Dailyhunt Logo
  • Light mode
    Follow system
    Dark mode
    • Play Story
    • App Story
ಆಳ-ಅಗಲ| ಒಡೆದ ಮನೆಯಾಯಿತೇ ಚುನಾವಣಾ ಆಯೋಗ? ಸಂಚಲನ ಸೃಷ್ಟಿಸಿದ ವರದಿ

ಆಳ-ಅಗಲ| ಒಡೆದ ಮನೆಯಾಯಿತೇ ಚುನಾವಣಾ ಆಯೋಗ? ಸಂಚಲನ ಸೃಷ್ಟಿಸಿದ ವರದಿ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್‌) ಕಾರಣಕ್ಕೆ ವಿವಾದದ ಕೇಂದ್ರಬಿಂದುವಾಗಿರುವ ಭಾರತೀಯ ಚುನಾವಣಾ ಆಯೋಗ ಈಗ ಮತ್ತೆ ಸುದ್ದಿಯಲ್ಲಿದೆ. ಆಯೋಗದ ಕಾರ್ಯವೈಖರಿ ಮತ್ತು ಅದು ಕೈಗೊಂಡಿರುವ ಕೆಲವು ನಿರ್ಧಾರಗಳ ಬಗ್ಗೆ ಇಬ್ಬರು ಚುನಾವಣಾ ಆಯುಕ್ತರು ಹಲವು ಬಾರಿ ಆಕ್ಷೇಪಗಳನ್ನು ವ್ಯಕ್ತಪಡಿಸಿರುವುದು ವರದಿಯಾಗಿದೆ.

'ದಿ ಇಂಡಿಯನ್‌ ಎಕ್ಸ್‌ಪ್ರೆಸ್‌' ಪ್ರಕಟಿಸಿರುವ ವರದಿಯು ಚುನಾವಣಾ ಆಯೋಗದ ಆಡಳಿತದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಬಹಿರಂಗಪಡಿಸಿದೆ.

ಮುಖ್ಯ ಚುನಾವಣಾ ಆಯುಕ್ತ ಸೇರಿ ಮೂವರು ಆಯುಕ್ತರ ಪೈಕಿ ಇಬ್ಬರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು ವಿವೇಕ್‌ ಜೋಶಿ ಅವರು, ಆಯೋಗವು ತಮ್ಮ ಗಮನಕ್ಕೆ ತಾರದೇ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿರುವುದು, ವಿರೋಧದ ಹೊರತಾಗಿಯೂ ಮತದಾರರ ಪಟ್ಟಿಯಲ್ಲಿನ ಹೆಸರು ಸೇರ್ಪಡೆಗೊಳಿಸುವ ಅರ್ಜಿ
ನಮೂನೆ-6ರಲ್ಲಿ ಬದಲಾವಣೆ ಮಾಡಿರುವ ಬಗ್ಗೆ, ಎಸ್‌ಐಆರ್‌ ಪ್ರಕ್ರಿಯೆಯಲ್ಲಿನ ಕೆಲವು ಅಂಶಗಳ ಬಗ್ಗೆ 10 ತಿಂಗಳಲ್ಲಿ 14 ಬಾರಿ ಲಿಖಿತವಾಗಿ ಆಕ್ಷೇಪ ದಾಖಲು ಮಾಡಿರುವುದು ಚುನಾವಣಾ ಆಯೋಗ ಮತ್ತು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಇಬ್ಬರ ವಿರೋಧದ ಹೊರತಾಗಿಯೂ ಕೆಲವು ಪ್ರಮುಖ ವಿಚಾರಗಳಲ್ಲಿ ಮುಖ್ಯ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿರುವ ಆರೋಪ ವ್ಯಕ್ತವಾಗಿದ್ದು, ಅವರ ವಿರುದ್ಧ ಕ್ರಮಕ್ಕೆ ವಿರೋಧ ಪಕ್ಷಗಳು ಆಗ್ರಹಿಸಿವೆ.

'ದಿ ಇಂಡಿಯನ್‌ ಎಕ್ಸ್‌ಪ್ರೆಸ್‌'ನಲ್ಲಿ ಪ್ರಕಟವಾದ ವರದಿಯಲ್ಲಿನ ಕೆಲವು ಪ್ರಮುಖ ಅಂಶಗಳು ಇಲ್ಲಿವೆ.

10 ತಿಂಗಳಲ್ಲಿ 14 ಬಾರಿ ಆಕ್ಷೇಪ

1. 2025, ಅಕ್ಟೋಬರ್‌ 28: ಚುನಾವಣಾ ಆಯೋಗದ ಅನುಮೋದನೆ ಇಲ್ಲದೆಯೇ ಆಯೋಗದ ಹೆಸರಿನಲ್ಲಿ ಪತ್ರಗಳು, ಆದೇಶಗಳನ್ನು ಪ್ರಕಟಿಸಿರುವ ಬಗ್ಗೆ ಸುಖಬೀರ್‌ ಸಿಂಗ್‌ ಸಂಧು ಪತ್ರ

2. 2026, ಏಪ್ರಿಲ್‌ 16: ಹೊಸ ಐಟಿ ಘಟಕಗಳು, ಪೋರ್ಟಲ್‌ಗಳ ಕುರಿತಾಗಿ ಮಾಧ್ಯಮಗಳ ವರದಿಗಳ ಮೂಲಕ ತಿಳಿದು ಬಂದ ಬಗ್ಗೆ ಸಂಧು ಆಕ್ಷೇಪ

3. ಏಪ್ರಿಲ್‌ 16: ಆಯೋಗದ ಸಮ್ಮತಿ ಪಡೆಯದೇ ಅಧಿಕೃತ ಪ್ರಕಟಣೆಗಳನ್ನು ಹೊರಡಿಸಿರುವುದನ್ನು ಆಕ್ಷೇಪಿಸಿ ಸಂಧು ಟಿಪ್ಪಣಿ

4. ಏಪ್ರಿಲ್‌ 16: ಆಯೋಗದ ಸಭೆಗಳ ಕಾರ್ಯಸೂಚಿ ಮತ್ತು ಸಭೆಯ ನಂತರದ ಟಿಪ್ಪಣಿಗಳು ಒಂದು ವರ್ಷದಿಂದ ಸಿಗದಿರುವ ವಿಚಾರವಾಗಿ ವಿವೇಕ್‌ ಜೋಶಿ ಅಸಮಾಧಾನ

5. ಏಪ್ರಿಲ್‌ 16: ಆಯೋಗದ ಅನುಮೋದನೆ ಇಲ್ಲದೆ ಅಧಿಕಾರಿಗಳು ವಿದೇಶ ಪ್ರವಾಸ ಹೋಗಿರುವುದಕ್ಕೆ ಜೋಶಿ ಆಕ್ಷೇಪ

6. ಏಪ್ರಿಲ್‌ 24: ಆಯೋಗದ ಅನುಮತಿ ಇಲ್ಲದೆ ಅಧಿಕೃತ ಪ್ರಕಟಣೆಗಳನ್ನು ಹೊರಡಿಸುವಂತಿಲ್ಲ ಎಂದು ಜೋಶಿ ಪುನರುಚ್ಚಾರ

7. ಮೇ 16 : ಸರ್ಕಾರದ ಸಮ್ಮತಿ ಇಲ್ಲದೆ, ಅರ್ಜಿ ನಮೂನೆ 6ರಲ್ಲಿ (ಹೊಸ ಮತದಾರರ ಸೇರ್ಪಡೆ) ಬದಲಾವಣೆ ಮಾಡಬೇಡಿ ಎಂದು ಜೋಶಿ ಅಭಿಪ್ರಾಯ. ಮೇ 19ರಂದು ಇದಕ್ಕೆ ಧ್ವನಿಗೂಡಿಸಿದ ಸುಖಬೀರ್‌ ಸಿಂಗ್‌ ಸಂಧು

8. ಮೇ 29: ಮತದಾರರ ಪಟ್ಟಿಯ ದತ್ತಾಂಶವನ್ನು ಕೇಂದ್ರೀಕರಣ ಮಾಡುತ್ತಿರುವುದರ ಬಗ್ಗೆ ಎಚ್ಚರಿಕೆ ನೀಡಿ, ಪರಿಶೋಧನೆಗೆ ಒಳಪಡಿಸಲು ಜೋಶಿ ಸಲಹೆ. ಜುಲೈ 13ರಂದು ಈ ಸಲಹೆಗೆ ಸಂಧು ಬೆಂಬಲ

9. ಮೇ 29: ಗಮನಕ್ಕೆ ತಾರದೆ ಅಧಿಕಾರಿಯ ಕೆಲಸವನ್ನು ಮರು ಹಂಚಿಕೆ ಮಾಡಿದ್ದನ್ನು ಆಕ್ಷೇಪಿಸಿ ಸಂಪುಟ ಕಾರ್ಯದರ್ಶಿಯವರಿಗೆ ಜೋಶಿ ಪತ್ರ

10. ಜುಲೈ 29: ಕೆಲಸದ ರೋಸ್ಟರ್‌ ವಿಚಾರದ ಕುರಿತಾಗಿ ಸಂಪುಟ ಕಾರ್ಯದರ್ಶಿ ಅವರಿಗೆ ಸಂಧು ಪತ್ರ, ಅಧಿಕಾರಿಯ ವಿರುದ್ಧ ಕ್ರಮಕ್ಕೆ ಆಗ್ರಹ

11. ಜುಲೈ 30: ಹೊಸ ಕೆಲಸದ ಹಂಚಿಕೆ ಆದೇಶವನ್ನು ರದ್ದು ಪಡಿಸಿದ ಜೋಶಿ ಮತ್ತು ಸಂಧು

12. ಆಗಸ್ಟ್‌ 12: ಪಶ್ಚಿಮ ಬಂಗಾಳ ನ್ಯಾಯಮಂಡಳಿಗೆ ಚುನಾವಣಾ ಆಯೋಗದ ಪರವಾಗಿ ಮೇಲ್ಮನವಿ ಸಲ್ಲಿಸಲು ಅಧಿಕಾರ ನೀಡಿದವರು ಯಾರು ಎಂದು ಸಂಧು ಪ್ರಶ್ನೆ

13. ಆಗಸ್ಟ್‌ 13: ಅರ್ಜಿ ನಮೂನೆ-6ರಲ್ಲಿ ಮಾಡಿರುವ ಬದಲಾವಣೆ 'ಅನಧಿಕೃತ ಮತ್ತು ಕಾನೂನುಬಾಹಿರ' ಎಂದು ಸಂಧು ಅವರಿಂದ ಉಲ್ಲೇಖ

14. ಆಗಸ್ಟ್‌ 14: ಇಸಿಐನೆಟ್‌ ವ್ಯವಸ್ಥೆಯಲ್ಲಿನ ಮಾಹಿತಿಗಳು ಕೆಳ ಹಂತದ ಅಧಿಕಾರಿಗಳಿಗೆ ಸಿಗುತ್ತಿಲ್ಲ. ಮತದಾರರ ಪಟ್ಟಿ ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ತಳ ಮಟ್ಟದ ಅಧಿಕಾರಿಗಳಿಗೆ ಈ ಮಾಹಿತಿಗಳು ಸಿಗದಂತೆ ನಿರ್ಬಂಧಿಸುವ ಅಧಿಕಾರ ಐಟಿ ವಿಭಾಗದ ಮಹಾನಿರ್ದೇಶಕರಿಗೆ (ಡಿ.ಜಿ) ಅವರಿಗೆ ಇಲ್ಲ ಎಂದು ಸಂಧು ಪ್ರತಿಪಾದನೆ

ಅರ್ಜಿ ನಮೂನೆ -6ರ ಬದಲಾವಣೆ 'ಕಾನೂನುಬಾಹಿರ'

ಇಬ್ಬರೂ ಆಯುಕ್ತರು ಲಿಖಿತವಾಗಿ ಸಲ್ಲಿಸಿದ್ದಾರೆ ಎನ್ನಲಾದ ಆಕ್ಷೇಪಣೆಗಳಲ್ಲಿ ಅತ್ಯಂತ ಪ್ರಮುಖವಾದುದು ಅರ್ಜಿ ನಮೂನೆ-6ರಲ್ಲಿ ಮಾಡಿರುವ ಬದಲಾವಣೆಗೆ ಸಂಬಂಧಿಸಿದ್ದು.

ಮತದಾರರ ಪಟ್ಟಿಗೆ ಹೊಸ ಮತದಾರರನ್ನು ಸೇರ್ಪಡೆಗೊಳಿಸಲು ಇರುವ ಅರ್ಜಿ ನಮೂನೆ ಇದು‌ (ಫಾರ್ಮ್‌-6). ದೇಶದಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಸಂದರ್ಭದಲ್ಲಿ ಈ ಅರ್ಜಿ ನಮೂನೆಯಲ್ಲಿ ಪ್ರಮುಖ ಬದಲಾವಣೆಯೊಂದನ್ನು ಮಾಡಲಾಗಿದೆ.

ಅರ್ಜಿದಾರರು ಅಥವಾ ಅರ್ಜಿದಾರರ ಪೋಷಕರು/ಅಜ್ಜ ಅಜ್ಜಿಯ ಹೆಸರು ಈ ಹಿಂದೆ ನಡೆದಿದ್ದ ಎಸ್‌ಐಆರ್‌ ಮತದಾರರ ಪಟ್ಟಿಯಲ್ಲಿ ಇತ್ತೇ ಎಂಬ ಪ್ರಶ್ನೆಯನ್ನು ಈ ಅರ್ಜಿಯಲ್ಲಿ ಸೇರಿಸಲಾಗಿದೆ. ಈ ಪ್ರಶ್ನೆಯನ್ನು ಭರ್ತಿ ಮಾಡುವುದು ಕಡ್ಡಾಯ ಎಂದು ಹೇಳಲಾಗಿಲ್ಲ. ಆದರೆ, ಅದನ್ನು ಉತ್ತರಿಸದೆ ಆನ್‌ಲೈನ್‌ನಲ್ಲಿ ಮುಂದಿನ ಪ್ರಶ್ನೆಗೆ ಹೋಗುವುದಕ್ಕೆ ಆಗುವುದಿಲ್ಲ.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು 1960ರ ಮತದಾರರ ನೋಂದಣಿ ನಿಯಮಗಳಿಗೆ ತಿದ್ದುಪಡಿ ಮಾಡದೇ, ಅರ್ಜಿಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬುದು ಇಬ್ಬರೂ ಆಯುಕ್ತರ ಅಭಿಪ್ರಾಯ. ಹಾಗಾಗಿ, ಈ ನಿರ್ಧಾರವನ್ನು 'ಅನಧಿಕೃತ ಮತ್ತು ಕಾನೂನುಬಾಹಿರ' ಎಂದು ಆಯುಕ್ತರು ಹೇಳಿದ್ದಾರೆ.

ಈ ವರ್ಷದ ಮೇ ತಿಂಗಳಲ್ಲಿ ಮೂವರು ಆಯುಕ್ತರ ಪೈಕಿ ಇಬ್ಬರು ಅರ್ಜಿ ನಮೂನೆ-6ರಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದರೂ ಆಯೋಗ ಬದಲಾವಣೆಯನ್ನು ಮಾಡಿದೆ.

ದತ್ತಾಂಶದ ಕೇಂದ್ರೀಕರಣ

ಮತದಾರರ ಪಟ್ಟಿಯ ದತ್ತಾಂಶಗಳನ್ನು (ಡೇಟಾಬೇಸ್‌) ಕೇಂದ್ರೀಕರಣ ಮಾಡಲಾಗುತ್ತಿದೆ ಎಂಬುದು ಇಬ್ಬರೂ ಆಯುಕ್ತರ ಇನ್ನೊಂದು ಮುಖ್ಯ ಆಕ್ಷೇಪ. ಮೊದಲು ದತ್ತಾಂಶಗಳ ಡಿಜಿಟಲ್‌ ದಾಖಲಾತಿಗೆ ಇಆರ್‌ಒನೆಟ್‌ ಎಂಬ ವ್ಯವಸ್ಥೆ ಇತ್ತು. ಈಗ ಇಸಿಐನೆಟ್‌ ಎಂಬ ಹೊಸ ವ್ಯವಸ್ಥೆ ಬಂದಿದೆ. ರಾಜ್ಯಗಳಲ್ಲಿ ತಳ ಮಟ್ಟದಲ್ಲಿ ಮತದಾರರಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು ಮತದಾರರ ನೋಂದಣಿ ಅಧಿಕಾರಿಗಳ (ಇಆರ್‌ಒ- ಸಾಮಾನ್ಯವಾಗಿ ತಹಶೀಲ್ದಾರರು, ಉಪವಿಭಾಗಾಧಿಕಾರಿಗಳು) ಬಳಿ ಇರುತ್ತದೆ. ಮತದಾರರ ಹೆಸರು ಸೇರ್ಪಡೆ, ತೆಗೆದು ಹಾಕುವುದು, ತಿದ್ದುಪಡಿ ಮಾಡುವ ಅಧಿಕಾರ ಅವರಿಗೆ ಇರುತ್ತದೆ. ಆದರೆ, ಈಗ ಅದು ಬದಲಾಗಿದೆ. ಈ ವಿಚಾರವನ್ನು ಇಬ್ಬರೂ ಆಯುಕ್ತರು ಈ ವರ್ಷದ ಮೇ ಮತ್ತು ಜುಲೈನಲ್ಲಿ ಮುಖ್ಯ ಆಯುಕ್ತರ ಗಮನಕ್ಕೆ ತಂದಿದ್ದರು. ಇಆರ್‌ಒಗಳಿಗೆ ಮತದಾರರ ಪಟ್ಟಿಗೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳಲು, ಬದಲಾವಣೆ ಮಾಡಲು ಆಗುತ್ತಿಲ್ಲ. ಇಆರ್‌ಒನೆಟ್‌ ಪೋರ್ಟಲ್‌ನಲ್ಲಿ ಸಂಪೂರ್ಣ ಮಾಹಿತಿಗಳು ಅವರಿಗೆ ಸಿಗುತ್ತಿಲ್ಲ ಎಂದು ತಳಮಟ್ಟದ ಅಧಿಕಾರಿಗಳು ಹೇಳಿದ್ದನ್ನು ಉಲ್ಲೇಖ ಮಾಡಿ ಸಂಧು ಅವರು ಈ ವರ್ಷದ ಆಗಸ್ಟ್‌ನಲ್ಲಿ ಆಕ್ಷೇಪಿಸಿದ್ದರು. ಆಯೋಗದ ಐಟಿ ವಿಭಾಗದ ಮಹಾ ನಿರ್ದೇಶಕರಿಗೆ ಮಾಹಿತಿಗಳನ್ನು ನಿರ್ಬಂಧಿಸುವ ಅಧಿಕಾರ ಕಾನೂನಾತ್ಮಕವಾಗಿ ಇಲ್ಲ ಎಂದೂ ಅವರು ಹೇಳಿದ್ದರು.

'ಮೇಲ್ಮನವಿ ಸಲ್ಲಿಸಲು ಅಧಿಕಾರ ನೀಡಿದ್ದು ಯಾರು?'

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ನಡೆದಿದ್ದ ಎಸ್‌ಐಆರ್‌ನಲ್ಲಿ 'ವಿವರ ವ್ಯತ್ಯಾಸ' ಕಾರಣಕ್ಕೆ 27.06 ಲಕ್ಷ ಜನರನ್ನು ಮತದಾರರ ‍ಪಟ್ಟಿಯಿಂದ ಕೈಬಿಡಲಾಗಿತ್ತು. ಈ ವಿಚಾರದ ಇತ್ಯರ್ಥಕ್ಕೆ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಮಂಡಳಿಗಳನ್ನು ರಚಿಸಿತ್ತು. ಕಳೆದ ವಾರ ಕೋರ್ಟ್‌ಗೆ ಮಾಹಿತಿ ನೀಡಿರುವ ಚುನಾವಣಾ ಆಯೋಗ, 'ಈ ನ್ಯಾಯಮಂಡಳಿಗಳ ಮುಂದೆ 38 ಲಕ್ಷ ಮೇಲ್ಮನವಿಗಳು ಇತ್ಯರ್ಥಕ್ಕೆ ಬಾಕಿ ಇವೆ. ಈ ಪೈಕಿ 22.21 ಲಕ್ಷ ಅರ್ಜಿಗಳು ತಮ್ಮನ್ನು ಮತದಾರರ ಪಟ್ಟಿಗೆ ಮರುಸೇರ್ಪಡೆ ಮಾಡಬೇಕು ಎಂದು ಪಟ್ಟಿಯಿಂದ ಕೈಬಿಟ್ಟ ಮತದಾರರು ಸಲ್ಲಿಸಿದ್ದು. ಉಳಿದ 16.10 ಲಕ್ಷ ಅರ್ಜಿಗಳು ನ್ಯಾಯಮಂಡಳಿಯು ಮರುಸೇರ್ಪಡೆಗೆ ಆದೇಶಿಸಿದವರ ಹೆಸರುಗಳನ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಿರುವಂತಹದ್ದು' ಎಂದು ಹೇಳಿತ್ತು. ಆದರೆ, ಈ ಮೇಲ್ಮನವಿಗಳನ್ನು ಯಾರು ಸಲ್ಲಿಸಿದ್ದು ಎಂಬುದನ್ನು ಆಯೋಗ ತಿಳಿಸಿಲ್ಲ.

ಈ ವಿಚಾರದ ಬಗ್ಗೆ ಆಗಸ್ಟ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದ ಆಯುಕ್ತ ಸಂಧು ಅವರು, 'ಪಟ್ಟಿಯಲ್ಲಿ ಹೆಸರು ಮರುಸೇರ್ಪಡೆ ಮಾಡಿ ಎಂದು ನ್ಯಾಯಾಂಗದ ಅಧಿಕಾರಿಗಳು ನೀಡಿದ ಆದೇಶದ ವಿರುದ್ಧ ಆಯೋಗದ ಪರವಾಗಿ ಈ ಮೇಲ್ಮನವಿ ಸಲ್ಲಿಸಲು ಅನುಮತಿ ನೀಡಿದವರು ಯಾರು? ವಾಸ್ತವದಲ್ಲಿ ಈ ಅರ್ಜಿಗಳನ್ನು ಹಾಕಿದವರು ಯಾರು? ತಮಗಾಗಲಿ, ಜೋಶಿ ಅವರಿಗಾಗಲಿ, ಪಶ್ಚಿಮ ಬಂಗಾಳದ ಈಗಿನ ಮುಖ್ಯ ಚುನಾವಣಾಧಿಕಾರಿ ಅವರಿಗಾಗಲಿ ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆ ಅಥವಾ ಯಾವ ಆಧಾರದಲ್ಲಿ ಇದನ್ನು ಸಲ್ಲಿಸಬಹುದು ಎಂಬ ಬಗ್ಗೆ ಮಾಹಿತಿ
ನೀಡಿಲ್ಲ' ಎಂದು ಹೇಳಿದ್ದರು.

ಆಯೋಗ ನಿರ್ಧಾರ ಕೈಗೊಳ್ಳುವುದು ಹೇಗೆ?

ಭಾರತೀಯ ಚುನಾವಣಾ ಆಯೋಗವು ಮುಖ್ಯ ಚುನಾವಣಾ ಆಯುಕ್ತ ಸೇರಿ ಮೂವರು ಆಯುಕ್ತರನ್ನು ಹೊಂದಿದೆ. ಸಂವಿಧಾನದ 324ನೇ ವಿಧಿಯ ಪ್ರಕಾರ, ಆಯೋಗವು ಸಾಂವಿಧಾನಿಕ ಸಂಸ್ಥೆ. ಮೂವರು ಆಯುಕ್ತರೂ ಒಂದೇ ಶ್ರೇಣಿಯವರು. ಮುಖ್ಯ ಚುನಾವಣಾ ಆಯುಕ್ತರು ಯಾವುದೇ ನಿರ್ಧಾರವನ್ನು ಏಕಾಂಗಿಯಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ.

2023ರ ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯ್ದೆಯ ಪ್ರಕಾರ, ಆಯೋಗದ ಎಲ್ಲ ನಿರ್ಧಾರಗಳು ಸಾಧ್ಯವಾದಷ್ಟು ಮಟ್ಟಿಗೆ ಒಮ್ಮತದಿಂದ ಕೂಡಿರಬೇಕು (ಸೆಕ್ಷನ್‌ 18). ಒಂದು ವೇಳೆ, ಮುಖ್ಯ ಆಯುಕ್ತರು ಹಾಗೂ ಇತರ ಆಯುಕ್ತರ ನಡುವೆ ಯಾವುದೇ ವಿಚಾರಕ್ಕೆ ಭಿನ್ನ ಅಭಿಪ್ರಾಯಗಳು ಬಂದರೆ, ಬಹುಮತದ ಅಭಿಪ್ರಾಯದ ಅನುಸಾರ ತೀರ್ಮಾನ ತೆಗೆದುಕೊಳ್ಳಬೇಕು.

ಸುಖಬೀರ್‌ ಸಿಂಗ್‌ ಸಂಧು

 .

ಉತ್ತರಾಖಂಡ ಕೇಡರ್‌ನ 1988ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿರುವ ಸುಖಬೀರ್‌ ಸಿಂಗ್‌ ಸಂಧು ಅವರು 2024ರ ಮಾರ್ಚ್‌ 15ರಂದು ಚುನಾವಣಾ ಆಯುಕ್ತರಾಗಿ ನೇಮಕಗೊಂಡವರು. 2021ರ ಜುಲೈನಿಂದ 2024ರ ಜನವರಿವರೆಗೆ ಅವರು ಉತ್ತರಾಖಂಡದ ಮುಖ್ಯ ಕಾರ್ಯದರ್ಶಿಯಾಗಿದ್ದರು. ಅದಕ್ಕೂ ಮೊದಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 2007ರಿಂದ 2014ರವರೆಗೆ ಉತ್ತರಾಖಂಡದ ನಾಲ್ವರು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರು. ಅಮೃತಸರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್‌ ಪದವಿ ಪಡೆದಿರುವ ಸಂಧು ಅವರು, ಕಾನೂನು ಪದವೀಧರರೂ ಹೌದು.

ವಿವೇಕ್‌ ಜೋಶಿ

ಹರಿಯಾಣ ಕೇಡರ್‌ನ 1989ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿರುವ ವಿವೇಕ್‌ ಜೋಶಿ, ಹರಿಯಾಣದ ಮುಖ್ಯ ಕಾರ್ಯದರ್ಶಿಯಾಗಿದ್ದವರು. ಚುನಾವಣಾ ಆಯುಕ್ತರಾಗಿ ನೇಮಕಗೊಂಡಿದ್ದು 2025ರ ಫೆಬ್ರುವರಿ 19ರಂದು. ಭಾರತೀಯ ಆಡಳಿತ ಸೇವೆಯಲ್ಲಿರುವಾಗ ಹರಿಯಾಣದ ಜವಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಣಕಾಸು ಇಲಾಖೆಗಳಲ್ಲಿ ಅವರು ಕಾರ್ಯನಿರ್ವಹಿಸಿದ್ದರು. ಆರ್‌ಬಿಐ ಮತ್ತು ಎಸ್‌ಬಿಐಗಳ ಆಡಳಿತ ಮಂಡಳಿಯ ಸದಸ್ಯರೂ ಆಗಿದ್ದರು. ಐಐಟಿ ರೂರ್ಕಿಯಿಂದ 1987ರಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ಜೋಶಿ, ಜಿನೀವಾದ ಗ್ರಾಜುವೇಟ್‌ ಇನ್‌ಸ್ಟಿಟ್ಯೂಟ್‌ನಿಂದ ಅಂತರರಾಷ್ಟ್ರೀಯ ಅರ್ಥಶಾಸ್ತ್ರದಲ್ಲಿ ಪಿಎಚ್‌.ಡಿಯನ್ನೂ ಪಡೆದಿದ್ದಾರೆ.

ನೇಮಕಕ್ಕೆ ವಿರೋಧ

ಈ ಇಬ್ಬರು ಆಯುಕ್ತರ ನೇಮಕಾತಿಗೆ ಕಾಂಗ್ರೆಸ್‌ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು. 2024ರಲ್ಲಿ ಅಧೀರ್‌ ಚೌಧರಿ ಅವರು, ಸಂಧು ನೇಮಕಾತಿಯನ್ನು ವಿರೋಧಿಸಿದ್ದರೆ, 2025ರಲ್ಲಿ ಜೋಶಿ ಅವರ ನೇಮಕಾತಿ ವೇಳೆ ರಾಹುಲ್‌ ಗಾಂಧಿ ಅವರು ತಮ್ಮ ಅಸಮ್ಮತಿ ಸೂಚಿಸಿದ್ದರು. ಆಯ್ಕೆ ಸಮಿತಿಯಲ್ಲಿ ಪಾರದರ್ಶಕತೆಯ ಕೊರತೆ ಇದೆ ಎಂದು ಅವರು ಆರೋಪಿಸಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Prajavani