Dailyhunt Logo
  • Light mode
    Follow system
    Dark mode
    • Play Story
    • App Story
ಆಹಾರ ಸರಪಳಿಯಲ್ಲಿ ಮೈಕ್ರೋಪ್ಲಾಸ್ಟಿಕ್! ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಈ ಚೀಲ ಬಳಸಿ

ಆಹಾರ ಸರಪಳಿಯಲ್ಲಿ ಮೈಕ್ರೋಪ್ಲಾಸ್ಟಿಕ್! ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಈ ಚೀಲ ಬಳಸಿ

ಪ್ಲಾಸ್ಟಿಕ್ ಚೀಲಗಳು (ಬ್ಯಾಗ್‌) ಜೈವಿಕ ವಿಘಟನೀಯವಲ್ಲದ ವಸ್ತುಗಳಾಗಿದ್ದು, ಭೂಮಿಯಲ್ಲಿ ಇವು ಕರಗಲು 1,000ಕ್ಕೂ ಹೆಚ್ಚು ವರ್ಷ ತೆಗೆದುಕೊಳ್ಳುತ್ತವೆ. ಆದಾಗ್ಯೂ ಇವು ಪರಿಸರದಲ್ಲಿ ಮೈಕ್ರೋ ಪ್ಲಾಸ್ಟಿಕ್‌ಗಳಾಗಿ ಉಳಿದು ಬಿಡುತ್ತವೆ. ಮೈಕ್ರೋ ಪ್ಲಾಸ್ಟಿಕ್‌, ಆಹಾರ ಸರಪಳಿಯೊಂದಿಗೆ ಸೇರಿಕೊಂಡಾಗ ಜೀವಿಗಳ ದೇಹ ಸೇರಿ ಮಾರಣಾಂತಿಕ ಕಾಯಿಲೆಗಳಿಗೂ ಕಾರಣವಾಗುತ್ತದೆ ಎನ್ನುತ್ತಾರೆ ತಜ್ಞರು.

ದಿನಸಿ, ತರಾಕಾರಿಗಳು ಹಾಗೂ ಇತರೆ ದಿನಬಳಕೆ ವಸ್ತುಗಳನ್ನು ಕೊಂಡುಕೊಳ್ಳಲು ಹೋದಾಗ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಎಲ್ಲವನ್ನು ಕಟ್ಟಿಕೊಡುತ್ತಾರೆ. ಮನೆಗೆ ಬಂದ ಬಳಿಕ ಆ ಪ್ಲಾಸ್ಟಿಕ್ ಬ್ಯಾಗ್‌ ಅನ್ನು ಕಸದ ಬುಟ್ಟಿಗೆ ಹಾಕಿ ಕೈತೊಳೆದುಕೊಳ್ಳುತ್ತೇವೆ. ಆದರೆ ಪರಿಸರದ ದೃಷ್ಟಿಯಿಂದ ಪಾಲಿಥಿಲೀನ್ ಚೀಲಕ್ಕೆ ಪರ್ಯಾಯವಾಗಿ 8 ವಸ್ತುಗಳನ್ನು ಬಳಕೆ ಮಾಡಬಹುದು ಎಂದು 'ಗ್ರೀನ್ ಬ್ಯುಸಿನೆಸ್ ಬ್ಯೂರೋ ಸಂಸ್ಥೆ' ಹೇಳುತ್ತದೆ.

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ


ಆಹಾರ ಸರಪಳಿಯಲ್ಲಿ ಮೈಕ್ರೋಪ್ಲಾಸ್ಟಿಕ್! ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಈ ಚೀಲ ಬಳಸಿ

ಒಂದು ಸಾಲಿನಲ್ಲಿಪ್ಲಾಸ್ಟಿಕ್ ಚೀಲಗಳು ಪರಿಸರ ಮತ್ತು ಆರೋಗ್ಯಕ್ಕೆ ಮಾರಕವಾಗಿದ್ದು, ಅವುಗಳಿಗೆ ಪರ್ಯಾಯವಾಗಿ ಪರಿಸರ ಸ್ನೇಹಿ ಚೀಲಗಳನ್ನು ಬಳಸುವುದು ಅತ್ಯಗತ್ಯ ಮತ್ತು ಅನಿವಾರ್ಯವಾಗಿದೆ.

ಪ್ರಮುಖ ಪ್ರಶ್ನೋತ್ತರ


ಮೈಕ್ರೋಪ್ಲಾಸ್ಟಿಕ್ ನಮ್ಮ ಆಹಾರವನ್ನು ಹೇಗೆ ಸೇರುತ್ತದೆ?

ಪ್ಲಾಸ್ಟಿಕ್ ಚೀಲಗಳು ನದಿ ಮತ್ತು ಸಾಗರಗಳನ್ನು ಸೇರಿ ವಿಘಟಿತವಾಗುತ್ತವೆ. ಈ ಮೈಕ್ರೋ ಕಣಗಳು ಸಮುದ್ರದ ಜೀವಿಗಳ ಆಹಾರ ಸರಪಳಿಯನ್ನು ಪ್ರವೇಶಿಸಿ, ನಂತರ ಮಾನವರ ಸೇವಿಸುವ ಆಹಾರದ ಮೂಲಕ ನಮ್ಮ ದೇಹ ಸೇರುತ್ತವೆ.


ಏಕ-ಬಳಕೆಯ ಪ್ಲಾಸ್ಟಿಕ್ ಚೀಲಗಳಿಂದಾಗುವ ಅಪಾಯಗಳೇನು?

ಪ್ರತಿ ವರ್ಷ ವಿಶ್ವದಲ್ಲಿ 5 ಟ್ರಿಲಿಯನ್ ಪ್ಲಾಸ್ಟಿಕ್ ಚೀಲಗಳನ್ನು ಬಳಸಲಾಗುತ್ತದೆ. ಇವು ಭೂಮಿಯಲ್ಲಿ ಕರಗಲು 1,000 ವರ್ಷಗಳಿಗೂ ಹೆಚ್ಚು ಕಾಲ ತೆಗೆದುಕೊಳ್ಳುವುದಲ್ಲದೆ ಜಾಗತಿಕ ತಾಪಮಾನ ಏರಿಕೆಗೂ ಕಾರಣವಾಗುತ್ತವೆ.


ಪ್ಲಾಸ್ಟಿಕ್ ಚೀಲಗಳಿಗೆ ಲಭ್ಯವಿರುವ ಉತ್ತಮ ಪರ್ಯಾಯಗಳು ಯಾವುವು?

ಪ್ಲಾಸ್ಟಿಕ್ ಬ್ಯಾಗ್‌ಗಳಿಗೆ ಬದಲಾಗಿ ಕಾಗದದ ಚೀಲಗಳು, ಹತ್ತಿ ಚೀಲಗಳು, ಸೆಣಬಿನ ಚೀಲಗಳು ಮತ್ತು ಸಂಪೂರ್ಣವಾಗಿ ಮಣ್ಣಿನಲ್ಲಿ ಕರಗುವ ಕಾಂಪೋಸ್ಟೇಬಲ್ ಚೀಲಗಳನ್ನು ಬಳಸಬಹುದು.


ಕಾಂಪೋಸ್ಟೇಬಲ್ ಚೀಲಗಳು ಏಕೆ ಪರಿಸರ ಸ್ನೇಹಿಯಾಗಿವೆ?

ಇವು ಸಸ್ಯ-ಆಧಾರಿತ ನೈಸರ್ಗಿಕ ವಸ್ತುಗಳಿಂದ ತಯಾರಿಸಲ್ಪಟ್ಟಿದ್ದು, ಸೂಕ್ಷ್ಮಜೀವಿಗಳ ಮೂಲಕ ಕೇವಲ 60 ರಿಂದ 180 ದಿನಗಳಲ್ಲಿ ಮಣ್ಣಿನಲ್ಲಿ ಕರಗಿ ಗೊಬ್ಬರವಾಗಿ ಪರಿವರ್ತನೆಯಾಗುತ್ತವೆ.


ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ನಾವು ಏನು ಮಾಡಬಹುದು?

ದಿನನಿತ್ಯದ ವಸ್ತುಗಳನ್ನು ಖರೀದಿಸುವಾಗ ಪ್ಲಾಸ್ಟಿಕ್ ಚೀಲಗಳ ಬದಲಿಗೆ ಮರುಬಳಕೆ ಮಾಡಬಹುದಾದ ಸೆಣಬು ಅಥವಾ ಹತ್ತಿಯ ಚೀಲಗಳನ್ನು ಒಯ್ಯುವ ಅಭ್ಯಾಸವನ್ನು ಅಳವಡಿಸಿಕೊಳ್ಳಬೇಕು.

ಪ್ರಮುಖ ಅಂಕಿಅಂಶಗಳು

83ಪ್ರತಿ ವ್ಯಕ್ತಿ ಬಳಸುವ ಪ್ಲಾಸ್ಟಿಕ್ ಚೀಲಗಳು1,000ಸಾರ್ವತ್ರಿಕ ಪ್ಲಾಸ್ಟಿಕ್ ವಿಘಟನೆಯ ಅವಧಿ12ಒಂದು ಪ್ಲಾಸ್ಟಿಕ್ ಚೀಲದ ಜೀವಿತಾವಧಿ60 ರಿಂದ 180ಕಾಂಪೋಸ್ಟೇಬಲ್ ಚೀಲ ವಿಘಟನೆಯ ದಿನಗಳು

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಪ್ಲಾಸ್ಟಿಕ್ ಚೀಲಗಳು ವಾತಾವರಣಕ್ಕೆ ಇಂಗಾಲದ ಡೈಆಕ್ಸೈಡ್ ಮತ್ತು ಮಿಥೇನ್ ಅನಿಲಗಳನ್ನು ಬಿಡುಗಡೆ ಮಾಡುವ ಮೂಲಕ ಜಾಗತಿಕ ತಾಪಮಾನ ಏರಿಕೆಗೂ ಕಾರಣವಾಗುತ್ತದೆ. ತಯಾರಾದ ಶೇ 40ರಷ್ಟು ಪ್ಲಾಸ್ಟಿಕ್ ಅನ್ನು ಪ್ಯಾಕೇಜಿಂಗ್‌ಗಾಗಿ ಬಳಸಲಾಗುತ್ತದೆ. ಪ್ರತಿ ವರ್ಷ ವಿಶ್ವದದಲ್ಲಿ 5 ಟ್ರಿಲಿಯನ್ ಏಕ-ಬಳಕೆಯ ಪ್ಲಾಸ್ಟಿಕ್ ಚೀಲಗಳನ್ನು ಬಳಸಲಾಗುತ್ತದೆ. ಅಂದರೆ ಪ್ರತಿ ವ್ಯಕ್ತಿ ವರ್ಷಕ್ಕೆ 83 ಚೀಲಗಳನ್ನು ಬಳಸುತ್ತಾನೆ.

ಪರಿಸರ ಸ್ನೇಹಿ ಚೀಲಗಳನ್ನು ಯಾಕೆ ಬಳಕೆ ಮಾಡಬೇಕು?

ಪ್ಲಾಸ್ಟಿಕ್ ಚೀಲಗಳು ಹಗುರವಾಗಿದ್ದು, ಗಾಳಿ ಮತ್ತು ನೀರಿನ ಮೂಲಕ ದೂರದವರೆಗೂ ಪ್ರಯಾಣಿಸುತ್ತವೆ. ಪ್ರಯಾಣದ ನಡುವೆ ಮರಗಳ ಕೊಂಬೆಗಳ ನಡುವೆ ನೀರಿನಲ್ಲಿ ಸಿಲುಕಿಕೊಂಡು ಸಾಗರ, ನದಿಗಳನ್ನು ಸೇರುತ್ತವೆ. 2014 ರಲ್ಲಿ ನಡೆಸಿದ ಮೊದಲ ಸಾಗರಶಾಸ್ತ್ರ ಅಧ್ಯಯನವು, ಸಮುದ್ರ ಮೇಲ್ಮೈಯಲ್ಲಿ ಸುಮಾರು 244,000 ಮೆಟ್ರಿಕ್ ಟನ್ ತೂಕದ ಕನಿಷ್ಠ 5.25 ಟ್ರಿಲಿಯನ್ ಪ್ರತ್ಯೇಕ ಪ್ಲಾಸ್ಟಿಕ್ ಕಣಗಳು ತೇಲುತ್ತಿವೆ ಎನ್ನುವ ಅಘಾತಕಾರಿ ವಿಷಯವನ್ನು ಬಹಿರಂಗ ಪಡಿಸಿತ್ತು.

ಮೈಕ್ರೋಪ್ಲಾಸ್ಟಿಕ್ ಆಹಾರ ಸರಪಳಿಯನ್ನು ಪ್ರವೇಶಿಸಿ ಒಂದು ಪ್ರಾಣಿಯಿಂದ ಮತ್ತೊಂದು ಪ್ರಾಣಿಗೆ ವರ್ಗಾವಣೆಯಾಗುತ್ತದೆ. ಚಹಾ, ಉಪ್ಪು, ಹಾಲು, ಸಮುದ್ರ ಆಹಾರ, ಸಕ್ಕರೆ, ಬಿಯರ್, ತರಕಾರಿಗಳು ಮತ್ತು ತಂಪು ಪಾನೀಯಗಳಂತಹ ಆಹಾರ ಪದಾರ್ಥಗಳಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳನ್ನು ಇರುವುದು ಪತ್ತೆಯಾಗಿದೆ.

ಬಹುತೇಕ ಪ್ಲಾಸ್ಟಿಕ್‌ ಚೀಲಗಳನ್ನು ಪಾಲಿಥಿಲೀನ್‌ನಿಂದ ಮಾಡಲಾಗುತ್ತದೆ. ಇದು ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲಗಳ ಮಿಶ್ರಣದಿಂದ ಸಂಸ್ಕರಿಸಿ ತಯಾರಿಸಲಾದ ವಸ್ತುವಾಗಿದೆ. 5 ಪ್ಲಾಸ್ಟಿಕ್ ಚೀಲಗಳು 1 ಕೆಜಿ ‌ಕಾರ್ಬನ್‌ ಡೈ ಆಕ್ಸೈಡ್‌ ಅನ್ನು ಬಿಡುಗಡೆ ಮಾಡುತ್ತವೆ ಎಂದು ಅಂದಾಜಿಸಬಹುದು.

ಒಂದು ಪ್ಲಾಸ್ಟಿಕ್ ಚೀಲವನ್ನು ತಯಾರಿಸಲು 0.48 ಮೆಗಾಜೌಲ್ ಶಕ್ತಿಯನ್ನು ವ್ಯಯಿಸಲಾಗುತ್ತದೆ. ಈ ಶಕ್ತಿಯ ಪ್ರಮಾಣದಿಂದ 1 ಕಿಲೋಮೀಟರ್ ದೂರದ ವರೆಗೂ ‌ಕಾರನ್ನು ಓಡಿಸಬಹುದು. ಒಂದು ಪಾಲಿಥಿಲೀನ್ ಚೀಲದ ಉಪಯೋಗಿಸಿಸುವ ಜೀವಿತಾವಧಿ ಕೇವಲ 12 ನಿಮಿಷವಾಗಿದೆ.

ಪ್ರಾಣಿ, ಪಕ್ಷಿಗಳು ಆಹಾರದ ಜೊತೆಗೆ ಪ್ರತಿದಿನ ಪ್ಲಾಸ್ಟಿಕ್ ಅನ್ನು ಸೇವಿಸುತ್ತಿವೆ. ಭೂಮಿಯ ಮೇಲೆ ಮಾತ್ರವಲ್ಲದೆ ಸಮುದ್ರದ ಆಳದಲ್ಲಿನ ಪ್ರಾಣಿಗಳೂ ಪ್ಲಾಸ್ಟಿಕ್ ಸೇವಿಸಿ ಜೀವ ಕಳೆದುಕೊಳ್ಳುತ್ತಿವೆ. ಅದಕ್ಕೆ ಉತ್ತಮ ಉದಾಃರಣೆ ಎಂದರೆ, ಆಮೆಗಳು. ಇವು ಪ್ಲಾಸ್ಟಿಕ್‌ ಅನ್ನು ಜೆಲ್ಲಿ ಮೀನುಗಳು ಎಂದು ಭಾವಿಸಿ ತಿನ್ನುತ್ತವೆ. ಇದರಿಂದ ಉಸಿರುಗಟ್ಟಿ ಸಾವಿಗೀಡಾಗುತ್ತಿವೆ.

ಸಮುದ್ರ ಮೀನುಗಳು ವರ್ಷಕ್ಕೆ 2 ಸಾವಿರ ಟನ್ ಪ್ಲಾಸ್ಟಿಕ್‌ ಅನ್ನು ತಿನ್ನುತ್ತವೆ. ಮೀನು ಮಾನವನ ಪ್ರಮುಖ ಆಹಾರಗಳಲ್ಲಿ ಒಂದಾಗಿರುವುದರಿಂದ ಮೀನಿನಲ್ಲಿರುವ ಮೈಕ್ರೋ ಪ್ಲಾಸ್ಟಿಕ್ ನೇರವಾಗಿ ನಮ್ಮ ದೇಹ ಸೇರುತ್ತದೆ. ಇವು ಜೀವವೈವಿಧ್ಯತೆ ಮತ್ತು ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರುತ್ತದೆ.‌

ಪ್ಲಾಸ್ಟಿಕ್ ಚೀಲಕ್ಕೆ ಬಳಸಬಹುದಾದ ಪರ್ಯಾಯ ವಸ್ತುಗಳು

ಕಾಗದದ ಚೀಲಗಳು

ಕಾಗದದಿಂದ ತಯಾರಿಸಿದ ಚೀಲಗಳು ಭೂಮಿಯಲ್ಲಿ ನೈಸರ್ಗಿಕವಾಗಿಯೇ ಜೈವಿಕ ವಿಘಟನೆಗೆ ಒಳಪಡುತ್ತವೆ. ಇವುಗಳನ್ನು ಗೊಬ್ಬರ ತಯಾರಿಕೆಯಲ್ಲಿಯೂ ಬಳಸಬಹುದು. ಮಾತ್ರವಲ್ಲದೆ, ಕಾಗದವನ್ನು ಮರುಬಳಕೆ ಮಾಡಬಹುದಾಗಿದೆ. ಆದರೆ ಕಾಗದದ ಚೀಲಗಳನ್ನು ಮರುಬಳಕೆ ಮಾಡುವುದು ವಿರಳ.

ಪ್ಲಾಸ್ಟಿಕ್ ಚೀಲವನ್ನು ಉತ್ಪಾದಿಸುವುದಕ್ಕಿಂತ ಕಾಗದದ ಚೀಲವನ್ನು ತಯಾರಿಸಲು 4 ಪಟ್ಟು ಹೆಚ್ಚು ಶಕ್ತಿ ಬೇಕಾಗುತ್ತದೆ. ಇದರಿಂದಲೂ ತುಸು ಪರಿಸರಕ್ಕೆ ಹಾನಿ ಉಂಟಾಗುತ್ತದೆ. ಆದರೆ ಒಂದು ಕಾಗದದ ಚೀಲವನ್ನು 3 ರಿಂದ 43 ಬಾರಿ ಎಲ್ಲಿಯಾದರೂ ಬಳಸಿದರೆ, ಅದರಲ್ಲಿನ ರಾಸಾಯನಿಕಗಳು ತಟಸ್ಥಗೊಂಡು ಪರಿಸರ ಸ್ನೇಹಿಯಾಗಿ ವಿಘಟನೆಯಾಗುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.

ಕಾಗದದ ಚೀಲಕ್ಕೆ ಪರ್ಯಾಯವಾಗಿ ಯೋಚಿಸಬಹುದು...

ಹತ್ತಿ ಚೀಲಗಳು

ಹತ್ತಿಯಿಂದ ತಯಾರಿಸಿದ ಚೀಲಗಳು ಜೈವಿಕ ವಿಘಟನೀಯ ಮತ್ತು ಮರುಬಳಕೆ ಮಾಡಬಹುದಾಗಿವೆ. ಇವುಗಳನ್ನು ನೈಸರ್ಗಿಕ ಮತ್ತು ನವೀಕರಿಸಬಹುದಾದ ಮೂಲಗಳಿಂದ ತಯಾರಿಸಲಾಗುತ್ತದೆ. ಹತ್ತಿ ಚೀಲಗಳು ಪರಿಸರ ಸ್ನೇಹಿಯಾಗಿವೆ. ಆದಾಗ್ಯೂ 2018 ರ ಅಧ್ಯಯನವು ಒಂದು ಹತ್ತಿ ಚೀಲವು ಅದರಿಂದ ಪರಿಸರದ ಮೇಲಿನ ಉಂಟಾಗುವ ಪರಿಣಾಮವನ್ನು ಸರಿದೂಗಿಸಲು 20,000 ಬಾರಿ ಬಳಸಬೇಕಾಗುತ್ತದೆ ಎಂದು ಹೇಳಿದೆ. ಈ ಚೀಲಗಳನ್ನು ಉತ್ಪಾದಿಸಲು ಹೆಚ್ಚಿನ ಪ್ರಮಾಣದ ಶಕ್ತಿ ಮತ್ತು ನೀರು ಬೇಕಾಗುತ್ತದೆ. 1 ಕೆಜಿ ಹತ್ತಿಯನ್ನು ಉತ್ಪಾದಿಸಲು 10,000 ದಿಂದ 20,000 ಲೀಟರ್ ನೀರನ್ನು ಬಳಸಲಾಗುತ್ತದೆ ಎಂದು ಅಂದಾಜಿಸಲಾಗಿದೆ.

ಸೆಣಬಿನ ಚೀಲಗಳು

ಸೆಣಬಿನಿಂದ ನಾರನ್ನು ತೆಗೆಯಲಾಗುತ್ತದೆ. ಸಂಸ್ಕರಿಸಿದ ನಂತರ ಹಗ್ಗ, ಚೀಲಗಳು, ಕಾರ್ಪೆಟ್‌ಗಳು ಸೇರಿದಂತೆ ಹಲವು ವಸ್ತುಗಳನ್ನು ತಯಾರಿಸಲಾಗುತ್ತದೆ. ಸೆಣಬು ತನ್ನ ಪರಿಸರ ಸ್ನೇಹಿ ಗುಣಗಳಿಗೆ ಹೆಸರುವಾಸಿಯಾಗಿದೆ. ಏಕೆಂದರೆ ಈ ವಸ್ತುವು ಸಂಪೂರ್ಣವಾಗಿ ಜೈವಿಕ ವಿಘಟನೀಯವಾಗಿದೆ. ಜೊತೆಗೆ ಸಸ್ಯವು ತನ್ನ ಬೆಳವಣಿಗೆಯ ಸಮಯದಲ್ಲಿ ಹಸಿರುಮನೆ ಅನಿಲಗಳನ್ನು ಹೀರಿಕೊಳ್ಳುತ್ತದೆ. ಅಧ್ಯಯನದ ಪ್ರಕಾರ ಸೆಣಬಿನಲ್ಲಿ ಕಾರ್ಬನ್ ಡೈ ಆಕ್ಸೈಡ್ ಹೀರಿಕೊಳ್ಳುವ ದರವು ಮರಗಳಿಗಿಂತ ಹಲವಾರು ಪಟ್ಟು ಹೆಚ್ಚಿದೆ ಎಂದು ಹೇಳುತ್ತದೆ. ಇದನ್ನು ಕಡಿಮೆ ನೀರಿನಲ್ಲಿಯೂ ಬೆಳೆಯಬಹುದು.

ಪಾಲಿಪ್ರೊಪಿಲೀನ್

ಪಾಲಿಪ್ರೊಪಿಲೀನ್ ಅಗ್ಗದ ಮತ್ತು ಬಾಳಿಕೆ ಬರುವ ಪ್ಲಾಸ್ಟಿಕ್ ವಸ್ತುವಾಗಿದೆ. ಇದು ಪ್ಲಾಸ್ಟಿಕ್‌ಗಿಂತ ಹಾನಿ ಕಡಿಮೆ ಉಂಟು ಮಾಡುತ್ತದೆ. ಪಾಲಿಥಿಲೀನ್ ಚೀಲಗಳು ವಿಘಟನೆಯಾಗಲು 1,000 ವರ್ಷ ತೆಗೆದುಕೊಂಡರೆ, ಪಾಲಿಪ್ರೊಪಿಲೀನ್ 20 ರಿಂದ 30 ವರ್ಷ ತೆಗೆದುಕೊಳ್ಳುತ್ತವೆ. ಇದನ್ನು ಸಂಪೂರ್ಣವಾಗಿ ಮರುಬಳಕೆ ಮಾಡಬಹುದಾಗಿದೆ. ಮರುಬಳಕೆ ಪ್ರಕ್ರಿಯೆಯ ಸಮಯದಲ್ಲಿ ಪರಿಸರಕ್ಕೆ ಹಾನಿಕಾರಕ ರಾಸಾಯನಿಕಗಳನ್ನು ಬಿಡುಗಡೆ ಮಾಡುವುದಿಲ್ಲ. ಪಾಲಿಪ್ರೊಪಿಲೀನ್ ಚೀಲಗಳಿಂದ ಪರಿಸರದ ಮೇಲೆ ಹಾನಿಯನ್ನು ತಟಸ್ಥಗೊಳಿಸಲು 45 ಬಾರಿ ಬಳಸಬೇಕಾಗುತ್ತದೆ .

ನೈಲಾನ್

ನೈಲಾನ್ ಸಂಶ್ಲೇಷಿತ ಪ್ಲಾಸ್ಟಿಕ್ ವಸ್ತುವಾಗಿದ್ದು, ಇದನ್ನು ಕಚ್ಚಾ ತೈಲದಿಂದ ಪಡೆಯಲಾಗುತ್ತದೆ. ಬಟ್ಟೆಗಳಲ್ಲಿ ರೇಷ್ಮೆಗೆ ಬದಲಿಯಾಗಿ ಬಳಸಲಾಗುತ್ತದೆ. ನೈಲಾನ್ ಮರುಬಳಕೆ ಮಾಡಬಹುದಾದ ಚೀಲಗಳಂತೆ ಹೆಚ್ಚು ಬಾಳಿಕೆ ಬರುತ್ತದೆ. ಇದು ನೀರು ನಿರೋಧಕವಾಗಿದೆ. ನೈಲಾನ್ ಜೈವಿಕ ವಿಘಟನೀಯವಲ್ಲ. ಈ ವಸ್ತುವು ಭೂಮಿಯಲ್ಲಿ ವಿಘಟನೆಯಾಗಲು 30 ರಿಂದ 40 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ನೈಲಾನ್ ಉತ್ಪಾದನೆಯ ಸಮಯದಲ್ಲಿ ಬಿಡುಗಡೆಯಾಗುವ ಹಸಿರುಮನೆ ಅನಿಲಗಳು ಇಂಗಾಲದ ಡೈಆಕ್ಸೈಡ್‌ಗಿಂತ 300 ಪಟ್ಟು ಹೆಚ್ಚಿರುತ್ತದೆ.

ಪಾಲಿಯೆಸ್ಟರ್

ಪಾಲಿಯೆಸ್ಟರ್ ಎಂಬುದು ಪೆಟ್ರೋಲಿಯಂನಿಂದ ಪಡೆದ ಮತ್ತೊಂದು ಸಂಶ್ಲೇಷಿತ ಬಟ್ಟೆಯಾಗಿದೆ. ಇದರ ತಯಾರಿಕೆಯಲ್ಲಿ 89 ಗ್ರಾಂ ಹಸಿರುಮನೆ ಅನಿಲ ಬಿಡುಗಡೆಯಾಗುತ್ತದೆ. ಆದಾಗ್ಯೂ, ಪ್ಲಾಸ್ಟಿಕ್‌ನ ಒಂದು ರೂಪವಾಗಿರುವ ಪಾಲಿಯೆಸ್ಟರ್ ಚೀಲಗಳು ಉತ್ಪಾದನೆ ಮತ್ತು ವಿಲೇವಾರಿ ಎರಡರಲ್ಲೂ ಪರಿಸರಕ್ಕೆ ಮಾಲಿನ್ಯಕಾರಕವಾಗಿಯೇ ಆಗಿವೆ.

ಕಾಂಪೋಸ್ಟೇಬಲ್ ಚೀಲಗಳು

ಕಾಂಪೋಸ್ಟೇಬಲ್ ಚೀಲಗಳು ಸಸ್ಯ-ಆಧಾರಿತ ನೈಸರ್ಗಿಕ ವಸ್ತುಗಳಿಂದ ತಯಾರಿಸಲ್ಪಟ್ಟ ಪರಿಸರ ಸ್ನೇಹಿ ಚೀಲಗಳಾಗಿವೆ. ಇವು ಪ್ಲಾಸ್ಟಿಕ್ ಮುಕ್ತವಾಗಿದ್ದು, ಸೂಕ್ಷ್ಮಜೀವಿಗಳ ಮೂಲಕ 60 ರಿಂದ 180 ದಿನಗಳಲ್ಲಿ ಮಣ್ಣಿನಲ್ಲಿ ಸಂಪೂರ್ಣವಾಗಿ ಕರಗಿ ಗೊಬ್ಬರವಾಗಿ ಪರಿವರ್ತನೆಗೊಳ್ಳುತ್ತವೆ.

ಆಧಾರ: ಗ್ರೀನ್ ಬ್ಯುಸಿನೆಸ್ ಬ್ಯೂರೋ ಸಂಸ್ಥೆ

Dailyhunt
Disclaimer: This content has not been generated, created or edited by Dailyhunt. Publisher: Prajavani