Dailyhunt Logo
  • Light mode
    Follow system
    Dark mode
    • Play Story
    • App Story
₹95 ಲಕ್ಷ ಕೋಟಿ ರಫ್ತು ಗುರಿ

₹95 ಲಕ್ಷ ಕೋಟಿ ರಫ್ತು ಗುರಿ

ನವದೆಹಲಿ (ಪಿಟಿಐ): ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹95 ಲಕ್ಷ ಕೋಟಿಗೂ (1 ಟ್ರಿಲಿಯನ್ ಡಾಲರ್) ಹೆಚ್ಚು ಮೌಲ್ಯದ ಸರಕು ಮತ್ತು ಸೇವೆಗಳನ್ನು ದೇಶದಿಂದ ರಫ್ತು ಮಾಡುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.

ಕಳೆದ ಆರ್ಥಿಕ ವರ್ಷದಲ್ಲಿ ದೇಶ ದಿಂದ ₹82 ಲಕ್ಷ ಕೋಟಿ (863 ಬಿಲಿಯನ್ ಡಾಲರ್) ಮೊತ್ತದಷ್ಟು ಸರಕು ಮತ್ತು ಸೇವೆಗಳನ್ನು ರಫ್ತು ಮಾಡಲಾಗಿತ್ತು. ಈ ಪೈಕಿ ₹42 ಲಕ್ಷ ಕೋಟಿ (442 ಬಿಲಿಯನ್ ಡಾಲರ್) ಮೌಲ್ಯದ ಸರಕುಗಳು ಮತ್ತು ₹40 ಲಕ್ಷ ಕೋಟಿ (421 ಬಿಲಿಯನ್ ಡಾಲರ್) ಮೌಲ್ಯದ ಸೇವೆಗಳನ್ನು ರಫ್ತು ಮಾಡಲಾಗಿತ್ತು.

ಈ ರಫ್ತು ಮೌಲ್ಯವು ಪ್ರಸಕ್ತ ಆರ್ಥಿಕ ವರ್ಷದಲ್ಲಿ 1 ಟ್ರಿಲಿಯನ್‌ ಡಾಲರ್‌ಗೆ ಹೆಚ್ಚಾಗಬೇಕು. ಈ ಪೈಕಿ ಸರಕುಗಳ ರಫ್ತು ಹಣಕಾಸಿನ ಮೌಲ್ಯದಲ್ಲಿ ₹50.44 ಲಕ್ಷ ಕೋಟಿ (530 ಬಿಲಿಯನ್ ಡಾಲರ್) ಮತ್ತು ಸೇವೆಗಳ ರಫ್ತು ಮೌಲ್ಯ ₹44.73 ಲಕ್ಷ ಕೋಟಿಯಷ್ಟು (470 ಬಿಲಿಯನ್ ಡಾಲರ್) ಆಗಬೇಕು ಎಂಬ ಗುರಿ ಹೊಂದಲಾಗಿದೆ. ಕಳೆದ ಆರ್ಥಿಕ ವರ್ಷಕ್ಕೆ ಇದನ್ನು ಹೋಲಿಸಿದರೆ ಸರಕುಗಳ ರಫ್ತಿನಲ್ಲಿ ಶೇ 16ರಿಂದ ಶೇ 17ರಷ್ಟು ಮತ್ತು ಸೇವಾ ವಲಯದ ರಫ್ತಿನಲ್ಲಿ ಶೇ 11ರಷ್ಟು ಹೆಚ್ಚಳದ ಗುರಿ ಹೊಂದಲಾಗಿದೆ ಎಂದು ಶುಕ್ರವಾರ ನಡೆದ ವಾಣಿಜ್ಯ ಮಂಡಳಿಯ ಸಭೆಯಲ್ಲಿ ಗೋಯಲ್ ಹೇಳಿದ್ದಾರೆ.

ಕಳೆದ ಆರ್ಥಿಕ ವರ್ಷದ ಏಪ್ರಿಲ್‌-ಜೂನ್ ತ್ರೈಮಾಸಿಕಕ್ಕೆ ಹೋಲಿಸಿದರೆ ಪ್ರಸಕ್ತ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ದೇಶದ ಸರಕುಗಳ ರಫ್ತು ಶೇ 15ರಷ್ಟು ಮತ್ತು ಸೇವೆಗಳ ರಫ್ತು ಶೇ 11ರಷ್ಟು ಬೆಳವಣಿಗೆ ದಾಖಲಿಸಿದೆ.

'ಈ ಬೆಳವಣಿಗೆಯನ್ನು ಗಮನಿಸಿದಾಗ ನಾವು ನಮ್ಮ ಗುರಿಯನ್ನು ಸಾಧಿಸುವಲ್ಲಿ ಸರಿಯಾದ ಹಾದಿಯಲ್ಲಿದ್ದೇವೆ ಅನ್ನಿಸುತ್ತದೆ' ಎಂದು ಗೋಯಲ್ ತಿಳಿಸಿದ್ದಾರೆ.

ಉದ್ಯಮಗಳು ದೇಶದ ಮಾರುಕಟ್ಟೆ ಯನ್ನಷ್ಟೇ ಅವಲಂಬಿಸದೆ, ಜಾಗತಿಕ ಮಾರುಕಟ್ಟೆಗಳಿಗೆ ವಿಸ್ತರಿಸಬೇಕು. ವಿದೇಶಗಳಲ್ಲಿ ದೇಶದ ಸರಕುಗಳ ಬ್ರ್ಯಾಂಡಿಂಗ್‌ ಮಾಡಲು, ಗೋದಾಮು ಗಳನ್ನು ನಿರ್ಮಿಸಲು ಮತ್ತು ಜಾಗತಿಕ ಪ್ರದರ್ಶನದಲ್ಲಿ ಭಾಗವಹಿಸಲು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ರಫ್ತು ಉತ್ತೇಜನ ಮಿಷನ್‌ ಸಹಾಯ ಮಾಡಲಿದೆ ಎಂದು ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-51-465542846

Dailyhunt
Disclaimer: This content has not been generated, created or edited by Dailyhunt. Publisher: Prajavani