Dailyhunt Logo
  • Light mode
    Follow system
    Dark mode
    • Play Story
    • App Story
9ನೇ ತರಗತಿ ಪಠ್ಯದಲ್ಲಿ ಸಿಂಧೂ ನಾಗರಿಕತೆಯ ನೃತ್ಯಗಾರ್ತಿ ಚಿತ್ರ ಮಾರ್ಪಾಡು: ಆಕ್ಷೇಪ

9ನೇ ತರಗತಿ ಪಠ್ಯದಲ್ಲಿ ಸಿಂಧೂ ನಾಗರಿಕತೆಯ ನೃತ್ಯಗಾರ್ತಿ ಚಿತ್ರ ಮಾರ್ಪಾಡು: ಆಕ್ಷೇಪ

ವದೆಹಲಿ: ಸಿಂಧೂ ನಾಗರಿಕತೆಗೆ ಸಂಬಂಧಿಸಿದ ಪ್ರಸಿದ್ಧ ಕಲಾಕೃತಿಗಳಲ್ಲಿ ಒಂದಾದ, ಮೊಹೆಂಜೊ-ದಾರೊದಲ್ಲಿ ಪತ್ತೆಯಾದ 'ನೃತ್ಯಗಾರ್ತಿ'ಯ ಕಂಚಿನ ಪ್ರತಿಮೆಯ ದೇಹವನ್ನು ಬಟ್ಟೆಯಿಂದ ಸುತ್ತಿರುವಂತೆ ಕಾಣುವ ಚಿತ್ರವನ್ನು 9ನೇ ತರಗತಿಯ ಎನ್‌ಸಿಇಆರ್‌ಟಿಯ ಪಠ್ಯಪುಸ್ತಕದಲ್ಲಿ ಮುದ್ರಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಎನ್‌ಸಿಇಆರ್‌ಟಿಯ 9ನೇ ತರಗತಿಯ ಹೊಸ ಕಲಾ ಶಿಕ್ಷಣ ಪಠ್ಯಪುಸ್ತಕ 'ಮಧುರಿಮಾ'ದ ಮೊದಲ ಅಧ್ಯಾಯದ 'ಕಲೆಗಳ ಇತಿಹಾಸ'ದಲ್ಲಿ ಈ ಚಿತ್ರವಿದೆ.

ಈ ಪ್ರತಿಮೆಯ ದೇಹದ ಮಧ್ಯಭಾಗವನ್ನು ಮೂಲ ಕಲಾಕೃತಿಗಿಂತ ಭಿನ್ನವಾಗಿ ಚಿತ್ರಿಸಲಾಗಿದೆ. ಮೂಲ ಶಿಲ್ಪದಲ್ಲಿ ಸ್ಪಷ್ಟವಾಗಿ ಕಾಣಿಸುವ ದೈಹಿಕ ವಿನ್ಯಾಸದ ವಿವರಗಳನ್ನು ಇಲ್ಲಿ ಮರೆಮಾಚಲಾಗಿದೆ. ದೇಹದ ಭಾಗಗಳಿಗೆ ನೆರಳು ಬೀಳುವಂತೆ ಕಪ್ಪುಬಣ್ಣದಲ್ಲಿ ಚಿತ್ರಿಸಲಾಗಿದೆ.

ಈ ಚಿತ್ರಕ್ಕಿಂತ ಭಿನ್ನವಾಗಿ, 6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ 'ನೃತ್ಯಗಾರ್ತಿ'ಯ ಚಿತ್ರವಿದೆ. ಇದು ಮೂಲ ಕಂಚಿನ ಶಿಲ್ಪಕ್ಕೆ ಹೋಲುವ ರೂಪದಲ್ಲಿದೆ.

ಇದು ಕ್ರಿ.ಪೂ. 2600ಕ್ಕೆ ಸೇರಿದ ಮೊಹೆಂಜೊ-ದಾರೊ ನಾಗರಿಕತೆಗೆ ಸೇರಿದ ನೃತ್ಯಗಾರ್ತಿ ಕಂಚಿನ ಪ್ರತಿಮೆಯಾಗಿದೆ. ಇದನ್ನು ಪಶ್ಚಿಮ ಬಂಗಾಳ, ಜಾರ್ಖಂಡ್‌ ಮತ್ತು ಛತ್ತೀಸ್‌ಗಢದಲ್ಲಿ ಪ್ರಚಲಿತದಲ್ಲಿರುವ ಮೇಣ ಕರಗಿಸುವ ತಂತ್ರಜ್ಞಾನವನ್ನು ಬಳಸಿ ತಯಾರಿಸಲಾಗಿದೆ. ಈ ಶಿಲ್ಪವು ಒಂದು ಮಂಡಿ ಬಾಗಿದ, ಒಂದು ಕೈ ಸೊಂಟದ ಮೇಲಿರುವ ಮತ್ತು ಗಲ್ಲವನ್ನು ಸ್ವಲ್ಪ ಮೇಲಕ್ಕೆತ್ತಿದ ಭಂಗಿಯಲ್ಲಿದೆ ಎಂದು ಈ ಅಧ್ಯಾಯದಲ್ಲಿ ವಿವರಿಸಲಾಗಿದೆ.

ಈ ಪ್ರತಿಮೆಯ ಭಂಗಿಯು ವಿವರಿಸುವ ಅಂಶಗಳ ಬಗ್ಗೆ ಚರ್ಚಿಸುವುದು, ಆ ಭಂಗಿಯನ್ನೇ ಅನುಕರಿಸುವ ಚಟುವಟಿಕೆಗಳನ್ನೂ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಜತೆಗೆ, ನೃತ್ಯಗಾರ್ತಿಯ ರೇಖಾಚಿತ್ರ ಬಿಡಿಸುವ ಚಟುವಟಿಕೆಯನ್ನೂ ಈ ಅಧ್ಯಾಯದಲ್ಲಿ ನೀಡಲಾಗಿದೆ.

'ಐತಿಹಾಸಿಕ ಕಲಾಕೃತಿಗಳ ಚಿತ್ರಗಳನ್ನು ಮಾರ್ಪಡಿಸಬಾರದು. ಅವು ಕಲಾತ್ಮಕ ಹಾಗೂ ಸಾಂಸ್ಕೃತಿಕ ಮೌಲ್ಯವನ್ನು ಹೊಂದಿವೆ. 'ನೃತ್ಯಗಾರ್ತಿ' ಪ್ರತಿಮೆಯು ಮಕ್ಕಳಿಗೆ ಸೂಕ್ತವಲ್ಲ ಎಂದು ಪರಿಗಣಿಸುವುದೇ ತಪ್ಪು. ನಗ್ನತೆಯು ಸೂಕ್ತವಲ್ಲ ಎಂಬ ಕಲ್ಪನೆಯು ವಿಕ್ಟೋರಿಯನ್‌ ಕಾಲದ ದೃಷ್ಟಿಕೋನವಾಗಿದೆ. ಆದರೂ ನಾವು ಭಾರತೀಯ ಶಿಕ್ಷಣವನ್ನು ವಸಾಹತುಶಾಹಿಯಿಂದ ಮುಕ್ತಗೊಳಿಸುವ ಬಗ್ಗೆ ಮಾತನಾಡುತ್ತೇವೆ' ಎಂದು ಎನ್‌ಸಿಇಆರ್‌ಟಿಯ 6ನೇ ತರಗತಿಯ ಹೊಸ ಸಮಾಜ ವಿಜ್ಞಾನ ಪಠ್ಯಪುಸ್ತಕ ಅಭಿವೃದ್ಧಿ ಸಮಿತಿಯ ಮುಖ್ಯಸ್ಥ ಮೈಕೆಲ್‌ ಡ್ಯಾನಿನೊ ಟೀಕಿಸಿದ್ದಾರೆ.

ಎರಡು ಪಠ್ಯಪುಸ್ತಕಗಳಲ್ಲಿನ ಈ ಪ್ರತಿಮೆಯ ಚಿತ್ರಣದಲ್ಲಿನ ವ್ಯತ್ಯಾಸದ ಬಗ್ಗೆ ಎನ್‌ಸಿಇಆರ್‌ಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Dailyhunt
Disclaimer: This content has not been generated, created or edited by Dailyhunt. Publisher: Prajavani