Dailyhunt Logo
  • Light mode
    Follow system
    Dark mode
    • Play Story
    • App Story
ಆಯುಷ್ ಆಸ್ಪತ್ರೆ|ಸಿಬ್ಬಂದಿ ಕೊರತೆ: ಮಂಜೂರಾದ 55 ಹುದ್ದೆಗಳ ಪೈಕಿ 42 ಹುದ್ದೆ ಖಾಲಿ

ಆಯುಷ್ ಆಸ್ಪತ್ರೆ|ಸಿಬ್ಬಂದಿ ಕೊರತೆ: ಮಂಜೂರಾದ 55 ಹುದ್ದೆಗಳ ಪೈಕಿ 42 ಹುದ್ದೆ ಖಾಲಿ

ವಿಜಯಪುರ: ಜಿಲ್ಲಾ ಸರ್ಕಾರಿ ಆಯುಷ್‌ ಆಸ್ಪತ್ರೆ ವೈದ್ಯ ಸಿಬ್ಬಂದಿ ಕೊರತೆ ಹಾಗೂ ಆಸ್ಪತ್ರೆ ನಿರ್ವಹಣೆಗೆ ಅಗತ್ಯಕ್ಕೆ ತಕ್ಕಷ್ಟು ಅನುದಾನವನ್ನು ರಾಜ್ಯ ಸರ್ಕಾರ ನೀಡದೇ ಇರುವುದರಿಂದ ಸಂಪೂರ್ಣ ಸೊರಗಿದೆ.

ನಗರದ ಬಬಲೇಶ್ವರ ನಾಕಾ ಬಳಿ ಇರುವ ಜಿಲ್ಲಾ ಸರ್ಕಾರಿ ಆಯುಷ್‌ ಆಸ್ಪತ್ರೆಯಲ್ಲಿ ಆಯುರ್ವೇದ, ಯುನಾನಿ ಮತ್ತು ಹೋಮಿಯೋಪಥಿ ಪದ್ಧತಿಗಳಲ್ಲಿ ಜಿಲ್ಲೆಯ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಮೂಲಕ ಜನ ಮನ್ನಣೆ ಗಳಿಸಿದೆ.

ಆಯುಷ್‌ ಆಸ್ಪತ್ರೆಯಲ್ಲಿ ಹೊರರೋಗಿಗಳ ವಿಭಾಗ ಮತ್ತು ಒಳ ರೋಗಿಗಳ ವಿಭಾಗಗಳಿದ್ದು, ಪಾರ್ಶ್ವವಾಯು(ಲಕ್ವ) ಪೀಡಿತರು, ಸಂಧಿವಾತ, ಆಸ್ತಮಾ, ಅಲರ್ಜಿ, ಚರ್ಮರೋಗ, ಕೀಲು ನೋವು, ಸೋಂಟನೋವು, ಬೆನ್ನುನೋವು ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಪಂಚಕರ್ಮ ಚಿಕಿತ್ಸೆ, ಬಸ್ತಿ ಮತ್ತು ಅಭ್ಯಂಗ, ಯೋಗ ಮತ್ತು ನಿಸರ್ಗ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಆಸ್ಪತ್ರೆಯಲ್ಲಿ ಸದ್ಯ ಇರುವ ವೈದ್ಯ ಸಿಬ್ಬಂದಿ ಕಾರ್ಯ ಒತ್ತಡದ ನಡುವೆಯೇ ಗುಣಮಟ್ಟದ ಸೇವೆ ಒದಗಿಸುತ್ತಿದ್ದಾರೆ. ಆದರೆ, ಕೆಲವು ರೋಗಿಗಳು ಮತ್ತು ಅವರ ಕಡೆಯುವರು ಪಾಳಿ(ಸರತಿ) ಬರುವುದು ವಿಳಂಬವಾದಾಗ ವೈದ್ಯ ಸಿಬ್ಬಂದಿ ಮೇಲೆಯೇ ರೇಗಾಡಿ, ವಾಗ್ವಾದ ಮಾಡುವ ಸನ್ನಿವೇಶಗಳು ನಿತ್ಯ ನಡೆಯುತ್ತಿವೆ.

42 ಹುದ್ದೆ ಖಾಲಿ: ಜಿಲ್ಲಾ ಸರ್ಕಾರಿ ಆಯುಷ್‌ ಆಸ್ಪತ್ರೆಗೆ ಮಂಜೂರಾದ 55 ಹುದ್ದೆಗಳಲ್ಲಿ 13 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, ಇನ್ನುಳಿದ 42 ಹುದ್ದೆಗಳು ಖಾಲಿ ಇವೆ ಎಂದು ಜಿಲ್ಲಾ ಆಯುಷ್‌ ಅಧಿಕಾರಿ ಡಾ.ವಿದ್ಯಾವತಿ ಅಥಣಿ 'ಪ್ರಜಾವಾಣಿ'ಗೆ ತಿಳಿಸಿದರು.

ಹಿರಿಯ ವೈದ್ಯಾಧಿಕಾರಿಗಳು 3, ನರ್ಸಿಂಗ್‌ ಅಧೀಕ್ಷಕರು 1, ಶುಶ್ರೂಷಾಧಿಕಾರಿ 4, ಫಾರ್ಮಸಿ ಅಧಿಕಾರಿ 6, ಲ್ಯಾಬ್‌ ಟೆಕ್ನಿಷಿಯನ್‌ 1, ಮಸಾಜಿಸ್ಟ್‌ 2, ಕುಕ್‌ 2, ಕಂಪ್ಯೂಟರ್‌ ಆಪರೇಟರ್‌ 1, ಅಡುಗೆ ವಿತರಕರು 1, ರಾತ್ರಿ ಕಾವಲುಗಾರರು 1, ವಾರ್ಡ್‌ ಬಾಯ್‌ 6, ವಾರ್ಡ್‌ ಆಯಾ 4, ನೈರ್ಮಲ್ಯ ಪಾಲಕರು 4, ಜವಾನರು 2 ಸೇರಿದಂತೆ 42 ಹುದ್ದೆಗಳು ಹಲವು ವರ್ಷಗಳಿಂದ ಭರ್ತಿಯಾಗಿಲ್ಲ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಯೋಜನೆಯಡಿ ಇಬ್ಬರು ಮಸಾಜಿಸ್ಟ್‌ಗಳು, 6 ಜನ ವಾರ್ಡ್‌ ಬಾಯ್‌, 4 ಜನ ವಾರ್ಡ್‌ ಆಯಾ, ಇಬ್ಬರು ಜವಾನರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

'ಜಿಲ್ಲೆಯ ಬಡ ಜನತೆಗೆ ಅನುಕೂಲವಾಗಿರುವ ಆಯುಷ್‌ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮತ್ತು ಜಿಲ್ಲೆಯ ಇನ್ನುಳಿದ ಶಾಸಕರು ಸರ್ಕಾರದ ಮಟ್ಟದಲ್ಲಿ ಒತ್ತಡ ತಂದು, ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿ, ಕಾಯಕಲ್ಪ ನೀಡಬೇಕು. ಇಲ್ಲವಾದರೆ ಹೋರಾಟ ನಡೆಸಬೇಕಾಗುತ್ತದೆ' ಎಂದು ಸಾಮಾಜಿಕ ಹೋರಾಟಗಾರ ಅನಿಲ ಹೊಸಮನಿ ಎಚ್ಚರಿಕೆ ನೀಡಿದ್ದಾರೆ.

ಡಾ.ವಿದ್ಯಾವತಿ ಅಥಣಿ ಜಿಲ್ಲಾ ಆಯುಷ್‌ ಅಧಿಕಾರಿ, ವಿಜಯಪುರಆಸ್ಪತ್ರೆಯಲ್ಲಿರುವ ಅಲ್ಪ ವೈದ್ಯ ಸಿಬ್ಬಂದಿ, ಸೌಕರ್ಯಗಳಲ್ಲಿ ಗುಣಮಟ್ಟದ ಔಷಧೋಪಚಾರ ಮಾಡುತ್ತಿದ್ದೇವೆ. ಖಾಲಿ ಹುದ್ದೆಗಳ ಭರ್ತಿಗೆ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ

ತಾಲ್ಲೂಕು ಆಸ್ಪತ್ರೆಯಲ್ಲೂ ಸಿಬ್ಬಂದಿ ಕೊರತೆ

ವಿಜಯಪುರ ಜಿಲ್ಲಾ ಸರ್ಕಾರಿ ಆಯುಷ್‌ ಆಸ್ಪತ್ರೆ ಮಾತ್ರವಲ್ಲದೇ ಮುದ್ದೇಬಿಹಾಳ ತಾಲ್ಲೂಕು ಆಯುಷ್‌ ಆಸ್ಪತ್ರೆಯಲ್ಲಿ ಮಂಜೂರಾದ 7 ಹುದ್ದೆಗಳಲ್ಲಿ 6 ಹಾಗೂ ಸಿಂದಗಿ ತಾಲ್ಲೂಕು ಆಯುಷ್‌ ಆಸ್ಪತ್ರೆಯಲ್ಲಿ ಮಂಜೂರಾದ 7 ಹುದ್ದೆಗಳಲ್ಲಿ 3 ಹುದ್ದೆಗಳು ಖಾಲಿ ಇವೆ.

ಅಲ್ಲದೇ, ಜಿಲ್ಲೆಯ ಧನರ್ಗಿ, ಗುಣದಾಳ, ಕಣಬೂರ, ಕೆರುಟಗಿ, ಮಾರ್ಕಬ್ಬಿನಾಳ, ಹೆಬ್ಬಾಳ, ಹಿರೇಮುರಾಳ, ಯಲಗೂರ, ಪಡೇಕನೂರ, ಬಳಬಟ್ಟಿ, ಹುಲ್ಲೂರ, ಬಸನಾಳ, ಜೇವೂರ ಸೇರಿದಂತೆ ಒಟ್ಟು 13 ಆಯುಷ್ ಚಿಕಿತ್ಸಾಲಯಗಳಲ್ಲಿ ಮಂಜೂರಾದ 30 ಹುದ್ದೆಗಳಲ್ಲಿ 9 ಹುದ್ದೆಗಳು ಖಾಲಿ ಇವೆ. 21 ಹುದ್ದೆಗಳಿಗೆ ಸಿಬ್ಬಂದಿ ಇದ್ದರೂ ಅದರಲ್ಲಿ 13 ಜನ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿಶೇಷವೇನೆಂದರೇ, ವಿಜಯಪುರ ಜಿಲ್ಲಾಸ್ಪತ್ರೆ ಆವರಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಹೈಟೆಕ್‌ ಪಂಚಕರ್ಮ ಆಸ್ಪತ್ರೆಯಲ್ಲಿ ಮಂಜೂರಾದ 8 ಹುದ್ದೆಗಳೂ ಭರ್ತಿ ಇದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಜನ ಮೆಚ್ಚುಗೆಗೆ ಪಾತ್ರವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260702-26-984567338

Dailyhunt
Disclaimer: This content has not been generated, created or edited by Dailyhunt. Publisher: Prajavani