Dailyhunt Logo
  • Light mode
    Follow system
    Dark mode
    • Play Story
    • App Story
ಆಹಾ, ಕೆಸುವಿನ ಗೊಜ್ಜು ಸವಿಯಿರಿ ಗೋಳಿಸೊಪ್ಪಿನ ದೋಸೆ

ಆಹಾ, ಕೆಸುವಿನ ಗೊಜ್ಜು ಸವಿಯಿರಿ ಗೋಳಿಸೊಪ್ಪಿನ ದೋಸೆ

ಬೇಕಾಗುವ ಸಾಮಗ್ರಿ: ಕೆಸುವಿನ ಎಲೆ ನಾಲ್ಕು, ಬ್ಯಾಡಗಿ ಮೆಣಸಿನಕಾಯಿ ನಾಲ್ಕೈದು, ಉದ್ದಿನಬೇಳೆ ಎರಡು ಚಮಚ‌, ತೆಂಗಿನತುರಿ ಒಂದು ಕಪ್, ಹುಣಸೆಹಣ್ಣಿನ ರಸ ಎರಡು ಚಮಚ, ಬೆಲ್ಲದ ತುರಿ ಒಂದು ಚಮಚ.

ಒಗ್ಗರಣೆಗೆ: ಸಾಸಿವೆ, ಒಣಮೆಣಸಿನಕಾಯಿ, ಜಜ್ಜಿದ ಬೆಳ್ಳುಳ್ಳಿ ಏಳೆಂಟು ಎಸಳು.

ಮಾಡುವ ವಿಧಾನ: ಹೆಚ್ಚಿದ ಕೆಸುವಿನ ಎಲೆಗಳನ್ನು ಸ್ವಲ್ಪ ನೀರು, ಹುಣಸೆರಸ, ಬೆಲ್ಲ, ಉಪ್ಪು, ಬ್ಯಾಡಗಿ ಮೆಣಸಿನಕಾಯಿಯೊಂದಿಗೆ ಬೇಯಿಸಿ ಆರಲು ಬಿಡಿ. ತೆಂಗಿನತುರಿ ಮತ್ತು ಕೆಂಪಗೆ ಹುರಿದ ಉದ್ದಿನಬೇಳೆಯನ್ನು ರುಬ್ಬಿ. ಬಳಿಕ ಇದಕ್ಕೆ ಬೇಯಿಸಿ ಆರಲು ಇಟ್ಟ ಪದಾರ್ಥ ಸೇರಿಸಿ ಸ್ವಲ್ಪ ರುಬ್ಬಿ. ಒಗ್ಗರಣೆ ಹಾಕಿ ಬೆರೆಸಿದರೆ ಅನ್ನದೊಂದಿಗೆ ಕಲಸಿ ತಿನ್ನಲು ಗೊಜ್ಜು ಸಿದ್ಧ.

ಕುಚ್ಚಲಕ್ಕಿ ಉಂಡೆ

ಬೇಕಾಗುವ ಸಾಮಗ್ರಿ: ಕುಚ್ಚಲಕ್ಕಿ ಒಂದು ಲೋಟ, ತೆಂಗಿನತುರಿ ಒಂದು ಲೋಟ, ಜೋನಿ ಬೆಲ್ಲ ಮುಕ್ಕಾಲು ಲೋಟ, ಗೋಡಂಬಿ, ಏಲಕ್ಕಿ ಪುಡಿ ಅರ್ಧ ಚಮಚ, ಚಿಟಿಕೆ ಉಪ್ಪು.

ಮಾಡುವ ವಿಧಾನ: ಅಕ್ಕಿಯನ್ನು ತೊಳೆದು ಬಟ್ಟೆಯ ಮೇಲೆ ಹರಡಿ ನಂತರ ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಹುರಿಯಿರಿ. ತೆಂಗಿನತುರಿಯನ್ನು ಒಂದು ಚಮಚ ತುಪ್ಪದಲ್ಲಿ ಸ್ವಲ್ಪ ಹುರಿಯಿರಿ. ಅಕ್ಕಿಯನ್ನು ಪುಡಿ ಮಾಡಿ. ಕೊನೆಯಲ್ಲಿ ತೆಂಗಿನತುರಿ ಬೆರೆಸಿ ರುಬ್ಬಿ. ಪಾತ್ರೆಗೆ ತೆಗೆದು ಚಿಟಿಕೆ ಉಪ್ಪು, ಬೆಲ್ಲ, ಏಲಕ್ಕಿಪುಡಿ, ಗೋಡಂಬಿ ಬೆರೆಸಿ ಕಲಸಿ ಉಂಡೆ ಕಟ್ಟಿ.

ಗೋಳಿಸೊಪ್ಪಿನ ದೋಸೆ

ಬೇಕಾಗುವ ಸಾಮಗ್ರಿ: ಹೆಚ್ಚಿದ ಗೋಳಿಸೊಪ್ಪು ಮೂರು ಕಪ್, ಹೆಚ್ಚಿದ ಈರುಳ್ಳಿ ಒಂದು, ಅಕ್ಕಿ ಒಂದು ದೊಡ್ಡ ಕಪ್, ತೆಂಗಿನ ತುರಿ ಅರ್ಧ ಕಪ್, ದನಿಯಾ, ಜೀರಿಗೆ ಅರ್ಧರ್ಧ ಚಮಚ, ಬ್ಯಾಡಗಿ ಮೆಣಸಿನಕಾಯಿ ಮೂರ್ನಾಲ್ಕು, ಹುಣಸೆಹಣ್ಣು, ಬೆಲ್ಲ, ಉಪ್ಪು ರುಚಿಗೆ ತಕ್ಕಂತೆ.

ಮಾಡುವ ವಿಧಾನ: ನಾಲ್ಕು ತಾಸು ನೆನೆಸಿಟ್ಟ ಅಕ್ಕಿಗೆ ಗೋಳಿಸೊಪ್ಪು ಬಿಟ್ಟು ಉಳಿದೆಲ್ಲಾ ಸಾಮಗ್ರಿ ಸೇರಿಸಿ ನುಣ್ಣಗೆ ರುಬ್ಬಿ. ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ ಕಾದ ಮೇಲೆ ಸಾಸಿವೆ, ಇಂಗು, ಅರಿಶಿನ ಹಾಕಿ ಒಗ್ಗರಣೆ ಮಾಡಿ ಸೊಪ್ಪು ಬೆರೆಸಿ ಸ್ವಲ್ಪ ಬಾಡಿಸಿ. ಕೊನೆಯಲ್ಲಿ ಈರುಳ್ಳಿ ಸೇರಿಸಿ ಇಳಿಸಿ. ಆರಿದಾಗ ರುಬ್ಬಿದ ಹಿಟ್ಟಿಗೆ ಬೆರೆಸಿ. ದೋಸೆ ತಯಾರಿಸಿ ಕಾಯಿ ಚಟ್ನಿ, ತುಪ್ಪದೊಡನೆ ಸವಿಯಿರಿ.

ಬಾಳೆಹಣ್ಣಿನ ಮುಳಕ

ಬೇಕಾಗುವ ಸಾಮಗ್ರಿ: ಕಳಿತ ಬಾಳೆಹಣ್ಣು ಎರಡು, ತೆಂಗಿನತುರಿ ಒಂದು ಕಪ್, ಬೆಲ್ಲ ಸ್ವಲ್ಪ , ಅಕ್ಕಿಹಿಟ್ಟು ಸ್ವಲ್ಪ, ಉಪ್ಪು ಎರಡು ಚಿಟಿಕೆ, ಏಲಕ್ಕಿಪುಡಿ, ಗೋಡಂಬಿ ಚೂರುಗಳು, ತುಪ್ಪ ಎರಡು ಚಮಚ, ಕರಿಯಲು ಎಣ್ಣೆ.

ಮಾಡುವ ವಿಧಾನ: ಪಾತ್ರೆಯಲ್ಲಿ ನುರಿದ ಬಾಳೆಹಣ್ಣು ಮತ್ತು ಉಳಿದೆಲ್ಲಾ ಪದಾರ್ಥ ಬೆರೆಸಿ ಕಲಸಿ. ಕಾದ ಎಣ್ಣೆಗೆ ಹಾಕಿ ಕರಿಯಿರಿ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260905-51-852895324

Dailyhunt
Disclaimer: This content has not been generated, created or edited by Dailyhunt. Publisher: Prajavani