ಹೈದರಾಬಾದ್: ಅವಿಭಜಿತ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ನಾದೆಂಡ್ಲ ಭಾಸ್ಕರ ರಾವ್ (90) ಅವರು ಬುಧವಾರ ನಿಧನರಾಗಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ರಾವ್ ಅವರು ಇಲ್ಲಿನ ಆಸ್ಪತ್ರೆಯೊಂದಲ್ಲಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದರು.
1984ರಲ್ಲಿ ಆಂಧ್ರಪ್ರದೇಶದ ಅಂದಿನ ಮುಖ್ಯಮಂತ್ರಿ ಎನ್.ಟಿ. ರಾಮ ರಾವ್ ಅವರು ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ಅಮೆರಿಕಕ್ಕೆ ತೆರಳಿದ ಬಳಿಕ ಭಾಸ್ಕರ್ ರಾವ್ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಆಗಸ್ಟ್ 16 ರಿಂದ ಸೆಪ್ಟೆಂಬರ್ 16ರವರೆಗೆ ಅವರ ನೇತೃತ್ವದ ಸರ್ಕಾರ ಅಧಿಕಾರದಲ್ಲಿತ್ತು. ಈ ಮೂಲಕ ಆಂಧ್ರದ ಅತ್ಯಂತ ಕಡಿಮೆ ಅವಧಿಯ ಮುಖ್ಯಮಂತ್ರಿ ಎಂದು ರಾಜ್ಯದ ರಾಜಕೀಯ ಇತಿಹಾಸದಲ್ಲಿ ಭಾಸ್ಕರ್ ರಾವ್ ಗುರುತಿಸಿಕೊಂಡಿದ್ದಾರೆ.
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಸರ್ಕಾರದಲ್ಲಿ ಸಂಪುಟ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ನಾದೆಂಡ್ಲ ಮನೋಹರ್ ಅವರು ಭಾಸ್ಕರ್ ರಾವ್ ಅವರ ಪುತ್ರರಾಗಿದ್ದು, ರಾವ್ ಅವರಿಗೆ ಮತ್ತೊಬ್ಬ ಪುತ್ರ ಇದ್ದಾರೆ.

