Thursday, 04 Mar, 8.01 am ಪ್ರಜಾವಾಣಿ

ಕ್ರಿಕೆಟ್
6,6,6,6,6,6; ಯುವಿ ದಾಖಲೆ ಸರಿಗಟ್ಟಿದ ಪೊಲಾರ್ಡ್

ಆಯಂಟಿಗುವಾ: ವೆಸ್ಟ್‌ಇಂಡೀಸ್‌ನ ನಾಯಕ ಹಾಗೂ ಸ್ಫೋಟಕ ಬ್ಯಾಟ್ಸ್‌ಮನ್ ಕೀರನ್ ಪೊಲಾರ್ಡ್, ಓವರ್‌ವೊಂದರ ಎಲ್ಲ ಆರು ಎಸೆತಗಳಲ್ಲಿ ಸಿಕ್ಸರ್ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಇದರೊಂದಿಗೆ ಟ್ವೆಂಟಿ-20 ಅಂತರ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ 'ಸಿಕ್ಸರ್ ಕಿಂಗ್' ಯುವರಾಜ್ ಸಿಂಗ್ ಸಾಧನೆಯನ್ನು ಸರಿಗಟ್ಟಿದ್ದಾರೆ.

ಕಾಕತಾಳೀಯವೆಂಬಂತೆ ಇದೇ ಪಂದ್ಯದಲ್ಲಿ ಲಂಕನ್ ಸ್ಪಿನ್ನರ್ ಅಕಿಲ ಧನಂಜಯ 'ಹ್ಯಾಟ್ರಿಕ್' ವಿಕೆಟ್ ಸಾಧನೆ ಮಾಡಿದ್ದರು. ಆದರೆ ಬಳಿಕ ಧನಂಜಯ ದಾಳಿಯಲ್ಲೇ ಪೊಲಾರ್ಡ್ ಆರು ಸಿಕ್ಸರ್‌ ಸಿಡಿಸಿದ್ದಾರೆ.

ಅಂತರ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ದಾಖಲೆ ಬರೆದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಕೀರನ್ ಪೊಲಾರ್ಡ್ ಪಾತ್ರವಾದರು. ಹಾಗೆಯೇ ಟಿ20 ಅಂತರ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವೆಸ್ಟ್‌ಇಂಡೀಸ್‌ನ ಮೊದಲ ಬ್ಯಾಟ್ಸ್‌ಮನ್ ಎಂದ ಹಿರಿಮೆಗೆ ಭಾಜನವಾದರು.

: ಐಪಿಎಲ್ ಬಗ್ಗೆ ಹೇಳಿಕೆ: ಕ್ಷಮೆ ಯಾಚಿಸಿದ ಡೇಲ್ ಸ್ಟೇಯ್ನ್

ಶ್ರೀಲಂಕಾದ ಸ್ಪಿನ್ನರ್ ಅಕಿಲ ಧನಂಜಯ ಎಸೆದ ಓವರ್‌ನ ಎಲ್ಲ ಆರು ಎಸೆತಗಳನ್ನು ಪೊಲಾರ್ಡ್ ಸಿಕ್ಸರ್‌ಗಟ್ಟಿದರು. ಇಲ್ಲಿ ಗಮನಾರ್ಹ ಅಂಶವೆಂದರೆ ಇದೇ ಪಂದ್ಯದಲ್ಲಿ ಧನಂಜಯ ಹ್ಯಾಟ್ರಿಕ್ ಸಾಧನೆಯನ್ನು ಮಾಡಿದ್ದರು.

ಆಯಂಟಿಗುವಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಲಂಕಾ ಒಂಬತ್ತು ವಿಕೆಟ್ ನಷ್ಟಕ್ಕೆ 131 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಬಳಿಕ ಗುರಿ ಬೆನ್ನಟ್ಟಿದ ವಿಂಡೀಸ್, ಪೊಲಾರ್ಡ್ ಅಬ್ಬರದ ನೆರವಿನೊಂದಿಗೆ 13.1 ಓವರ್‌ಗಳಲ್ಲೇ ಆರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತ್ತು.

ಅಕಿಲ ಧನಂಜಯ ಎಸೆದ ಇನ್ನಿಂಗ್ಸ್‌ನ ಆರನೇ ಓವರ್‌ನಲ್ಲಿ ಎಲ್ಲ ಆರು ಎಸೆತಗಳನ್ನು ಪೊಲಾರ್ಡ್ ಸಿಕ್ಸರ್‌ಗಟ್ಟಿದರು. ಅಲ್ಲದೆ 11 ಎಸೆತಗಳಲ್ಲಿ 38 ರನ್ ಗಳಿಸಿ ವಿಂಡೀಸ್ ಸುಲಭವಾಗಿ ಗುರಿ ಬೆನ್ನಟ್ಟುವಲ್ಲಿ ನೆರವಾದರು.

2007 ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ದಾಳಿಯಲ್ಲಿ ಯುವರಾಜ್ ಸಿಂಗ್ ಎಲ್ಲ ಆರು ಎಸೆತಗಳಲ್ಲಿ ಸಿಕ್ಸರ್ ಬಾರಿಸಿದ್ದರು. 2007ನೇ ಇಸವಿಯಲ್ಲೇ ದಕ್ಷಿಣ ಆಫ್ರಿಕಾದ ಮಾಜಿ ಹೊಡೆಬಡಿಯ ದಾಂಡಿಗ ಹರ್ಷಲ್ ಗಿಬ್ಸ್ ಏಕದಿನ ಕ್ರಿಕೆಟ್‌ನಲ್ಲಿ ಹಾಲೆಂಡ್ ವಿರುದ್ದ ಇದೇ ಸಾಧನೆ ಮಾಡಿದ್ದರು.

: PV Web Exclusive | ಆಟದ ಮನೆ: ಪಿಚ್ಚು ಪಿಚ್ಚೆಂದೇತಕೆ ಬೀಳುಗಳೆವರು?

ಈ ಮೊದಲು ಅಕಿಲ ಧನಂಜಯ ಹ್ಯಾಟ್ರಿಕ್ ಸಾಧನೆಯನ್ನು ಮಾಡಿದರು. ಇನ್ನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಸತತವಾಗಿ ಮೂರು ಎಸೆತಗಳಲ್ಲಿ ಇವಿನ್ ಲೆವಿಸ್, ಕ್ರಿಸ್ ಗೇಲ್ ಹಾಗೂ ನಿಕೋಲಸ್ ಪೂರನ್ ವಿಕೆಟ್‌ಗಳನ್ನು ಕಬಳಿಸಿ ವಿಶಿಷ್ಟ ದಾಖಲೆಗೆ ಭಾಜನರಾದರು. ಅಲ್ಲದೆ ಹ್ಯಾಟ್ರಿಕ್ ಸಾಧನೆ ಮಾಡಿದ ಲಂಕಾದ ಮೂರನೇ ಬೌಲರ್ ಎಂಬ ಖ್ಯಾತಿಗೆ ಅರ್ಹರಾದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top