ದೇಶವು 80ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಭಾರತ ಕ್ರಿಕೆಟ್ ತಂಡವು ಪ್ರಮುಖ ಮೈಲಿಗಲ್ಲು ತಲುಪಿದೆ. ಪ್ರಕೃತಿ ಸೌಂದರ್ಯದ ಮಡಿಲಲ್ಲಿರುವ ಗಾಲ್ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಶುಭಮನ್ ಗಿಲ್ ನೇತೃತ್ವದ ಭಾರತ ತಂಡವು ಶನಿವಾರದಿಂದ ಎರಡು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯ ಆಡಲಿದೆ.
ಇದು ಭಾರತದ ಪಾಲಿಗೆ 600ನೇ ಟೆಸ್ಟ್ ಪಂದ್ಯವಾಗಿ ದಾಖಲಾಗುತ್ತಿದೆ.
ಎಲ್ಲೆಡೆ ರಾರಾಜಿಸುತ್ತಿರುವ ಫ್ರಾಂಚೈಸಿ ಕ್ರಿಕೆಟ್, ಹೆಚ್ಚುತ್ತಿರುವ ಟಿ20 ಪಂದ್ಯಗಳ ಆಕರ್ಷಣೆ, ಏಕದಿನ ಪಂದ್ಯಗಳು ಹಿಂದಿನ ಮೆರುಗನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಟೆಸ್ಟ್ ಪಂದ್ಯಗಳ ಜನಪ್ರಿಯತೆಗೆ ಸವಾಲು ಎದುರಾಗಿದೆ. ಇಂಥ ಸಂದರ್ಭದಲ್ಲೇ ಭಾರತ ಈ ಮೈಲಿಗಲ್ಲು ಟೆಸ್ಟ್ ಆಡುತ್ತಿದೆ.
ಟೆಸ್ಟ್ ಮಾದರಿಯ ಅಸ್ತಿತ್ವಕ್ಕೆ ಸವಾಲು ಎದುರಾಗಿರುವಾಗ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಪಾತ್ರ ನಿರ್ಣಾಯಕವಾಗುತ್ತಿದೆ. ಐಸಿಸಿಯ ನೇತೃತ್ವವನ್ನೂ ಭಾರತದ ಜಯ್ ಶಾ ವಹಿಸಿದ್ದಾರೆ. ವಿಶ್ವದ ಹಲವು ದಿಗ್ಗಜರು ಭಾರತದ ಪಾತ್ರ ಮಹತ್ವದ್ದೆಂದು ಒಪ್ಪಿಕೊಳ್ಳುತ್ತಿದ್ದಾರೆ.
ಆಟದ ಕಡೆಗೆ ವಿರಾಟ್ ಕೊಹ್ಲಿ ಅವರ ಬದ್ಧತೆ ಟೆಸ್ಟ್ ಕ್ರಿಕೆಟ್ ಅನ್ನು ಜೀವಂತವಾಗಿರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೋದ ವರ್ಷದ ಅಕ್ಟೋಬರ್‌ನಲ್ಲಿ ಇಂಗ್ಲೆಂಡ್‌ನ ಬ್ಯಾಟರ್ ನಾಸಿರ್ ಹುಸೇನ್ ಹೇಳಿದ್ದು ಇಲ್ಲಿ ಸ್ಮರಿಸಬಹುದು. ಅದಕ್ಕೆ ಹಿಂದೆಯೇ, ಟೆಸ್ಟ್ ಕ್ರಿಕೆಟ್‌ನ ಅಸ್ತಿತ್ವ ಉಳಿಸುವಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ನೇತೃತ್ವ ವಹಿಸಬೇಕೆಂದು ಕ್ರಿಕೆಟ್ ವೆಸ್ಟ್ ಇಂಡೀಸ್‌ನ (ಸಿಡಬ್ಲ್ಯುಐ) ಮಾಜಿ ಸಿಇಒ ಜಾನಿ ಗ್ರೀವ್ಸ್ ಮನವಿ ಮಾಡಿದ್ದರು.
ಮೈಲಿಗಲ್ಲಿನತ್ತ ನೋಟ:
ಕ್ರಿಕೆಟ್ ಜನಕ ಎನಿಸಿದ ಇಂಗ್ಲೆಂಡ್ (1,097) ಮತ್ತು ಆ ತಂಡದ ಸಾಂಪ್ರದಾಯಿಕ ಎದುರಾಳಿ ಆಸ್ಟ್ರೇಲಿಯಾ (884) ಮಾತ್ರ ಭಾರತಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿವೆ.
1932ರ ಜೂನ್‌ನಲ್ಲಿ ಕರ್ನಲ್ ಸಿ.ಕೆ.ನಾಯ್ಡು ಅವರ ನಾಯಕತ್ವದಲ್ಲಿ ಭಾರತ ತಂಡ ಐತಿಹಾಸಿಕ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ತನ್ನ ಮೊತ್ತ ಮೊದಲ ಟೆಸ್ಟ್ ಪಂದ್ಯವನ್ನು ಆಡಿತ್ತು. ಅಲ್ಲಿಂದ ಭಾರತ ಮೊದಲ ನೂರು ಟೆಸ್ಟ್‌ಗಳ ಮೈಲಿಗಲ್ಲು ತಲುಪಲು 32 ವರ್ಷಗಳಷ್ಟು ಸುದೀರ್ಘ ಅವಧಿ ಹಿಡಿಯಿತು.
1967ರಲ್ಲಿ ಮನ್ಸೂರ್ ಅಲಿ ಖಾನ್ ಪಟೌಡಿ ನಾಯಕತ್ವದಲ್ಲಿ ಬರ್ಮಿಂಗಮ್‌ನ ಎಜ್ಬಾಸ್ಟನ್‌ನಲ್ಲಿ ಭಾರತ ತನ್ನ ನೂರನೇ ಟೆಸ್ಟ್ ಪಂದ್ಯ ಆಡಿತು. ಭಾರತ ಮೊದಲ ನೂರು ಟೆಸ್ಟ್‌ಗಳಲ್ಲಿ ಬರೇ 10 ಟೆಸ್ಟ್ ಪಂದ್ಯ ಗೆದ್ದು 40 ಸೋತಿತ್ತು. 50 ಡ್ರಾ ಆಗಿದ್ದವು. ಅಂದಿನ ಕಾಲಮಾನದಲ್ಲಿ ಟೆಸ್ಟ್ ಆಡುವ ತಂಡಗಳ ಸಂಖ್ಯೆ ಕಡಿಮೆಯಿತ್ತು. ಸರಣಿಗಳ ಸಂಖ್ಯೆಯೂ ಹೆಚ್ಚು ಇರಲಿಲ್ಲ. ಏಕದಿನ ಪಂದ್ಯಗಳು ಇನ್ನೂ ಆರಂಭವಾಗಿರಲಿಲ್ಲ. ಹೀಗಾಗಿ ಟೆಸ್ಟ್ ಕ್ರಿಕೆಟ್ ಸರಣಿಗಳು ಜನಪ್ರಿಯವಾಗಿದ್ದವು.
ಆದರೆ ನಂತರ ವರ್ಷಗಳಲ್ಲಿ ಸರಣಿಗಳು ಹೆಚ್ಚತೊಡಗಿದವು. ಭಾರತ ಮುಂದಿನ 15 ವರ್ಷಗಳಲ್ಲಿ ಮತ್ತೆ 100 ಟೆಸ್ಟ್ ಪಂದ್ಯಗಳನ್ನು ಆಡಿತು. 1982ರಲ್ಲಿ ಲಾಹೋರ್‌ನ ಗಡ್ಡಾಫಿ ಕ್ರೀಡಾಂಗಣದಲ್ಲಿ ಸುನೀಲ್ ಗಾವಸ್ಕರ್ ನಾಯಕತ್ವದಲ್ಲಿ ಆ ಟೆಸ್ಟ್ ಪಂದ್ಯ ಆಡಿತ್ತು.
ನಂತರ ಪ್ರತಿ 10 ವರ್ಷಗಳಿಗೊಮ್ಮೆ ಸರಾಸರಿ 100 ಟೆಸ್ಟ್‌ಗಳಂತೆ ಭಾರತ ಆಡುತ್ತಿದೆ. 1996ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 300ನೇ ಟೆಸ್ಟ್ (ಅಹಮದಾಬಾದ್), 2006ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 400ನೇ (ಜಮೈಕಾದ ಕಿಂಗ್‌ಸ್ಟನ್), 2016ರಲ್ಲಿ ನ್ಯೂಜಿಲೆಂಡ್ ವಿರುದ್ಧ ತನ್ನ 500ನೇ ಟೆಸ್ಟ್ ಪಂದ್ಯ (ಕಾನ್ಪುರದ ಗ್ರೀನ್ ಪಾರ್ಕ್) ಆಡಿತು. ಅದಾಗಿ 10 ವರ್ಷಗಳ ಬಳಿಕ 600ನೇ ಟೆಸ್ಟ್ ಆಡುತ್ತಿದೆ.
ಮಿಂಚಿದ ತಾರೆಗಳು
ಈ ದೀರ್ಘ ಪಯಣದಲ್ಲಿ ಭಾರತ ತಂಡ ಹಲವಾರು ದಾಖಲೆಗಳನ್ನು ಸಾಧಿಸಿದೆ. ಸ್ಮರಣೀಯ ಗೆಲುವುಗಳನ್ನು ದಾಖಲಿಸಿದೆ. ಹಿನ್ನಡೆಗಳನ್ನೂ ಕಂಡಿದೆ. ವಿಶ್ವ ಕ್ರಿಕೆಟ್‌ಗೆ ಭಾರತ ಅತಿರಥ-ಮಹಾರಥ ಆಟಗಾರರನ್ನು ನೀಡಿದೆ, ನೀಡುತ್ತಿದೆ.
ಸುನೀಲ್ ಗಾವಸ್ಕರ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ವಿ.ವಿ.ಎಸ್.ಲಕ್ಷ್ಮಣ್, ವಿರಾಟ್ ಕೊಹ್ಲಿ, ಎಂ.ಎಸ್.ಧೋನಿ, ಶುಭಮನ್ ಗಿಲ್ ಅಂಥ ಬ್ಯಾಟರ್‌ಗಳು ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದು ಭಾರತದ ಕ್ರಿಕೆಟ್ ಬೆಳಗಲು ಕಾಣಿಕೆ ನೀಡಿದರು. ಅದರಲ್ಲೂ ಮೊಹಿಂದರ್ ಅಮರನಾಥ್, ರಾಹುಲ್ ದ್ರಾವಿಡ್, ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರ ಟೆಸ್ಟ್ ಪರಿಣತರಾಗಿಯೇ ಹೆಗ್ಗುರುತು ಮೂಡಿಸಿದರು.
ಕಪಿಲ್ ದೇವ್, ಜಾವಗಲ್ ಶ್ರೀನಾಥ್, ಜಹೀರ್ ಖಾನ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ ಅವರು ವೇಗದ ಬೌಲಿಂಗ್‌ನಲ್ಲಿ, ಬಿಷನ್ ಸಿಂಗ್ ಬೇಡಿ, ಬಿ.ಎಸ್.ಚಂದ್ರಶೇಖರ್, ಎರ್ರಪಳ್ಳಿ ಪ್ರಸನ್ನ, ಎಸ್. ವೆಂಕಟರಾಘವನ್, ಅನಿಲ್ ಕುಂಬ್ಳೆ, ಹರಭಜನ್ ಸಿಂಗ್ ಅವರು ಸ್ಪಿನ್ ವಿಭಾಗದಲ್ಲಿ ನೀಡಿರುವ ಕೊಡುಗೆ ಮರೆಯಾಲಾಗದ್ದು. ಸೈಯ್ಯದ್ ಕಿರ್ಮಾನಿ, ಕಿರಣ್ ಮೋರೆ, ಎಂ.ಎಸ್.ಧೋನಿ ಅವರು ವಿಕೆಟ್ ಹಿಂದುಗಡೆ ಛಾಪು ಮೂಡಿಸಿದರು.
ಕಳಚಿದ ಕಳಂಕ:
ಒಂದು ಕಾಲದಲ್ಲಿ ಭಾರತ ತಂಡವನ್ನು 'ತವರಿನಲ್ಲಿ ಹುಲಿ, ಹೊರಗೆ ಇಲಿ' ಎಂದು ವ್ಯಂಗ್ಯವಾಡಿದ್ದೂ ಇದೆ. ಮೊದಲು ತವರಿನಲ್ಲಿ ಮಾತ್ರ ಭಾರತ ಹೆಚ್ಚು ಪಂದ್ಯಗಳನ್ನು ಗೆದ್ದುಕೊಂಡು ಬರುತಿತ್ತು. ಸ್ಪಿನ್ನರ್‌ಗಳ ನಾಡು ಎಂದು ಖ್ಯಾತಿಗೆ ತಕ್ಕಂತೆ, ಅದಕ್ಕೆ ತಕ್ಕಂತೆ ಚೆಂಡಿಗೆ ತಿರುವು ನೀಡುವ ಪಿಚ್‌ನಲ್ಲಿ ಭಾರತ ಟೆಸ್ಟ್ ಪಂದ್ಯಗಳನ್ನು ಬೇಗನೇ ಗೆಲ್ಲುತಿತ್ತು. ಆದರೆ ಬೌನ್ಸ್‌ಗೆ ನೆರವಾಗುವ ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ಇಂಗ್ಲೆಂಡ್ ದೇಶಗಳ ಪಿಚ್‌ಗಳಲ್ಲಿ ಪೇಚಿಗೆ ಸಿಲುಕುತಿತ್ತು.
ಆದರೆ ಆ ಕಳಂಕ ಕ್ರಮೇಣ ದೂರವಾಗತೊಡಗಿತು. ಸಚಿನ್ ತೆಂಡೂಲ್ಕರ್ 1989ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಬಳಿಕ ಟೆಸ್ಟ್ ಪಂದ್ಯಗಳಲ್ಲಿ ಭಾರತದ ಗೆಲುವಿನ ಪ್ರಮಾಣ ಗಮನಾರ್ಹವಾಗಿ ಏರಿತು. ಅವರ ಅಡಿದ್ದ ವೇಳೆ (217 ಟೆಸ್ಟ್) ಭಾರತ 78 ಪಂದ್ಯಗಳನ್ನು ಗೆದ್ದು, 60 ಪಂದ್ಯಗಳನ್ನು ಸೋತಿತ್ತು. 79 ಪಂದ್ಯಗಳು ಡ್ರಾ ಆಗಿದ್ದವು. 21ನೇ ಶತಮಾನದಲ್ಲಿ ವಿರಾಟ್ ಕೊಹ್ಲಿ ಯುಗ ಆರಂಭವಾಯಿತು.
ಕೊನೆಯ 99 ಟೆಸ್ಟ್‌ಗಳಲ್ಲಿ ಭಾರತ ತವರಿನಿಂದಾಚೆಯೂ ಯಶಸ್ಸು ಗಳಿಸಿರುವುದು ಗಮನಾರ್ಹ. ಈ ಅವಧಿಯಲ್ಲಿ (501-599) ಭಾರತ 35 ಟೆಸ್ಟ್ ಪಂದ್ಯಗಳನ್ನು ಸ್ವದೇಶಗಳಲ್ಲಿ ಗೆದ್ದಿತ್ತು. ತವರಿನಿಂದಾಚೆ 21 ಟೆಸ್ಟ್‌ಗಳನ್ನು ಗೆದ್ದಿತ್ತು ಎಂಬುದು ಮಹತ್ವದ ಅಂಶ. ಒಟ್ಟು 56 ಗೆಲುವು. ಆಸ್ಟ್ರೇಲಿಯಾದಲ್ಲಿ ಎರಡು ಬಾರಿ ಭಾರತ ಸರಣಿ ಜಯಿಸಿತು. ಡ್ರಾಗಳ ಸಂಖ್ಯೆ ಕೂಡ ಗಣನೀಯವಾಗಿ ಕಡಿಮೆಯಾದವು ಎಂಬುದನ್ನು ಈ ಅಂಕಿಅಂಶಗಳು ತೋರಿಸುತ್ತವೆ.
2018ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಆರಂಭವಾದ ನಂತರ ಭಾರತ ಎರಡು ಬಾರಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ತಲುಪಿದ್ದು ಗಮನಾರ್ಹ. ಈ ಪ್ರತಿಷ್ಠಿತ ಟ್ರೋಫಿ ಗೆಲ್ಲಲಾಗದಿದ್ದರೂ ನಿರಾಶೆಯ ಸಂಗತಿ. ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತ ತಂಡದ ಸಾಧನೆ- ತವರಿನಲ್ಲೂ, ಹೊರದೇಶಗಳಲ್ಲೂ ಗಮನಾರ್ಹವಾಗಿ ಸುಧಾರಿಸಿದೆ.
ಸವಾಲು:
ಒಂದು ಕಾಲದಲ್ಲಿ ಸ್ಪಿನ್ ಎದುರಿಸುವಲ್ಲಿ ಪ್ರಬಲ ತಂಡವಾಗಿ ಭಾರತ ಹೆಸರು ಮಾಡಿತ್ತು. ಆದರೆ ಕೊನೆಯ ಒಂದು ವರ್ಷದಲ್ಲಿ ಗುಣಮಟ್ಟದ ಸ್ಪಿನ್ನರ್‌ಗಳ ಎದುರು ಪರದಾಡುತ್ತಿದೆ. ಅದೂ ತವರು ನೆಲದಲ್ಲಿ. ಇದು ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಶುಭಮನ್ ಗಿಲ್ ಜೋಡಿಗೆ ಸವಾಲಾಗಿದೆ. ದಿಗ್ಗಜ ಆಟಗಾರರ ವಿದಾಯ, ಐಪಿಎಲ್, ಟಿ20 ಪ್ರಭಾವ ಇವೆಲ್ಲವೂ ಈ ಹಿನ್ನಡೆಗೆ ಕಾಣಿಕೆ ನೀಡಿವೆ.
ಈಚೆಗೆ ತವರಿನಲ್ಲಿ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ತಂಡಗಳ ವಿರುದ್ಧ ಕ್ಲೀನ್ ಸ್ವೀಪ್‌ಗೆ ಒಳಗಾಯಿತು. ಈಗ ಶ್ರೀಲಂಕಾ ಕೂಡ ಭಾರತ ವಿರುದ್ಧ ಸ್ಪಿನ್ನರ್‌ಗಳನ್ನೇ ಅಸ್ತ್ರವಾಗಿಸಲಿದೆ. ಈ ಹಿನ್ನಡೆಯಿಂದ ಹೊರಬರುವ ಸವಾಲು ತಂಡಕ್ಕಿದೆ. ಆಟಗಾರರು ವೈಯಕ್ತಿಕವಾಗಿ ಮಾಡಿಕೊಂಡಿರುವ ಸಿದ್ಧತೆ ಪರೀಕ್ಷೆಗೆ ಒಳಪಡಲಿದೆ.
ಭಾರತ ತಂಡ ಇಲ್ಲಿಯವರೆಗೆ ಆಡಿರುವ 599 ಟೆಸ್ಟ್‌ಗಳಲ್ಲಿ 186 ಪಂದ್ಯಗಳನ್ನು ಜಯಿಸಿದ್ದು, 188ರಲ್ಲಿ ಸೋತಿದೆ. 224 ಪಂದ್ಯಗಳು ಡ್ರಾ ಆಗಿವೆ. ಒಂದು ಪಂದ್ಯ 'ಟೈ' ಆಗಿದೆ.
