ನವದೆಹಲಿ: ದೇಶದ ಸಗಟು ಹಣದುಬ್ಬರ ಆಗಸ್ಟ್‌ನಲ್ಲಿ ಶೇ 9.92ಕ್ಕೆ ಏರಿಕೆಯಾಗಿದೆ. ಜುಲೈನಲ್ಲಿ ಇದು ಶೇ 9.78ರಷ್ಟಿತ್ತು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ತಾತ್ಕಾಲಿಕ ಅಂಕಿಅಂಶಗಳು ತಿಳಿಸಿವೆ.
ಇಂಧನ ಬೆಲೆಗಳು ಏರಿಕೆ ಮಟ್ಟದಲ್ಲಿಯೇ ಇದ್ದಿದ್ದೇ ಇದಕ್ಕೆ ಕಾರಣ.
ಆಗಸ್ಟ್‌ನಲ್ಲಿ ಎಲ್ಲ ಸರಕುಗಳ ಒಟ್ಟಾರೆ ಬೆಲೆ ಸೂಚ್ಯಂಕ 110.8ಕ್ಕೆ ಏರಿದೆ. ಜುಲೈನಲ್ಲಿ ಇದು 110.0ರಷ್ಟಿತ್ತು. ಈ ಲೆಕ್ಕಾಚಾರಕ್ಕೆ 2022-23ರನ್ನು ಮೂಲ ವರ್ಷವಾಗಿ ಪರಿಗಣಿಸಲಾಗಿದೆ.
ಪ್ರಾಥಮಿಕ ಸರಕುಗಳ ಬೆಲೆ ಮಾತ್ರ ಇಳಿಕೆಯಾಗಿದೆ. ಜುಲೈನಲ್ಲಿ ಇದು ಶೇ 8.52ರಷ್ಟಿದ್ದರೆ ಆಗಸ್ಟ್‌ನಲ್ಲಿ ಶೇ 7.76ಕ್ಕೆ ಇಳಿದಿದೆ. ಇಂಧನ ಮತ್ತು ವಿದ್ಯುತ್ ಬೆಲೆ ಏರಿಕೆ ಶೇ 20.05ರಿಂದ ಶೇ 22.93ಕ್ಕೆ ಹೆಚ್ಚಾಗಿದೆ. ತಯಾರಿಕಾ ಸರಕುಗಳ ಬೆಲೆ ಏರಿಕೆ ಕೂಡ ಶೇ 8.29ರಿಂದ ಶೇ 8.37ಕ್ಕೆ ಏರಿದೆ.
ಸರ್ಕಾರದ ಅಂಕಿಅಂಶಗಳ ಪ್ರಕಾರ, ಪೆಟ್ರೋಲಿಯಂ ಉತ್ಪನ್ನಗಳನ್ನು ಒಳಗೊಂಡ ಖನಿಜ ತೈಲಗಳು, ಆಹಾರ ಪದಾರ್ಥಗಳು, ಆಹಾರ ಉತ್ಪನ್ನಗಳ ತಯಾರಿಕೆ, ಮೂಲ ಲೋಹಗಳ ತಯಾರಿಕೆ, ಆಹಾರೇತರ ಸರಕುಗಳು ಹಾಗೂ ರಾಸಾಯನಿಕ ಉತ್ಪನ್ನಗಳ ತಯಾರಿಕೆ ಆಗಸ್ಟ್‌ನ ಸಗಟು ಹಣದುಬ್ಬರ ಏರಿಕೆಗೆ ಪ್ರಮುಖ ಕಾರಣವಾಗಿವೆ.
ಆಹಾರ ಪದಾರ್ಥಗಳು ಮತ್ತು ತಯಾರಿಸಿದ ಆಹಾರ ಉತ್ಪನ್ನಗಳ ಬೆಲೆಗಳನ್ನು ಒಳಗೊಂಡ ಆಹಾರ ಬೆಲೆ ಸೂಚ್ಯಂಕದ ಹಣದುಬ್ಬರ ಜುಲೈನಲ್ಲಿ ಶೇ 6.65 ಇತ್ತು. ಆಗಸ್ಟ್‌ನಲ್ಲಿ ಶೇ 7.05ಕ್ಕೆ ಏರಿದೆ.
ಆಹಾರ ಪದಾರ್ಥಗಳ ಬೆಲೆ ಏರಿಕೆ ಶೇ 5.44ರಿಂದ ಶೇ 5.67ಕ್ಕೆ ಹೆಚ್ಚಾಗಿದೆ. ಆಹಾರೇತರ ಸರಕುಗಳ ಬೆಲೆ ಶೇ 17.66ರಿಂದ ಶೇ 14.79ಕ್ಕೆ ಇಳಿದಿದೆ. ಖನಿಜಗಳ ಬೆಲೆ ಶೇ 13.28ರಿಂದ ಶೇ 8.24ಕ್ಕೆ ಇಳಿಕೆಯಾಗಿದೆ.
(ರಾಯಿಟರ್ಸ್ ಹಾಗೂ ಪಿಟಿಐ ಮಾಹಿತಿ)

