ತುಮಕೂರು: ಆಸ್ತಿಗಾಗಿ ತಂದೆ ತಾಯಿ ಕೊಲೆ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ತುಮಕೂರು ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಧೀಶ ಜಯಂತ ಕುಮಾರ್ ಹೇಳಿದರು.
ನಗರದ ಸುಫಿಯ ಕಾನೂನು ಕಾಲೇಜಿನಲ್ಲಿ ಶುಕ್ರವಾರ ನಡೆದ ಎಥ್ನಿಕ್ ಡೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯುವಜನರು ಆಸ್ತಿಗಾಗಿ ತಂದೆ ತಾಯಿಗಳನ್ನು ಬೀದಿಗೆ ತಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಯುವಜನರು ಮೊದಲು ತಂದೆ ತಾಯಿಯನ್ನು ಗೌರವಿಸಬೇಕು. ಅವರ ತ್ಯಾಗವನ್ನು ಅರಿಯಬೇಕು ಎಂದರು.
ಯುವ ವಕೀಲರು ನೈತಿಕತೆ ರೂಢಿಸಿಕೊಳ್ಳಬೇಕು. ಕಕ್ಷಿದಾರರ ಹಿತ ರಕ್ಷಿಸಬೇಕು. ನಾನು ಎಂಬುದನ್ನು ಬಿಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲೋಕೇಶ್ ಧನಪಾಲ ಅವಲೆ, ಕಾನೂನು ನೈತಿಕತೆಯ ತಳಹದಿ ಮೇಲೆ ನಿಂತಿರುತ್ತದೆ. ನೈತಿಕ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.
ಎಚ್‌ಎಂಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಷಫೀ ಅಹಮದ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಎಸ್.ರಮೇಶ್, ಉಪ ಪ್ರಾಂಶುಪಾಲ ಟಿ.ಓಬಯ್ಯ, ವಕೀಲರಾದ ಸಿ.ಕೆ.ಮಹೇಂದ್ರ, ಗೌರಿಶಂಕರ್, ಪ್ರೊ. ಮಮತಾ, ಪ್ರೊ. ಕಾಶಿಪ್, ಪ್ರೊ. ಶ್ರೀನಿವಾಸ್ ಹಾಜರಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-17-58067852

