ಮಾಲೂರು: ರಾಮಮನೋಹರ ಲೋಹಿಯಾ, ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ಪರ ಧ್ವನಿ ಎತ್ತಿದವರಾಗಿದ್ದಾರೆ. ದೇವರಾಜ ಅರಸು ಅವರಿಂದ ಲಾಭ ಪಡೆದವರು ಇಂದು ನಮ್ಮನ್ನು ತುಳಿಯುತ್ತಿದ್ದಾರೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಮಾಲೂರು-ಬೆಂಗಳೂರು ರಸ್ತೆಯ ಹಾರೋಹಳ್ಳಿ ಕ್ರಾಸ್ ಬಳಿ ಕರ್ನಾಟಕ ರಾಜ್ಯ ದಮನಿತ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಹಿಂದುಳಿದ ವರ್ಗಗಳಲ್ಲಿ ದಮನಿತ ಸೂಕ್ಷ್ಮ, ಅತಿ ಸೂಕ್ಷ್ಮ ಜಾತಿಗಳ ಜಾಗೃತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಹಿಂದ ಬಳಸಿಕೊಂಡು ಸಿದ್ದರಾಮಯ್ಯ ಅವರು ರಾಜಕೀಯವಾಗಿ ಬೆಳೆದು ಎರಡು ಬಾರಿ ಮುಖ್ಯಮಂತ್ರಿಯಾದರು. ಹಿಂದುಳಿದ ವರ್ಗ, ಪ್ರವರ್ಗಗಳಲ್ಲಿ 192 ಜಾತಿಗಳಿವೆ. ಆದರೆ, ಪ್ರಬಲ ಜಾತಿಯು ಹೆಚ್ಚಿನ ಮೀಸಲಾತಿ ಸೌಲಭ್ಯ ಪಡೆಯುತ್ತಿದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ. ಹಿಂದುಳಿದ ವರ್ಗದವರು, ಕುಶಲಕರ್ಮಿ ಸಮುದಾಯಗಳ ಪರ ಧ್ವನಿ ಎತ್ತುವರಿಲ್ಲ. ವಿಧಾನಸಭೆ, ಪರಿಷತ್ತಿನಲ್ಲಿ ಹಿಂದುಳಿದ ಸಮುದಾಯಗಳಿಗೆ ಸರಿಯಾದ ಪ್ರಾತಿನಿಧ್ಯ ಈವರೆಗೆ ಸಿಕ್ಕಿಲ್ಲ. ಕುಲ ವೃತ್ತಿ ಕಳೆದುಕೊಂಡವರಿಗೂ ಪರ್ಯಾಯ ವ್ಯವಸ್ಥೆ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತಳ ಸಮುದಾಯಗಳ ಆರ್ಥಿಕ ಸಬಲತೆಗಾಗಿ ನಿಗಮ ಮಂಡಳಿ ಸ್ಥಾಪಿಸಲಾಗಿದೆ. ಆದರೆ, ಸಮರ್ಪಕವಾಗಿ ಅನುದಾನ ಬಿಡುಗಡೆ ಮತ್ತು ಕಚೇರಿಯಾಗಲಿ ನೀಡಲಿಲ್ಲ. ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ನೀಡಿದಷ್ಟು ಅನುದಾನವೂ ಹಿಂದುಳಿದ ವರ್ಗಗಳ ನಿಗಮ ಮಂಡಳಿಗಳಿಗೆ ಈವರೆಗೂ ನೀಡಿಲ್ಲ ಎಂದು ದೂರಿದರು.
ಕೆಲವರು ಹಿಂದುಳಿದ ಜಾತಿಗಳ ಒಗ್ಗಟ್ಟು ಮುರಿಯುವ ಕೆಲಸ ಮಾಡುತ್ತಿದ್ದು, ಅವರ ಮಾತುಗಳಿಗೆ ಯಾರೂ ಸೊಪ್ಪು ಹಾಕಬಾರದು. ನಮಗೆ ರಾಜಕೀಯ ಶಕ್ತಿಯ ಅಗತ್ಯವಿದೆ. ಹಿಂದುಳಿದ ಜಾತಿಗಳಿಗೆ ರಾಜಕೀಯ ಜಾಗೃತಿಯ ಅಗತ್ಯವಿದೆ. ನಾವು ಸಂಘಟಿತರಾಗಬೇಕು. ಹಿಂದುಳಿದ ವರ್ಗಗಳಲ್ಲಿನದಮನಿತ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳು ಸಂಘಟಿತವಾಗಬೇಕು. ಈ ಮೂಲಕ ರಾಜಕೀಯ ಪ್ರಾತಿನಿಧ್ಯ ಪಡೆಯಬೇಕು ಎಂದು ಸಲಹೆ ನೀಡಿದರು.
ಹಿಂದುಳಿದ ಜಾತಿಗಳ ಒಕ್ಕೂಟದ ಗೌರವಾಧ್ಯಕ್ಷ ನಾಗರಾಜ್, ಹಿಂದುಳಿದ ಜಾತಿಗಳ ಒಕ್ಕೂಟದ ಸಿ. ಲಕ್ಷ್ಮಿನಾರಾಯಣ್, ಮಂಜುನಾಥ್, ಎಂ.ಜಿ. ಮಧುಸೂದನ್, ಗೋಪಾಲಕೃಷ್ಣ, ಚಂದ್ರಶೇಖರ್, ಶಿವಾಜಿರಾವ್, ರಾಮಮೂರ್ತಿ, ರಾಮಕೃಷ್ಣಪ್ಪ, ಲಕ್ಷ್ಮಿಕಾಂತ್, ಗೌರಿಶಂಕರ್, ಬಡಗಿ ಶ್ರೀನಿವಾಸ್, ಶ್ರೀನಿವಾಸ್, ರವಿ, ರಾಮಪ್ಪ, ರಾಮಮೂರ್ತಿ, ಶಿವಣ್ಣ, ಶ್ರವಣ್, ನಾರಾಯಣಸ್ವಾಮಿ, ಹರೀಶ್, ಚಲಪತಿ ಹಾಜರಿದ್ದರು.

