ನವದೆಹಲಿ: 'ಮುಂದಿನ ಕೆಲವೇ ವರ್ಷಗಳಲ್ಲಿ ದೇಶದಲ್ಲಿ 5ರಿಂದ 8 ಸೆಮಿಕಂಡಕ್ಟರ್ ಘಟಕಗಳು ಆರಂಭವಾಗುವ ನಿರೀಕ್ಷೆ ಇದೆ' ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಈಗಾಗಲೇ ಮೂರು ಸೆಮಿಕಂಡಕ್ಟರ್ ಘಟಕಗಳು ಉತ್ಪಾದನೆಯನ್ನು ಆರಂಭಿಸಿದ್ದು, ರಫ್ತು ಸಹ ಮಾಡುತ್ತಿವೆ.
ಎಲೆಕ್ಟ್ರಾನಿಕ್ಸ್, ಆರೋಗ್ಯ, ಸಾರಿಗೆ ಮತ್ತು ತಂತ್ರಜ್ಞಾನ ವಲಯಗಳಿಗೆ ಚಿಪ್ಗಳು ಅಗತ್ಯವಾಗಿವೆ. ಮುಂದಿನ 7ರಿಂದ 8 ವರ್ಷಗಳಲ್ಲಿ ದೇಶದಲ್ಲಿ 5ರಿಂದ 8 ಸೆಮಿಕಂಡಕ್ಟರ್ ಘಟಕಗಳು ಕಾರ್ಯಾರಂಭ ಮಾಡಲಿವೆ ಎಂದು ಸ್ವಾತಂತ್ಯೋತ್ಸವದ ಭಾಷಣದಲ್ಲಿ ಶನಿವಾರ ಹೇಳಿದ್ದಾರೆ.
ಚಿಪ್ಗಳಿಲ್ಲದೆ ಇಡೀ ವ್ಯವಸ್ಥೆಯು ಸ್ಥಗಿತಗೊಳ್ಳುವ ಹಂತವನ್ನು ಜಗತ್ತು ತಲುಪಿದೆ. ಭಾರತವು 'ಆತ್ಮನಿರ್ಭರ ಭಾರತ್' ದೃಷ್ಟಿಕೋನದಡಿಯಲ್ಲಿ ತನ್ನದೇ ಆದ ಉತ್ಪಾದನಾ ಸಾಮರ್ಥ್ಯವನ್ನು ನಿರ್ಮಿಸಲು ಪ್ರಾರಂಭಿಸಿದೆ ಎಂದರು.
2014ರ ಮೊದಲು ಕೊಳವೆ ಮೂಲಕ ನೈಸರ್ಗಿಕ ಅನಿಲದ (ಪಿಎನ್ಜಿ) ಪೂರೈಕೆಯು ದೇಶದ 70 ನಗರಗಳಲ್ಲಿ ಮಾತ್ರ ಇತ್ತು. ಪ್ರಸ್ತುತ 700 ನಗರಗಳಿಗೆ ವಿಸ್ತರಿಸಿದ್ದು, 1.75 ಕೋಟಿ ಮನೆಗಳನ್ನು ತಲುಪಿದೆ.
ಸೌರಶಕ್ತಿ ಸಾಮರ್ಥ್ಯವು 2 ಗಿಗಾವಾಟ್ನಿಂದ 160 ಗಿಗಾವಾಟ್ಗೆ ಏರಿದೆ. 2030ರ ವೇಳೆಗೆ ನವೀಕರಿಸಬಹುದಾದ ಇಂಧನ ಮೂಲಗಳಿಂದ 500 ಗಿಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವ ಮಹತ್ವದ ಗುರಿ ಹೊಂದಲಾಗಿದೆ. 'ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ' ಯೋಜನೆ ಅಡಿಯಲ್ಲಿ, 50 ಲಕ್ಷ ಮನೆಗಳ ಚಾವಣಿಗಳ ಮೇಲೆ ಸೌರ ಫಲಕ ಅಳವಡಿಸಲಾಗಿದೆ. ಅನೇಕ ಮನೆಗಳು ಈಗ ಶೂನ್ಯ ವಿದ್ಯುತ್ ಬಿಲ್ಗಳನ್ನು ಹೊಂದಿವೆ ಅಥವಾ ಹೆಚ್ಚುವರಿ ವಿದ್ಯುತ್ ಮಾರಾಟ ಮಾಡುವ ಮೂಲಕ ಆದಾಯ ಗಳಿಸುತ್ತಿವೆ ಎಂದು ಹೇಳಿದ್ದಾರೆ.
90 ವರ್ಷಗಳ ಪ್ರಯತ್ನದ ನಂತರ ಕೇವಲ ಶೇ 30ರಷ್ಟಿದ್ದ ರೈಲ್ವೆ ವಿದ್ಯುದೀಕರಣವು ಕಳೆದ ದಶಕದಲ್ಲಿ ಶೇ 100ರಷ್ಟು ತಲುಪಿದ್ದು, ಡೀಸೆಲ್ ಆಮದುಗಳನ್ನು ಕಡಿಮೆ ಮಾಡಿದ್ದು, ಪರಿಸರಕ್ಕೆ ಪೂರಕವಾಗಿವೆ ಎಂದು ತಿಳಿಸಿದ್ದಾರೆ.
₹1 ಲಕ್ಷ ಕೋಟಿ ಮೊತ್ತದ ನಾವೀನ್ಯ ನಿಧಿ:
'ದೇಶದಲ್ಲಿ ನವೋದ್ಯಮದ ಬೆಳವಣಿಗೆಗೆ ಉತ್ತೇಜನ ನೀಡಲು ಸರ್ಕಾರವು ₹1 ಲಕ್ಷ ಕೋಟಿ ಮೊತ್ತದ ನಾವೀನ್ಯ ನಿಧಿಯನ್ನು ಸ್ಥಾಪಿಸಿದೆ. ಸಂಪನ್ಮೂಲದ ಕೊರತೆ ಇಲ್ಲ. ಹೀಗಾಗಿ, ಯುವಜನರು ದೊಡ್ಡ ಕನಸನ್ನು ಕಾಣುವಂತೆ' ಮೋದಿ ಅವರು ಕರೆ ನೀಡಿದ್ದಾರೆ.
ದೇಶದಲ್ಲಿ 2.5 ಲಕ್ಷ ನೋಂದಾಯಿತ ನವೋದ್ಯಮಗಳಿವೆ. ಯುವ ಉದ್ಯಮಿಗಳು ಸ್ವತಃ ಕೆಲಸ ಮಾಡುವುದಲ್ಲದೆ, ಇತರರಿಗೂ ಉದ್ಯೋಗಗಳನ್ನು ನೀಡುತ್ತಿದ್ದಾರೆ ಎಂದರು.
ಅಗ್ರ 5 ಔಷಧ ಕಂಪನಿಗಳಲ್ಲಿ ಭಾರತ ಇರಲಿ:
ಜಾಗತಿಕ ಮಟ್ಟದ ಅಗ್ರ ಐದು ಔಷಧ ಕಂಪನಿಗಳಲ್ಲಿ ಭಾರತದ ಒಂದು ಅಥವಾ ಎರಡು ಕಂಪನಿಗಳು ಇರಬೇಕಾದ ಅಗತ್ಯವಿದೆ ಎಂದು ಮೋದಿ ಹೇಳಿದ್ದಾರೆ.
ಅಧಿಕೃತ ಮಾಹಿತಿಯ ಪ್ರಕಾರ, ಜಾಗತಿಕ ಮಟ್ಟದ ಔಷಧ ಉದ್ಯಮದಲ್ಲಿ ಭಾರತವು 3ನೇ ಸ್ಥಾನ ಹೊಂದಿದೆ. 3 ಸಾವಿರಕ್ಕೂ ಹೆಚ್ಚು ಕಂಪನಿಗಳು ಮತ್ತು 10,500 ತಯಾರಿಕಾ ಘಟಕಗಳನ್ನು ಹೊಂದಿವೆ. ಔಷಧಗಳನ್ನು ರಫ್ತು ಮಾಡುವಲ್ಲಿ (ಹಣಕಾಸಿನ ಮೌಲ್ಯದ ಪ್ರಕಾರ) ಭಾರತವು 11ನೇ ಸ್ಥಾನದಲ್ಲಿದೆ. ಇದುವರೆಗೆ ದೇಶದ ಯಾವುದೇ ಔಷಧ ಕಂಪನಿ ಜಗತ್ತಿನ ಪ್ರಮುಖ 10 ಕಂಪನಿಗಳ ಪಟ್ಟಿಯಲ್ಲಿ ಇಲ್ಲ.
ದೇಶದ ಔಷಧ ಮಾರುಕಟ್ಟೆ ಗಾತ್ರ ₹5.72 ಲಕ್ಷ ಕೋಟಿಯಷ್ಟಾಗಿದ್ದು, 2030ರ ವೇಳೆಗೆ ₹12.40 ಲಕ್ಷ ಕೋಟಿಗೆ ತಲುಪುವ ಅಂದಾಜಿದೆ.
ಕಡಿಮೆ ದರದಲ್ಲಿ ಯೂರಿಯಾ, ಡಿಎಪಿ ಪೂರೈಕೆ:
ಜಾಗತಿಕ ಮಟ್ಟದಲ್ಲಿ ಉಂಟಾದ ಬಿಕ್ಕಟ್ಟಿನಿಂದ ಯೂರಿಯಾ ಮತ್ತು ಡಿಎಪಿ ಕೊರತೆ ಉಂಟಾಯಿತು. ಇದರಿಂದ ಯೂರಿಯಾ ಬೆಲೆ ವಿಶ್ವದಾದ್ಯಂತ ಚೀಲವೊಂದಕ್ಕೆ ₹3 ಸಾವಿರ ಮತ್ತು ಡಿಎಪಿ ₹5 ಸಾವಿರಕ್ಕೆ ತಲುಪಿತು. ಆದರೆ, ರೈತರಿಗೆ ಆರ್ಥಿಕ ಹೊರೆಯಾಗದಂತೆ ಇರಲು ಕ್ರಮವಾಗಿ ₹300 ಮತ್ತು ₹1,350ರಂತೆ ನೀಡಲಾಯಿತು ಎಂದು ಮೋದಿ ಹೇಳಿದ್ದಾರೆ.

