Dailyhunt Logo
  • Light mode
    Follow system
    Dark mode
    • Play Story
    • App Story
ಆಳ-ಅಗಲ: ವಿಶ್ವ ಸುದ್ದಿ ದಿನ| ಜ್ಞಾನದ ಭ್ರಮೆ, ಮಾಧ್ಯಮದ ಉಳಿವು

ಆಳ-ಅಗಲ: ವಿಶ್ವ ಸುದ್ದಿ ದಿನ| ಜ್ಞಾನದ ಭ್ರಮೆ, ಮಾಧ್ಯಮದ ಉಳಿವು

ಇಂದು 'ವಿಶ್ವ ಸುದ್ದಿ ದಿನ'. ಜಗತ್ತಿನಾದ್ಯಂತ ಸುದ್ದಿಸಂಸ್ಥೆಗಳು ಒಂದು ವಿಷಯವನ್ನು ಒಕ್ಕೊರಲಿನಿಂದ ಪ್ರತಿಪಾದಿಸುತ್ತಿವೆ: ವರದಿಗಾರಿಕೆ ಎನ್ನುವುದು ಒಂದು ಐಷಾರಾಮವಲ್ಲ, ಅದು ಜೀವನಾಡಿ. ಈ ವರ್ಷ, ಈ ಅಂಶವು ಅತಿ ಹೆಚ್ಚು ಮಹತ್ವ ಪಡೆದಿದೆ.

ಪ್ರಜಾ‍ಪ್ರಭುತ್ವಗಳು ಕೆಲವು ಒಪ್ಪಿತ ಮೌಲ್ಯ, ಸತ್ಯಗಳ ಆಧಾರದಲ್ಲಿ ನಡೆಯುತ್ತವೆ.

ಇಂದು ನ್ಯಾಯಾಲಯಗಳು, ಚುನಾವಣೆಗಳು, ಮಾರುಕಟ್ಟೆಗಳು, ಕೊನೆಗೆ ಊಟದ ಮೇಜಿನಲ್ಲಿ ನಡೆಯುವ ವಾಗ್ವಾದಗಳು ಕೂಡ ವಾಸ್ತವವಾಗಿ ಏನು ಘಟಿಸಿದೆ ಎನ್ನುವುದರ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತವೆ; ಅದು ಇತ್ಯರ್ಥವಾದರೆ ಮಾತ್ರವೇ ಮುಂದಿನ ಹಂತದ- ಏನು ಮಾಡಬೇಕು ಎನ್ನುವುದರ -ಚರ್ಚೆ ಸಾಧ್ಯವಾಗುವುದು.

ಇಂದು ಆರೋಗ್ಯಕರ ಚರ್ಚೆ ಎನ್ನುವುದೇ ಅಪರೂಪವಾಗಿದೆ. ಜನರು ತಮ್ಮದೇ ಆದ ಭಿನ್ನ ದೃಷ್ಟಿಕೋನಗಳಿಂದ ಮತ್ತೊಬ್ಬರ ವಿರುದ್ಧ ಕೂಗಾಡುವುದು ಸಹಜ ಎನ್ನುವಂತಾಗಿದೆ. ಸಮಾನ ವೇದಿಕೆಗಳು ಹೆಚ್ಚು ಒತ್ತಡ ಅನುಭವಿಸುತ್ತಿವೆ. ದಿನಕಳೆದಂತೆ ಆ ಒತ್ತಡವು ಕಡಿಮೆಯಾಗುವುದರ ಬದಲು ಹೆಚ್ಚುತ್ತಲೇ ಇದೆ.

ಎಐ, ಒಂದು ಅಸಾಮಾನ್ಯ ಆವಿಷ್ಕಾರ, ನಿಜ. ಸಂಶೋಧನೆಗಳಿಗೆ ನೆರವಾಗುತ್ತಿದೆ, ಜ್ಞಾನದ ಬಾಗಿಲುಗಳು ವಿಸ್ತಾರಗೊಂಡಿವೆ, ಜನರ ಸಮಯ ಉಳಿತಾಯವಾಗುತ್ತಿದೆ. ಆದರೆ, ಇದೇ ತಂತ್ರಜ್ಞಾನವು ಹಿಂದೆಂದೂ ಇಲ್ಲದ ರೀತಿಯ ಪ್ರಮಾಣ ಮತ್ತು ವೇಗದಲ್ಲಿ ಸುಳ್ಳುಗಳನ್ನು ಸೃಷ್ಟಿಸುತ್ತಾ, ಜನರನ್ನು ನಂಬಿಸುತ್ತಿದೆ.

ಎಐ ತಂತ್ರಜ್ಞಾನವನ್ನು ರೂಪಿಸಿದ ಕಂಪನಿಗಳೂ ಇದನ್ನು ಒಪ್ಪುತ್ತವೆ. ಅದನ್ನು ರೂಪಿಸಿದವರೇ ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವುದರಿಂದ, ನಾವೂ ಇದರ ಅಪಾಯಗಳ ಬಗ್ಗೆ ಜಾಗ್ರತೆ ವಹಿಸಬೇಕು. ಎಐನ ಅಪಾಯವು, ಅದು ತಪ್ಪು ಮಾಹಿತಿಯನ್ನು ಜನರು ನಂಬುವಂತೆ ಮಾಡುತ್ತಿರುವುದರಲ್ಲಿ ಇದೆ. ಈ ಪ್ರವೃತ್ತಿಗೆ ಯೂರೋಪ್‌ನಲ್ಲಿ ನಡೆದ ಶೈಕ್ಷಣಿಕ ಅಧ್ಯಯನವೊಂದು ಹೊಸ ಹೆಸರು ನೀಡಿದೆ: 'ಜ್ಞಾನದ ಭ್ರಮೆ'. ಹೆಚ್ಚು ಜನರು ಎಐ ಬಳಸಿ ಪಠ್ಯಗಳ ಸಾರಾಂಶಗಳನ್ನು ಪಡೆಯುತ್ತಿದ್ದಾರೆ. ತಾವು ಹೆಚ್ಚು ತಿಳಿದುಕೊಂಡಿದ್ದೇವೆ ಎಂದೂ ಅವರು ಭಾವಿಸಿದ್ದಾರೆ. ಆದರೆ, ವಾಸ್ತವದಲ್ಲಿ ಅವರ ತಿಳಿವಳಿಕೆ ಕ್ಷೀಣಿಸಿದೆ.

ಎಐ ಸಾಧನಗಳು ಹೇಳುವ ವಿಷಯ ಸತ್ಯವಾಗಿರಲಿ ಅಥವಾ ಸುಳ್ಳಾಗಿರಲಿ, ಅವುಗಳ ಮಾತು ಅಧಿಕೃತ ಎಂಬಂತೆ ಇರುತ್ತದೆ; ಏಕೆಂದರೆ, ನಿರರ್ಗಳತೆ ಮತ್ತು ನಿಖರತೆ ಎಂಬವು ಎರಡು ಪ್ರತ್ಯೇಕ ಪರಿಕಲ್ಪನೆಗಳಾಗಿ ಬದಲಾಗಿವೆ. ಎಐ ಸಾಧನಗಳನ್ನು ಜನರನ್ನು ಹೆಚ್ಚು ತೊಡಗಿಸಿಕೊಳ್ಳುವಂತೆ ಸೃಷ್ಟಿಸಲಾಗಿದೆ. ಜನರು ಮತ್ತೆ ಮತ್ತೆ ಭೇಟಿ ನೀಡುವಂತೆ ಮಾಡುವ ರೀತಿಯಲ್ಲಿ ವಾಸ್ತವಾಂಶಗಳನ್ನು ರೂಪಿಸಲಾಗಿರುತ್ತದೆ.

ಇಲ್ಲಿ ಏನಾಗುತ್ತಿದೆ ಎಂದರೆ, ಜನರಿಗೆ ತಾವು ಜ್ಞಾನ ಪಡೆದಿದ್ದೇವೆ ಎನ್ನುವ ಭ್ರಮೆ ಮೂಡುತ್ತದೆ, ಆದರೆ, ವಾಸ್ತವದಲ್ಲಿ ಅವರು ಜ್ಞಾನ ಪಡೆದಿರುವುದಿಲ್ಲ. ಎಐನಿಂದ ವಾಸ್ತವ ಬದಲಾಯಿಸಬಹುದಾಗಿದ್ದು, ಅದರ ಪರಿಣಾಮಗಳನ್ನು ನಾವು ಈಗಾಗಲೇ ಕಾಣುತ್ತಿದ್ದೇವೆ. ಎಐ ನಿರ್ಮಿತ ಧ್ವನಿ ಮತ್ತು ವಿಡಿಯೊ ಬಳಸಿ ವಂಚಕರು ಪ್ರೇಮಿಗಳಿಗೆ ಮೋಸ ಮಾಡುತ್ತಿದ್ದಾರೆ, ನಿವೃತ್ತರ ಹಣ ಲಪಟಾಯಿಸುತ್ತಿದ್ದಾರೆ. ನಕಲಿ ಗುರುತಿನ ಚೀಟಿಗಳು, ದಾಖಲೆಗಳು ಭಾರಿ ಪ್ರಮಾಣದಲ್ಲಿ ತಯಾರಾಗುತ್ತಿವೆ.

ಎಐನಿಂದ ಆಗಿರುವ ಮತ್ತೊಂದು ಮೌನಪರಿವರ್ತನೆ ಎಂದರೆ, ಸ್ಥಳೀಯ ವರದಿಗಾರಿಕೆಯ ಕಣ್ಮರೆ. ತಂತ್ರಜ್ಞಾನ ಆಧಾರಿತ ವೇದಿಕೆಗಳಿಗೆ ಹೆಚ್ಚು ಹಣ ವೆಚ್ಚವಾಗುತ್ತಿದ್ದು, ಇದು ಸುದ್ದಿ ನಿರ್ವಾತಗಳನ್ನು ಸೃಷ್ಟಿಸುತ್ತಿದೆ. ಇದರಿಂದ ವಿಧಾನ ಮಂಡಲದ ತೀರ್ಮಾನಗಳು, ನ್ಯಾಯಾಲಯದ ಕಲಾಪಗಳು ಮತ್ತು ಸಾರ್ವಜನಿಕರ ಹಣ ವೆಚ್ಚವಾಗುತ್ತಿರುವ ರೀತಿಯನ್ನು ವರದಿ ಮಾಡಲು ಪತ್ರಕರ್ತರೇ ಇಲ್ಲದಂತಾಗಿಸಿದೆ.

2024ರ ಅಧ್ಯಯನವೊಂದು ಸ್ಥಳೀಯ ವರದಿಗಾರಿಕೆಯ ಅನುಪಸ್ಥಿತಿಯಿಂದ ವ್ಯವಸ್ಥೆಯಲ್ಲಿ ಶೇ 7ರಷ್ಟು ಭ್ರಷ್ಟಾಚಾರ ಹೆಚ್ಚಳವಾಗಿದೆ ಎಂದು ತಿಳಿಸಿದೆ. ಇದರಲ್ಲಿ ಅಚ್ಚರಿಯೇನಿಲ್ಲ. ಗಮನಿಸುವವರು ಯಾರೂ ಇಲ್ಲದಿದ್ದಾಗ ಹೀಗಾಗುತ್ತದೆ. ಇದು ಯಾವುದೂ ಬಗೆಹರಿಯದಂಥದ್ದೇನಲ್ಲ. ಹಾಗೆಂದು, ಅದು ತನ್ನಿಂದ ತಾನೇ ಸರಿಹೋಗುವುದೂ ಇಲ್ಲ. ಒಂದು ಸಮಾಜ ಉತ್ತಮವಾಗಿರಬೇಕು ಎಂದರೆ, ಅಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಪರಿಶೀಲನೆ ಮಾಡುವ, ತನಿಖೆ ಮಾಡುವ ಮತ್ತು ತಾವು ಕಂಡುಕೊಂಡಿದ್ದನ್ನು ವರದಿ ಮಾಡುವ ಜನರು ಇರಬೇಕು. ಹಾಗೆ ವರದಿ ಮಾಡಿದ್ದನ್ನು ಹೆಚ್ಚು ಜನರು ಓದಿದರೆ, ಅವರಿಗೆ ಬೆಂಬಲ ನೀಡಿದರೆ, ಅವರಿಗೆ ಸೂಕ್ತ ಸಂಭಾವನೆ ಸಿಕ್ಕರೆ ಮಾತ್ರವೇ ಅವರು ತಮ್ಮ ಕೆಲಸ ಮುಂದುವರಿಸಲು ಸಾಧ್ಯ.

ಇಂದು, ವಿಶ್ವ ಸುದ್ದಿ ದಿನದಂದು ನಮ್ಮ ಘೋಷಣೆ ಒಂದೇ: ಪತ್ರಿಕೋದ್ಯಮ ಉಳಿಯಲಿ. ಪತ್ರಿಕೆಗಳನ್ನು ಕೊಂಡು ಓದಿ. ಮೇಲ್ಪದರದ, ಮೂಲವೇ ಇಲ್ಲದ ಮಾಹಿತಿಯ ಬದಲು ಪತ್ರಿಕೆಗಳಲ್ಲಿ ವಿಶ್ವಾಸವಿಡಿ. ಏಕೆಂದರೆ, ಕಲ್ಪಿತ ಕಥನಗಳನ್ನು ಸೃಷ್ಟಿಸುವ ಸಾಧನಗಳು ನಿರಂತರವಾಗಿ ಬಲಗೊಳ್ಳುತ್ತಿರುವಾಗ, ಸತ್ಯಕ್ಕೆ ಬದ್ಧರಾದವರನ್ನು ಬೆಂಬಲಿಸುವ ಅಗತ್ಯವೂ ಇನ್ನಷ್ಟು ಬಲಗೊಳ್ಳುತ್ತದೆ.

ಲೇಖಕ: ಆಸ್ಟ್ರೇಲಿಯಾ ನ್ಯೂಸ್ ಕಾರ್ಪೊರೇಷನ್‌ನ ಕಾರ್ಯನಿರ್ವಾಹಕ ಅಧ್ಯಕ್ಷ

Dailyhunt
Disclaimer: This content has not been generated, created or edited by Dailyhunt. Publisher: Prajavani