Dailyhunt Logo
  • Light mode
    Follow system
    Dark mode
    • Play Story
    • App Story
ಆರ್‌ಬಿಐನಿಂದ ಹಣದುಬ್ಬರ ನಿರೀಕ್ಷೆ, ಗ್ರಾಹಕರ ವಿಶ್ವಾಸ ತಿಳಿಯಲು 3 ಸಮೀಕ್ಷೆ

ಆರ್‌ಬಿಐನಿಂದ ಹಣದುಬ್ಬರ ನಿರೀಕ್ಷೆ, ಗ್ರಾಹಕರ ವಿಶ್ವಾಸ ತಿಳಿಯಲು 3 ಸಮೀಕ್ಷೆ

ಮುಂಬೈ: ದ್ವೈಮಾಸಿಕ ಹಣಕಾಸು ನೀತಿಗೆ ಅಗತ್ಯವಾದ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ, ದೇಶದ ಮನೆ-ಮನೆಗಳ ಹಣದುಬ್ಬರ ನಿರೀಕ್ಷೆಗಳನ್ನು ತಿಳಿಯಲು ಮತ್ತು ಗ್ರಾಹಕರ ವಿಶ್ವಾಸವನ್ನು ಅಳೆಯಲು ಆರ್‌ಬಿಐ, ಮೂರು ಪ್ರಮುಖ ಸಮೀಕ್ಷೆಗಳನ್ನು ಘೋಷಿಸಿದೆ.

'ಹಣದುಬ್ಬರ ನಿರೀಕ್ಷೆಗಳ ಮನೆ-ಮನೆ ಸಮೀಕ್ಷೆ'ಯ(ಐಇಎಸ್‌ಹೆಚ್‌) ನವೆಂಬರ್ 2026ರ ಸಮೀಕ್ಷೆಯನ್ನು ಪ್ರಾರಂಭಿಸಲಾಗುತ್ತಿದೆ.

ಈ ಸಮೀಕ್ಷೆಯು ಜನರ ವೈಯಕ್ತಿಕ ಬಳಕೆಯ ವಸ್ತುಗಳ ಆಧಾರದ ಮೇಲೆ ಬೆಲೆ ಏರಿಕೆ ಮತ್ತು ಹಣದುಬ್ಬರದ ಕುರಿತು ಅವರ ಅಭಿಪ್ರಾಯಗಳನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದೆ ಎಂದು ಆರ್‌ಬಿಐ ಹೇಳಿದೆ.

​ಈ ಅಧ್ಯಯನವನ್ನು ಅಹಮದಾಬಾದ್, ಬೆಂಗಳೂರು, ಭೋಪಾಲ್, ಭುವನೇಶ್ವರ, ಚಂಡೀಗಢ, ಚೆನ್ನೈ, ದೆಹಲಿ, ಗುವಾಹಾಟಿ, ಹೈದರಾಬಾದ್, ಜೈಪುರ, ಜಮ್ಮು, ಕೋಲ್ಕತ್ತ, ಲಖನೌ, ಮುಂಬೈ, ರಾಯಪುರ, ರಾಂಚಿ ಮತ್ತು ತಿರುವನಂತಪುರ ಸೇರಿದಂತೆ 19 ನಗರಗಳಲ್ಲಿ ನಡೆಸಲಾಗುತ್ತಿದೆ.

'ನಗರ ಗ್ರಾಹಕರ ವಿಶ್ವಾಸ ಸಮೀಕ್ಷೆ'ಯು ಸಾಮಾನ್ಯ ಆರ್ಥಿಕ ಪರಿಸ್ಥಿತಿ, ಉದ್ಯೋಗ ಸನ್ನಿವೇಶ, ಬೆಲೆ ಮಟ್ಟ, ಮನೆ-ಮನೆಗಳ ಆದಾಯ ಮತ್ತು ವೆಚ್ಚದ ಕುರಿತು ಸಾರ್ವಜನಿಕರ ಅನಿಸಿಕೆಗಳನ್ನು ಸಂಗ್ರಹಿಸುತ್ತದೆ ಎಂದು ತಿಳಿಸಿದೆ. ಈ ಸಮೀಕ್ಷೆಯನ್ನು ಸಹ 19 ನಗರಗಳಲ್ಲಿ ನಡೆಸಲಾಗುತ್ತಿದೆ.

31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಗ್ರಾಮೀಣ ಹಾಗೂ ಅರೆ-ನಗರ ಪ್ರದೇಶಗಳ ನಿವಾಸಿಗಳ ಆರ್ಥಿಕ ಪರಿಸ್ಥಿತಿ, ಉದ್ಯೋಗಾವಕಾಶಗಳು, ಬೆಲೆ ಪರಿಸ್ಥಿತಿ, ಆದಾಯ ಮತ್ತು ವೆಚ್ಚಗಳ ಕುರಿತ ಅನಿಸಿಕೆಗಳನ್ನು ಹಾಗೂ ಮುಂದಿನ ಒಂದು ವರ್ಷದ ನಿರೀಕ್ಷೆಗಳನ್ನು 'ಗ್ರಾಮೀಣ ಗ್ರಾಹಕರ ವಿಶ್ವಾಸ ಸಮೀಕ್ಷೆ'ಯು ಸಂಗ್ರಹಿಸುತ್ತದೆ ಎಂದು ಆರ್‌ಬಿಐ ಹೇಳಿದೆ.

ಈ ಸಮೀಕ್ಷೆಗಳ ಫಲಿತಾಂಶಗಳು ಹಣಕಾಸು ನೀತಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತವೆ. ​ಮುಂದಿನ ದ್ವೈಮಾಸಿಕ ಹಣಕಾಸು ನೀತಿ ಸಭೆಯು 2026ರ ಡಿಸೆಂಬರ್ 2 ರಿಂದ 4 ರವರೆಗೆ ನಡೆಯಲಿದೆ. ​

Dailyhunt
Disclaimer: This content has not been generated, created or edited by Dailyhunt. Publisher: Prajavani