ಬೆಂಗಳೂರು: ರಾಜ್ಯದ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ನ್ಯಾಯಯುತ ಉದ್ಯೋಗಾವಕಾಶ ಕಲ್ಪಿಸುವುದು, ನೇಮಕಾತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಹಾಗೂ ಸ್ಥಳೀಯ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ಕುರಿತು ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಕರ್ನಾಟಕ ರಕ್ಷಣಾ ವೇದಿಕೆ 'ಆಗ್ರಹ ಅಭಿಯಾನ' ಆರಂಭಿಸಿದೆ.
ಅಭಿಯಾನದ ಮೊದಲ ದಿನವಾದ ಸೋಮವಾರ ನಗರದ ವಿವಿಧ ಭಾಗಗಳಲ್ಲಿ ವೇದಿಕೆ ಮುಖಂಡರ ಹತ್ತಕ್ಕೂ ಹೆಚ್ಚು ತಂಡಗಳು ಕಾರ್ಯಾಚರಣೆ ನಡೆಸಿ, 100ಕ್ಕೂ ಹೆಚ್ಚು ಐ.ಟಿ ಕಂಪನಿಗಳು ಸೇರಿದಂತೆ ಖಾಸಗಿ ಸಂಸ್ಥೆಗಳಿಗೆ ಭೇಟಿ ನೀಡಿವೆ. ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳಿಗೆ ಆಗ್ರಹ ಪತ್ರಗಳನ್ನು ಸಲ್ಲಿಸಿ, ಉದ್ಯೋಗ ನೇಮಕಾತಿಗೆ ಸಂಬಂಧಿಸಿದ ಮಾಹಿತಿ ನೀಡುವಂತೆ ಮನವಿ ಮಾಡಿವೆ.
'ಆಗ್ರಹ ಅಭಿಯಾನ' ರಾಜ್ಯದ ಎಲ್ಲ ಭಾಗಗಳಲ್ಲೂ ಆರಂಭಗೊಂಡಿದ್ದು, ನವೆಂಬರ್ ತಿಂಗಳಿಡೀ ಮುಂದುವರಿಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯಕರ್ತರ ತಂಡಗಳು ಖಾಸಗಿ ಸಂಸ್ಥೆಗಳಿಗೆ ಭೇಟಿ ನೀಡಿ, ಉದ್ಯೋಗಾವಕಾಶಗಳಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಲಿವೆ.
ಸಂಸ್ಥೆಗಳು ಒದಗಿಸುವ ಅಂಕಿ ಅಂಶಗಳು ಮತ್ತು ಮಾಹಿತಿಯನ್ನು ಆಧರಿಸಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿ ಇರುವ ವಾಸ್ತವ ಸ್ಥಿತಿಯನ್ನು ಪರಿಶೀಲಿಸಲಾಗುವುದು. ಬಳಿಕ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಸಮಗ್ರ ವರದಿಯನ್ನು ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಿದೆ.
ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಟಿ.ಎ. ನಾರಾಯಣಗೌಡ, 'ಇದು ಪ್ರತಿಭಟನೆಯಲ್ಲ, ಖಾಸಗಿ ಸಂಸ್ಥೆಗಳ ಉದ್ಯೋಗ ನೇಮಕಾತಿ ಪ್ರಕ್ರಿಯೆ ಮತ್ತು ಕನ್ನಡಿಗರಿಗೆ ದೊರೆಯುತ್ತಿರುವ ಅವಕಾಶಗಳ ಮಾಹಿತಿ ಸಂಗ್ರಹಿಸುವ ಪ್ರಯತ್ನ' ಎಂದರು.
261103-4-544865286
