ಕೋಲ್ಕತ್ತ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಡೈಮಂಡ್ ಹಾರ್ಬರ್ ಕ್ಷೇತ್ರದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಪಕ್ಷದ ಕಚೇರಿಯನ್ನು ನೆಲಸಮ ಮಾಡುವ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಕಲ್ಕತ್ತ ಹೈಕೋರ್ಟ್ ಆದೇಶಿಸಿದೆ.
ಲೀಪ್ ಆಯಂಡ್ ಬೌನ್ಸ್ ಸಂಸ್ಥೆ ಒಡೆತನದಲ್ಲಿದೆ ಎನ್ನಲಾದ ಆಮ್‌ತಲಾ ಕಟ್ಟಡಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸುವಂತೆ ನ್ಯಾಯಮೂರ್ತಿ ರಾಜಾಬಸು ಚೌಧರಿ ಅವರಿರುವ ಪೀಠವು ಭಾನುವಾರ ವಿಶೇಷ ಕಲಾಪ ನಡೆಸಿ ಆದೇಶಿಸಿದೆ.
ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಿಸಲಾಗಿದೆ ಎಂದು ಆರೋಪಿಸಿ ದಕ್ಷಿಣ 24 ಪರಗಣ ಆಡಳಿತವು ಕಟ್ಟಡ ನೆಲಸಮಕ್ಕೆ ಶನಿವಾರ ಮುಂದಾಗಿತ್ತು. ಆದರೆ, ಅಗತ್ಯ ಪರವಾನಗಿಗಳನ್ನು ಪಡೆದು ನಿಯಮಗಳಿಗೆ ಅನುಗುಣವಾಗಿಯೇ ಕಟ್ಟಡ ನಿರ್ಮಿಸಲಾಗಿದೆ ಎಂದು ಸಂಸದರು ಪ್ರತಿಪಾದಿಸಿದ್ದರು. ಕಟ್ಟಡ ನೆಲಸಮ ಆದೇಶವನ್ನು ಪ್ರಶ್ನಿಸಿ ಲೀಪ್ ಆಯಂಡ್ ಬೌನ್ಸ್ ಸಂಸ್ಥೆಯು ಶನಿವಾರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.
'ಜುಲೈ ಕೊನೆಯವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಮುಂದೆ ನಿಯಮಿತವಾಗಿ ವಿಚಾರಣೆ ನಡೆಸಲಾಗುವುದು' ಎಂದು ಪೀಠವು ಹೇಳಿದೆ.
ವಿವಿಧ ವಿಚಾರಗಳೊಂದಿಗೆ ತಳುಕು ಹಾಕಿಕೊಂಡಿರುವ ಲೀಪ್ ಆಯಂಡ್ ಬೌನ್ಸ್ ಸಂಸ್ಥೆಗೆ ಅಭಿಷೇಕ್ ಅವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ಹೇಳಿದೆ.

