Dailyhunt Logo
  • Light mode
    Follow system
    Dark mode
    • Play Story
    • App Story
ಆಳ- ಅಗಲ| ಸರ್ಕಾರದ 'ಸಿಂಧುತ್ವ'ದ ಮುದ್ರೆ ಅಸಿಂಧು ಎಂದ 'ಸುಪ್ರೀಂ'

ಆಳ- ಅಗಲ| ಸರ್ಕಾರದ 'ಸಿಂಧುತ್ವ'ದ ಮುದ್ರೆ ಅಸಿಂಧು ಎಂದ 'ಸುಪ್ರೀಂ'

2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ 362 ಹುದ್ದೆಗಳ ಭರ್ತಿಗೆ ಕೆಪಿಎಸ್‌ಸಿ ನಡೆಸಿದ್ದ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ ಅಭ್ಯರ್ಥಿಗಳ ನೇಮಕಾತಿಗೆ ಸಿಂಧುತ್ವದ ಮುದ್ರೆ ಒತ್ತಲು ರಾಜ್ಯ ಸರ್ಕಾರ ಜಾರಿಗೆ ತಂದಿದ್ದ 'ಕರ್ನಾಟಕ ನಾಗರಿಕ ಸೇವೆಗಳ (2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರ್‌ಗಳ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ಕಾಯ್ದೆ-2022' ಅನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದೆ.

ಇದರಿಂದಾಗಿ ಅಕ್ರಮವನ್ನು ಸಕ್ರಮಗೊಳಿಸಿದ್ದ ಸರ್ಕಾರದ ಕ್ರಮವು ವಿಫಲಗೊಂಡಿದೆ.

ಅಕ್ರಮ, ಭ್ರಷ್ಟಾಚಾರದ ಆರೋಪಗಳ ಸುಳಿಗೆ ಸಿಲುಕಿ, 'ತಾಳಿ ಭಾಗ್ಯ'ದ ಅಪವಾದ ಹೊತ್ತು ತನಿಖೆ, ವಿಚಾರಣೆಗೆ ಒಳಗಾಗಿ, ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ ಅತಂತ್ರ ಸ್ಥಿತಿಯಲ್ಲಿದ್ದ ಈ ಆಯ್ಕೆ ಪಟ್ಟಿಯನ್ನು 'ಸಕ್ರಮ'ಗೊಳಿಸಲು ಸರ್ಕಾರ ಈ ಕಾಯ್ದೆಯನ್ನು ರೂಪಿಸಿತ್ತು. ಕೋರ್ಟ್‌ ತೀರ್ಪಿನ ಅನ್ವಯ, 2011ನೇ ಸಾಲಿನ ನೇಮಕಾತಿ ಅಧಿಸೂಚನೆ ಹಿಂಪಡೆದಿರುವ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂಬ ತಾಂತ್ರಿಕ ಕಾರಣಕ್ಕೆ ಎಲ್ಲ ಅಭ್ಯರ್ಥಿಗಳ ನೇಮಕಕ್ಕೆ ಈ ಕಾಯ್ದೆ ಮರುಜೀವ ನೀಡಿತ್ತು. ವಿಪರ್ಯಾಸವೆಂದರೆ, ಈ ಕಾಯ್ದೆಗೆ ಪೂರ್ವಭಾವಿಯಾಗಿ ರೂಪಿಸಿದ್ದ ಮಸೂದೆಯು ವಿಧಾನ ಮಂಡಲದ ಉಭಯದ ಸದನಗಳಲ್ಲಿ ಯಾವುದೇ ಚರ್ಚೆ ಇಲ್ಲದೆ ಅಂಗೀಕಾರಗೊಂಡಿತ್ತು.

13 ವರ್ಷಗಳ ಕಾನೂನು ಹೋರಾಟ: ಗೆಜೆಟೆಡ್ ಪ್ರೊಬೇಷನರಿ 362 ಹುದ್ದೆಗಳನ್ನು ಬಿಕರಿಗಿಟ್ಟು ಅಕ್ರಮ ನಡೆಸಲಾಗಿದೆ ಎಂದು ಆರೋಪಿಸಿ ಅಭ್ಯರ್ಥಿ ಡಾ. ಮೈತ್ರಿ ಎಚ್‌ಪಿಎಸ್‌ ಆರಂಭಿಸಿದ್ದ ಹೋರಾಟ, ಕೆಪಿಎಸ್‌ಸಿ ಒಳಗಿನ ಹುಳುಕುಗಳನ್ನು ಬೀದಿಗೆ ತಂದಿತ್ತು. ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಅಡ್ವೊಕೇಟ್‌ ಜನರಲ್‌ಗೆ (ಎ.ಜಿ) ಮೈತ್ರಿ ಪತ್ರ ಬರೆದಿದ್ದರು. ಎ.ಜಿ ಅಭಿಪ್ರಾಯದ ಮೇರೆಗೆ ವಿಧಾನಸೌಧ ಪೊಲೀಸ್‌ ಠಾಣೆಗೆ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಯು (ಡಿಪಿಎಆರ್‌) ದೂರು ನೀಡಿತ್ತು. ಬಳಿಕ ದೂರಿನ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿತ್ತು. ಇಡೀ ಪ್ರಕರಣದ ಸಮಗ್ರ ತನಿಖೆ ನಡೆಸಿದ್ದ ಸಿಐಡಿ, ನೇಮಕಾತಿಯಲ್ಲಿ ಭಾರಿ ಪ್ರಮಾಣದ ಭ್ರಷ್ಟಚಾರ ನಡೆದಿದೆ ಎಂದು ಸಾಬೀತುಪಡಿಸುವ ಸಾಕ್ಷ್ಯಗಳ ಸಹಿತ 10,500ಕ್ಕೂ ಹೆಚ್ಚು ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ, ಈ ಸಾಲಿನ ನೇಮಕಾತಿ ಅಧಿಸೂಚನೆಯನ್ನೇ ರದ್ದುಪಡಿಸಿತ್ತು.

ಆಯ್ಕೆಯಾಗಿದ್ದ ಕೆಲವು ಅಭ್ಯರ್ಥಿಗಳು ಸರ್ಕಾರದ ಈ ನಡೆಯನ್ನು ಪ್ರಶ್ನಿಸಿ ಕರ್ನಾಟಕ ಆಡಳಿತ ನ್ಯಾಯಮಂಡಳಿಯ (ಕೆಎಟಿ) ಮೊರೆ ಹೋಗಿದ್ದರು. ಅಧಿಸೂಚನೆ ರದ್ದುಗೊಳಿಸಿದ್ದ ಸರ್ಕಾರದ ಆದೇಶವನ್ನು ವಜಾಗೊಳಿಸಿದ್ದ ಕೆಎಟಿ, ಆಯ್ಕೆ ಆದವರಿಗೆ ನೇಮಕಾತಿ ಆದೇಶ ನೀಡುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಅದರಂತೆ, ನೇಮಕಾತಿ ಆದೇಶ ನೀಡಲು ಸರ್ಕಾರ ನಿರ್ಧರಿಸಿತ್ತು. ಇದನ್ನು ಪ್ರಶ್ನಿಸಿ ಹುದ್ದೆ ವಂಚಿತರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ನೇಮಕಾತಿ ಅಧಿಸೂಚನೆಯನ್ನೇ ರದ್ದುಪಡಿಸಿತ್ತು. ಅಲ್ಲದೆ, ಹೊಸದಾಗಿ ನೇಮಕ ಪ್ರಕ್ರಿಯೆ ನಡೆಸಲು ಸೂಚಿಸಿತ್ತು. ಹೈಕೋರ್ಟ್‌ ನೀಡಿದ್ದ ತೀರ್ಪನ್ನೇ ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿತ್ತು. ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳನ್ನೂ ಸುಪ್ರೀಂ ಕೋರ್ಟ್‌ ವಜಾ ಮಾಡಿತ್ತು.

ಆದರೆ, ಆಯ್ಕೆ ಪಟ್ಟಿ ರದ್ದುಗೊಂಡಿದ್ದರಿಂದ ಆ ಸಾಲಿನಲ್ಲಿ ಆಯ್ಕೆಯಾದವರಿಗೆ ಅನ್ಯಾಯವಾಗಿದೆ, ನ್ಯಾಯ ಒದಗಿಸಲೇಬೇಕೆಂಬ ಬೇಡಿಕೆ ವಿಧಾನಮಂಡಲದ ಒಳಗೆ, ಹೊರಗೆ ವ್ಯಕ್ತವಾಗಿತ್ತು. ಬೆನ್ನಿಗೆ ನಿಂತ ವಿವಿಧ ಸಮುದಾಯಗಳ ಸ್ವಾಮೀಜಿಗಳು, ರಾಜಕೀಯ ನಾಯಕರು ಪಕ್ಷಾತೀತವಾಗಿ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. 'ನೇಮಕಾತಿ ಅಧಿಸೂಚನೆಯನ್ನು ಸರ್ಕಾರ ಹಿಂಪಡೆದಿದ್ದ ಪ್ರಕರಣದಲ್ಲಿ ಸಂವಿಧಾನದ ವಿಧಿ 323 (2) ಉಲ್ಲಂಘನೆಯಾಗಿದ್ದು, ಹಕ್ಕುಬಾಧ್ಯತೆ ಪ್ರಶ್ನೆಗಳು ಉದ್ಭವಿಸಿವೆ. ಶಾಸಕರ ಹಕ್ಕುಚ್ಯುತಿ ಉಂಟಾಗಿದೆ' ಎಂದು ವಿಧಾನ ಪರಿಷತ್‌ ಕಾಂಗ್ರೆಸ್ ಸದಸ್ಯರಾಗಿದ್ದ ಪಿ.ಆರ್.ರಮೇಶ್ ಸೇರಿ ಒಂಬತ್ತು ಸದಸ್ಯರು ವಿಧಾನ ಪರಿಷತ್‌ ಕಾರ್ಯದರ್ಶಿಗೆ ಸೂಚನಾ ಪತ್ರ ನೀಡಿದ್ದರು. 'ಸಂವಿಧಾನದ ವಿಧಿ 323 (2) ಅನ್ನು ಪಾಲಿಸಲಾಗಿದೆ ಎಂದು ಅಡ್ವೊಕೇಟ್‌ ಜನರಲ್‌ ನೀಡಿದ್ದ ತಪ್ಪು ಹೇಳಿಕೆ ಆಧರಿಸಿ, ಈ ಸಾಲಿನ ಆಯ್ಕೆಯನ್ನು ರದ್ದುಪಡಿಸಿ ಹೈಕೋರ್ಟ್‌ ತೀರ್ಪು ನೀಡಿದೆ. ಇಲ್ಲಿ ಶಾಸಕಾಂಗದ ಸದಸ್ಯರ ಹಕ್ಕುಚ್ಯುತಿ ಆಗಿದೆ. ಅಲ್ಲದೆ, ಸಂವಿಧಾನಾತ್ಮಕ ಮತ್ತು ಶಾಸಕಾಂಗದ ನಿಂದನೆಯೂ ಆಗಿದೆ' ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.

ರಮೇಶ್ ಸೇರಿದಂತೆ ಹಲವು ನಾಯಕರ ಒತ್ತಾಯ ಹಾಗೂ ಅಭ್ಯರ್ಥಿಗಳ ನಿರಂತರ ಹೋರಾಟದ ಫಲವಾಗಿ, ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ (2022) ಕಾಯ್ದೆ ರೂಪಿಸಿ ಎಲ್ಲ 362 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲು ನಿರ್ಧರಿಸಿತ್ತು. ಅಷ್ಟೇ ಅಲ್ಲ, ಅಕ್ರಮ ನಡೆದಿದೆ ಎಂಬ ಕಾರಣಕ್ಕೆ ಸರ್ಕಾರವೇ ರದ್ದುಪಡಿಸಿದ್ದ ಅಧಿಸೂಚನೆಯಲ್ಲೇ 'ಕಳಂಕಿತ'ರೆಂದು ಗುರುತಿಸಿಕೊಂಡವರೂ ಸೇರಿ ಎಲ್ಲ ಅಭ್ಯರ್ಥಿಗಳಿಗೆ ಕಣ್ಣುಮುಚ್ಚಿಕೊಂಡು 'ವಿಶೇಷ ಪ್ರಕರಣ'ವೆಂದು ಪರಿಗಣಿಸಿ ಸರ್ಕಾರ ಹುದ್ದೆ ಭಾಗ್ಯ ಕರುಣಿಸಿತ್ತು.

ಅಧ್ಯಕ್ಷ- ಸದಸ್ಯರ ಕರಾಮತ್ತು: 2011ನೇ ಸಾಲಿನ ಆಯ್ಕೆ ಪ್ರಕ್ರಿಯೆಯಲ್ಲಿ ನಡೆದ ಭಾರಿ ಅವ್ಯವಹಾರಗಳಲ್ಲಿ ಅಂದಿನ ಕೆಪಿಎಸ್‌ಸಿ ಅಧ್ಯಕ್ಷ ಗೋನಾಳ ಭೀಮಪ್ಪ ಮತ್ತು ಒಂಬತ್ತು ಸದಸ್ಯರು ಭಾಗಿಯಾಗಿದ್ದಾರೆಂಬ ‌ಅಂಶಗಳು ಸಿಐಡಿ ತನಿಖಾ ವರದಿಯಲ್ಲಿದ್ದವು. ವಾಮ ಮಾರ್ಗಗಳ ಮೂಲಕ ಹುದ್ದೆ ಗಿಟ್ಟಿಸಲು ಯತ್ನಿಸಿದ್ದ 46 ಕಳಂಕಿತರನ್ನೂ ಸಿಐಡಿ ಪತ್ತೆ ಮಾಡಿತ್ತು. ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಸದಸ್ಯರನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988ರ ಕಲಂ 19ರಡಿ ಪ್ರಾಸಿಕ್ಯೂಷನ್‌ ನಡೆಸಲು ಸಂವಿಧಾನದ ವಿಧಿ 317 (1)ರ ಪ್ರಕಾರ ಅಗತ್ಯ ಕ್ರಮಕ್ಕಾಗಿ ರಾಜ್ಯಪಾಲರ ಅನುಮೋದನೆಯೊಂದಿಗೆ ರಾಷ್ಟ್ರಪತಿಯ ಮಂಜೂರಾತಿ ಪಡೆಯಲು ಸಿಐಡಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು. ಆದರೆ, ಆರೋಪಿತರು ನಿವೃತ್ತರಾಗಿದ್ದಾರೆ ಎಂಬ ಕಾರಣವನ್ನೇ ಮುಂದಿಟ್ಟುಕೊಂಡು ನ್ಯಾಯಾಲಯದಲ್ಲಿ ವಿಚಾರಣಾ ಪ್ರಕ್ರಿಯೆ ಆರಂಭಿಸಲು ಅನುಮತಿ ಕೋರುವ (ಪ್ರಾಸಿಕ್ಯೂಷನ್‌) ಕಡತವನ್ನು ರಾಷ್ಟ್ರಪತಿಯವರಿಗೆ ಕಳುಹಿಸುವ ಪ್ರಸ್ತಾವವನ್ನು ಸಚಿವ ಸಂಪುಟ ಸಭೆ ತಿರಸ್ಕರಿಸಿತ್ತು.

ಲಂಚದ ಬದಲು 'ತಾಳಿ ಭಾಗ್ಯ': ನೇಮಕಾತಿಯ ಸಂದರ್ಭದಲ್ಲಿ ಅರ್ಹ ಮತ್ತು ಪ್ರತಿಭಾವಂತ ಪುರುಷ ಅಭ್ಯರ್ಥಿಗಳಿಗೆ ಸಂದರ್ಶನದಲ್ಲಿ ಹೆಚ್ಚಿನ ಅಂಕಗಳನ್ನು ನೀಡಿ ಉಪ ವಿಭಾಗಾಧಿಕಾರಿ ಅಥವಾ ಡಿವೈಎಸ್‌ಪಿಯಂತಹ ಪ್ರಮುಖ ಹುದ್ದೆ ನೀಡಲು 'ತಾಳಿ ಭಾಗ್ಯ'ದ ಆಮಿಷ ಒಡ್ಡಲಾಗಿತ್ತು ಎನ್ನುವುದು ಸಿಐಡಿ ತನಿಖೆಯಲ್ಲಿ ಗೊತ್ತಾಗಿತ್ತು. ಮಧ್ಯವರ್ತಿಗಳು, ಕೆಪಿಎಸ್‌ಸಿ ಸದಸ್ಯರ ಸಂಬಂಧಿಕರು, ಅಭ್ಯರ್ಥಿಗಳಿಗೆ ಹಣದ ರೂಪದಲ್ಲಿ ಭಾರಿ ಮೊತ್ತದ ಲಂಚ ನೀಡುವ ಬದಲು, ತಮ್ಮ ಹೆಣ್ಣುಮಕ್ಕಳನ್ನು, ಶ್ರೀಮಂತ ಅಥವಾ ರಾಜಕೀಯ ಪ್ರಭಾವಿ ಕುಟುಂಬದ ಹುಡುಗಿಯರನ್ನು ಮದುವೆಯಾಗಬೇಕು ಎಂಬ ಷರತ್ತು ವಿಧಿಸುತ್ತಿದ್ದರು. ಈ ಮದುವೆಯ 'ಡೀಲ್'ಗೆ ಯಾರು ಒಪ್ಪಿಕೊಳ್ಳುತ್ತಿದ್ದರೊ ಅವರಿಗೆ ಸಂದರ್ಶನದಲ್ಲಿ ಗರಿಷ್ಠ ಅಂಕಗಳನ್ನು ನೀಡಿ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಸಿಗುವಂತೆ ಮಾಡಲಾಗಿತ್ತು ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಸಿಐಡಿ ವರದಿಯಲ್ಲಿ ಏನಿತ್ತು?

215 ಸಾಕ್ಷಿಗಳು, 700 ಮೊಬೈಲ್‌ಗಳು, 75 ಬ್ಯಾಂಕ್‌ ಶಾಖೆಗಳ ದಾಖಲೆಗಳು, ಕೆಪಿಎಸ್‌ಸಿಯಿಂದ 337 ಕಡತಗಳ ಜಪ್ತಿ, ಅಭ್ಯರ್ಥಿಗಳಿಂದ ಸಲ್ಲಿಕೆಯಾಗಿದ್ದ 160 ದೂರುಗಳ ಮೇಲೆ ಸಿಐಡಿ ಪೊಲೀಸರು ತನಿಖೆ ನಡೆಸಿದ್ದರು. ಸಿಐಡಿ ವರದಿಯ ಪ್ರಕಾರ,

* ಇಡೀ ಮುಖ್ಯ ಪರೀಕ್ಷೆ ಮೌಲ್ಯಮಾಪನವನ್ನು ತ್ವರಿತಗತಿಯಲ್ಲಿ ನಡೆಸಲಾಗಿದೆ. ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿ ವಿಷಯದ ಪ್ರಾಧ್ಯಾಪಕರು ಲಭ್ಯ ಇದ್ದರೂ ಗ್ರಾಮೀಣಾಭಿವೃದ್ಧಿ ಮತ್ತು ಕೋ-ಆಪರೇಟಿವ್‌ ವಿಷಯದ ಪತ್ರಿಕೆಗಳನ್ನು ಸಮಾಜಶಾಸ್ತ್ರ ಮತ್ತು ಅರ್ಥಶಾಸ್ತ್ರ ವಿಷಯದ ಪ್ರಾಧ್ಯಾಪಕರಿಂದ ಮೌಲ್ಯಮಾಪನ ಮಾಡಿಸಲಾಗಿದೆ

* ಕನ್ನಡ ಮಾಧ್ಯಮದ ಪ್ರಾಧ್ಯಾಪಕರು ಇಂಗ್ಲಿಷ್‌ ವಿಷಯದ ಪತ್ರಿಕೆಗಳನ್ನು, ಅದೇ ರೀತಿ ಇಂಗ್ಲಿಷ್‌ ವಿಷಯದವರು ಕನ್ನಡ ವಿಷಯ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದ್ದಾರೆ

* ಅಭ್ಯರ್ಥಿಗಳು, ಮೌಲ್ಯಮಾಪಕರು, ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಸದಸ್ಯರು, ಸಿಬ್ಬಂದಿ ಮಧ್ಯೆ ದೂರವಾಣಿ, ಎಸ್‌ಎಂಎಸ್‌ ಸಂವಾದ ನಡೆದಿದೆ

* ಅಂಕಗಳ ಮರು ಕೂಡಿಸುವ ಪ್ರಕ್ರಿಯೆಯನ್ನು (ರಿ ಟೋಟಲಿಂಗ್) ತರಾತುರಿಯಲ್ಲಿ ಮಾಡಲಾಗಿದೆ

* ಉತ್ತರಗಳನ್ನು ತಿದ್ದಿರುವುದು ಎಫ್‌ಎಸ್‌ಎಲ್‌ ವರದಿಯಲ್ಲಿ ಸಾಬೀತಾಗಿದೆ

* ವಿಶ್ವವಿದ್ಯಾಲಯಗಳು ನೀಡಿದ್ದ ಪಟ್ಟಿಯಲ್ಲಿ ಇಲ್ಲದ ಪ್ರಾಧ್ಯಾಪಕರು ಬಹುತೇಕ ವಿಷಯಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದ್ದಾರೆ

* ಪಟ್ಟಿಯಲ್ಲಿ13,663 ಉಪನ್ಯಾಸಕರಿದ್ದರೂ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಲು, ನಿವೃತ್ತ ಮತ್ತು ಪದವಿ ಕಾಲೇಜುಗಳ ಉಪನ್ಯಾಸಕರನ್ನು ಮೌಲ್ಯಮಾಪನಕ್ಕೆ ಬಳಸಿಕೊಳ್ಳಲಾಗಿದೆ

* ತಜ್ಞ ಮೌಲ್ಯಮಾಪಕರು ಮಾಡಿದ ಮೌಲ್ಯಮಾಪನಕ್ಕೂ ಸಿಐಡಿ ಮನವಿಯಂತೆ ವಿವಿಧ ವಿಶ್ವವಿದ್ಯಾಲಯಗಳ ಉಪನ್ಯಾಸಕರು ಮತ್ತು ಕೆಪಿಎಸ್‌ಸಿ ಪಟ್ಟಿಯಲ್ಲಿದ್ದ ಉಪನ್ಯಾಸಕರು ಮಾಡಿದ ಮೌಲ್ಯಮಾಪನ ಅಂಕಗಳ ಮಧ್ಯೆ ಭಾರಿ ಅಂತರವಿದೆ (ಶೇ 225ರಷ್ಟು)

* ಹಣ ನೀಡಿದವರಿಗೆ ಮುಖ್ಯ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಹೆಚ್ಚು ಅಂಕ ನೀಡಲಾಗಿದೆ

* ಸಿಸಿಟಿವಿ ಕ್ಯಾಮೆರಾದ ತುಣುಕುಗಳನ್ನು ನಾಶಪಡಿಸಲಾಗಿದೆ, ನಿಜವಾದ ಡಿವಿಡಿಗಳನ್ನು ಬದಲಿಸಿ ಆ ಜಾಗದಲ್ಲಿ ನಕಲಿ ಡಿವಿಡಿಗಳನ್ನು ಇಡಲಾಗಿದೆ

ಹಟ ಹಿಡಿದು ಎ.ಸಿ ಹುದ್ದೆಗೇರಿದ್ದ ದೂರುದಾರೆ

ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಇಡೀ ಪ್ರಕರಣ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ಕಾರಣರಾಗಿದ್ದ ಡಾ. ಮೈತ್ರಿ ಎಚ್‌ಪಿಎಸ್‌ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ (ಆರ್‌ಡಿಪಿಆರ್‌) ಕಾರ್ಯನಿರ್ವಾಹಕ ಅಧಿಕಾರಿ (ಗ್ರೂಪ್‌ 'ಎ') ಹುದ್ದೆಗೆ ಆಯ್ಕೆ ಆಗಿದ್ದರು. ಅಂದಿನ ಮುಖ್ಯಮಂತ್ರಿಗೆ (ಬಸವರಾಜ ಬೊಮ್ಮಾಯಿ) ಮನವಿ ಸಲ್ಲಿಸಿದ್ದ ಮೈತ್ರಿ, 'ಮುಖ್ಯ ಪರೀಕ್ಷೆಯಲ್ಲಿ 1,009 ಅಂಕ ಗಳಿಸಿದರೂ ಕೆಪಿಎಸ್‌ಸಿ ಸದಸ್ಯರು ದುರುದ್ದೇಶದಿಂದ ಮೌಖಿಕ ಸಂದರ್ಶನದಲ್ಲಿ 75 ಅಂಕ ನೀಡಿದ್ದರು. ನನ್ನದೇ ವರ್ಗಕ್ಕೆ (ಎಸ್‌ಟಿ- ಮಹಿಳೆ) ಸೇರಿದ ಮತ್ತೊಬ್ಬ ಮಹಿಳಾ ಅಭ್ಯರ್ಥಿ ಮುಖ್ಯ ಪರೀಕ್ಷೆಯಲ್ಲಿ 937.5 ಅಂಕ ಗಳಿಸಿದ್ದು, ಅವರಿಗೆ ಮೌಖಿಕ ಸಂದರ್ಶನದಲ್ಲಿ 150 ಅಂಕ ನೀಡಲಾಗಿದೆ. ಇದರಿಂದಾಗಿ ನಾನು ಎ.ಸಿ ಹುದ್ದೆ ವಂಚಿತಳಾಗಿದ್ದೇನೆ. ಮುಖ್ಯ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದಿರುವುದರಿಂದ ನನಗೆ ಉಪ ವಿಭಾಗಾಧಿಕಾರಿ (ಎ.ಸಿ) ಹುದ್ದೆ ನೀಡಬೇಕು' ಎಂದು ಕೋರಿದ್ದರು.

'ಈ ಮನವಿ ಪರಿಗಣಿಸಲು ಸಾಧ್ಯವೇ ಇಲ್ಲ' ಎಂದು ಸಿಬ್ಬಂದಿ ಮತ್ತು ಸುಧಾರಣಾ ಇಲಾಖೆ ಮತ್ತು ಅಂದಿನ ಮುಖ್ಯ ಕಾರ್ಯದರ್ಶಿ ಅಭಿಪ್ರಾಯ ನೀಡಿದ್ದರೂ, ಮೈತ್ರಿ ಅವರಿಗೆ ಸರ್ಕಾರ ಒಂದು ಸೂಪರ್ ನ್ಯೂಮರರಿ (ಸಂಖ್ಯಾತಿರಿಕ್ತ) ಹುದ್ದೆ ಸೃಜಿಸಿ ನೇಮಕಾತಿ ಆದೇಶ ನೀಡಿತ್ತು.

ಆಯ್ಕೆ ಪಟ್ಟಿ ಕಾನೂನುಬಾಹಿರ ಎಂದಿದ್ದ ಹೈಕೋರ್ಟ್‌

ನೇಮಕಾತಿ ಅಧಿಸೂಚನೆಯನ್ನು ರದ್ದುಪಡಿಸಿದ್ದ ಹೈಕೋರ್ಟ್‌, 'ಕೆಪಿಎಸ್‌ಸಿ ಆಯ್ಕೆಯಲ್ಲಿ ಭಾರಿ ಅಕ್ರಮ ನಡೆದಿರುವುದು ಸಿಐಡಿ ವರದಿಯಿಂದ ವೇದ್ಯವಾಗಿದೆ. ಅಂತಿಮ ಆಯ್ಕೆ ಪಟ್ಟಿ ಕಾನೂನು ಬಾಹಿರ' ಎಂದು ಅಭಿಪ್ರಾಯಪಟ್ಟಿತ್ತು.

'ಮರು ಎಣಿಕೆಯಲ್ಲಿ ಅಂಕಗಳನ್ನು ತಿದ್ದಿರುವುದು ಸ್ಪಷ್ಟವಾಗಿದೆ. ಸಂದರ್ಶನದಲ್ಲಿ ಕೆಪಿಎಸ್‌ಸಿ ಸದಸ್ಯರು ನಿರ್ದಿಷ್ಟ ಅಭ್ಯರ್ಥಿಗೆ ಒಂದೇ ರೀತಿಯಲ್ಲಿ ಅಂಕಗಳನ್ನು ನೀಡಿದ್ದಾರೆ. ಅಂದರೆ, 566 ಅಭ್ಯರ್ಥಿಗಳಿಗೆ ಎಲ್ಲ ಸದಸ್ಯರೂ ಒಂದೇ ತೆರನಾಗಿ ಅಂಕ ನೀಡಿದ್ದಾರೆ. ಇದರಿಂದ ಎಲ್ಲ ಸದಸ್ಯರೂ ಅಂಕಗಳನ್ನು ಏಕರೀತಿ ನೀಡುವುದಕ್ಕೆ ಪೂರ್ವ ನಿರ್ಧಾರ ಮಾಡಿದ್ದರು ಎಂಬುದು ತಿಳಿದುಬರುತ್ತದೆ. ಕೆಪಿಎಸ್‌ಸಿ ಅಧ್ಯಕ್ಷರಿಗೆ ಖಾಸಗಿ ಕಾರ್ಯದರ್ಶಿಯಾಗಿದ್ದ ಗೋಪಾಲಕೃಷ್ಣ ಪ್ರತಿ ದಿನ ಸಂದರ್ಶನ ನಡೆದ ನಂತರ ಅಧ್ಯಕ್ಷರು ಹಾಗೂ ಸದಸ್ಯರ ಜೊತೆ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ತೋರಿದ ಸಾಧನೆಯ ಬಗ್ಗೆ ಚರ್ಚಿಸುತ್ತಿದ್ದರು' ಎಂಬ ಅಂಶ ಹೈಕೋರ್ಟ್‌ ತೀರ್ಪಿನಲ್ಲಿ ಉಲ್ಲೇಖವಾಗಿದೆ.

ಆಯ್ಕೆ ಪ್ರಕ್ರಿಯೆ ರದ್ದತಿ ಸರಿ ಎಂದಿದ್ದ ಸುಪ್ರೀಂ ಕೋರ್ಟ್‌

ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಕೆಲವು ಅಭ್ಯರ್ಥಿಗಳು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌, 'ಹೈಕೋರ್ಟ್‌ ನೀಡಿದ ಆದೇಶದಂತೆ ಅಕ್ರಮವಾಗಿ ನೇಮಕಾತಿ ಹೊಂದಿದ, ಅರ್ಹರಲ್ಲದ, ಪ್ರಾಮಾಣಿಕತೆ ಇಲ್ಲದ ವ್ಯಕ್ತಿಗಳಿಗೆ ಸರ್ಕಾರದಲ್ಲಿ ನೇಮಕಾತಿ ಕೊಡುವುದು ಕಾನೂನು ಪ್ರಕಾರ ಸಮ್ಮತವಲ್ಲ. ಸಂವಿಧಾನದ ಪ್ರಕಾರ, ನ್ಯಾಯಸಮ್ಮತ ಆಯ್ಕೆಯೇ ಮಾನದಂಡ ಆಗಬೇಕು' ಎಂದಿದೆ. ಆಯ್ಕೆ ಪಟ್ಟಿಯಲ್ಲಿ ಹೆಸರು ಇದ್ದ ಮಾತ್ರಕ್ಕೆ ನೇಮಕಾತಿ ನೀಡಿ ಎಂದು ಕೇಳುವ ಹಕ್ಕು ಇಲ್ಲ. ಆದ್ದರಿಂದ, ನೇಮಕಾತಿ ಆದೇಶ ನೀಡಿ ಎಂದು ಕೆಎಟಿ ನೀಡಿದ ಆದೇಶ ದೋಷಪೂರಿತವಾಗಿದೆ ಹಾಗೂ ಸರ್ಕಾರದ ನಿಲುವಿಗೆ ವಿರುದ್ದವಾಗಿದೆ. ಹೈಕೋರ್ಟ್‌ ಬಹಳಷ್ಟು ದಾಖಲೆಗಳನ್ನು ಪರಿಶೀಲಿಸಿದೆ. ಅಭ್ಯರ್ಥಿಗಳ ಹಾಗೂ ಸಂದರ್ಶಕರ ದೂರವಾಣಿ ಕರೆಗಳನ್ನು ಕಲೆ ಹಾಕಿದೆ. 566 ಅಭ್ಯರ್ಥಿಗಳಿಗೆ ಸಂದರ್ಶನ ಮಾಡಿದ ಎಲ್ಲ ಸದಸ್ಯರೂ ಒಂದೇ ರೀತಿ ಅಂಕ ನೀಡಿರುವುದು ಪೂರ್ವನಿಯೋಜಿತ ಕೃತ್ಯವಾಗಿದೆ. ಕೆಪಿಎಸ್‌ಸಿ ಡಿಜಿಟಲ್ ವಿಡಿಯೊ ದಾಖಲೆಗಳನ್ನು ಬದಲಾಯಿಸಿರುವುದು ಸಾಕ್ಷಿ ನಾಶಪಡಿಸುವುದಕ್ಕಾಗಿಯೇ ಎಂದು ಆದೇಶಿಸಿರುವುದು ಸರಿಯಾಗಿದೆ. ಅಲ್ಲದೇ ಒಂದು ಆಯ್ಕೆ ಪ್ರಕ್ರಿಯೆಯಲ್ಲಿ ಸಂಪೂರ್ಣ ದೋಷವಿದ್ದಾಗ ಕೆಲವರು ಒಳ್ಳೆಯವರು, ಕೆಲವರು ಕೆಟ್ಟವರು ಎಂದು ವಿಂಗಡಿಸಲು ಸಾಧ್ಯವಾಗದು. ಆದ್ದರಿಂದ, ಈ ಪ್ರಕರಣದಲ್ಲಿ ಸಂಪೂರ್ಣ ಆಯ್ಕೆ ಪ್ರಕ್ರಿಯೆಯನ್ನೇ ರದ್ದು ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರ ಅತ್ಯಂತ ಸರಿಯಾದುದು ಹಾಗೂ ಯೋಗ್ಯವಾದುದು. ಇದರಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ' ಎಂದೂ ಹೇಳಿತ್ತು .

Dailyhunt
Disclaimer: This content has not been generated, created or edited by Dailyhunt. Publisher: Prajavani