ಕಾರವಾರ: 'ಅಡ್ಡ ಪರಿಣಾಮ ಇಲ್ಲದೆ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯ ಆಯುರ್ವೇದ ವೈದ್ಯ ಪದ್ಧತಿಗೆ ಇದೆ. ಚಿಕಿತ್ಸೆಗೆ ಬಳಸುವ ನೈಸರ್ಗಿಕ ಗಿಡಮೂಲಿಕೆಗಳ ಔಷಧೀಯ ಸತ್ವ ಆರೋಗ್ಯ ರಕ್ಷಣೆಗೆ ಶಾಶ್ವತ ಮತ್ತು ನೈಸರ್ಗಿಕ ಪರಿಹಾರ ಒದಗಿಸುತ್ತದೆ' ಎಂದು ಜಿಲ್ಲಾ ಕುಷ್ಠರೋಗ ನಿವಾರಣಾ ಅಧಿಕಾರಿ ಡಾ.ಶಂಕರ್ ರಾವ್ ಹೇಳಿದರು.
ಜಿಲ್ಲಾಡಳಿತ, ಆಯುಷ್ ಇಲಾಖೆಯಿಂದ ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
'ಆಯುರ್ವೇದ ಪುರಾತನ ವೈದ್ಯಕೀಯ ಪದ್ಧತಿಯಾಗಿದ್ದು, ಅಲೋಪತಿ ಚಿಕಿತ್ಸಾ ಪದ್ಧತಿ ಬರುವುದಕ್ಕಿಂತ ಮುಂಚೆ, ವೇದಗಳು ಮತ್ತು ಪುರಾಣಗಳ ಕಾಲದಿಂದಲೂ ಭಾರತದಲ್ಲಿ ಈ ಪದ್ಧತಿಯನ್ನೇ ಜನರು ರೋಗ ನಿವಾರಣೆಗೆ ಅವಲಂಬಿಸಿದ್ದರು' ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ.ಜಗದೀಶ ಯಾಜಿ ವಿ., 'ಇಂದಿನ ದಿನಗಳಲ್ಲಿ ಮಕ್ಕಳು ಮೈದಾನದ ಆಟಗಳನ್ನು ಬಿಟ್ಟು ಮೊಬೈಲ್ ಗೀಳು, ಜಂಕ್ ಫುಡ್‌ಗಳಿಗೆ ಮಾರುಹೋಗುತ್ತಿದ್ದಾರೆ. ಪೋಷಕರು ಮಕ್ಕಳ ಭವಿಷ್ಯಕ್ಕಾಗಿ ಸರಿಯಾದ ಆಹಾರ ಪದ್ಧತಿ, ವಿಹಾರ, ಯೋಗ, ಧ್ಯಾನ, ಪ್ರಾಣಾಯಾಮ ಮತ್ತು ಪ್ರಾರ್ಥನೆಯಂತಹ ಜೀವನಶೈಲಿ ರೂಢಿಸಬೇಕು' ಎಂದರು.
ನಿವೃತ್ತ ಜಿಲ್ಲಾ ಆಯುಷ್ ಅಧಿಕಾರಿ ಡಾ.ಲಲಿತಾ ಶೆಟ್ಟಿ, ಡಿ ದರ್ಜೆ ನೌಕರರಾದ ಸುಜಾತಾ ನಾಯ್ಕ ಮತ್ತು ಪುಷ್ಪಾ ಮುಕ್ರಿ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾಧಿಕಾರಿ ಶಿರಸ್ತೆದಾರ ಪ್ರಮೋದ ನಾಯ್ಕ, ಜಿಲ್ಲಾ ಆಯುಷ್ ಇಲಾಖೆ ಆಡಳಿತಾಧಿಕಾರಿ ಸಂಜೀವ ಕುಮಾರ ನಾಯ್ಕ, ವೈದ್ಯಾಧಿಕಾರಿಗಳಾದ ಡಾ.ಪೂರ್ಣಿಮಾ ಎಸ್.ಬಿ, ಡಾ.ಭಾರತಿ ಪಿ.ಬಿ ಇದ್ದರು. ಮುಂಡಗೋಡ ತಾಲ್ಲೂಕು ಸರ್ಕಾರಿ ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಯೊಗೇಶ್ ಮಡಗಾಂವರ ಕಾರ್ಯಕ್ರಮ ನಿರ್ವಹಿಸಿದರು.
ತಜ್ಞ ವೈದ್ಯರಿಂದ ಚಿಕಿತ್ಸೆ ಶಿಬಿರ ನಡೆಯಿತು. ಔಷಧೀಯ ಗುಣಗಳ ಗಿಡಮೂಲಿಕೆಗಳ ಪ್ರದರ್ಶನ ಗಮನಸೆಳೆಯಿತು. ಆಯುರ್ವೇದದ ಮಹತ್ವದ ಕುರಿತು ತಜ್ಞರು ಉಪನ್ಯಾಸ ನೀಡಿದರು.
'ಭಾರತೀಯ ಆಯುರ್ವೇದ ವಿಶ್ವಕ್ಕೆ ಮಾದರಿ'
ಸಿದ್ದಾಪುರ: 'ಭಾರತದ ಆಯುರ್ವೇದ ಇಂದು ವಿಶ್ವಕ್ಕೆ ಮಾದರಿ ಆಗಿದೆ. ಆಯುರ್ವೇದ ಮತ್ತು ಯೋಗ ಜೀವನ ಪದ್ಧತಿ ಅಳವಡಿಸಿಕೊಂಡರೆ ರೋಗ ಬರದಂತೆ ತಡೆಯಬಹುದು. ಜನರು ಆಯುರ್ವೇದ ಮತ್ತು ಯೋಗದ ಮಹತ್ವವನ್ನು ಅರಿತುಕೊಳ್ಳಬೇಕು' ಎಂದು ತಹಶೀಲ್ದಾರ್ ಮಂಜುಳಾ ನಾಯಕ ಹೇಳಿದರು.
ಪಟ್ಟಣದ ಧನ್ವಂತರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋದನಾ ಕೇಂದ್ರದ ಆಶ್ರಯದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ರೂಪಾ ಭಟ್ಟ, ತಾಲ್ಲೂಕು ಪಂಚಾಯಿತಿ ಇಒ ದೇವರಾಜ ಹಿತ್ತಲಕೊಪ್ಪ ಮಾತನಾಡಿದರು.
ಸಂಸ್ಥೆಯ ಹಿರಿಯ ನಿರ್ದೇಶಕ ಜಿ.ಕೆ.ಹೆಗಡೆ ಗೋಳಗೋಡ ಇದ್ದರು. ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಶಶಿಭೂಷಣ ಹೆಗಡೆ ದೊಡ್ಮನೆ ಪ್ರಾಸ್ತಾವಿಕ ಮಾತನಾಡಿದರು. ರಾಘವೇಂದ್ರ ಎಲ್, ಡಾ.ಸ್ಪೂರ್ತಿ ಇದ್ದರು.
ಆಯುರ್ವೇದ ಮಹಾವಿದ್ಯಾಲಯದಿಂದ ಹೊರಟ ಜಾಗೃತಿ ಜಾಥಾ ತಿಮ್ಮಪ್ಪ ನಾಯಕ ವೃತ್ತ, ರಾಮಕೃಷ್ಣ ಹೆಗಡೆ ವೃತ್ತದ ಮೂಲಕ ತಹಶೀಲ್ದಾರ್ ಕಚೇರಿವರೆಗೆ ನಡೆಯಿತು.
ಸ್ವಚ್ಛತೆ, ಪೌಷ್ಟಿಕ ಆಹಾರ, ಯೋಗ, ಔಷಧೀಯ ಸಸ್ಯಗಳು, ಪರಿಸರ ರಕ್ಷಣೆ ಮತ್ತು ರೋಗನಿರೋಧಕ ಜೀವನ ಶೈಲಿಗೆ ಸಂಬಂಧಿಸಿದ ಫಲಕಗಳು, ಜಾಗೃತಿ ಸಂದೇಶಗನ್ನು ಹಾಗೂ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವ್ಯಕ್ತಿತ್ವಗಳನ್ನು ಪ್ರದರ್ಶಿಸಲಾಯಿತು.
260924-20-1004721668

