ ಮೊಹಮ್ಮದ್‌ ಅಕ್ರಮಿನಿಯಾ ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani