ಜಲ ಭದ್ರತೆ ಇಂದು ಕರ್ನಾಟಕದ ಅತ್ಯಂತ ತುರ್ತು ಸವಾಲುಗಳಲ್ಲಿ ಒಂದಾಗಿದೆ. ರಾಜ್ಯದ ಬಹುಭಾಗ ಪಶ್ಚಿಮ ಘಟ್ಟಗಳ ಮಳೆನೆರಳಿನ ಪ್ರದೇಶದಲ್ಲಿದ್ದು, ನಿವ್ವಳ ಬಿತ್ತನೆ ಪ್ರದೇಶದ ಕೇವಲ ಶೇ 36ರಷ್ಟು ಭಾಗಕ್ಕೆ ಮಾತ್ರ ನೀರಾವರಿ ಸೌಲಭ್ಯವಿದೆ. ನಗರಗಳು, ಕೈಗಾರಿಕೆಗಳು ಮತ್ತು ಕೃಷಿ ಸೀಮಿತ ನೀರಿಗಾಗಿ ಪೈಪೋಟಿ ನಡೆಸುತ್ತಿದ್ದು, ಗಟ್ಟಿಶಿಲಾ ಪ್ರದೇಶಗಳಲ್ಲಿ ಅಂತರ್ಜಲದ ಮೇಲೆ ತೀವ್ರ ಒತ್ತಡ ಉಂಟಾಗಿದೆ.
ಪ್ರಮುಖ ನದಿಗಳ ನೀರು ನ್ಯಾಯಮಂಡಳಿಗಳ ತೀರ್ಪಿನಂತೆ ಹಂಚಿಕೆಯಾಗಿರುವುದರಿಂದ ರಾಜ್ಯವು ನೀರಿನ ಪೂರೈಕೆ ಸುಲಭವಾಗಿ ಹೆಚ್ಚಿಸಲು ಸಾಧ್ಯವಿಲ್ಲ; ಈಗಾಗಲೇ ಲಭ್ಯವಿರುವ ಪ್ರತಿಯೊಂದು ಹನಿಯಿಂದಲೂ ಹೆಚ್ಚಿನ ಪ್ರಯೋಜನ ಪಡೆಯಬೇಕಾಗಿದೆ.
ದಶಕಗಳ ಕಾಲ ಪ್ರಗತಿಯನ್ನು ನಿರ್ಮಿಸಿದ ಅಣೆಕಟ್ಟುಗಳು ಮತ್ತು ಸೃಷ್ಟಿಸಿದ ನೀರಾವರಿ ಸಾಮರ್ಥ್ಯದ ಆಧಾರದಲ್ಲಿ ಅಳೆಯಲಾಗುತ್ತಿತ್ತು. ಆದರೆ ಸೋರಿಕೆ, ಆವಿಯಾಗುವಿಕೆ, ಹಾನಿಗೊಳಗಾದ ರಚನೆಗಳು ಮತ್ತು ಸಮರ್ಪಕ ನಿಯಂತ್ರಣವಿಲ್ಲದ ತೂಬುಗಳಿಂದ ನೀರು ಪೋಲಾಗುತ್ತಿದೆ. ಕಾಲುವೆಯ ಮೇಲ್ಭಾಗದ ರೈತರು ತಮ್ಮ ಪಾಲಿಗಿಂತ ಹೆಚ್ಚು ನೀರು ಬಳಸಿದರೆ, ಕೊನೆಯ ಭಾಗದ ರೈತರು ಕೊರತೆ ಎದುರಿಸುತ್ತಾರೆ. ಇದರಿಂದ ಸೃಷ್ಟಿಸಿದ ನೀರಾವರಿ ಸಾಮರ್ಥ್ಯ ಮತ್ತು ವಾಸ್ತವವಾಗಿ ನೀರಾವರಿಯಾಗುತ್ತಿರುವ ಪ್ರದೇಶದ ನಡುವೆ ದೊಡ್ಡ ಅಂತರ ಉಳಿದಿದೆ.
ಈ ಅಂತರವನ್ನು ತುಂಬಲು ತಂತ್ರಜ್ಞಾನ ಅನಿವಾರ್ಯ. ಸಂವೇದಕಗಳು (ಸೆನ್ಸರ್ಗಳು), ಉಪಗ್ರಹಗಳು, ಸ್ವಯಂಚಾಲಿತ ಗೇಟ್ಗಳು, ಒತ್ತಡಯುಕ್ತ ಕೊಳವೆ ಮಾರ್ಗಗಳು ಮತ್ತು ಡಿಜಿಟಲ್ ವ್ಯವಸ್ಥೆಗಳು ಜಲಾಶಯದಿಂದ ಬೆಳೆಯ ಬೇರಿನವರೆಗೆ ನೀರನ್ನು ಕಾಣುವಂತೆ, ಅಳೆಯುವಂತೆ ಮತ್ತು ನಿರ್ವಹಿಸುವಂತೆ ಮಾಡಬಲ್ಲವು. ಆದರೆ ಇದಕ್ಕೆ ತರಬೇತಿ ಪಡೆದ ಸಿಬ್ಬಂದಿ, ವಿಶ್ವಾಸಾರ್ಹ ವಿದ್ಯುತ್ ಪೂರೈಕೆ, ನಿರ್ವಹಣಾ ಅನುದಾನ ಮತ್ತು ರೈತರ ಸಕ್ರಿಯ ಭಾಗವಹಿಸುವಿಕೆಯ ಬೆಂಬಲ ಅಗತ್ಯ.
ಕರ್ನಾಟಕವು ತನ್ನ ಜಲ ವಲಯಕ್ಕಾಗಿ ಸಮಗ್ರ ಡಿಜಿಟಲ್ ಚೌಕಟ್ಟನ್ನು ರೂಪಿಸುತ್ತಿದೆ. ಉಪಗ್ರಹ, ಡ್ರೋನ್ ಮತ್ತು ಕ್ಷೇತ್ರ ಸಂವೇದಕಗಳು, ಬಾಷ್ಪೀಕರಣ, ಮಳೆ, ನೀರಿನ ಮಟ್ಟ, ಮಣ್ಣಿನ ತೇವಾಂಶ, ನೀರಿನ ಹರಿವಿನ ಮೇಲೆ ನಿಗಾ ಇಟ್ಟು, ನೈಜ ಸಮಯದ ದತ್ತಾಂಶವನ್ನು ಜಿಐಎಸ್, ಕ್ಲೌಡ್ ವೇದಿಕೆಗೆ ರವಾನಿಸುತ್ತವೆ. ಜಲಾಶಯ ನಿರ್ವಹಣೆ, ನೀರಾವರಿ ವೇಳಾಪಟ್ಟಿ, ಪ್ರವಾಹ ಮುನ್ಸೂಚನೆ, ನೀರಿನ ಹಂಚಿಕೆಗೆ ಮಾರ್ಗದರ್ಶನ ನೀಡುತ್ತವೆ. ಸ್ಕಾಡಾ ವ್ಯವಸ್ಥೆ ಮೂಲಕ ಇಂಜಿನಿಯರ್ಗಳು ಕೃಷ್ಣರಾಜಸಾಗರ, ಕಬಿನಿ, ಹೇಮಾವತಿ, ಹಾರಂಗಿ ಜಲಾಶಯ, ತುಂಗಭದ್ರಾ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಗಳಲ್ಲಿ ಗೇಟ್ಗಳನ್ನು ದೂರದಿಂದಲೇ ಮೇಲ್ವಿಚಾರಣೆ ಮಾಡಿ ನಿರ್ವಹಿಸಬಹುದು.
ಟೆಲಿಮೆಟ್ರಿ ಮತ್ತು ದತ್ತಾಂಶ ವ್ಯವಸ್ಥೆ
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರವು (ಕೆಎಸ್ಎನ್ಡಿಎಂಸಿ) ಟೆಲಿಮೆಟ್ರಿಕ್ ಮಳೆಮಾಪಕಗಳು ಮತ್ತು ಹವಾಮಾನ ಕೇಂದ್ರಗಳ ವ್ಯಾಪಕ ಜಾಲವನ್ನು ನಿರ್ವಹಿಸುತ್ತಿದ್ದು, ಬರ, ಪ್ರವಾಹ ಮತ್ತು ಜಲಾಶಯ ಸಂಬಂಧಿತ ನಿರ್ಧಾರಗಳಿಗೆ ಬಹುತೇಕ ನೈಜ ಸಮಯದ ಮಾಹಿತಿಯ ಆಧಾರದಲ್ಲಿ ನೀರು ಬಿಡುಗಡೆಯನ್ನು ಯೋಜಿಸಲು ಎಂಜಿನಿಯರ್ಗಳಿಗೆ ನೆರವಾಗುತ್ತಿದೆ. ಸಮಗ್ರ ಜಲಸಂಪನ್ಮೂಲ ನಿರ್ವಹಣೆಯ ಸುಧಾರಿತ ಕೇಂದ್ರವು (ಎಸಿಐಡಬ್ಲ್ಯುಆರ್ಎಂ) ಕರ್ನಾಟಕ ಜಲಸಂಪನ್ಮೂಲ ಮಾಹಿತಿ ವ್ಯವಸ್ಥೆ (ಕೆಡಬ್ಲ್ಯುಆರ್ಐಎಸ್), ಜಲಾನಯನ ಮಾದರಿಗಳು ಮತ್ತು ಉಪಗ್ರಹ ಆಧಾರಿತ ಬೆಳೆ ನೀರಿನ ಬಳಕೆಯ ಅಂದಾಜುಗಳನ್ನು ಅಭಿವೃದ್ಧಿಪಡಿಸುತ್ತಿದೆ. ಎಲ್ಲ ಜಲ ಸಂಬಂಧಿತ ಸಂಸ್ಥೆಗಳ ಪ್ರತ್ಯೇಕ ದತ್ತಾಂಶಗಳನ್ನು ಒಂದೆಡೆ ಜೋಡಿಸಿ, ಕಾರ್ಯಾಚರಣೆ, ಬಜೆಟ್ ಮತ್ತು ಹೊಣೆಗಾರಿಕೆಯಲ್ಲಿ ನಿಯಮಿತವಾಗಿ ಬಳಸುವ ಏಕೀಕೃತ ವೇದಿಕೆಯನ್ನು ರೂಪಿಸುವುದು ಮುಂದಿನ ಹೆಜ್ಜೆಯಾಗಬೇಕು.
ಸ್ಮಾರ್ಟ್ ಕಾಲುವೆಗಳು ಮತ್ತು ಏತ ನೀರಾವರಿ ಯೋಜನೆ
ಸುಮಾರು 4.5 ಲಕ್ಷ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ನಾರಾಯಣಪುರ ಎಡದಂಡೆ ಕಾಲುವೆಯಲ್ಲಿ ಹಾಳಾದ ಗೇಟ್ಗಳು, ಅನಧಿಕೃತ ನೀರು ಸೆಳೆಯುವಿಕೆ ಮತ್ತು ಅಸಮರ್ಪಕ ವೇಳಾಪಟ್ಟಿಯಿಂದಾಗಿ ಮೇಲ್ಭಾಗದಲ್ಲಿ ಜೌಗು ಸಮಸ್ಯೆ ಮತ್ತು ಕೊನೆಯ ಭಾಗದಲ್ಲಿ ನೀರಿನ ಕೊರತೆ ಉಂಟಾಗುತ್ತಿತ್ತು. ಸ್ಕಾಡಾ (ಮೇಲ್ವಿಚಾರಣಾ ನಿಯಂತ್ರಣ ಮತ್ತು ದತ್ತಾಂಶ ಸಂಗ್ರಹ) ಆಧಾರಿತ ಕಾಲುವೆ ಸ್ವಯಂಚಾಲನೆ ಜಾರಿಯಾದ ನಂತರ ಕೇಂದ್ರ ನಿಯಂತ್ರಣ ಕೊಠಡಿಯಿಂದಲೇ ಗೇಟ್ಗಳನ್ನು ನಿರ್ವಹಿಸಲಾಗುತ್ತಿದೆ; ಜಿಐಎಸ್ ಆಧಾರಿತ ವ್ಯವಸ್ಥೆಯು ರೈತರ ಬೇಡಿಕೆ, ವೇಳಾಪಟ್ಟಿ ಮತ್ತು ನೀರಿನ ಶುಲ್ಕದ ಬಿಲ್ಲಿಂಗ್ ನಿರ್ವಹಿಸುತ್ತದೆ. ಇದರಿಂದ ಅಳತೆಯೊಂದಿಗೆ ನೀರು ಬಿಡುಗಡೆ ಮತ್ತು ನ್ಯಾಯಯುತ ವಿತರಣೆ ಸಾಧ್ಯವಾಗಿದ್ದು, ಇದು ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಪಡೆದ ಮಾದರಿಯಾಗಿದೆ. ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಲ್ಲಿ ಅಧಿಕ ಸಾಮರ್ಥ್ಯದ ಪಂಪ್ ಮತ್ತು ಸ್ಕಾಡಾ ಮೇಲ್ವಿಚಾರಣೆ ಗುರುತ್ವ ಕಾಲುವೆಗಳು ತಲುಪಲಾಗದ ಎತ್ತರದ ಪ್ರದೇಶಗಳಿಗೆ ನೀರು ಒದಗಿಸುತ್ತಿವೆ.
ತೆರೆದ ಕಾಲುವೆಗಳಿಂದ ಸೂಕ್ಷ್ಮ ನೀರಾವರಿಯೆಡೆಗೆ
ತೆರೆದ ಕಾಲುವೆಗಳ ಬದಲಿಗೆ ಅಳವಡಿಸುವ ನೆಲದಡಿಯ ಕೊಳವೆ ಜಾಲಗಳು ನೀರಿನ ಸೋರಿಕೆ, ಆವಿಯಾಗುವಿಕೆ, ಅನಧಿಕೃತ ಬಳಕೆ ತಗ್ಗಿಸಿ, ಹನಿ ನೀರಾವರಿ ಮೂಲಕ ಹೆಚ್ಚು ಮೌಲ್ಯದ ಬೆಳೆಗಳಿಗೆ ನೆರವಾಗುತ್ತವೆ. ರಾಮಥಾಳ, ಪೂರಿಗಾಲಿ, ಸಿಂಗಟಾಲೂರು ಮತ್ತು ತರೀಕೆರೆ ಯೋಜನೆಗಳು ಇದಕ್ಕೆ ಉದಾಹರಣೆಗಳಾಗಿವೆ. ಆದರೆ ಅನಿಯಮಿತ ನೀರು ಪೂರೈಕೆ, ದುರಸ್ತಿ ವಿಳಂಬ ಮತ್ತು ನಿರ್ವಹಣಾ ಕೊರತೆ ಸವಾಲುಗಳಾಗಿವೆ. ಆದ್ದರಿಂದ ಯೋಜನೆಗಳ ಯಶಸ್ಸನ್ನು ಕೊಳವೆಗಳ ಉದ್ದದಿಂದಲ್ಲ, ನೀರು ಪೂರೈಕೆ, ನೀರಾವರಿಯಾದ ಪ್ರದೇಶ ಮತ್ತು ಸೇವೆಯ ವಿಶ್ವಾಸಾರ್ಹತೆಯಿಂದ ಅಳೆಯಬೇಕು.
ಸಾಂಪ್ರದಾಯಿಕ ವಿಧಾನ ಮೀರಿದ ಜಲ ಭದ್ರತೆ
ಅಣೆಕಟ್ಟು ಪುನಶ್ಚೇತನ ಮತ್ತು ಸುಧಾರಣಾ ಯೋಜನೆಯಡಿ ಕರ್ನಾಟಕ ಮೊದಲ ಹಂತದಲ್ಲಿ 22 ಅಣೆಕಟ್ಟು ಪುನಶ್ಚೇತನಗೊಳಿಸಿ, ಸುರಕ್ಷತಾ ಮೇಲ್ವಿಚಾರಣೆ ಮತ್ತು ತುರ್ತು ಕ್ರಿಯಾ ಯೋಜನೆ ಜಾರಿಗೊಳಿಸಿದೆ. ಅಟಲ್ ಭೂಜಲ ಯೋಜನೆಯಡಿ ಅಂತರ್ಜಲ ಮೇಲ್ವಿಚಾರಣೆ, ಜಲ ಬಜೆಟ್ಗೆ ಆದ್ಯತೆ ನೀಡಲಾಗಿದೆ. ಕೆ.ಸಿ. ವ್ಯಾಲಿ ಮತ್ತು ಎಚ್.ಎನ್. ವ್ಯಾಲಿ ಯೋಜನೆ ಬೆಂಗಳೂರಿನ ಸಂಸ್ಕರಿಸಿದ ತ್ಯಾಜ್ಯ ನೀರಿನಿಂದ ಕೆರೆ ತುಂಬಿಸಿ ಅಂತರ್ಜಲ ಮರುಪೂರಣ ಮಾಡುತ್ತಿವೆ. ಇದಕ್ಕೆ ಕಟ್ಟುನಿಟ್ಟಾದ ಗುಣಮಟ್ಟ ಪರೀಕ್ಷೆ ಅತ್ಯಗತ್ಯ. ದಕ್ಷ ಮತ್ತು ಸೌರ ಪಂಪ್ಗಳು ಹಾಗೂ ಕಾಲುವೆ ಮೇಲಿನ ಸೌರ ಘಟಕಗಳು ವಿದ್ಯುತ್ ವೆಚ್ಚ ಮತ್ತು ನೀರಿನ ಆವಿಯಾಗುವಿಕೆಯನ್ನು ತಗ್ಗಿಸುತ್ತಿವೆ.
ರೈತರ ಆದಾಯದೊಂದಿಗೆ ಜಲ ದಕ್ಷತೆ ಜೋಡಣೆ
ಉಳಿಸಿದ ನೀರಿನಿಂದ ರೈತರ ಆದಾಯವೂ ಹೆಚ್ಚಾದಾಗ ಮಾತ್ರ ಅದರ ನಿಜವಾದ ಪ್ರಯೋಜನ ಸಿಗುತ್ತದೆ. ಕರ್ನಾಟಕ ಬಹುಪಾಲುದಾರರ ಜಲ ವೇದಿಕೆ ಮೂಲಕ ಉತ್ತೇಜಿಸಲಾಗುತ್ತಿರುವ ಹನಿ ನೀರಾವರಿ ಬಳಸುವ ರೈತರನ್ನು ಕೃಷಿ ಒಳಸಾಗಣೆ, ಕೃಷಿ ತಾಂತ್ರಿಕ ಸಲಹೆ, ಸಂಸ್ಕರಣಾ ಘಟಕಗಳು ಮತ್ತು ಖರೀದಿದಾರರೊಂದಿಗೆ ಸಂಪರ್ಕಿಸುತ್ತದೆ. ಆದರೆ, ಮಾರುಕಟ್ಟೆ ಸಂಪರ್ಕಗಳು ಅನಿಶ್ಚಿತ ನೀರು ಪೂರೈಕೆಗೆ ಪರ್ಯಾಯವಾಗಲಾರವು. ಮೊದಲು ವಿಶ್ವಾಸಾರ್ಹ ನೀರು ಪೂರೈಕೆ ಖಚಿತಪಡಿಸಬೇಕು.
ಅಪೂರ್ಣ ಕಾರ್ಯ: ನಿರ್ವಹಣೆ, ಅಳತೆ ಮತ್ತು ಹೊಣೆಗಾರಿಕೆ
ಈಗಾಗಲೇ ನಿರ್ಮಿಸಿರುವ ವ್ಯವಸ್ಥೆಗಳನ್ನು ಸುಸ್ಥಿರವಾಗಿ ನಡೆಸುವುದೇ ಈಗಿನ ಪ್ರಮುಖ ಸವಾಲು. ಗೇಟ್ಗಳು, ಸಂವೇದಕಗಳು, ಪಂಪ್ಗಳು ಮತ್ತು ಕೊಳವೆ ಮಾರ್ಗಗಳಿಗೆ ದೀರ್ಘಕಾಲೀನ ನಿರ್ವಹಣಾ ಅನುದಾನ, ಬಿಡಿಭಾಗಗಳು ಮತ್ತು ಕುಶಲ ಸಿಬ್ಬಂದಿ ಬೇಕು; ದತ್ತಾಂಶಗಳ ಏಕೀಕರಣದ ಕೊರತೆ ಹಾಗೂ ಸಮರ್ಪಕವಾಗಿ ವಸೂಲಿಯಾಗದ ನೀರಿನ ಶುಲ್ಕವೂ ಪ್ರಮುಖ ಸವಾಲುಗಳಾಗಿವೆ. ಆದ್ದರಿಂದ ಪ್ರಮಾಣಾಧಾರಿತ ನೀರು ಪೂರೈಕೆ, ನೀರು ಬಳಕೆದಾರರ ಸಹಕಾರ ಸಂಘಗಳ ಬಲವರ್ಧನೆ, ಕಾರ್ಯಕ್ಷಮತೆ ಆಧಾರಿತ ಒಪ್ಪಂದಗಳು, ಸೈಬರ್ ಭದ್ರತೆ ಮತ್ತು ಇಂಜಿನಿಯರ್ಗಳ ತಂತ್ರಜ್ಞಾನ ತರಬೇತಿಗೆ ಆದ್ಯತೆ ನೀಡಬೇಕು.
10 ವರ್ಷದ ಮಾರ್ಗಸೂಚಿ ಹೇಗೆ
ಮೊದಲ 1-2 ವರ್ಷಗಳಲ್ಲಿ ಕರ್ನಾಟಕವು ಈಗಿರುವ ಯೋಜನೆಗಳ ಪರಿಶೋಧನೆ ಮತ್ತು ದುರಸ್ತಿ ಕೈಗೊಂಡು, ನೀರು ಬಳಕೆದಾರರ ಸಹಕಾರ ಸಂಘಗಳನ್ನು ಬಲಪಡಿಸಿ, ಏಕೀಕೃತ ಜಲ ದತ್ತಾಂಶ ವೇದಿಕೆಯನ್ನು ನಿರ್ಮಿಸಬೇಕು.
3-5ನೇ ವರ್ಷಗಳಲ್ಲಿ ನೆಲದಡಿಯ ಕೊಳವೆ ಮಾರ್ಗ ಮತ್ತು ಮೀಟರ್ ಅಳವಡಿಸಿದ ತೂಬುಗಳನ್ನು ಸಾಮಾನ್ಯ ಪದ್ಧತಿಯಾಗಿಸಿ, ಸ್ಕಾಡಾ ಮತ್ತು ಹರಿವು ಮಾಪನವನ್ನು ವಿಸ್ತರಿಸಿ, ಪರಿಮಾಣ ಆಧಾರಿತ ಶುಲ್ಕ ಪದ್ಧತಿ ಜಾರಿಗೊಳಿಸಬೇಕು. ಜೊತೆಗೆ, ಕಬ್ಬು ಮತ್ತು ಭತ್ತದಂತಹ ಹೆಚ್ಚು ನೀರು ಬೇಡುವ ಬೆಳೆಗಳಿಗೆ ಈಗ ಬಳಸುತ್ತಿರುವ ಹರಿವು ನೀರಾವರಿಯನ್ನು, ರೈತರು, ಕಾರ್ಖಾನೆಗಳು ಮತ್ತು ಹಣಕಾಸು ಸಂಸ್ಥೆಗಳ ನಡುವಿನ ತ್ರಿಪಕ್ಷೀಯ ಒಪ್ಪಂದಗಳ ಮೂಲಕ ಸೂಕ್ಷ್ಮ ನೀರಾವರಿಗೆ ಪರಿವರ್ತಿಸಲು ಉತ್ತೇಜನ ನೀಡಬೇಕು. 6-10ನೇ ವರ್ಷಗಳಲ್ಲಿ ಡಿಜಿಟಲ್ ಟ್ವಿನ್, ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಮುನ್ಸೂಚನೆ ಮತ್ತು ನೈಜ ಸಮಯದ ಜಲ ಲೆಕ್ಕಪತ್ರವನ್ನು ಅಳವಡಿಸಿಕೊಳ್ಳಬೇಕು; ಜೊತೆಗೆ ದಕ್ಷತೆ, ನೀರಾವರಿ ವ್ಯಾಪ್ತಿ, ಕೊನೆಯ ಭಾಗಕ್ಕೆ ನೀರು ಪೂರೈಕೆ ಮತ್ತು ಶುಲ್ಕ ವಸೂಲಾತಿಯ ಕುರಿತು ವಾರ್ಷಿಕ ಸಾರ್ವಜನಿಕ ಪರಿಶೋಧನೆ ನಡೆಸಬೇಕು.
ಪ್ರೊ. ಅರವಿಂದ ಗಲಗಲಿ,ನೀರಾವರಿ ಮತ್ತು ಜಲಸಂಪನ್ಮೂಲ ತಜ್ಞರುಕರ್ನಾಟಕಕ್ಕೆ ಈಗಾಗಲೇ ಭದ್ರ ಬುನಾದಿಯಿದೆ. ಕೇವಲ ನೀರಾವರಿ ಮೂಲಸೌಕರ್ಯ ಸೃಷ್ಟಿಸುವುದರಿಂದ ನೀರನ್ನು ದಕ್ಷವಾಗಿ, ನ್ಯಾಯಸಮ್ಮತವಾಗಿ ಮತ್ತು ಸುಸ್ಥಿರವಾಗಿ ನಿರ್ವಹಿಸುವತ್ತ ಸಾಗುವುದೇ ಈಗಿನ ಕಾರ್ಯ. ತಂತ್ರಜ್ಞಾನ, ಸಾಂಸ್ಥಿಕ ಸುಧಾರಣೆ ಮತ್ತು ಸಮುದಾಯದ ಭಾಗವಹಿಸುವಿಕೆಯನ್ನು ಒಗ್ಗೂಡಿಸುವ ಮೂಲಕ ರಾಜ್ಯವು ನೀರಿನ ಕೊರತೆಯನ್ನು ಜಲ ಭದ್ರತೆಯಾಗಿ ಪರಿವರ್ತಿಸಿ, ಇಡೀ ದೇಶಕ್ಕೆ ಮಾದರಿಯಾಗಬಹುದು.
