Monday, 01 Mar, 11.23 am ಪ್ರಜಾವಾಣಿ

ಚಿಕ್ಕಬಳ್ಳಾಪುರ
'ಆನಂದಾ ಮೈಡೆ' ಪುಸ್ತಕ ‌ಬಿಡುಗಡೆ

ಗೌರಿಬಿದನೂರು: 'ಆಧುನಿಕ ‌ಜಗತ್ತಿನಲ್ಲಿ ತಂತ್ರಜ್ಞಾನದ ಬಳಕೆಯ ಜತೆಗೆ ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಲ್ಲಿ ಸಮಾಜದಲ್ಲಿ ‌ಸತ್ಪ್ರಜೆಗಳಾಗಿ‌ ರೂಪುಗೊಳ್ಳಲು ಸಾಧ್ಯವಾಗುತ್ತದೆ' ಎಂದು ಶಾಸಕ ಎನ್‌.ಎಚ್.ಶಿವಶಂಕರರೆಡ್ಡಿ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಡಳಿತ ‌ಮಂಡಳಿ ಹಾಗೂ ಓದೋಣ ಬನ್ನಿ ಪುಸ್ತಕ ಪ್ರೀತಿ ಬಳಗದ ಸಹಯೋಗದಲ್ಲಿ ಪರಿಸರ ಪತ್ರಕರ್ತ ಹಾಗೂ ವಿಜ್ಞಾನ ಅಂಕಣಕಾರ ನಾಗೇಶ್ ಹೆಗಡೆ ಅವರ 'ಆನಂದಾ ಮೈಡೆ' ಪುಸ್ತಕ ‌ಬಿಡುಗಡೆ ಹಾಗೂ ಲೇಖಕರೊಡನೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

'ತಂತ್ರಜ್ಞಾನದ ‌ಭರಾಟೆಯಲ್ಲಿ ಪುಸ್ತಕಗಳನ್ನು ‌ಓದುವುದನ್ನು ಇಂದಿನ ಯುವಪೀಳಿಗೆ ಮರೆತಿದ್ದಾರೆ.‌ ಕೇವಲ ಟಿ.ವಿ ಮತ್ತು ಮೊಬೈಲ್‌ಗಳ ಹಿಂದೆ ಬಿದ್ದು ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹೆಚ್ಚಿನ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಲ್ಲಿ‌ ಜ್ಞಾನದ ಜತೆಗೆ ಬದುಕಿನ ಅನುಭವ ಪಡೆಯಲು ಸಾಧ್ಯವಾಗುತ್ತದೆ. ಈ‌ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿನ ಗ್ರಂಥಾಲಯದಲ್ಲಿ ಉತ್ತಮ ಪುಸ್ತಕಗಳನ್ನು ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ಜ್ಞಾನ ಉಣಿಸಲು ಸಹಕಾರಿಯಾಗುತ್ತದೆ' ಎಂದು ಹೇಳಿದರು.

ನಿವೃತ್ತ ಪ್ರಾಧ್ಯಾಪಕರು ಹಾಗೂ ಸಂಸ್ಕೃತಿ ಚಿಂತಕರಾದ ಪ್ರೊ.ಬಿ.ಗಂಗಾಧರಮೂರ್ತಿ ಮಾತನಾಡಿ, 'ನಾಗೇಶ್ ಹೆಗಡೆ ಬರೆದಿರುವ ಪುಸ್ತಕವು ಉತ್ತಮವಾಗಿದ್ದು, ಇಂದಿನ ಸಮಾಜಕ್ಕೆ ಪೂರಕವಾದ ಮಾಹಿತಿ ಒದಗಿಸಿದೆ. ಇದನ್ನು ಆಸಕ್ತಿಯಿಂದ ಓದುವ ಮೂಲಕ ಸತ್ಪ್ರಜೆಗಳಾಗಿ ಉತ್ತಮ‌ ಸಮಾಜಕ್ಕೆ ಸಹಕಾರಿಯಾಗಬೇಕಾಗಿದೆ' ಎಂದು‌ ಹೇಳಿದರು.

ನಾಗೇಶ್ ಹೆಗಡೆ ಅವರು ಪರಿಸರ ಹಾಗೂ ತಂತ್ರಜ್ಞಾನದ ಕುರಿತಾದ ಸಂವಾದದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಪ್ರಾಂಶುಪಾಲರಾದ ‌ಪ್ರೊ.ಎಂ.ಶಿವಣ್ಣ, ಓದೋಣ ಬನ್ನಿ ಬಳಗದ ಸಂಚಾಲಕರಾದ ಎನ್.ಗೌರೀಶ್, ಎ.ಅಶೋಕ್, ಸದಸ್ಯರಾದ ಕೆ.ವಿ.ಪ್ರಕಾಶ್, ಆಶಾ ಜಗದೀಶ್, ಸಿ.ನಾಗರತ್ನಮ್ಮ, ಗಿರಿಧರ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಮುಖಂಡರು ಭಾಗವಹಿಸಿದ್ದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top