Dailyhunt
ಆಳ-ಅಗಲ | ಗ್ರೇಟ್ ನಿಕೋಬಾರ್ ಯೋಜನೆ: ಅಭಿವೃದ್ಧಿಯೇ, 'ಅಪರಾಧ'ವೇ?

ಆಳ-ಅಗಲ | ಗ್ರೇಟ್ ನಿಕೋಬಾರ್ ಯೋಜನೆ: ಅಭಿವೃದ್ಧಿಯೇ, 'ಅಪರಾಧ'ವೇ?

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಗ್ರೇಟ್‌ ನಿಕೋಬಾರ್‌ ಅಭಿವೃದ್ಧಿ ಯೋಜನೆ ಮತ್ತೆ ಸುದ್ದಿಯಲ್ಲಿದೆ. ಅಂಡಮಾನ್‌ -ನಿಕೋಬಾರ್‌ ದ್ವೀಪಕ್ಕೆ ಭೇಟಿ ನೀಡಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು, ₹81 ಸಾವಿರ ಕೋಟಿ ವೆಚ್ಚದ ಈ ಯೋಜನೆಯು 'ಅತ್ಯಂತ ದೊಡ್ಡ ಹಗರಣ' ಎಂದಿದ್ದಾರಲ್ಲದೆ, 'ಇದು ಪ್ರಕೃತಿ ಮತ್ತು ಆದಿವಾಸಿಗಳ ವಿರುದ್ಧ ಎಸಗುವ ಅಪರಾಧ' ಎಂದೂ ಟೀಕಿಸಿದ್ದಾರೆ.
ಯೋಜನೆಯು ದ್ವೀಪ ಸಮೂಹದ ಅಪರೂಪದ ಜೀವ ವೈವಿಧ್ಯ, ಪರಿಸರಕ್ಕೆ ಹಾನಿಯುಂಟು ಮಾಡಲಿದೆ, ಅಲ್ಲಿನ ಆದಿವಾಸಿಗಳ ಬದುಕಿಗೆ ಕೊಳ್ಳಿ ಇಡಲಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ದೇಶದ ಭದ್ರತೆ, ಆರ್ಥಿಕ ಹಿತಾಸಕ್ತಿಯಿಂದ ಈ ಯೋಜನೆ ಅತ್ಯಂತ ಮಹತ್ವದ್ದು ಎಂದು ಕೇಂದ್ರ ಸರ್ಕಾರ ಆರಂಭದಿಂದಲೂ ಹೇಳುತ್ತಲೇ ಬಂದಿದೆ. ಈ ವರ್ಷದ ಫೆಬ್ರುವರಿಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕೂಡ ಯೋಜನೆಗೆ ಹಸಿರು ನಿಶಾನೆ ತೋರಿದೆ.

ಅಂಡಮಾನ್‌ ಮತ್ತು ನಿಕೋಬಾರ್‌, ಬಂಗಾಳ ಕೊಲ್ಲಿಯ ಪೂರ್ವಕ್ಕೆ ಮತ್ತು ಅಂಡಮಾನ್‌ ಸಮುದ್ರದ ಪಶ್ಚಿಮಕ್ಕೆ ಚದುರಿದಂತೆ ಇರುವ ದ್ವೀಪಗಳ ಗುಚ್ಚ. ಇಲ್ಲಿ ದ್ವೀಪಗಳ ಎರಡು ಗುಂಪುಗಳಿವೆ. ಅಂಡಮಾನ್‌ ದ್ವೀಪಗಳು ಮತ್ತು ನಿಕೋಬಾರ್‌ ದ್ವೀಪಗಳು. ಅಂಡಮಾನ್‌ ಉತ್ತರದಲ್ಲಿದ್ದರೆ, ನಿಕೋಬಾರ್‌ ದಕ್ಷಿಣದಲ್ಲಿದೆ. ನಿಕೋಬಾರ್‌ ದ್ವೀಪಗಳಲ್ಲಿ, ಗ್ರೇಟ್‌ ನಿಕೋಬಾರ್‌ ಒಂದು. ಭಾರತದ ದಕ್ಷಿಣದ ತುತ್ತತುದಿ ಇಂದಿರಾ ಪಾಯಿಂಟ್‌ ಇರುವುದು ಗ್ರೇಟ್ ನಿಕೋಬಾರ್‌ ದ್ವೀಪದಲ್ಲಿ. ಇದು 910 ಚದರ ಕಿ.ಮೀನಷ್ಟು ವಿಸ್ತೀರ್ಣವಿದೆ. ಅಪರೂಪದ ಪರಿಸರ, ಜೀವವೈವಿಧ್ಯಕ್ಕೆ ಹೆಸರಾದ ಇದು ಶೋಂಪೆನ್‌ ಮತ್ತು ನಿಕೋಬಾರೀ ಬುಡಕಟ್ಟು ಸಮುದಾಯಗಳು ನೆಲಸಿರುವ ಸ್ಥಳವೂ ಹೌದು.

ಕೇಂದ್ರ ಸರ್ಕಾರವು ನಿಕೋಬಾರ್‌ ದ್ವೀಪಗಳ ದಕ್ಷಿಣದ ತುತ್ತತುದಿಯನ್ನು ಕೇಂದ್ರವಾಗಿಟ್ಟುಕೊಂಡು ಬೃಹತ್‌ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಅದೇ ಗ್ರೇಟ್‌ ನಿಕೋಬಾರ್‌ ಅಭಿವೃದ್ಧಿ ಯೋಜನೆ. ಇದರ ಅನುಷ್ಠಾನಕ್ಕೆ ₹81 ಸಾವಿರ ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳ ಸಮಗ್ರ ಅಭಿವೃದ್ಧಿ ನಿಗಮ ನಿಯಮಿತವು (ಎಎನ್‌ಐಐಡಿಸಿಒ) ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ನೀತಿ ಆಯೋಗವು ಈ ಯೋಜನೆಯ ರೂಪುರೇಷೆಯನ್ನು ಸಿದ್ಧಪಡಿಸಿದೆ.

ಏನಿದು ಯೋಜನೆ?: ನಿಕೋಬಾರ್‌ ದ್ವೀಪದ ದಕ್ಷಿಣ ಭಾಗದಲ್ಲಿ ಅಂತರರಾಷ್ಟ್ರೀಯ ಕಂಟೇನರ್‌ ಮರುಹಂಚಿಕೆ (ಟ್ರಾನ್ಸ್‌ಶಿಪ್‌ಮೆಂಟ್‌) ಟರ್ಮಿನಲ್‌ (ಐಸಿಟಿಟಿ), ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, 450 ಮೆಗಾ ವಾಟ್‌ ಸಾಮರ್ಥ್ಯದ ವಿದ್ಯುತ್‌ ಸ್ಥಾವರ ಮತ್ತು ಒಂದು ಟೌನ್‌ಶಿಪ್‌ ನಿರ್ಮಾಣ ಮಾಡುವುದು ಯೋಜನೆಯ ತಿರುಳು.

ಗಲಾಥಿಯಾ ಕೊಲ್ಲಿಯಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಬಂದರು (ಐಸಿಸಿಟಿ) ನಿರ್ಮಾಣ ಮಾಡುವುದು ಯೋಜನೆಯ ಪ್ರಮುಖ ಉದ್ದೇಶ. 2028ರ ಹೊತ್ತಿಗೆ ಬಂದರಿನ ಮೊದಲ ಹಂತದ ಕೆಲಸ ಪೂರ್ಣಗೊಂಡು ಕಾರ್ಯಾರಂಭ ಆಗುವಂತೆ ಮಾಡುವುದು ಕೇಂದ್ರದ ಯೋಚನೆ. ಬಂದರು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಿದ ನಂತರ ವಾರ್ಷಿಕವಾಗಿ 1.6 ಕೋಟಿ ಕಂ‌ಟೇನರ್‌ಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಲಿದೆ. ಮೊದಲ ಹಂತದ ಕಾಮಗಾರಿ ಮುಕ್ತಾಯವಾದಾಗ ವಾರ್ಷಿಕವಾಗಿ 40 ಲಕ್ಷ ಕಂಟೇನರ್‌ಗಳನ್ನು ನಿರ್ವಹಿಸಲಿದೆ ಎಂದು ಹೇಳಲಾಗುತ್ತಿದೆ.

ಗಲಾಥಿಯಾ ಕೊಲ್ಲಿಯಿಂದ ಈಶಾನ್ಯಕ್ಕೆ ಅಂದಾಜು 4,000 ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುವ ವಿಮಾನ ನಿಲ್ದಾಣ (ನಾಗರಿಕ ಮತ್ತು ಸೇನೆ ಉದ್ದೇಶದ) ನಿರ್ಮಾಣ ಮಾಡುವುದು ಈ ಯೋಜನೆಯಲ್ಲಿನ ಮತ್ತೊಂದು ಅಂಶ. ಕ್ಯಾಂಪ್‌ಬೆಲ್‌ ಕೊಲ್ಲಿಗೆ ಹೊಂದಿಕೊಂಡಂತೆ ಎಲ್ಲ ಮೂಲಸೌಕರ್ಯಗಳನ್ನೊಳಗೊಂಡ ಟೌನ್‌ಶಿಪ್‌ ಅನ್ನು ಅಭಿವೃದ್ಧಿ ಪಡಿಸುವುದು ಮತ್ತೊಂದು ಉದ್ದೇಶವಾದರೆ, ಈ ಮೂಲಸೌಕರ್ಯಗಳಿಗೆ ವಿದ್ಯುತ್‌ ಸರಬರಾಜು ಮಾಡುವುದಕ್ಕಾಗಿ 450 ಮೆಗಾವಾಟ್‌ ಸಾಮರ್ಥ್ಯದ ವಿದ್ಯುತ್‌ ಸ್ಥಾವರದ (ಅನಿಲ ಮತ್ತು ಸೌರ) ಅಭಿವೃದ್ಧಿ ಯೋಜನೆಯ ಇನ್ನೊಂದು ಭಾಗ.

ಕಾರ್ಯತಂತ್ರ ದೃಷ್ಟಿಯಿಂದ ಮುಖ್ಯ?

ಯೋಜನೆಯು ಸೇನೆ ಮತ್ತು ಕಡಲಿಗೆ ಸಂಬಂಧಿಸಿದ ಕಾರ್ಯತಂತ್ರದ ದೃಷ್ಟಿಯಿಂದ ತುಂಬಾ ಮಹತ್ವದ್ದು . ನಿರ್ಮಾಣವಾಗಲಿರುವ ವಿಮಾನ ನಿಲ್ದಾಣವು ಸೇನಾ ಕಾರ್ಯಾಚರಣೆಗೆ ಅನುಕೂಲಕರವಾಗಲಿದೆ ಎಂಬುದು ತಜ್ಞರ ಅಭಿಪ್ರಾಯ.

ಪ್ರಮುಖ ಜಲಮಾರ್ಗವಾದ ಮಲಕ್ಕಾ ಜಲಸಂಧಿಯು, ಯೋಜನೆಗೆ ಗುರುತಿಸಿರುವ ಸ್ಥಳದಿಂದ ಕೇವಲ 74 ಕಿ.ಮೀನಷ್ಟು ದೂರದಲ್ಲಿದೆ. ಈ ಜಲಸಂಧಿಯು ಜಾಗತಿಕ ಸರಕು ಸಾಗಣೆಯ ಪ್ರಮುಖ ಮಾರ್ಗವಾಗಿದ್ದು, ಚೀನಾದ ಶೇ 80ರಷ್ಟು ತೈಲ ಹಾಗೂ ಇತರ ಸರಕುಗಳು ಇದರ ಮೂಲಕವೇ ಸಾಗುತ್ತವೆ. ಚೀನಾವು ಹಿಂದೂ ಮಹಾ ಸಾಗರದಲ್ಲಿ 'ಮುತ್ತಿನ ಹಾರ' ಯೋಜನೆಯ ಮೂಲಕ ವಿವಿಧ ದೇಶಗಳಲ್ಲಿ ಬಂದರು ನಿರ್ಮಿಸಿ, ತನ್ನ ಉಪಸ್ಥಿತಿಯನ್ನು ಭದ್ರಪಡಿಸುತ್ತಿದೆ. ಗ್ರೇಟ್‌ ನಿಕೋಬಾರ್‌ ಯೋಜನೆ ಅನುಷ್ಠಾನಗೊಂಡರೆ ಹಿಂದೂ ಮಹಾ‌ಸಾಗರದಲ್ಲಿ ಭಾರತದ ಉಪಸ್ಥಿತಿಯೂ ಹೆಚ್ಚಲಿದೆ.

ಕಂಟೇನರ್‌ ಮರುಹಂಚಿಕೆಯ ಬಂದರು ನಿರ್ಮಾಣವಾಗುವುದರಿಂದ ಈ ಭಾಗದಲ್ಲಿ ಸಾಗುವ ಸರಕು ಸಾಗಣೆ ಮಾರ್ಗದಲ್ಲಿ ಭಾರತದ ಪಾಲ್ಗೊಳ್ಳುವಿಕೆಯೂ ಹೆಚ್ಚಲಿದೆ. ಸದ್ಯ ಈ ಭಾಗದಲ್ಲಿ ಇಂತಹ ಸೌಲಭ್ಯವುಳ್ಳ ಬಂದರು ಕೊಚ್ಚಿ ಮತ್ತು ತಿರುವನಂತಪುರದಲ್ಲಿ ಮಾತ್ರ ಇದೆ. ಭಾರತಕ್ಕೆ ಸರಕು ಸಾಗಣೆ ಮಾಡುವ ಕಂಪನಿಗಳು ಕಂಟೇನರ್‌ಗಳ ಮರುಹಂಚಿಕೆಗೆ ಬೇರೆ ದೇಶಗಳ ಬಂದರುಗಳನ್ನು ಅವಲಂಬಿಸಬೇಕಾಗಿದೆ. ಇದಕ್ಕೆ ಹೆಚ್ಚು ಹಣ ವ್ಯಯಿಸಬೇಕಾಗುತ್ತದೆ. ನಮ್ಮಲ್ಲಿಯೇ ಅಂತಹ ಸೌಲಭ್ಯ ಇದ್ದರೆ ಭಾರತದ ಆರ್ಥಿಕತೆಗೆ ಅನುಕೂಲವಾಗಲಿದೆ. ವಿದೇಶಿ ವಿನಿಮಯ ಮೀಸಲು ಹೆಚ್ಚಲಿದೆ ಎಂಬ ವಾದವೂ ಇದೆ.

ಪರಿಸರ, ಜೀವವೈವಿಧ್ಯಕ್ಕೆ ಧಕ್ಕೆಯ ಆತಂಕ

ಯೋಜನೆ ಘೋಷಣೆ ಆದಾಗಿನಿಂದಲೂ ಅನೇಕ ಪರಿಸರವಾದಿಗಳು, ಸಾಮಾಜಿಕ ಕಾರ್ಯಕರ್ತರು, ಬುಡಕಟ್ಟು ಮುಖಂಡರು ಯೋಜನೆಯನ್ನು ವಿರೋಧಿಸುತ್ತಲೇ ಬರುತ್ತಿದ್ದಾರೆ. ಯೋಜನೆಗಾಗಿ 130 ಚದರ ಕಿ.ಮೀ. ದೂರದ ದಟ್ಟ ಕಾಡಿನಲ್ಲಿ ಸುಮಾರು 10 ಲಕ್ಷ ಮರಗಳ ಹನನವಾಗಲಿದೆ. ಇದು ದೇಶದ ಪರಿಸರ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎನ್ನುವುದು ಯೋಜನೆಯನ್ನು ವಿರೋಧಿಸುವವರ ಪ್ರಮುಖ ಆಕ್ಷೇಪಣೆಯಾಗಿದೆ.

ಅವರ ಪ್ರಕಾರ, ಇದು ಅತ್ಯಂತ ಸಮೃದ್ಧವಾದ, ಅಪರೂಪದ ಸಸ್ಯ ಮತ್ತು ಜೀವಸಂಪತ್ತು ನೆಲೆಗೊಂಡಿರುವ ತಾಣ. ಸಮುದ್ರ ಆಮೆಯ ವಿಶೇಷ ಪ್ರಭೇದಕ್ಕೆ ದ್ವೀಪವು ಪ್ರಖ್ಯಾತಿ ಪಡೆದಿದೆ. ಪಕ್ಷಿಗಳು, ಪ್ರಾಣಿಗಳು, ಹಲ್ಲಿಗಳು, ಚಿಟ್ಟೆಗಳು ಸೇರಿದಂತೆ 2500 ಜೀವಿಗಳು ಇಲ್ಲಿದ್ದು, ಈ ಪೈಕಿ 400 ಇಲ್ಲಿ ಮಾತ್ರವೇ ಕಂಡುಬರುವಂಥವು. ಇಂಥ ಅನೇಕ ವಿಶಿಷ್ಟ ಜಲಚರಗಳು, ಗಿಡಮರಗಳು ಇಲ್ಲಿವೆ. ಹವಳದ ದಿಬ್ಬಗಳೂ ಇವೆ. ಯೋಜನೆಯಿಂದ ಅವುಗಳ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ.

ಪ್ರಸ್ತುತ ದ್ವೀಪದಲ್ಲಿ 8 ಸಾವಿರ ಜನಸಂಖ್ಯೆ ಇದ್ದು, ಯೋಜನೆ ಜಾರಿಯಾದ ನಂತರ ಈ ಸಂಖ್ಯೆಯು 3.5 ಲಕ್ಷಕ್ಕೆ ಏರಲಿದೆ. ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗಲಿವೆ. ಇದರಿಂದ ದ್ವೀಪದ ಸೂಕ್ಷ್ಮ ಪರಿಸರ ವ್ಯವಸ್ಥೆ ಮತ್ತು ಜೀವಿ ವ್ಯವಸ್ಥೆಗೆ ಹಾನಿ ಉಂಟಾಗಲಿದೆ. 2004ರಲ್ಲಿ ಇಲ್ಲಿ ಭೂಕಂಪ ಮತ್ತು ಸುನಾಮಿ ಸಂಭವಿಸಿ, 4 ಮೀಟರ್‌ಗೂ ಹೆಚ್ಚಿನ ಭೂಪ್ರದೇಶ ಕೊಚ್ಚಿಕೊಂಡು ಹೋಗಿತ್ತು.

ಭಾರತದಲ್ಲಿ ನಾಶದ ಹಾದಿಯಲ್ಲಿರುವ ಉಷ್ಣವಲಯದ ಮಳೆಕಾಡುಗಳಲ್ಲಿ ನಿಕೋಬಾರ್ ದ್ವೀಪವೂ ಒಂದಾಗಿದೆ. ಅಪರೂಪದ ಜೀವವೈವಿಧ್ಯ ಮಾತ್ರವಲ್ಲದೇ, ಶೋಂಪೆನ್ ಮತ್ತು ನಿಕೋಬಾರೀ ಎಂಬ ಎರಡು ಸೂಕ್ಷ್ಮ ಮತ್ತು ಆಧುನಿಕತೆಗೆ ಒಡ್ಡಿಕೊಳ್ಳದ ಬುಡಕಟ್ಟು ಸಮುದಾಯಗಳು ಇಲ್ಲಿವೆ. ಅಲೆಮಾರಿಗಳಾದ ಶೋಂಪೆನ್ ಬುಡಕಟ್ಟಿನಲ್ಲಿ ಕೇವಲ 237 ಜನರಿದ್ದರೆ, ಒಂದೆಡೆ ನೆಲಸಿರುವ ನಿಕೋಬಾರೀ ಬುಡಕಟ್ಟಿನಲ್ಲಿ 1,094 ಮಂದಿ ಅಷ್ಟೇ ಇದ್ದಾರೆ. ಈ ಅತಿ ಸೂಕ್ಷ್ಮ ಬುಡಕಟ್ಟುಗಳ ಅಸ್ತಿತ್ವಕ್ಕೆ ಯೋಜನೆಯು ಮಾರಕವಾಗುತ್ತದೆ.

ಯೋಜನೆಗೆ ಅನುಮತಿ ಪಡೆಯುವ ವಿಚಾರದಲ್ಲಿ ಭಾರತದ ವನ್ಯಜೀವಿ ಸಂಘ (ಡಬ್ಲ್ಯುಐಐ) ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನಿಯಮಗಳನ್ನು ಉಲ್ಲಂಘಿಸಿವೆ ಎನ್ನುವುದು ಬಾಂಬೆ ಐಐಟಿಯ ಪ್ರಾಧ್ಯಾಪಕ ಮತ್ತು ನಿಕೋಬಾರ್ ದ್ವೀಪದ ಬಗ್ಗೆ 30 ವರ್ಷ ಅಧ್ಯಯನ ಮಾಡಿರುವ ಪಂಕಜ್ ಶೆಖ್ಸಾರಿಯಾ ಅವರ ಆರೋಪ.

ಲೇಖಕರು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ 70ಕ್ಕೂ ಅಧಿಕ ಮಂದಿ ಯೋಜನೆ ವಿರೋಧಿಸಿ ಪರಿಸರ ಸಚಿವಾಲಯಕ್ಕೆ ಪತ್ರ ಬರೆದಿದ್ದರು. 'ಯೋಜನೆ ಜಾರಿ ವಿಚಾರದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಇಲ್ಲ. ಯೋಜನೆಯಿಂದ ತೊಂದರೆಗೊಳಗಾಗುವ ಜನರ ಜತೆ ಚರ್ಚೆ ನಡೆಸಿಲ್ಲ. ಅವರ ಅನುಮತಿ ಪಡೆದಿಲ್ಲ. ಯೋಜನೆಯಿಂದ ಸರ್ವನಾಶವೇ ಘಟಿಸಲಿದೆ' ಎನ್ನುವುದು ಅವರ ಆರೋಪ.

ಗ್ರೇಟ್ ನಿಕೋಬಾರ್ ಯೋಜನೆಗಾಗಿ ದ್ವೀಪದ ಶೇ 15ರಷ್ಟು ಅರಣ್ಯಪ್ರದೇಶವನ್ನು ಬಳಸಿಕೊಳ್ಳಲಾಗುತ್ತಿದೆ. ಅಲ್ಲಿನ ಲಕ್ಷಾಂತರ ಮರಗಳನ್ನು ಕಡಿಯಲಾಗುತ್ತಿದೆ. ಆದರೆ, ಸರ್ಕಾರ ಕೇವಲ ಶೇ 1.82ರಷ್ಟು ಅರಣ್ಯ ಪ್ರದೇಶ ಎಂದು ಪ್ರತಿಪಾದಿಸುತ್ತಾ, ತಪ್ಪುದಾರಿಗೆಳೆಯುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.

ಯೋಜನೆಯು‌ ಶೋಂಪೆನ್ ಬುಡಕಟ್ಟಿಗೆ ವಿಧಿಸಲಾಗುತ್ತಿರುವ ಮರಣದಂಡನೆಯಾಗಿದ್ದು, ಇದು ಜನಾಂಗೀಯ ಹತ್ಯೆಯಂಥ ಅಂತರರಾಷ್ಟ್ರೀಯ ಅಪರಾಧಕ್ಕೆ ಸಮನಾಗಿದೆ ಎಂದು ಸರ್ವೈವಲ್ ಇಂಟರ್‌ನ್ಯಾಷನಲ್ ಸಂಸ್ಥೆಯು ವಿಶ್ವಸಂಸ್ಥೆಗೆ ಸಲ್ಲಿಸಿರುವ ಯೋಜನೆ ಕುರಿತ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿದೆ.

ಅದಾನಿ ಹೆಸರು ತಳಕು

ಯೋಜನೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತರೆಂದೇ ಹೇಳಲಾಗುವ ಉದ್ಯಮಿ ಗೌತಮ್ ಅದಾನಿ ಅವರ ಹೆಸರೂ ತಳಕು ಹಾಕಿಕೊಂಡಿದೆ. ಯೋಜನೆಯ ಭಾಗವಾದ ಬಂದರು ನಿರ್ಮಾಣಕ್ಕೆ ಅದಾನಿ ಆಸಕ್ತಿ ತೋರಿದ್ದಾರೆ ಎನ್ನಲಾಗುತ್ತಿದೆ. ರಾಹುಲ್ ಗಾಂಧಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, 'ಕೇಂದ್ರ ಸರ್ಕಾರವು ಕೇವಲ ಒಬ್ಬ ವ್ಯಕ್ತಿಯ (ಗೌತಮ್ ಅದಾನಿ) ಅನುಕೂಲಕ್ಕಾಗಿ 160 ಚದರ ಕಿ.ಮೀ. ಅರಣ್ಯವನ್ನು ನಾಶಪಡಿಸಲು ಮುಂದಾಗಿದ್ದು, ಇದು ಹಿಂದೆಂದೂ ಕಾಣದಿದ್ದಂಥ ಹಗರಣವಾಗಿದೆ' ಎಂದು ಆರೋಪಿಸಿದ್ದಾರೆ.

ಗೃಹ ಸಚಿವಾಲಯದ ಉಸ್ತುವಾರಿ

ಈ ಯೋಜನೆಯನ್ನು ಗೃಹ ಸಚಿವಾಲಯದ ಅಡಿಯಲ್ಲಿ ಜಾರಿ ಮಾಡಲಾಗುತ್ತಿದೆ. ಇದರಿಂದ ಯೋಜನೆ ಬಗ್ಗೆ ಮಾಹಿತಿ ಪಡೆಯುವುದು, ದ್ವೀಪ ಸಮೂಹಕ್ಕೆ ಭೇಟಿ ನೀಡುವುದು ಕಷ್ಟಕರವಾಗಿದೆ. ಇದೊಂದು ವಾಣಿಜ್ಯ ಯೋಜನೆಯಾಗಿದೆ. ಆದರೆ, ದೇಶದ ಭದ್ರತೆಯ ನೆಪವನ್ನು ಮುಂದು ಮಾಡಲಾಗುತ್ತಿದೆ. ಇಲ್ಲಿ ರಕ್ಷಣೆಯ ಉದ್ದೇಶಕ್ಕೆ ಬಳಕೆಯಾಗುವುದು ವಿಮಾನ ನಿಲ್ದಾಣ ಮಾತ್ರವೇ. ಅದಕ್ಕೆ ಒಟ್ಟು ಯೋಜನಾ ಪ್ರದೇಶದಲ್ಲಿ ಶೇ 5ರಷ್ಟು ಭೂಪ್ರದೇಶವಷ್ಟೇ ಬಳಕೆಯಾಗುತ್ತಿದೆ ಎನ್ನುವುದು ಪರಿಸರವಾದಿಗಳ ವಾದ.

ಕೇಂದ್ರ ಸರ್ಕಾರ ಹೇಳುವುದೇನು?

  • ದೇಶದ ಆರ್ಥಿಕ ಮತ್ತು ಭದ್ರತಾ ಹಿತದೃಷ್ಟಿಯಿಂದ ಮಹತ್ವದ ಯೋಜನೆ

  • ಪರಿಸರ, ಸಾಮಾಜಿಕ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ

  • ಅಂಡಮಾನ್‌ ಸಮುದ್ರ ಮತ್ತು ಆಗ್ನೇಯ ಏಷ್ಯಾದಲ್ಲಿ ಭಾರತದ ಉಪಸ್ಥಿತಿ ಹೆಚ್ಚಲಿದೆ

  • ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು ಆರ್ಥಿಕ ಕೇಂದ್ರಗಳಾಗಿ ಬದಲಾಗಲಿವೆ. ಜಾಗತಿಕ ಪ್ರಮುಖ ಸರಕು ನಿರ್ವಹಣೆ ಕೇಂದ್ರವಾಗಲಿದೆ. ಜಾಗತಿಕ ಪ್ರವಾಸಿ ತಾಣವಾಗಿ ಪರಿವರ್ತನೆಯಾಗಲಿದೆ

  • ಅಂಡಮಾನ್‌ ಮತ್ತು ನಿಕೋಬಾರ್‌ನ ಜೀವ ವೈವಿಧ್ಯ ಮತ್ತು ಸ್ಥಳೀಯ ಬುಡಕಟ್ಟು ಸಮುದಾಯಗಳಿಗೆ ತೊಂದರೆಯಾಗದು

ಆಧಾರ: ಯೋಜನೆಗೆ ಸಂಬಂಧಿಸಿದ ನೀತಿ ಆಯೋಗದ ಪೂರ್ವ ಕಾರ್ಯಸಾಧ್ಯತಾ ವರದಿ, ಪಿಟಿಐ, ಟೈಮ್, ಮಾಧ್ಯಮ ವರದಿಗಳು, ಸಂಸತ್ತಿನಲ್ಲಿ ಸಚಿವರ ಉತ್ತರ

Dailyhunt
Disclaimer: This content has not been generated, created or edited by Dailyhunt. Publisher: Prajavani