ಅಮರಾವತಿ, ಆಂಧ್ರಪ್ರದೇಶ: ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡ 'ಮುರಸು' ಚಂಡಮಾರುತವು ಮಂಗಳವಾರ ಆಂಧ್ರಪ್ರದೇಶ ಕರಾವಳಿ ತೀರದ ಮೇಲೆ ಅಪ್ಪಳಿಸಿತು. ಇದರಿಂದ ಇಬ್ಬರು ಮೃತಪಟ್ಟಿದ್ದು, ಸಾವಿರಾರು ಮರಗಳು ಬುಡಸಮೇತ ಉರುಳಿಬಿದ್ದಿದ್ದು, ನೂರಾರು ವಿದ್ಯುತ್ ಕಂಬಗಳು ಮುರಿದುಬಿದ್ದಿವೆ.
ದಡದಲ್ಲಿ ನಿಲ್ಲಿಸಿದ್ದ ಮೀನುಗಾರಿಕೆ ದೋಣಿಗಳಿಗೂ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ.
ಮಳೆ- ಬಿರುಗಾಳಿಯಿಂದ ರಾಜ್ಯದ 15 ಜಿಲ್ಲೆಗಳ 52,459 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳಿಗೆ ಹಾನಿಯಾಗಿದೆ. 312ಮನೆಗಳು ಜಖಂಗೊಂಡಿದ್ದು, ಸಂತ್ರಸ್ತರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
'ಕಳೆದ 14 ವರ್ಷಗಳಲ್ಲಿಯೇ ಅತ್ಯಂತ ಭಯಾನಕವಾದ ಚಂಡಮಾರುತಕ್ಕೆ ಸಾಕ್ಷಿಯಾಗುತ್ತಿದ್ದೇನೆ. ಗ್ರಾಮದಲ್ಲಿದ್ದ 400 ನಿವಾಸಿಗಳನ್ನು ಸ್ಥಳಾಂತರಿಸುವ ಮೂಲಕ ಸರ್ಕಾರವು ನೆರವಾಗಿದೆ. ಎನ್‌ಡಿಆರ್‌ಎಫ್ ತಂಡದ ಸದಸ್ಯರು ಎಲ್ಲರನ್ನೂ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ' ಎಂದು ಪ್ರಕಾಶಂ ಜಿಲ್ಲೆಯ ಕೊತಪಟ್ನಂ ಜಿಲ್ಲೆಯ ಮೀನುಗಾರ ಮಹಿಳೆ ಕೃಷ್ಣಮ್ಮ ತಿಳಿಸಿದ್ದಾರೆ.
'ಕಳೆದ ಚಂಡಮಾರುತದ ವೇಳೆ ನಾನು ಮನೆ ಕಳೆದುಕೊಂಡಿದ್ದೆ. ಈ ಸಲ ದುರಂತಕ್ಕೂ ಮುನ್ನವೇ ಸರ್ಕಾರವು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ. ಆದರೂ, ನನ್ನ ಮೂರು ದೋಣಿಗಳ ಪೈಕಿ ಒಂದು ದೋಣಿ ಸಂಪೂರ್ಣವಾಗಿ ನಾಶವಾಗಿದೆ. ಮೀನುಗಾರಿಕೆಯೇ ನನ್ನ ಜೀವನಾಧಾರವಾಗಿದೆ' ಎಂದು ಅಳಲು ತೋಡಿಕೊಂಡಿದ್ದಾರೆ.
ಬಿರುಗಾಳಿಯ ಹೊಡೆತಕ್ಕೆ ವಿದ್ಯುತ್ ಕಂಬಗಳು ಮುರಿದುಬಿದ್ದ ಕಾರಣ, ಹಲವಾರು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿವೆ. ಹಲವಾರು ಗ್ರಾಮಗಳು ಜಲಾವೃತಗೊಂಡಿವೆ.
ನಿರಂತರ ಮಳೆ ಹಾಗೂ ಬಿರುಗಾಳಿಯಿಂದ ರಸ್ತೆಯು ಕಾಣದೇ, ರಾಷ್ಟ್ರೀಯ ಹೆದ್ದಾರಿಗಳಲ್ಲಿಯೇ ವಾಹನಗಳು ನಿಂತಿದ್ದವು. ಪ್ರತಿಕೂಲ ಹವಾಮಾನದಿಂದ ನೂರಾರು ವಾಹನಗಳ ಸಂಚಾರ ಸ್ಥಗಿತಗೊಳಿಸಿದ ಕಾರಣ, ಪ್ರಯಾಣಿಕರು ಕೂಡ ಪಡಿಪಾಟಲು ಅನುಭವಿಸಿದರು.
'ಮುರಸು' ತೀವ್ರ ಚಂಡಮಾರುತವು ಬೆಳಿಗ್ಗೆ 3.30ರಿಂದ 5.30ರ ಸುಮಾರಿಗೆ ಆಂಧ್ರ ಪ್ರದೇಶದ ನೆಲ್ಲೂರು ಹಾಗೂ ನರಸಾಪುರದ ನಡುವೆ ಒಂಗೋಲ್ ಪಟ್ಟಣ ದಾಟಿದೆ. ಗಾಳಿಯ ವೇಗವು ಗಂಟೆಗೆ 100ರಿಂದ 120 ಕಿ.ಮೀ ವೇಗದಲ್ಲಿ ಬೀಸಿದೆ' ಎಂದು ರಾಜ್ಯ ಹವಾಮಾನ ಇಲಾಖೆಯು ತಿಳಿಸಿದೆ.
ದುರ್ಬಲ: ಮಧ್ಯಾಹ್ನದ ವೇಳೆಗೆ ಚಂಡಮಾರತವು ಉತ್ತರದಿಂದ ವಾಯವ್ಯದತ್ತ ಹೊರಳಿದ್ದು, ಮಧ್ಯಾಹ್ನ 2.30ರ ವೇಳೆಗೆ ಗಾಳಿಯ ವೇಗ ತಾಸಿಗೆ 7 ಕಿ.ಮೀಗೆ ಇಳಿಕೆಯಾಗಿತ್ತು.
ದಾಖಲೆ ಮಳೆ: ಚಂಡಮಾರುತ, ಬಿರುಗಾಳಿಯಿಂದ ಬಾಪಟ್ಲ-22 ಸೆ.ಮೀ, ನರಸಾಪುರ 19.8 ಸೆ.ಮೀ, ಒಂಗೋಲ್ 12 ಸೆ.ಮೀ,ಮ ಮಚಲೀಪಟ್ಟಣಂ 8.3 ಸೆ.ಮೀ ಹಾಗೂ ಪುದುಚೇರಿಯಲ್ಲಿ 6.5 ಸೆ.ಮೀ ಮಳೆಯಾಗಿದೆ.
ಆಂಧ್ರಪ್ರದೇಶದ ಮೇಲೆ ಮಂಗಳವಾರ ಅಪ್ಪಳಿಸಿದ 'ಮುರಸು' ಚಂಡಮಾರುತದಿಂದ ಮುರಿದುಬಿದ್ದ ಮರವನ್ನು ಅಗ್ನಿಶಾಮಕ ಸಿಬ್ಬಂದಿ ತೆರವುಗೊಳಿಸಿದರು-ಪಿಟಿಐ ಚಿತ್ರHighlights - ಬೆಳಿಗ್ಗೆ 3.30ರಿಂದ 5.30ರ ನಡುವೆ ಅಪ್ಪಳಿಸಿದ ಚಂಡಮಾರುತ ಭತ್ತ, ಹತ್ತಿ ಹಾಗೂ ಮೆಕ್ಕೆಜೋಳವು ಗರಿಷ್ಠ ಪ್ರಮಾಣದಲ್ಲಿ ಹಾನಿ 10,805 ಮಂದಿ ಸ್ಥಳಾಂತರ, 171 ಪರಿಹಾರ ಕೇಂದ್ರಗಳ ಸ್ಥಾಪನೆ
52.459 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ
ಚಂಡಮಾರುತದಿಂದ ಆಂಧ್ರಪ್ರದೇಶದ 15 ಜಿಲ್ಲೆಗಳ 52459 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದುನಿಂತಿದ್ದ ಬೆಳೆಯೂ ಸಂಪೂರ್ಣವಾಗಿ ಹಾನಿಯಾಗಿವೆ. ಇವುಗಳ ಮೌಲ್ಯ ₹344 ಕೋಟಿ ಎಂದು ಅಂದಾಜಿಸಲಾಗಿದೆ. ಕೃಷ್ಣಾ ಬಾಪಟ್ಲ ಹಾಗೂ ನಂದ್ಯಾಲ ಜಿಲ್ಲೆಯಲ್ಲಿ ಅತೀ ಹೆಚ್ಚು ಹಾನಿ ಸಂಭವಿಸಿವೆ. ಭತ್ತ ಹತ್ತಿ ಹಾಗೂ ಮೆಕ್ಕೆಜೋಳವು ಗರಿಷ್ಠ ಪ್ರಮಾಣದಲ್ಲಿ ಹಾನಿಯುಂಟಾಗಿದೆ ಎಂದು ಸರ್ಕಾರದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. 'ಮುರಸು' ಚಂಡಮಾರುತದಿಂದ 15 ಜಿಲ್ಲೆಗಳ 132 ಮಂಡಲಗಳಲ್ಲಿ ಹೆಚ್ಚು ಪರಿಣಾಮ ಬೀರಿದ್ದು ಪರಿಹಾರ ಕೇಂದ್ರಗಳಿಗೆ 10805 ಮಂದಿಯನ್ನು ಸ್ಥಳಾಂತರಿಸಲಾಗಿದೆ.
ರಾಜ್ಯ ಸರ್ಕಾರವು 171 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿದ್ದು 14810 ಆಹಾರ ಪೊಟ್ಟಣಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದೆ. ಉಳಿದಂತೆ ಎನ್‌ಡಿಆರ್‌ಎಫ್ ಎಸ್‌ಡಿಆರ್‌ಎಫ್‌ನ 13 ತಂಡಗಳು 613 ಜನರೇಟರ್‌ಗಳನ್ನು ಬಳಸಿಕೊಂಡು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. ಮುರಿದುಬಿದ್ದ ಮರಗಳನ್ನು ತೆರವುಗೊಳಿಸಲು ಆಗ್ನಿಶಾಮಕ ಪಡೆಯ 185 ತಂಡಗಳು ಕಾರ್ಯೋನ್ಮುಖವಾಗಿವೆ.
ಕೇಂದ್ರದಿಂದ ಎಲ್ಲ ರೀತಿಯ ನೆರವು: ಶಾ
ಚಂಡಮಾರುತದ ಬಳಿಕ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಜತೆಗೆ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇಂದ್ರದಿಂದ ಅಗತ್ಯ ನೆರವು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

