'ನಿಮ್ಮಲ್ಲಿ ಎಷ್ಟು ಮಂದಿ ಮತದಾನದ ಹಕ್ಕನ್ನು ಕಳೆದುಕೊಂಡಿದ್ದೀರಿ?'
ತಮ್ಮ ಎಂದಿನ ಶೈಲಿಯಲ್ಲಿ ವೇದಿಕೆಯಿಂದ ಇಳಿಯುತ್ತಾ ಕೇಳಿದರು ಮಮತಾ ಬ್ಯಾನರ್ಜಿ. ಅಲ್ಲಿ ಸೇರಿದ್ದ ಶೇ 60ರಷ್ಟು ಮಂದಿ- ಹೆಚ್ಚಿನವರು ಮಹಿಳೆಯರು- ತಮ್ಮ ಕೈಗಳನ್ನು ಎತ್ತಿದರು.
'ಹೌದಾ'. ನಂಬಲಸಾಧ್ಯ ಎನ್ನುವಂತೆ ಕ್ಷಣ ಹೊತ್ತು ಮೌನವಾದ ಮಮತಾ ಅವರು, ನಂತರ ಹೇಳಿದರು: 'ಮತ್ತೆ ಓಟು ಹಾಕುವವರು ಯಾರು?'
ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆಯ (ಎಸ್‌ಐಆರ್) ಬಗ್ಗೆ ಮತ್ತು ಅದು ರಾಜ್ಯದ ಜನರ ಮೇಲೆ ಬೀರಿರುವ ಪರಿಣಾಮಗಳ ಬಗ್ಗೆ ಹಲವು ರೀತಿಯ ಕಥನಗಳಿವೆ. ಅದರ ಒಂದು ನೋಟವು ಮಾಲ್ಡಾದ ಇನಾಯತ್‌ಪುರದಲ್ಲಿ ನಡೆದ ತೃಣಮೂಲ ಕಾಂಗ್ರೆಸ್‌ನ ರ್‍ಯಾಲಿಯಲ್ಲಿ ಸಿಕ್ಕಿತು.
ಈಗ ವೀರಭೂಮಿಯ ರಾಮ್‌ಪುರಹಾಟ್‌ಗೆ ಬರೋಣ. ಮತಪಟ್ಟಿಯಿಂದ ಹೆಸರು ತೆಗೆದುಹಾಕಲಾಗಿರುವ ನೂರಾರು ಮಂದಿ ನ್ಯಾಯಮಂಡಳಿಯಲ್ಲಿ ಮೇಲ್ಮನವಿ ಸಲ್ಲಿಸಲು ಅಲ್ಲಿನ ಉಪವಿಭಾಗಾಧಿಕಾರಿ ಕಚೇರಿಯ ಮುಂದೆ ಸಾಲುಗಟ್ಟಿ ನಿಂತಿದ್ದರು. ಅಷ್ಟರಲ್ಲಿ ಸುದ್ದಿಯೊಂದು ಬಂತು; ನ್ಯಾಯಮಂಡಳಿಗೆ ಸಲ್ಲಿಸಬೇಕಿದ್ದ ದಾಖಲೆಗಳನ್ನು ಅಲ್ಲಿಂದ ಒಂದು ಕಿಲೋಮೀಟರ್ ದೂರದ ಕಾಲೇಜಿನಲ್ಲಿ ಸ್ವೀಕರಿಸಲಾಗುತ್ತದೆ. ಮತದಾರರ ಪಟ್ಟಿಗೆ ಮತ್ತೆ ಹೆಸರು ಸೇರ್ಪಡೆಗೊಳಿಸಬೇಕು ಎಂದು ಕಾತರದಿಂದಿದ್ದ ಮಹಿಳೆಯರು ಮತ್ತು ಪುರುಷರು ತಕ್ಷಣವೇ ಕಾಲೇಜಿನ ಬಳಿ ಸರತಿ ಸಾಲಿನಲ್ಲಿ ನಿಲ್ಲಲು ಅತ್ತ ಕಡೆ ದೌಡಾಯಿಸಿದರು.
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಆಳ-ಅಗಲ | ಮತ ಸಮರ: ಎಸ್‌ಐಆರ್‌ಗೆ ನಲುಗಿದ ಪಶ್ಚಿಮ ಬಂಗಾಳ
ಒಂದು ಸಾಲಿನಲ್ಲಿಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಿಂದಾಗಿ ಲಕ್ಷಾಂತರ ಮಂದಿ ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದು, ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.ಪ್ರಮುಖ ಅಂಶಗಳು• ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಚುನಾವಣಾ ಆಯೋಗವು 2025ರ ನವೆಂಬರ್‌ನಿಂದ ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಆರಂಭಿಸಿದ್ದು, ಇದರಿಂದ ಸುಮಾರು 91 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ.• ಸಾರ್ವಜನಿಕರ ಸಂಕಷ್ಟ ಮತ್ತು ಸಾವುಹೆಸರು ನೋಂದಣಿಗಾಗಿ ನ್ಯಾಯಮಂಡಳಿಯ ಕಚೇರಿಗಳ ಮುಂದೆ ಸಾಲುಗಟ್ಟಿ ನಿಲ್ಲುವ ಅನಿವಾರ್ಯತೆ ಸೃಷ್ಟಿಯಾಗಿದ್ದು, ಅತಿಯಾದ ಮಾನಸಿಕ ಒತ್ತಡ ಹಾಗೂ ಆತಂಕದಿಂದಾಗಿ ಹಲವು ನಾಗರಿಕರು ಮೃತಪಟ್ಟಿರುವ ವರದಿಗಳಿವೆ.• ರಾಜಕೀಯ ಆರೋಪ ಮತ್ತು ಸಂಘರ್ಷಬಿಜೆಪಿ ಪರವಾಗಿ ಚುನಾವಣಾ ಆಯೋಗ ಕೆಲಸ ಮಾಡುತ್ತಿದೆ ಎಂದು ಟಿಎಂಸಿ ನೇರವಾಗಿ ಆರೋಪಿಸಿದೆ. ಮತ್ತೊಂದೆಡೆ, ಆಯೋಗವು ಈ ಪ್ರಕ್ರಿಯೆಯು ಪಾರದರ್ಶಕ ಮತ್ತು ನಕಲಿ ಮತದಾರರನ್ನು ತೆರವುಗೊಳಿಸಲು ಎಂದು ಸಮರ್ಥಿಸಿಕೊಂಡಿದೆ.• ನ್ಯಾಯಾಂಗ ಮತ್ತು ಆಯೋಗದ ಮಧ್ಯಸ್ಥಿಕೆಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ಕಲ್ಕತ್ತ ಹೈಕೋರ್ಟ್‌ನ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಅಂತ್ಯಗೊಂಡಿರುವುದರಿಂದ ಪಟ್ಟಿಯಿಂದ ತೆಗೆಯಲ್ಪಟ್ಟವರು ಮತ ಚಲಾಯಿಸುವುದು ಅನಿಶ್ಚಿತವಾಗಿದೆ.• ಸಾಮಾಜಿಕ ಹಾಗೂ ಪ್ರಾದೇಶಿಕ ಪ್ರಭಾವമുಸ್ಲಿಂ ಪ್ರಾಬಲ್ಯವಿರುವ ಜಿಲ್ಲೆಗಳಲ್ಲಿ ಅತಿ ಹೆಚ್ಚು ಹೆಸರುಗಳನ್ನು ಕೈಬಿಡಲಾಗಿದೆ. ಇದು ಮಹಿಳಾ ಮತದಾರರು ಮತ್ತು ವಲಸಿಗ ಹಿಂದೂ ಮತುವಾ ಸಮುದಾಯದ ಮೇಲೂ ಭಾರಿ ಪರಿಣಾಮ ಬೀರಿದೆ.ಪ್ರಮುಖ ಅಂಕಿಅಂಶಗಳು91 ಲಕ್ಷಪಟ್ಟಿಯಿಂದ ತೆಗೆದುಹಾಕಲಾದ ಮತದಾರರ ಸಂಖ್ಯೆ57 ಲಕ್ಷಪಟ್ಟಿಯಿಂದ ಕೈಬಿಟ್ಟ ಮಹಿಳಾ ಮತದಾರರು2025ರ ನವೆಂಬರ್ 4ಎಸ್‌ಐಆರ್ ಪರಿಷ್ಕರಣೆ ಆರಂಭ ದಿನಾಂಕಶೇ 95ಮುಸ್ಲಿಂ ಪ್ರಾಬಲ್ಯದ ಜಿಲ್ಲೆಗಳಲ್ಲಿ ಕೈಬಿಡಲಾದ ಮತದಾರರ ಪ್ರಮಾಣ2132021ರ ಚುನಾವಣೆಯಲ್ಲಿ ಟಿಎಂಸಿ ಗೆದ್ದ ಸ್ಥಾನಗಳುಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ರಾಮ್‌ಪುರಹಾಟ್‌ಗೆ 50 ಕಿ.ಮೀ. ದೂರದ ಸುರೀಯಲ್ಲಿ ಪರಿಸ್ಥಿತಿ ಮತ್ತಷ್ಟು ಭೀಕರವಾಗಿತ್ತು. 'ಎಸ್‌ಐಆರ್ ಆರಂಭವಾದಾಗಿನಿಂದ ನಾನು ಒಂದಲ್ಲ, ಮೂರು ಬಾರಿ ಅವರು ಕೇಳಿದ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದೇನೆ. ಆದರೂ ಅವರು ನನ್ನ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಿದ್ದಾರೆ' ಎಂದರು ಮೀರಾ ಡೋಲುಯಿ. ಬೆಳಿಗ್ಗೆಯೇ ಮನೆ ಬಿಟ್ಟು ಹೊರಟು ಸುರೀ ತಲುಪಿದ್ದ ಅವರು, ಉದ್ದದ ಸಾಲಿನಲ್ಲಿ ನಿಂತು ನಾಲ್ಕನೇ ಬಾರಿಗೆ ದಾಖಲೆಗಳನ್ನು ಸಲ್ಲಿಸಿದ್ದರು. 'ನ್ಯಾಯಮಂಡಳಿ ನನ್ನ ಮನವಿ ತಿರಸ್ಕರಿಸಿದರೆ, ನಾನು ಎಲ್ಲಿಗೆ ಹೋಗುತ್ತೇನೋ ಗೊತ್ತಿಲ್ಲ' ಎಂದರು ಮೀರಾ.
ತಮ್ಮ ಮತದಾನದ ಹಕ್ಕನ್ನು ಕಸಿದುಕೊಂಡದ್ದರ ವಿರುದ್ಧ ದಾಖಲೆ ಸಲ್ಲಿಸಲು ದುಬ್ರಾಜ್‌ಪುರದಿಂದ ಬಂದಿದ್ದ ತನುಜಾ ಬೀಬಿ, ದಾಖಲೆ ಸಲ್ಲಿಸಿದವರೇ ಕುಸಿದುಬಿದ್ದರು. 'ಸರತಿ ಸಾಲಿನಲ್ಲಿ ನಿಂತಿದ್ದಾಗ ನನ್ನ ಹೆಂಡತಿ ಅನಾರೋಗ್ಯಪೀಡಿತಳಾದಳು' ಎಂದು ಆಕೆಯ ಗಂಡ ಮುಕಿಂ ಶೇಖ್ ಹೇಳಿದರು. ಅವರ ಹೆಸರೂ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. 'ಆದರೆ, ನಾವು ಸರತಿ ಬಿಟ್ಟು ಹೊರಬರುವಂತಿರಲಿಲ್ಲ. ಇಲ್ಲದಿದ್ದರೆ ಅದಕ್ಕಾಗಿ ನಾವು ಮತ್ತೊಂದು ದಿನ ಬರಬೇಕಾಗುತ್ತಿತ್ತು.'
ಜೀವನ್ ಕೃಷ್ಣ ವಿಸ್ವಾಸ್ ಅವರು ತಮ್ಮ ಮಗಳು ಚಂಪಾ ಅವರೊಂದಿಗೆ ಮುಂಜಾನೆ ನಾದಿಯಾ ಜಿಲ್ಲೆಯ ಗರಾಪೋಟಾದಲ್ಲಿರುವ ತಮ್ಮ ಮನೆಯಿಂದ ಹೊರಟರು. ತಂದೆ, ಮಗಳು- ಇಬ್ಬರ ಹೆಸರುಗಳನ್ನೂ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇಬ್ಬರೂ ನಡೆದುಕೊಂಡು ಹೋಗಿ, ಆಟೊ ಹಿಡಿದು, ನಂತರ ರೈಲಿನಲ್ಲಿ ರಾಣಘಾಟ್ ತಲುಪಿದರು. ಅವರು ನ್ಯಾಯಮಂಡಳಿಯ ಮುಂದೆ ಮೇಲ್ಮನವಿ ಸಲ್ಲಿಸಲು ಮತ್ತು ತಮ್ಮ ಮತದಾನದ ಹಕ್ಕನ್ನು ಪುನರ್ ಸ್ಥಾಪಿಸಲು ಪ್ರಯತ್ನಿಸುವ ಸಲುವಾಗಿ ಹೊರಟಿದ್ದರು.
ಆದರೆ, ಅವರು ನಿಗದಿತ ಸ್ಥಳ ತಲುಪುವ ಮುನ್ನವೇ ಜೀವನ್ ಹೃದಯಾಘಾತಕ್ಕೆ ಒಳಗಾದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಕುಟುಂಬವನ್ನು ಪೋಷಿಸಲು ಕಟ್ಟಡ ನಿರ್ಮಾಣದ ಸ್ಥಳದಲ್ಲಿ ಅಡುಗೆಯವರಾಗಿ ಕೆಲಸ ಮಾಡುತ್ತಿದ್ದ 68 ವರ್ಷದ ಅವರು ತಮ್ಮ ಜೀವನದಲ್ಲಿ ಅನೇಕ ಚುನಾವಣೆಗಳಲ್ಲಿ ಮತ ಚಲಾಯಿಸಿದ್ದರು. ಆದರೆ, ಕೊನೆಗೆ ಆ ಹಕ್ಕು ಕಳೆದುಕೊಂಡು ಸಾವಿಗೀಡಾದರು.

ಹೀಗೆ ಆದದ್ದು ಅವರೊಬ್ಬರಿಗೇ ಏನಲ್ಲ. ಕಳೆದ ವಾರ ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆದುಹಾಕಲಾಗಿದೆ ಎಂದು ತಿಳಿದ ನಂತರ 32 ವರ್ಷದ ಅನಾರುಲ್ ಶೇಖ್ ವೀರಭೂಮಿಯ ನಲ್ಹಟಿಯಲ್ಲಿರುವ ತಮ್ಮ ಮನೆಯಲ್ಲಿ ಸತ್ತುಬಿದ್ದಿದ್ದರು. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಮಾಲ್ಡಾದ ಸಹಾಪುರದ 37 ವರ್ಷದ ಕಬಿಲ್ ಶೇಖ್ ಅವರದ್ದು ಕೂಡ ಇದೇ ಕಥೆ. ಎರಡು ವಾರಗಳಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಿದ್ದಕ್ಕೆ ಸಂಬಂಧಿಸಿದಂತೆ ಇನ್ನೂ ನಾಲ್ಕು ಸಾವುಗಳು ರಾಜ್ಯದಲ್ಲಿ ವರದಿಯಾಗಿವೆ.
ಎಸ್‌ಐಆರ್ ಪ್ರಕ್ರಿಯೆಯು ಪಶ್ಚಿಮ ಬಂಗಾಳದಲ್ಲಿ ಸುಮಾರು 220 ಜೀವಗಳನ್ನು ಬಲಿ ತೆಗೆದುಕೊಂಡಿದೆ ಎಂದು ಮಮತಾ ಬ್ಯಾನರ್ಜಿ ಅವರು ಆರೋಪಿಸಿದ್ದಾರೆ. ಆದರೆ, ಚುನಾವಣಾ ಆಯೋಗವು ಮಮತಾ ಅವರ ಹೇಳಿಕೆಯನ್ನು ಒಪ್ಪಿಲ್ಲ.
ಇದು ಉತ್ಪ್ರೇಕ್ಷೆ ಎನ್ನುವುದು ಬಿಜೆಪಿ ವಾದ. ಮತದಾರರ ಪಟ್ಟಿಯನ್ನು ಸರಿಸಡಿಸುವ ಪ್ರಕ್ರಿಯೆಗೆ ಕಳಂಕ ತರಲು ಸಹಜ ಸಾವುಗಳನ್ನೂ ಮಮತಾ ಬ್ಯಾನರ್ಜಿ ಅವರು ಬಳಸಿಕೊಳ್ಳುತ್ತಿದ್ದಾರೆ ಎನ್ನುವುದು ಅದರ ಆರೋಪ.
ವಿಧಾನಸಭಾ ಚುನಾವಣೆಗೆ ಸುಮಾರು ಆರು ತಿಂಗಳ ಮೊದಲು (2025ರ ನವೆಂಬರ್ 4ರಂದು) ಚುನಾವಣಾ ಆಯೋಗ (ಇಸಿ) ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಪ್ರಾರಂಭಿಸಿತು. ಡಿಸೆಂಬರ್ 16ರಂದು ಮೊದಲ ಹಂತ ಮುಗಿಯುವ ಹೊತ್ತಿಗೆ, ಮೊದಲು 7.66 ಕೋಟಿಯಷ್ಟಿದ್ದ ಮತದಾರರ ಸಂಖ್ಯೆಯು 7.08 ಕೋಟಿಗೆ ಇಳಿದಿತ್ತು. ಸುಮಾರು 58 ಲಕ್ಷ ಹೆಸರುಗಳನ್ನು 'ಎಎಎಸ್‌ಡಿ'ಗಳು ಎಂದು ತೆಗೆದುಹಾಕಲಾಗಿದೆ. ಅಂದರೆ, ಗೈರುಹಾಜರಾದವರು, ಸ್ಥಳಾಂತರಗೊಂಡವರು, ಮರಣ ಹೊಂದಿದವರು ಮತ್ತು ನಕಲಿ ಮತದಾರರು.
ಚುನಾವಣಾ ಆಯೋಗವು ಸತ್ತಿದ್ದಾರೆ ಎಂದು ಘೋಷಿಸಿ, ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಿದ್ದ ಹಲವರನ್ನು ತೃಣಮೂಲ ಕಾಂಗ್ರೆಸ್‌ನ ಪರಮೋಚ್ಚ ನಾಯಕಿ ಮಮತಾ ಬ್ಯಾನರ್ಜಿ ಮತ್ತು ಅವರ ಉತ್ತರಾಧಿಕಾರಿ ಎನ್ನಲಾಗುವ ಅಭಿಷೇಕ್ ಬ್ಯಾನರ್ಜಿ ಅವರು ಕರೆತಂದು ಪರೇಡ್ ನಡೆಸಿದ್ದರು.

2025ರ ಡಿ.27ರಂದು ಆರಂಭವಾದ ಎರಡನೇ ಹಂತದಲ್ಲಿ ಪರಿಷ್ಕರಣೆ ಪಟ್ಟಿಯಲ್ಲಿದ್ದ 1.67 ಕೋಟಿ ಜನರನ್ನು ವಿಚಾರಣೆಗೆ ಕರೆಯಲಾಗಿತ್ತು. ಈ ಪೈಕಿ 1.36 ಕೋಟಿ ಮಂದಿಯ ಹೆಸರುಗಳ 'ಮಾಹಿತಿ ಹೊಂದಿಕೆ ಆಗುತ್ತಿಲ್ಲ' ಎನ್ನಲಾಗಿದೆ. 31 ಲಕ್ಷ ಮಂದಿಯ ಹೆಸರುಗಳು 2002ರ ಪಟ್ಟಿಯೊಂದಿಗೆ ಹೊಂದಾಣಿಕೆ ಆಗದಿರುವುದು ಸೇರಿದಂತೆ ಹಲವು ರೀತಿಯ ಸಮಸ್ಯೆ ಎದುರಿಸುತ್ತಿವೆ.
ರಾಜ್ಯದಾದ್ಯಂತ ಒಂದೇ ಪರಿಸ್ಥಿತಿ; ತಮ್ಮ ಮತದಾನದ ಹಕ್ಕನ್ನು ರಕ್ಷಿಸಿಕೊಳ್ಳಲು ಅಂಗವಿಕಲರು, ಹಿರಿಯ ನಾಗರಿಕರು, ಅನಾರೋಗ್ಯ ಇರುವವರು ಸೇರಿದಂತೆ ದೊಡ್ಡ ಸಂಖ್ಯೆಯ ಜನ ಉದ್ದದ ಸಾಲುಗಳಲ್ಲಿ ನಿಲ್ಲುತ್ತಿದ್ದಾರೆ. ಅಕ್ಷರ ದೋಷಗಳು, ಕುಟುಂಬದ ಹೆಸರಿನ ತಪ್ಪು ನಮೂದು, ವಯಸ್ಸು ಮತ್ತಿತರ ವಿವರಗಳಲ್ಲಿನ ತಪ್ಪುಗಳು 'ಮಾಹಿತಿ ಹೊಂದಿಕೆ ಆಗುತ್ತಿಲ್ಲ' ಪಟ್ಟಿಯಲ್ಲಿ ಬರುತ್ತವೆ. ಹೀಗಾಗಿ ನೈಜ ಮತದಾರರು ಕೂಡ ಮತ್ತೆ ಮತ್ತೆ ವಿಚಾರಣೆಗೆ ಹಾಜರಾಗಬೇಕಾದ, ಹಲವು ರೀತಿಯ ದಾಖಲೆ ಸಲ್ಲಿಸಬೇಕಾದ ಮತ್ತು ವಿಸ್ತೃತ ಆಡಳಿತಾತ್ಮಕ ಪ್ರಕ್ರಿಯೆ ಅನುಸರಿಸಬೇಕಾದ ಅನಿವಾರ್ಯಕ್ಕೆ ಸಿಲುಕಿದ್ದಾರೆ.
ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಆಯೋಗವು ಫೆಬ್ರುವರಿ 28ರಂದು ಮತ್ತೊಂದು ಪಟ್ಟಿ ಪ್ರಕಟಿಸಿತು. 63.66 ಲಕ್ಷ (ಶೇ 8.3ರಷ್ಟು) ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿತ್ತು. ಜತೆಗೆ, 60.6 ಲಕ್ಷ ಮತದಾರರ ಹೆಸರುಗಳು 'ಪರಿಶೀಲನೆಯ ಹಂತ' ವಿಭಾಗದಲ್ಲಿ ಸೇರಿಸಲಾಗಿದೆ. ಇವರು ಪಟ್ಟಿಯಲ್ಲಿರಬೇಕೇ ಬೇಡವೇ ಎನ್ನುವುದನ್ನು ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಕಲ್ಕತ್ತ ಹೈಕೋರ್ಟ್‌ನ ನ್ಯಾಯಾಂಗ ಅಧಿಕಾರಿಗಳು ಪರಿಶೀಲಿಸಲಿದ್ದಾರೆ.
'ಪರಿಶೀಲನೆಯ ಹಂತ'ದಲ್ಲಿರುವ 27 ಲಕ್ಷಕ್ಕೂ ಅಧಿಕ ಮಂದಿಯ ಹೆಸರುಗಳು ಮತದಾರರ ಪಟ್ಟಿಯಿಂದ ತೆಗೆದುಹಾಕಲ್ಪಟ್ಟಿದ್ದು, ಮೇಲ್ಮನವಿ ಸಲ್ಲಿಸಲು ಅವರು ಅದಕ್ಕಾಗಿ (ಸುಪ್ರೀಂ ಕೋರ್ಟ್ ನಿರ್ದೇಶನದಂತೆ) ಸ್ಥಾಪಿಸಲಾಗಿರುವ 19 ನ್ಯಾಯಮಂಡಳಿಗಳ ಮುಂದೆ ಮತ್ತೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಏಪ್ರಿಲ್ ಆರು ಮತ್ತು ಏಳರಂದು ಆಯೋಗವು ಈ ಮಾಹಿತಿಯನ್ನು ಪ್ರಕಟಿಸಿದೆ.
ಆದಾಗ್ಯೂ, ಚುನಾವಣೆಗೆ ನಾಮಪತ್ರ ಸಲ್ಲಿಸುವ ದಿನಾಂಕ ಅಂತ್ಯವಾಗಿರುವುದರಿಂದ ರಾಜ್ಯದ 294 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ ಸ್ಥಗಿತವಾಗಿದೆ. ಪಟ್ಟಿಯಿಂದ 91 ಲಕ್ಷ ಮಂದಿಯ ಹೆಸರುಗಳನ್ನು ತೆಗೆದುಹಾಕಲಾಗಿದೆ. ರಾಜ್ಯದಲ್ಲಿ ಏಪ್ರಿಲ್ 23 ಮತ್ತು 29ರಂದು ಮತದಾನ ನಡೆಯಲಿದ್ದು, ಅದಕ್ಕೂ ಮುಂಚೆಯೇ ನ್ಯಾಯಮಂಡಳಿ ಅವರ ಹೆಸರುಗಳನ್ನು ಪಟ್ಟಿಗೆ ಸೇರಿಸಿದರೂ, ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡದ ಹೊರತು ಅವರು ತಮ್ಮ ಹಕ್ಕು ಚಲಾಯಿಸುವುದು ಸಾಧ್ಯವಿಲ್ಲ. ರಾಜ್ಯದಲ್ಲಿ ಮತದಾರರ ಸಂಖ್ಯೆಯು 6.77 ಕೋಟಿಗೆ ಇಳಿದಿದೆ.
ಆಯೋಗ-ಟಿಎಂಸಿ ಸಂಘರ್ಷ
ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಶುರುವಾದಾಗಿನಿಂದ ಚುನಾವಣಾ ಆಯೋಗ ಮತ್ತು ಟಿಎಂಸಿ ಸಂಘರ್ಷದಲ್ಲಿ ತೊಡಗಿವೆ. ವಿಧಾನಸಭಾ ಚುನಾವಣೆಯಲ್ಲಿ ಕೇಸರಿ ಪಾಳಯಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಬಿಜೆಪಿಯ ಸೂಚನೆಯ ಅನುಸಾರ ಚುನಾವಣಾ ಆಯೋಗವು ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸುತ್ತಿದೆ ಎಂದು ಟಿಎಂಸಿ ಆರೋಪಿಸಿದೆ.
ಚುನಾವಣಾ ವೇಳಾಪಟ್ಟಿ ಪ್ರಕಟವಾದ ನಂತರ ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳನ್ನು ಆಯೋಗವು ವರ್ಗಾವಣೆ ಮಾಡಿರುವುದು ಕೂಡ ಮಾಲ್ಡಾದ ಕಲಿಯಾಚಕ್‌ನಲ್ಲಿ ಉದ್ರಿಕ್ತರ ಗುಂಪು ನ್ಯಾಯಾಂಗ ಇಲಾಖೆಯ ಅಧಿಕಾರಿಗಳನ್ನು ಕೂಡಿ ಹಾಕುವಂತಹ ಸನ್ನಿವೇಶ ನಿರ್ಮಾಣಕ್ಕೆ ಕಾರಣವಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆರೋಪಿಸಿದ್ದಾರೆ.
ದೆಹಲಿಯ ನಿರ್ವಚನ ಭವನದಲ್ಲಿ (ಚುನಾವಣಾ ಆಯೋಗದ ಮುಖ್ಯ ಕಚೇರಿ) ಏಪ್ರಿಲ್ 8ರಂದು ಭೇಟಿಗೆ ಹೋಗಿದ್ದಾಗ ಮುಖ್ಯ ಚುನಾವಣಾ ಆಯುಕ್ತರು ತಮಗೆ 'ಇಲ್ಲಿಂದ ತೊಲಗಿ' (ಗೆಟ್ ಲಾಸ್ಟ್) ಎಂದಿದ್ದಾರೆ ಎಂದು ಟಿಎಂಸಿ ಸಂಸದರು ಆರೋಪಿಸಿದ್ದು ಆಯೋಗ ಮತ್ತು ಟಿಎಂಸಿ ನಡುವಿನ ಸಂಘರ್ಷದ ಇತ್ತೀಚಿನ ಕುದಿಬಿಂದುವಾಗಿದೆ. ಈ ಆರೋಪ ಕೇಳಿಬಂದ ನಂತರ ಈ ಬಗ್ಗೆ 'ಎಕ್ಸ್'ನಲ್ಲಿ ಪ್ರತಿಕ್ರಿಯಿಸಿದ್ದ ಆಯೋಗವು, ಟಿಎಂಸಿಗೆ ತನ್ನ ನೇರ ಮಾತುಗಳೆಂದರೆ- ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆಯು 'ಹಿಂಸಾಚಾರ-ಮುಕ್ತ', 'ಭಯ-ಮುಕ್ತ', 'ಆಮಿಷ-ಮುಕ್ತ'; ನಕಲಿ ಮತದಾನ ಇಲ್ಲದೆ, ಮತಗಟ್ಟೆ ಮತ್ತು ಸಂಪನ್ಮೂಲಗಳ ತಡೆ ಇಲ್ಲದೆ ನಡೆಯಲಿದೆ- ಎಂದು ಹೇಳಿತ್ತು. ಆಯೋಗದ ಈ ಪೋಸ್ಟ್‌ನಲ್ಲಿರುವ ಅಂಶಗಳು 'ಪಶ್ಚಿಮ ಬಂಗಾಳದಲ್ಲಿ ಚುನಾವಣೆಯಲ್ಲಿ ಗೆಲ್ಲಲು ಟಿಎಂಸಿಯು ಇದೇ ರೀತಿ ಮಾಡುತ್ತಾ ಬಂದಿದೆ' ಎಂದು ಬಿಜೆಪಿ ಹಿಂದಿನಿಂದಲೂ ಮಾಡುತ್ತಾ ಬಂದಿರುವ ಆರೋಪವನ್ನೇ ಪ್ರತಿಧ್ವನಿಸುವಂತಿತ್ತು.
2021ರ ಚುನಾವಣೆಯಲ್ಲಿ 3.28 ಕೋಟಿ ಮತಗಳನ್ನು (47.9%) ಪಡೆಯುವ ಮೂಲಕ ಟಿಎಂಸಿಯು 294 ಸ್ಥಾನಗಳಲ್ಲಿ 213 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿಯು 2.63 ಕೋಟಿ (38.1%) ಮತಗಳನ್ನು ಪಡೆದು 77 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಎಸ್‌ಐಆರ್ ಪ್ರಕ್ರಿಯೆಯಲ್ಲಿ 91 ಲಕ್ಷ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದ್ದು, ಇದು 2021ರದಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವಿನ 65 ಲಕ್ಷ ಮತಗಳ ವ್ಯತ್ಯಾಸಕ್ಕಿಂತ ಹೆಚ್ಚಿದೆ.

ನಂದಿಗ್ರಾಮದ ನಿವಾಸಿಗಳಲ್ಲಿ ಶೇ 25ರಷ್ಟು ಮುಸ್ಲಿಮರಿದ್ದಾರೆ. ಆದರೆ, ನ್ಯಾಯಾಂಗದ ಅಧಿಕಾರಿಗಳು ನಡೆಸಿರುವ ಮತದಾರರ ಪಟ್ಟಿ ಪರಿಶೀಲನೆಯ ನಂತರ ಮತದಾರರ ಪಟ್ಟಿಯಿಂದ ತೆಗೆದುಹಾಕಿದ ಹೆಸರುಗಳಲ್ಲಿ ಶೇ 95ರಷ್ಟು ಮುಸ್ಲಿಮರು ಇದ್ದಾರೆ ಎಂಬ ಸಂಗತಿ ಕೋಲ್ಕತ್ತದ ಸಬರ್ ಇನ್‌ಸ್ಟಿಟ್ಯೂಟ್ ನಡೆಸಿರುವ ಅಧ್ಯಯನದಿಂದ ತಿಳಿದುಬಂದಿದೆ. ಭವಾನಿಪುರದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲು ಶೇ 20ರಷ್ಟು. ಆದರೆ, 'ಪರಿಶೀಲನೆಯ ಹಂತ'ದಲ್ಲಿದೆ (ದಾಖಲೆಗಳು ಹೊಂದದೆ ಹಾಗೂ ಇತರ ಕಾರಣಗಳಿಂದ) ಎಂಬ ಕಾರಣಕ್ಕೆ ಸದ್ಯ ಮತದಾರರ ಪಟ್ಟಿಯಿಂದ ಕೈಬಿಟ್ಟವರಲ್ಲಿ ಶೇ 40ರಷ್ಟು ಮುಸ್ಲಿಮರು. 2021ರ ಚುನಾವಣೆಯಲ್ಲಿ ಸುವೇಂದು ಅವರು ನಂದಿಗ್ರಾಮದಲ್ಲಿ ಮಮತಾ ಅವರನ್ನು ಅತ್ಯಂತ ಕಡಿಮೆ ಮತಗಳ ಅಂತರದಿಂದ ಸೋಲಿಸಿದ್ದರು.
2025ರ ನವೆಂಬರ್‌ನಲ್ಲಿ ಎಸ್‌ಐಆರ್ ಪ್ರಕ್ರಿಯೆ ಆರಂಭಗೊಂಡ ನಂತರ ಉತ್ತರ ಮತ್ತು ದಕ್ಷಿಣ ಪರಗಣ ಜಿಲ್ಲೆಗಳಲ್ಲಿ ಗರಿಷ್ಠ ಸಂಖ್ಯೆಯ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಉತ್ತರ ಪರಗಣ ಜಿಲ್ಲೆಯಲ್ಲಿದ್ದ 83 ಲಕ್ಷ ಮತದಾರರಲ್ಲಿ 12.6 ಲಕ್ಷ ಜನರನ್ನು ಮತ್ತು ದಕ್ಷಿಣ ಪರಗಣ ಜಿಲ್ಲೆಯಲ್ಲಿ 85.94 ಲಕ್ಷ ಮತದಾರರಲ್ಲಿ 10.91 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. 2021ರಲ್ಲಿ ಉತ್ತರ ಪರಗಣ ಜಿಲ್ಲೆಯಲ್ಲಿ 33 ಕ್ಷೇತ್ರಗಳಲ್ಲಿ 24 ಮತ್ತು ದಕ್ಷಿಣ ಪರಗಣ ಜಿಲ್ಲೆಯ 31 ಕ್ಷೇತ್ರಗಳ ಪೈಕಿ 30ರಲ್ಲಿ ಟಿಎಂಸಿ ಜಯಗಳಿಸಿತ್ತು. ಬಿಜೆಪಿಯು ಉತ್ತರ ಪರಗಣದಲ್ಲಿ ಐದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ದಕ್ಷಿಣ ಪರಗಣದಲ್ಲಿ ಯಾವುದೇ ಕ್ಷೇತ್ರದಲ್ಲಿ ಅದು ಜಯ ಗಳಿಸಿರಲಿಲ್ಲ.
ಮುಸ್ಲಿಂ ಪ್ರಾಬಲ್ಯದ ಮುರ್ಷಿದಾಬಾದ್ (ಶೇ 66) ಮತ್ತು ಮಾಲ್ಡಾ (ಶೇ 51) ಜಿಲ್ಲೆಗಳಲ್ಲಿ ಅತಿ ಹೆಚ್ಚು ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ. ಈ ಎರಡು ಜಿಲ್ಲೆಗಳಲ್ಲಿ 'ಪರಿಶೀಲನೆಯ ಹಂತ'ದಲ್ಲಿರುವ ಮತದಾರರ ಸಂಖ್ಯೆಯೂ ಗಣನೀಯವಾಗಿದ್ದು, ಕ್ರಮವಾಗಿ 4.55 ಲಕ್ಷ ಮತ್ತು
2.39 ಲಕ್ಷದಷ್ಟಿದ್ದಾರೆ.
ಪಟ್ಟಿಯಿಂದ ತೆಗೆಯಲಾದ ಮತದಾರರಲ್ಲಿ 57 ಲಕ್ಷದಷ್ಟು ಮಹಿಳೆಯರಿದ್ದಾರೆ. ಇದು ಕೂಡ ಬಿಜೆಪಿಗೆ ಅನುಕೂಲಕರವಾಗಬಹುದು ಎಂದು ಹೇಳಲಾಗಿದೆ. 'ಕನ್ಯಶ್ರೀ' ಮತ್ತು 'ಲಕ್ಷ್ಮಿ ಭಂಡಾರ'ದಂತಹ ಕಲ್ಯಾಣ ಯೋಜನೆಗಳ ಮೂಲಕ ಟಿಎಂಸಿಯು ಅಲ್ಪಸಂಖ್ಯಾತ ಸಮುದಾಯದ ಬಳಿಕ ಮಹಿಳೆಯರನ್ನು ತನ್ನ ಅತ್ಯಂತ ಪ್ರಬಲ ಮತಬ್ಯಾಂಕ್ ಆಗಿಸಿಕೊಂಡಿತ್ತು.
ಲಾಭದೊಂದಿಗೆ ನಷ್ಟ
ಮತದಾರರ ಪಟ್ಟಿ ಪರಿಷ್ಕರಣೆಯಿಂದ ಬಿಜೆಪಿಗೆ ಆಗುವ ಲಾಭದೊಂದಿಗೆ ನಷ್ಟವೂ ಇದೆ. ಪಟ್ಟಿಯಿಂದ ತೆಗೆದುಹಾಕಲಾಗಿರುವ ಮತದಾರರಲ್ಲಿ ದೊಡ್ಡ ಸಂಖ್ಯೆಯಲ್ಲಿ, ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬಂದಿರುವ ಹಿಂದೂ ಮತುವಾ ಸಮುದಾಯದವರಿದ್ದಾರೆ. ಪಶ್ಚಿಮ ಬಂಗಾಳದ 45 ಕ್ಷೇತ್ರಗಳ ಫಲಿತಾಂಶದಲ್ಲಿ ಈ ಸಮುದಾಯದವರು ನಿರ್ಣಾಯಕವಾಗಿದ್ದಾರೆ.
'ಅಕ್ರಮ ವಲಸಿಗ ಮುಸ್ಲಿಮರನ್ನು ಪತ್ತೆ ಹಚ್ಚಿ ಅವರನ್ನು ಗಡಿಪಾರು ಮಾಡುವ ಉದ್ದೇಶದಿಂದ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಸಲಾಗುತ್ತಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಆದರೆ, ಇಲ್ಲಿಗೆ ನಿರಾಶ್ರಿತರಾಗಿ ಬಂದಿರುವ ಹಿಂದೂ ಮತುವಾ ಸಮುದಾಯದವರನ್ನು ಅವರು ಈಗ ಯಾಕೆ ಗುರಿಯಾಗಿಸಿದ್ದಾರೆ ಎಂದು ಪ್ರಶ್ನಿಸುತ್ತಾರೆ ಸಮುದಾಯದ ನಾಯಕ ನವೀನ್ ವಿಶ್ವಾಸ್. ಕೆಲವು ವರ್ಷಗಳ ಹಿಂದೆ ನವೀನ್ ಅವರು ರಾಜಾರ್‌ಹಟ್‌ನ ನ್ಯೂ ಟೌನ್‌ನಲ್ಲಿರುವ ತಮ್ಮ ಪುಟ್ಟ ಮನೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರಿಗೆ ಆತಿಥ್ಯ ನೀಡಿದ್ದರು. 'ನಾವು ರಾಜ್ಯ ಮತ್ತು ಕೇಂದ್ರದ ಬಿಜೆಪಿ ನಾಯಕರ ನಡೆಯಿಂದ ನಿರಾಸೆಹೊಂಡಿದ್ದೇವೆ' ಎಂದು ಹೇಳುತ್ತಾರೆ ಅವರು.
'ಪಟ್ಟಿಯಿಂದ ಕೈಬಿಟ್ಟ 91 ಲಕ್ಷ ಮತದಾರರಲ್ಲಿ 57 ಲಕ್ಷ ಜನರು ಹಿಂದೂಗಳು, 31 ಲಕ್ಷ ಮುಸ್ಲಿಮರು' ಎಂದು ಹೇಳುತ್ತವೆ ಟಿಎಂಸಿ ಮೂಲಗಳು. ಹಿಂದೂಗಳನ್ನು ರಕ್ಷಿಸಲು ಮತದಾರರ ಪಟ್ಟಿ ಪರಿಷ್ಕರಣೆ ಅಗತ್ಯ ಎಂದು ಬಿಜೆಪಿ ಹೇಳಿತ್ತು. ಆದರೆ ಎಸ್‌ಐಆರ್ ಪಶ್ಚಿಮ ಬಂಗಾಳದ ಹಿಂದೂಗಳಿಗೆ ಹೆಚ್ಚು ಗಾಸಿ ಉಂಟುಮಾಡಿದೆ' ಎಂದು ಆಡಳಿತಾರೂಢ ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳುತ್ತಾರೆ.
'ಮತದಾರರ ಪಟ್ಟಿಯಿಂದ ಹೊರಬಿದ್ದಿರುವ ಜನರಿಗೆ ನಾವು ಕಾನೂನು ನೆರವನ್ನು ನೀಡಿದ್ದೇವೆ. ಎಸ್‌ಐಆರ್ ಪ್ರಕ್ರಿಯೆಯು ಜನರನ್ನು ತೀವ್ರ ಸಂಕಟಕ್ಕೆ ದೂಡಿದ್ದು, ಅಂತಿಮವಾಗಿ ಇದು ಬಿಜೆಪಿಗೆ ಹಾನಿ ಮಾಡಲಿದೆ' ಎಂದು ಅಲೀಪುರದುವಾರ್ ಜಿಲ್ಲೆಯಲ್ಲಿ ಪಕ್ಷದ ಚುನಾವಣಾ ಸಿದ್ಧತೆಗಳನ್ನು ನೋಡಿಕೊಳ್ಳುತ್ತಿರುವ ಟಿಎಂಸಿ ರಾಜ್ಯಸಭಾ ಸದಸ್ಯ ಪ್ರಕಾಶ್ ಚಿಕ್ ಬರೇಕ್ ಅವರು ನುಡಿಯುತ್ತಾರೆ.
ಕೂಚ್ ಬಿಹಾರ್ ಜಿಲ್ಲೆಯ ದಿನ್ಹಾಟಾ, ಮಥಾಭಂಗಾ ಮತ್ತು ಮೇಖಲೀಗಂಜ್... ಈ ಮೂರು ಉಪವಿಭಾಗಗಳು ಎಸ್‌ಐಆರ್‌ನಿಂದ ಅತಿ ಹೆಚ್ಚು ತೊಂದರೆಗೆ ಒಳಗಾಗಿವೆ. ಈ ಉಪವಿಭಾಗಗಳ ಕೆಲವು ಪ್ರದೇಶಗಳು ಬಾಂಗ್ಲಾದೇಶದೊಂದಿಗೆ ಗಡಿಹೊಂದಿವೆ. ಇಲ್ಲೆಲ್ಲ ಮತದಾರರ ಪಟ್ಟಿ ಪರಿಷ್ಕರಣೆ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ಭಾರತ ಮತ್ತು ಬಾಂಗ್ಲಾದೇಶದ ನಡುವೆ 2015ರಲ್ಲಿ ನಡೆದ ಒಪ್ಪಂದದ ಅಡಿಯಲ್ಲಿ 162 ಭೂಪ್ರದೇಶಗಳನ್ನು ವಿನಿಮಯ ಮಾಡಿಕೊಂಡ ನಂತರ, ಆ ಪ್ರದೇಶದಲ್ಲಿದ್ದವರಿಗೆ ಭಾರತದ ಪೌರತ್ವ ನೀಡುವ ಭರವಸೆ ನೀಡಲಾಗಿತ್ತು. ಈ ಪ್ರದೇಶದ ನಿವಾಸಿಗಳು, 2002ರ ಮತದಾರರ ಪಟ್ಟಿಯ ಬದಲಿಗೆ, 2015ರ ಮತದಾರರ ಪಟ್ಟಿಯ ಆಧಾರದಲ್ಲಿ ತಮ್ಮ ಹೆಸರುಗಳನ್ನು ಪಟ್ಟಿಗೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು, ಕೊನೆಯ ದಿನದಲ್ಲಿ ಪ್ರತಿ ನ್ಯಾಯಮಂಡಳಿಯು ಕೈಗೊಳ್ಳುವ ನಿರ್ಧಾರವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ಆದೇಶವು ನಿಗದಿತ ದಿನಾಂಕದ ಬಳಿಕವೂ ವಿಸ್ತರಣೆಯಾದರೆ, ಪೂರಕ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಕಾರ್ಯ ಸಾಧುವಾಗಲಾರದು.
'ಇಂತಹ ಹಕ್ಕುಗಳನ್ನು ಶಾಶ್ವತವಾಗಿ ಕೊನೆಗಾಣಿಸಲು ಸಾಧ್ಯವಿಲ್ಲ' ಎಂದು ಹೇಳಿದ್ದ ನ್ಯಾಯಾಲಯ, ಅವರಿಗೆ ಒಟ್ಟಾಗಿ ಮತದಾನದ ಹಕ್ಕುಗಳನ್ನು ನಿರಾಕರಿಸುವುದು 'ತೀವ್ರ ದಬ್ಬಾಳಿಕೆಯ ಸನ್ನಿವೇಶ' ಸೃಷ್ಟಿಸಬಹುದು ಎಂದು ಎಚ್ಚರಿಸಿತ್ತು. ಮತದಾರರ ಪಟ್ಟಿಯಲ್ಲಿ ಹೆಸರಿಗೆ ಸಂಬಂಧಿಸಿದ ಸಮಸ್ಯೆಯನ್ನು ಇತ್ಯರ್ಥಪಡಿಸಲು ಹೊಸ ದಾಖಲೆಗಳನ್ನು ಪರಿಗಣಿಸಲು ನ್ಯಾಯಾಲಯವು ಮೇಲ್ಮನವಿ ನ್ಯಾಯಮಂಡಳಿಗೆ ಅನುಮತಿ ನೀಡಿತ್ತು. ಆದರೆ, ದಾಖಲೆಗಳ ವಿಶ್ವಾಸಾರ್ಹತೆಯನ್ನು ಪರಿಶೀಲಿಸಿದ ನಂತರವಷ್ಟೇ ಪರಿಗಣಿಸಬೇಕು ಎಂದೂ ಹೇಳಿತ್ತು.
ಪೂರಕ ಮಾಹಿತಿ: ನವದೆಹಲಿಯಿಂದ ಆಶೀಶ್ ತ್ರಿಪಾಠಿ ಮತ್ತು ಡಾರ್ಜಿಲಿಂಗ್‌ನಿಂದ ಸುಮಿತ್ ಪಾಂಡೆ)
ವಿಶೇಷ ನ್ಯಾಯಮಂಡಳಿ ಮುಂದೆ ಮೇಲ್ಮನವಿ ಸಲ್ಲಿಸಲು ಮಗುವಿನೊಂದಿಗೆ ಬಂದ ಮಹಿಳೆಎಸ್ಐಆರ್ ಎಂದರೆ...
ಮತದಾರರ ಪಟ್ಟಿಯನ್ನು ಸಮಗ್ರವಾಗಿ ಸಂಪೂರ್ಣವಾಗಿ ಪರಿಷ್ಕರಣೆ ಮಾಡುವುದು. ಮತದಾರರ ಪಟ್ಟಿಯ ನಿಖರತೆಯನ್ನು ಕಾಪಾಡಿಕೊಳ್ಳಲು ಕ್ಷೇತ್ರಗಳ ಬದಲಾವಣೆ ನಂತರ ಅಥವಾ ಪ್ರಮುಖ ಚುನಾವಣೆಗಳಿಗೆ ಮುನ್ನ ಇದನ್ನು ನಡೆಸಲಾಗುತ್ತದೆ. 1951ರಿಂದ 2004ರ ನಡುವೆ ಎಂಟು ಬಾರಿ ಎಸ್‌ಐಆರ್ ಮಾಡಲಾಗಿದೆ. 2002-2004ರಲ್ಲಿ ಎಸ್‌ಐಆರ್ ನಡೆದು 20 ವರ್ಷಗಳಾಗಿರುವುದರಿಂದ ಈಗ ಪ್ರಕ್ರಿಯೆ ಅಗತ್ಯವಾಗಿತ್ತು ಎಂದು ಭಾರತದ ಚುನಾವಣಾ ಆಯೋಗವು ಸಮರ್ಥಿಸಿಕೊಂಡಿದೆ.


