ಇದು ಮಾವಿನ ಹಂಗಾಮು. ಭಾರತದಲ್ಲಿ ಜಗತ್ತಿನಲ್ಲಿಯೇ ಅತಿ ಹೆಚ್ಚು (ವಾರ್ಷಿಕ 2.8 ಕೋಟಿ ಟನ್) ಮಾವು ಬೆಳೆಯಲಾಗುತ್ತಿದ್ದು, ಹಲವು ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಕಳೆದ ತಿಂಗಳು ಭಾರತದ ಮಾವನ್ನು ಜಪಾನ್ ತಿರಸ್ಕರಿಸಿತ್ತು. ಮಾವಿನಲ್ಲಿ ವಿಷಕಾರಿ ಅಂಶಗಳು ಪತ್ತೆಯಾಗಿದ್ದು, ಅವು ತಿನ್ನಲು ಯೋಗ್ಯವಲ್ಲ ಎಂದು ಜಪಾನ್ ಹೇಳಿದೆ. ಇದೇ ವೇಳೆ, ಚೀನಾದಿಂದಲೂ ಇಂಥದ್ದೇ ಸುದ್ದಿ ಬಂದಿದೆ. ಮೆಥಾಮೈಡೋಪಾಸ್ ಅಂಶವು ಮಿತಿಮೀರಿದ ಪ್ರಮಾಣದಲ್ಲಿದೆ ಎಂದು ಭಾರತದ ಕೆಂಪು ಮೆಣಸಿನಕಾಯಿಯನ್ನು ಚೀನಾ ತಿರಿಸ್ಕರಿಸಿದೆ. ಚೀನಾ, ಭಾರತದ ಕೆಂಪು ಮೆಣಸಿನಕಾಯಿಯ ದೊಡ್ಡ ಆಮದುದಾರ ದೇಶವಾಗಿದೆ. ನೇಪಾಳವೂ ಭಾರತದ ಮಾವನ್ನು ಇದೇ ಕಾರಣಕ್ಕೆ ತಿರಸ್ಕರಿಸಿದೆ ಎಂದು ವರದಿಯಾಗಿದೆ (ಆದರೆ, ಕೇಂದ್ರ ಸರ್ಕಾರ ನೇಪಾಳಕ್ಕೆ ಸಂಬಂಧಿಸಿದ ಸುದ್ದಿಯನ್ನು ತಳ್ಳಿಹಾಕಿದೆ).
ಈ ವರದಿಗಳು ಭಾರತದ ಹಣ್ಣು, ತರಕಾರಿ, ಆಹಾರ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಕಳವಳ ಉಂಟುಮಾಡಿವೆ. 2024ರ ಮೇ 1 ಮತ್ತು 2026ರ ಮೇ 30ರ ನಡುವೆ ಭಾರತದ 450 ಉತ್ಪನ್ನಗಳನ್ನು ಐರೋಪ್ಯ ಆಹಾರ ಸುರಕ್ಷತೆ ಸಂಸ್ಥೆಯು ತಿರಸ್ಕರಿಸಿದೆ. ಈ ಪೈಕಿ 365 ಉತ್ಪನ್ನಗಳು ಕೀಟನಾಶಕದ ಮತ್ತು ಭಾರಲೋಹದ ಅಂಶ ಹೊಂದಿದ್ದರೆ, 50 ಉತ್ಪನ್ನಗಳು ಸಾಲ್‌ಮೊನೆಲ್ಲಾ, ಅಫ್ಲಟಾಕ್ಸಿನ್ ಬಿ1 ಮತ್ತು ಅಚ್ರಟಾಕ್ಸಿನ್‌ನಂಥ ರೋಗಕಾರಕಗಳನ್ನು ಒಳಗೊಂಡಿದೆ. ಗಿಡಮೂಲಿಕೆ, ಸಂಬಾರ ಪದಾರ್ಥಗಳು, ಹಣ್ಣುಗಳು, ಒಣಹಣ್ಣು, ಕಾಳು, ಬೀಜಗಳು, ಧಾನ್ಯಗಳು, ಬೇಕರಿ ಉತ್ಪನ್ನಗಳು ಮತ್ತು ಇತರೆ ಆಹಾರ ಉತ್ಪನ್ನಗಳು ಈ ಪಟ್ಟಿಯಲ್ಲಿವೆ. ಕ್ಲೋರೊಪೈರಿಫೋಸ್, ಎಥಿಲೀನ್ ಆಕ್ಸೈಡ್, ಕ್ಯಾಡ್ಮಿಯಂ, ಸೀಸ, ಮತ್ತು ಪಾದರಸದಂಥ ಅಪಾಯಕಾರಿ ವಸ್ತುಗಳ ಅಂಶಗಳು ಆಹಾರ ಉತ್ಪನ್ನಗಳಲ್ಲಿ ಪತ್ತೆಯಾಗಿವೆ.
ಉತ್ಪನ್ನಗಳಿಗೆ ವಿಷ ಸೇರುತ್ತಿರುವುದು ಹೇಗೆ?: ಹಣ್ಣು, ತರಕಾರಿ, ಆಹಾರ ಉತ್ಪನ್ನಗಳಲ್ಲಿ ವಿಷಕಾರಿ ಅಂಶ ಸೇರಲು ಹಲವು ಕಾರಣಗಳಿವೆ. ಹಲವು ಹಂತಗಳಲ್ಲಿ ಇದು ನಡೆಯುತ್ತಿದೆ. ಉತ್ಪಾದನೆಗೆ ಬೀಜಗಳನ್ನು ಸಿದ್ಧಪಡಿಸುವ ಹಂತದಿಂದಲೇ ಇದು ಆರಂಭವಾಗುತ್ತದೆ. ಬೀಜಗಳು ಕೆಡದಂತೆ ಸಂಗ್ರಹಿಸಿಡಲು ಕಂಪನಿಗಳು ರಾಸಾಯನಿಕಗಳನ್ನು ಬಳಸುತ್ತವೆ. ಇದೇ ರೀತಿ, ಹಸಿರು ಕ್ರಾಂತಿಯ ನಂತರ ದೇಶದಲ್ಲಿ ಉತ್ತಮ ಇಳುವರಿ ಪಡೆಯುವ ಸಲುವಾಗಿ ರೈತರು ಮಿತಿಮೀರಿ ಕೀಟನಾಶಕ, ಕಳೆನಾಶಕಗಳನ್ನು ಬಳಸುತ್ತಿದ್ದಾರೆ. ಹಣ್ಣು, ತರಕಾರಿ ಕೊಯ್ಲಾದ ನಂತರ ದಾಸ್ತಾನು ಹಂತದಲ್ಲಿಯೂ ಕೆಡದಂತೆ ರಾಸಾಯನಿಕಗಳನ್ನು ಸಿಂಪಡಿಸಲಾಗುತ್ತದೆ. ನಂತರ ಕಾಯಿಗಳು ಬೇಗ ಹಣ್ಣಾಗಲೂ ರಾಸಾಯನಿಕಗಳನ್ನು ಉಪಯೋಗಿಸಲಾಗುತ್ತಿದೆ. ವಿದೇಶಗಳಲ್ಲಿ ನಿರ್ಬಂಧಿಸಲಾದ ಹಲವು ಅಪಾಯಕಾರಿ ಕೀಟನಾಶಕಗಳನ್ನು ಭಾರತದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಮಾರಲಾಗುತ್ತಿದ್ದು, ಅವುಗಳನ್ನು ರೈತರು, ವ್ಯಾಪಾರಿಗಳು ಬಳಸುತ್ತಿದ್ದಾರೆ. ಈ ಎಲ್ಲ ಹಂತಗಳಲ್ಲಿ ಮಿತಿಮೀರಿದ, ವಿವೇಚನಾರಹಿತ ರೀತಿಯಲ್ಲಿ ಅಪಾಯಕಾರಿ ರಾಸಾಯನಿಕಗಳನ್ನು ಬಳಸುತ್ತಿದ್ದು, ಅವು ಬಳಕೆದಾರರ ದೇಹ ಸೇರುತ್ತಿವೆ; ಕ್ಯಾನ್ಸರ್‌ನಂಥ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತಿವೆ.
ಭಾರತದಲ್ಲಿ ಮಾವು, ಸೇಬು, ದ್ರಾಕ್ಷಿ, ದಾಳಿಂಬೆ, ಬಾಳೆಹಣ್ಣು ಮುಂತಾದ ಹಣ್ಣುಗಳು, ಟೊಮೆಟೊ, ಕ್ಯಾರೆಟ್, ಬೀನ್ಸ್, ಕೋಸು ಮುಂತಾದ ತರಕಾರಿಗಳು; ಕೊನೆಗೆ ಟೀ ಪುಡಿ, ಮಸಾಲೆ ಪುಡಿಯಂಥ ಪದಾರ್ಥಗಳಲ್ಲೂ ಅಪಾಯಕಾರಿ ರಾಸಾಯನಿಕಗಳ ಅಂಶಗಳಿರುವುದು ಪತ್ತೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಪದೇ ಪದೇ ಭಾರತದ ಆಹಾರ ಉತ್ಪನ್ನಗಳ ಗುಣಮಟ್ಟದೆ ಬಗ್ಗೆ ವ್ಯತಿರಿಕ್ತ ವರದಿಗಳು ಬರುತ್ತಲೇ ಇವೆ.
ಮಿತಿಮೀರಿದ ರಾಸಾಯನಿಕಗಳು ಪತ್ತೆ:
ಭಾರತದಲ್ಲಿ ಆಹಾರ ಉತ್ಪನ್ನಗಳು ವಿಷಮಯವಾಗುತ್ತಿರುವುದರ ಬಗ್ಗೆ ಹಲವು ದಶಕಗಳಿಂದಲೂ ದೂರುಗಳು ಕೇಳಿಬರುತ್ತಲೇ ಇವೆ.
'ಭಾರತದಲ್ಲಿ ಆಹಾರ ಸಾಮಗ್ರಿಗಳಲ್ಲಿ ಕೀಟನಾಶಕಗಳ ಉಳಿಕೆ: ಒಂದು ಅವಲೋಕನ' ಎಂಬ ಅಧ್ಯಯನದ ವರದಿ 2024ರಲ್ಲಿ ಪ್ರಕಟವಾಗಿದೆ. ಕೇಂದ್ರ ಕೃಷಿ ಸಚಿವಾಲಯದ ಯೋಜನೆಯ ಅಡಿಯಲ್ಲಿ ಮೂವರು ಅಧ್ಯಯನಕಾರರು ನಡೆಸಿದ್ದು, 2018-23ರ ನಡುವೆ 1.30 ಲಕ್ಷದಷ್ಟು ಆಹಾರ ಮಾದರಿಗಳನ್ನು ಸಂಗ್ರಹಿಸಿ, ಅದರಲ್ಲಿರುವ ವಿಷಕಾರಿ ಅಂಶಗಳ ಉಳಿಕೆಯ (pesticide residue) ಪ್ರಮಾಣವನ್ನು ವಿಶ್ಲೇಷಣೆಗೆ ಒಳಪಡಿಸಿದ್ದರು. ಒಟ್ಟು ಮಾದರಿಗಳ ಪೈಕಿ, ಶೇ 28ರಲ್ಲಿ ಕೀಟನಾಶಕಗಳ ಉಳಿಕೆ ಅಂಶಗಳು ಕಂಡುಬಂದಿದ್ದವು. ಶೇ 3.5ರಷ್ಟು ಮಾದರಿಗಳಲ್ಲಿ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಸಂಸ್ಥೆಯು (ಎಫ್‌ಎಸ್‌ಎಸ್‌ಎಐ) ನಿಗದಿಪಡಿಸಿದ್ದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ (ಎಂಆರ್‌ಎಲ್) ರಾಸಾಯನಿಕಗಳ ಉಳಿಕೆ ಅಂಶಗಳು ಇರುವುದು ಪತ್ತೆಯಾಗಿತ್ತು.
ಈ ಅಧ್ಯಯನದ ವಿವರಗಳನ್ನು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳೊಂದಿಗೆ ಹಂಚಿಕೊಂಡು, ಕೀಟನಾಶಕಗಳು ಮತ್ತು ರಾಸಾಯನಿಕಗಳ ಬಳಕೆಗೆ ಅಂಕುಶ ಹಾಕುವಂತೆ, ಸಮಗ್ರ ಕೀಟ ನಿರ್ವಹಣೆ (ಐಪಿಎಂ) ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ರೈತರನ್ನು ಪ್ರೇರೇಪಿಸಲು ಸೂಚಿಸಿತ್ತು.
ಭಾರತದಲ್ಲಿ ಅಂದಾಜು ಶೇ 20ರಿಂದ ಶೇ 30ರಷ್ಟು ಬೆಳೆ ಕ್ರಿಮಿ-ಕೀಟಗಳು, ರೋಗಗಳು, ಕಳೆಗಳು ಮತ್ತು ಇಲಿಗಳಂತಹ ಪ್ರಾಣಿಗಳಿಂದ ನಾಶವಾಗುತ್ತದೆ ಎಂದು ಅಂದಾಜಿಸಲಾಗಿದೆ. ಕೀಟಗಳಿಂದ ಬೆಳೆಯನ್ನು ರಕ್ಷಿಸಲು ಕೀಟನಾಶಕಗಳನ್ನು ಹೆಚ್ಚು ಬಳಸಲಾಗುತ್ತದೆ. ಆದರೆ, ಇವುಗಳ ಮಿತಿ ಮೀರಿದ ಬಳಕೆಯು ಕೊಯ್ಲು ಮಾಡಿದ ಆಹಾರ ಉತ್ಪನ್ನಗಳಲ್ಲಿ ಆ ಕೀಟನಾಶಕದ ವಿಷಕಾರಿ ಅಂಶ ಉಳಿಯುವಂತೆ ಮಾಡುತ್ತದೆ ಎಂಬುದು ತಜ್ಞರ ಅಭಿಪ್ರಾಯ.2024ರ ಏ.24ರಂದು ಐರೋಪ್ಯ ಒಕ್ಕೂಟವು ಭಾರತದ ಉತ್ಪನ್ನಗಳಲ್ಲಿ ವಿಷಕಾರಿ ಅಂಶ ಇದೆ ಎಂದು 527 ಉತ್ಪನ್ನಗಳನ್ನು ಒಕ್ಕೂಟದ 27 ಸದಸ್ಯ ರಾಷ್ಟ್ರಗಳಲ್ಲಿ ಮಾರಬಾರದೆಂದು ನಿರ್ಬಂಧ ವಿಧಿಸಿದೆ ಎಂದು ವರದಿಯಾಗಿತ್ತು. ನಂತರ ಕೇಂದ್ರ ಸರ್ಕಾರ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತ್ತು. ಆದರೆ, ಇದು ಈ ವರ್ಷವೂ ಮುಂದುವರಿದಿದೆ.
ಭಾರತದ ಕೆಲವು ಆಹಾರ ಉತ್ಪನ್ನಗಳನ್ನು ವಿದೇಶಗಳಲ್ಲಿ ತಿರಸ್ಕರಿಸಲಾಗಿದೆ. ಅದರಿಂದ ಭಾರತದ ರೈತರು, ವ್ಯಾಪಾರಸ್ಥರು ನಷ್ಟ ಅನುಭವಿಸವಂತಾಗಿದೆ ಎನ್ನುವುದು ಒಂದೆಡೆ. ಅದಕ್ಕಿಂತಲೂ ಮುಖ್ಯವಾದ ವಿಚಾರ ಎಂದರೆ, ಅಪಾಯಕಾರಿಯಾದ ಆಹಾರ ಉತ್ಪನ್ನಗಳನ್ನು ಭಾರತದಲ್ಲಿ ಬೆಳೆಯಲಾಗುತ್ತಿದ್ದು, ಅವುಗಳನ್ನು ದೇಶದಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ದೇಶದಲ್ಲಿ ಕ್ಯಾನ್ಸರ್ ಸೇರಿದಂತೆ ಇತರೆ ಹಲವು ಕಾಯಿಲೆಗಳು ಹೆಚ್ಚಾಗುತ್ತಿದ್ದು, ಆಹಾರ ಪದಾರ್ಥಗಳು ವಿಷಮಯವಾಗುತ್ತಿರುವುದೂ ಅದಕ್ಕೆ ಒಂದು ಕಾರಣ ಎನ್ನಲಾಗುತ್ತಿದೆ. ಈ ದಿಸೆಯಲ್ಲಿ ಸರ್ಕಾರ, ರೈತರು, ವ್ಯಾಪಾರಸ್ಥರು ಮತ್ತು ಗ್ರಾಹಕರು ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲದಿದ್ದರೆ ಬದುಕಲು ಸೇವಿಸುವ ಆಹಾರ ಉತ್ಪನ್ನಗಳೇ ಬದುಕನ್ನು ಕಸಿಯುತ್ತವೆ ಎನ್ನುತ್ತಾರೆ ತಜ್ಞರು.
ಕೇಂದ್ರ ಸರ್ಕಾರ ಹೇಳುವುದೇನು?
ಆಹಾರ ಉತ್ಪನ್ನಗಳಲ್ಲಿ ಕೀಟನಾಶಕ ಪ್ರಮಾಣದ ಮೇಲೆ ನಿಗಾ ಇಡಲು ಮತ್ತು ವಿಷಕಾರಿ ಅಂಶದ ಪ್ರಮಾಣ ಎಷ್ಟಿದೆ ಎಂಬುದನ್ನು ಪತ್ತೆಹಚ್ಚಲು 2005-26ರಿಂದಲೂ 'ರಾಷ್ಟ್ರೀಯ ಮಟ್ಟದಲ್ಲಿ ಕೀಟನಾಶಕದ ಉಳಿಕೆ ಅಂಶದ ಮೇಲ್ವಿಚಾರಣೆ' (ಎಂಪಿಆರ್‌ಎನ್‌ಎಲ್) ಕಾರ್ಯಕ್ರಮ ಜಾರಿಯಲ್ಲಿದೆ
ಈ ಕಾರ್ಯಕ್ರಮದ ಅಡಿಯಲ್ಲಿ ತರಕಾರಿಗಳು, ಹಣ್ಣುಗಳು, ಮಸಾಲೆ ಪದಾರ್ಥಗಳು, ಧಾನ್ಯಗಳು, ಬೇಳೆಕಾಳುಗಳು, ಗಿಡಮೂಲಿಕೆಗಳು, ಮೀನು, ಮಾಂಸ, ಮೊಟ್ಟೆ, ಚಹಾ, ಹಾಲು ಸೇರಿದಂತೆ ಎಲ್ಲ ಆಹಾರ ವಸ್ತುಗಳ ಮಾದರಿಗಳನ್ನು ದೇಶದ ವಿವಿಧ ಭಾಗಗಳಿಂದ ಸಂಗ್ರಹಿಸಿ, ಪರೀಕ್ಷೆ ಮತ್ತು ಮಾಪನಾಂಕ ಪ್ರಯೋಗಾಲಯಗಳ ರಾಷ್ಟ್ರೀಯ ಮಾನ್ಯತಾ ಮಂಡಳಿಯು ವಿಶ್ಲೇಷಣೆಗೆ ಒಳಪಡಿಸುತ್ತದೆ
ಕೀಟನಾಶಕಗಳ ಬಳಕೆ ಮತ್ತು ಸುರಕ್ಷಿತ ನಿರ್ವಹಣೆ ಬಗ್ಗೆ ರೈತರು, ರಾಜ್ಯ ಕೃಷಿ ವಿಸ್ತರಣೆ ಅಧಿಕಾರಿಗಳು, ಕ್ರಿಮಿನಾಶಕಗಳ ಮಾರಾಟಗಾರರಲ್ಲಿ ಜಾಗೃತಿ ಮೂಡಿಸಲು ಮತ್ತು ತರಬೇತಿ ನೀಡಲು ಕೃಷಿ ಸಚಿವಾಲಯವು ಕೇಂದ್ರ ಸಂಯೋಜಿತ ಕ್ರಿಮಿನಾಶಕ ನಿರ್ವಹಣಾ ಕೇಂದ್ರಗಳು, ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ರಾಜ್ಯ ಕೃಷಿ ಇಲಾಖೆಗಳ ಮೂಲಕ ವಿವಿಧ ರೀತಿಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಕೃಷಿ ಚಟುವಟಿಕೆಗಳಲ್ಲಿ ರಾಸಾಯನಿಕ ಕೀಟನಾಶಕಗಳ ಬಳಕೆ ಕೊನೆಯ ಆಯ್ಕೆಯಾಗಬೇಕು ಎಂಬುದನ್ನು ಪ್ರಚಾರ ಮಾಡಲಾಗುತ್ತಿದೆ
ಕೀಟನಾಶಕ ಅಂಶಗಳ ಉಳಿಕೆ ಪ್ರಮಾಣವನ್ನು ಪರೀಕ್ಷಿಸುವುದಕ್ಕಾಗಿ ಎಫ್‌ಎಸ್‌ಎಸ್‌ಎಐ ಹಲವು ಕ್ರಮಗಳನ್ನು ಕೈಗೊಂಡಿದೆ
ಈ ಪರೀಕ್ಷೆ ಮಾಡುವ ಸಾಮರ್ಥ್ಯವಿರುವ ಎಫ್‌ಎಸ್‌ಎಸ್‌ಎಐ ಅಧಿಸೂಚಿತ 159 ಪ್ರಯೋಗಾಲಯಗಳು ದೇಶದಲ್ಲಿವೆ
ಪರೀಕ್ಷೆ ನಡೆಸಲು ಅನುಕೂಲವಾಗುವಂತೆ ಪ್ರಯೋಗಾಲಯಗಳಿಗೆ ಅತ್ಯಾಧುನಿಕ ಸಲಕರಣೆಗಳನ್ನು ಖರೀದಿ ಮಾಡುವುದಕ್ಕೆ ನೆರವಾಗಿದೆ
ಹೆಚ್ಚುವರಿಯಾಗಿ ದೇಶದ 35 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಹಾರ ಉತ್ಪನ್ನಗಳ ಪರೀಕ್ಷೆಗಾಗಿ ಸಂಚಾರಿ ಪರೀಕ್ಷಾ ಪ್ರಯೋಗಾಲಯಗಳನ್ನು ನಿಯೋಜಿಸಲಾಗಿದೆ
ರೈತರಿಗೆ ಗುಣಮಟ್ಟದ ಕೀಟನಾಶಕಗಳನ್ನು ಪೂರೈಸಲು ಕೃಷಿ ಸಚಿವಾಲಯವು 1968ರ ಕೀಟನಾಶಕಗಳ ಕಾಯ್ದೆಯ ವಿವಿಧ ನಿಯಮಗಳನ್ನು ಜಾರಿಗೆ ತರಲಾಗಿದೆ. 1971ರ ಕೀಟನಾಶಕಗಳ ನಿಯಮಾವಳಿಗಳ ಅಡಿ ರಾಜ್ಯ ಸರ್ಕಾರಗಳ ಪರವಾನಗಿ ಇಲ್ಲದೇ ಯಾವುದೇ ಕೀಟ ನಾಶಕದ ತಯಾರಿಕೆ, ದಾಸ್ತಾನು, ಮಾರಾಟ ಮಾಡುವಂತಿಲ್ಲ. ಅಧಿಕಾರಿಗಳು ನಿಯಮಿತವಾಗಿ ಕೀಟನಾಶಕ ತಯಾರಿಕಾ ಕಂಪನಿಗಳು, ಡೀಲರ್‌ಗಳು/ಮಾರಾಟಗಾರರ ಸ್ಥಳಗಳಲ್ಲಿ ಪರಿಶೀಲನೆ ನಡೆಸುತ್ತಿರುತ್ತಾರೆ. ಗುಣಮಟ್ಟ ವಿಶ್ಲೇಷಣೆಗಾಗಿ ಕೀಟನಾಶಕಗಳ ಮಾದರಿ ಸಂಗ್ರಹಿಸಲಾಗುತ್ತದೆ. ಒಂದು ವೇಳೆ ಪರೀಕ್ಷೆಯಲ್ಲಿ ಕೀಟನಾಶಕದ ಮಾದರಿ ವಿಫಲವಾದರೆ ತಯಾರಕರು ಅಥವಾ ಡೀಲರ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಮಾರುಕಟ್ಟೆಯಲ್ಲಿ ಗುಣಮಟ್ಟದ ಕೀಟನಾಶಕಗಳು ಸಿಗುವಂತೆ ಮಾಡಲು ಕಾಯ್ದೆಯ 1968ರ ಸೆಕ್ಷನ್ 20 ಅಡಿಯಲ್ಲಿ ಸಂಬಂಧಿಸಿದ ಅಧಿಕಾರಿಗಳು ದಿಢೀರ್ ತಪಾಸಣೆ, ನಡೆಸುತ್ತಾರೆ. ಒಂದು ವೇಳೆ ಅಕ್ರಮ ಕಂಡು ಬಂದರೆ, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ
ಸುಸ್ಥಿರ ಕೃಷಿಗೆ ಮತ್ತು ಸಮಗ್ರ ಕೀಟ ನಿರ್ವಹಣೆ ಕ್ರಮಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಜೈವಿಕ ಕೀಟನಾಶಕಗಳು ಮತ್ತು ಜೈವಿಕ ನಿಯಂತ್ರಣ ಏಜೆಂಟ್‌ಗಳ ಬಳಕೆಯನ್ನು ಪ್ರೋತ್ಸಾಹಿಸುತ್ತಿದೆ
ನಿಯಮ ಜಾರಿ: ವಾಸ್ತವ ಭಿನ್ನ
ಸರ್ಕಾರ ಕಾನೂನು ಮತ್ತು ನಿಯಮಗಳ ಅಡಿಯಲ್ಲಿ ಅತಿಯಾದ ರಾಸಾಯನಿಕ, ಕೀಟನಾಶಕಗಳ ಬಳಕೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳುತ್ತದೆ. ಆದರೆ, ವಾಸ್ತವದಲ್ಲಿ ಅದು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರುತ್ತಿಲ್ಲ.
ರೈತರು, ಮಧ್ಯವರ್ತಿಗಳು, ಡೀಲರ್‌ಗಳು ಆಹಾರ ಉತ್ಪನ್ನಗಳ ರಕ್ಷಣೆಗೆ ವಿಷಕಾರಿ ಅಂಶಗಳನ್ನು ಮಿತಿಮೀರಿದ ಪ್ರಮಾಣಗಳಲ್ಲಿ ಬಳಸುತ್ತಾರೆ. ಇದರ ಮೇಲ್ವಿಚಾರಣೆ ಪರಿಣಾಮಕಾರಿಯಾಗಿ ನಡೆಯುವುದಿಲ್ಲ.
ಕೀಟನಾಶಕ ಎಂದ ಕೂಡಲೇ ಎಲ್ಲರೂ ರೈತರತ್ತ ಬೊಟ್ಟು ಮಾಡುತ್ತಾರೆ. ಆದರೆ ಎಲ್ಲವನ್ನೂ ರೈತರೇ ಬಳಸುತ್ತಾರೆ ಎಂದಲ್ಲ.
ರೈತರು ಬಳಸದಿರುವ ಕೆಲವು ರಾಸಾಯನಿಕಗಳ ಅಂಶಗಳೂ ಆಹಾರ ಉತ್ಪನ್ನಗಳಲ್ಲಿ ಪತ್ತೆಯಾಗುತ್ತಿವೆ. ಉದಾಹರಣೆಗೆ, ಎಥಿಲೀನ್ ಆಕ್ಸೈಡ್‌ನಂತಹ ರಾಸಾಯನಿಕಗಳನ್ನು ರೈತರು ಬಳಸುವುದಿಲ್ಲ. ಇವುಗಳು ದಾಸ್ತಾನು ಮಾಡುವಾಗ ಹೆಚ್ಚು ಬಳಕೆಯಾಗುತ್ತವೆ. ಆದರೆ, ಪ್ರತಿ ಹಂತದಲ್ಲೂ ಪರಿಶೀಲನೆ ನಡೆಸುವ ವ್ಯವಸ್ಥೆ ದೇಶದಲ್ಲಿಲ್ಲ ಎಂಬುದು ತಜ್ಞರ ಮಾತು.
ಮುಂದುವರಿದ ದೇಶಗಳಲ್ಲಿ ನಿಷೇಧ ಹೇರಲಾಗಿರುವ ರಾಸಾಯನಿಕಗಳು, ಕೀಟನಾಶಕಗಳು ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿವೆ. ಅವುಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿಲ್ಲ.
ಆಧಾರ: ಇಂಡಿಯನ್ ಜರ್ನಲ್ ಆಫ್ ಪ್ಲಾಂಟ್ ಪ್ರೊಟೆಕ್ಷನ್, ಸೆಂಟರ್ ಫಾರ್ ಸೈನ್ಸ್ ಆಯಂಡ್ ಎನ್ವಿರಾನ್‌ಮೆಂಟ್, ಡೌನ್ ಟು ಅರ್ಥ್, ಸಂಸತ್ತಿನಲ್ಲಿ ಸಚಿವರ ಉತ್ತರಗಳು, ಮಾಧ್ಯಮ ವರದಿಗಳು
