ಬೀದರ್: ಶ್ರದ್ಧಾ, ಭಕ್ತಿ ಹಾಗೂ ಸಡಗರ ಸಂಭ್ತಮದಿಂದ ಭವ್ಯ ಮೆರವಣಿಗೆ ಮೂಲಕ ಗಣಪನ ಮೂರ್ತಿಗಳ ವಿಸರ್ಜನೆಯೊಂದಿಗೆ ಐದು ದಿನಗಳ ಗಣೇಶ ಉತ್ಸವಕ್ಕೆ ನಗರದಲ್ಲಿ ಶುಕ್ರವಾರ ರಾತ್ರಿ ವಿಧ್ಯುಕ್ತ ತೆರೆ ಬಿತ್ತು.
ನಗರದ ವಿವಿಧೆಡೆ ಭವ್ಯ ಪೆಂಡಾಲ್, ವಿದ್ಯುತ್ ದೀಪಾಲಂಕಾರ, ಸಂಗೀತ ಕಾರ್ಯಕ್ರಮದ ಮೂಲಕ ನಗರದಲ್ಲಿ ಭಕ್ತಿಯ ವಾತಾವರಣ ಸೃಷ್ಟಿಯಾಗಿತ್ತು.
ಅಯೋಧ್ಯೆಯ ರಾಮಮಂದಿರ, ತೆಲಂಗಾಣದ ಅರುಣಾಚಲಂ ಮಹಾದೇವ ಮಂದಿರ ಸೇರಿದಂತೆ ಹಲವು ಪ್ರಮುಖ ದೇಗುಲಗಳ ಮಾದರಿಗಳನ್ನು ನಿರ್ಮಿಸಿ, ಅದರೊಳಗೆ ಗಣಪನ ಪ್ರತಿಷ್ಠಾಪಿಸಿ, ನಿತ್ಯ ಪೂಜೆ ನೆರವೇರಿಸಲಾಗಿತ್ತು. ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ರಂಜಿಸಿದ್ದವು. ಅಂತಿಮ ದಿನವ ವಿಶೇಷ ಪೂಜೆ ನೆರವೇರಿಸಿ, ಅಲಂಕರಿಸಿದ ವಾಹನಗಳಲ್ಲಿ ಗಣೇಶನ ಮೂರ್ತಿಗಳ ಮೆರವಣಿಗೆ ಮಾಡಲಾಯಿತು.
ಹನುಮನ ಭುಜದ ಮೇಲೆ ಕುಳಿತ ಗಣೇಶ, ಶಿವನ ತೊಡೆ ಮೇಲೆ ಆಸೀನ ಬೆನಕ, ತ್ರಿಶೂಲಧಾರಿ ಗಣಪ, ಕೃಷ್ಣಾವತಾರಿ ವಿನಾಯಕ, ಪರ್ವತದ ಮೇಲೆ ಆಸೀನ ಗೌರಿ ಪುತ್ರ ಸೇರಿದಂತೆ ವಿವಿಧ ಬಗೆಯ ಮೂರ್ತಿಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.
ಹಿಂದೂ ಮಹಾಗಣಪತಿ, ಬೀದರ್ ಕಾ ರಾಜಾ, ದೇವಿ ಕಾಲೊನಿ, ಸಿದ್ದಾರೂಢ ಗಣೇಶ ಮಂಡಳಿ, ನೌಬಾದಿನ ಗಜಾನನ ಯುವಕ ಮಂಡಳಿ, ಪ್ರತಾಪ್ ನಗರ ಗಣೇಶ ಮಂಡಳಿ, ದರ್ಜಿ ಗಲ್ಲಿ, ಶಿವಸೇನಾ ಗಣೇಶ ಮಂಡಳಿ, ಕೆಇಬಿ ಗಣೇಶ, ಬಸವನಗರ, ಕುಂಬಾರವಾಡದ ಕಾಳಿಕಾದೇವಿ ಗಣೇಶ, ರಾಂಪುರೆ ಕಾಲೊನಿ, ನಂದಿ ಕಾಲೊನಿ, ಸಂಗಮೇಶ್ವರ ಕಾಲೊನಿ, ಗಾಂಧಿ ಗಂಜ್ ಗಣೇಶ ಮಂಡಳಿಯ ಮೂರ್ತಿಗಳ ಮೆರವಣಿಗೆ ಭವ್ಯವಾಗಿತ್ತು. ಭಗವಾ ಧ್ವಜಗಳನ್ನು ಬೀಸುತ್ತ, ಡಿಜೆಯ ಸಂಗೀತಕ್ಕೆ ಮೈಮರೆತು ಭಕ್ತಿಭಾವದಿಂದ ಹೆಜ್ಜೆ ಹಾಕಿದರು.
ವಿವಿಧ ಗಣೇಶ ಮಂಡಳಿಯ ಮೂರ್ತಿಗಳು ನಗರದ ಬಸವೇಶ್ವರ ವೃತ್ತದಲ್ಲಿರುವ ನಯಾಕಮಾನ್ ಮೂಲಕ ಸಿದ್ದಿ ತಾಲೀಮ್, ಚೌಬಾರ ಕಡೆಗೆ ಮುಖ ಮಾಡಿದವು. ಮೆರವಣಿಗೆ ಕಣ್ತುಂಬಿಕೊಳ್ಳಲು ವಿವಿಧ ಕಡೆಗಳಿಂದ ಅಪಾರ ಸಂಖ್ಯೆಯಲ್ಲಿ ಜನ ಬಂದದ್ದರಿಂದ ಬಸವೇಶ್ವರ ವೃತ್ತದಿಂದ ಚೌಬಾರ ತನಕ ರಸ್ತೆಯಲ್ಲಿ ಜನಜಾತ್ರೆ ಇತ್ತು. ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರು ಮೆರವಣಿಗೆ ಕಣ್ತುಂಬಿಕೊಂಡರು. ಗಣೇಶ ಮಹಾಮಂಡಳದ ಪದಾಧಿಕಾರಿಗಳು ಚೌಬಾರ ಬಳಿ ಗಣಪನ ಮೂರ್ತಿಗಳಿಗೆ ಹೂಮಳೆಗರೆದು ಸ್ವಾಗತಿಸಿದರು.
ಹತ್ತು ಅಡಿಗಳಿಗಿಂತ ಎತ್ತರದ ಮೂರ್ತಿಗಳನ್ನು ಚೌಬಾರ ಕಡೆಗೆ ಮೆರವಣಿಗೆಯಲ್ಲಿ ಕೊಂಡೊಯ್ದರು, ಹತ್ತು ಅಡಿಗಿಂತ ಚಿಕ್ಕ ಮೂರ್ತಿಗಳನ್ನು ಗುಂಪಾ-ಶಹಾಪುರ ಗೇಟ್ ರಿಂಗ್ ರೋಡ್ ನಲ್ಲಿರುವ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಗಣಪನ ಮೂರ್ತಿಗಳ ವಿಸರ್ಜನೆಯ ಹೊಂಡದಲ್ಲಿ ವಿಸರ್ಜಿಸಲಾಯಿತು. ವಿವಿಧ ಕಡೆಗಳಿಂದ ತಂದಿದ್ದ ಮೂರ್ತಿಗಳನ್ನು ಸಾಲಲ್ಲಿ ವಾಹನಗಳಲ್ಲಿ ತಂದು, ಹೊಂಡದಲ್ಲಿ ಕೊನೆಯ ಪೂಜೆ ನೆರವೇರಿಸಿ ವಿಸರ್ಜಿಸಿದರು. ಸಂಜೆಯಿಂದಲೇ ವಿವಿಧ ಕಡೆಗಳಿಂದ ಸರತಿಯಲ್ಲಿ ನಿಂತು ವಿಸರ್ಜನೆ ಮಾಡಿದರು. ಇದನ್ನು ಕಣ್ತುಂಬಿಕೊಳ್ಳುವುದಕ್ಕಾಗಿ ಹೊಂಡದ ಸುತ್ತ ಅಪಾರ ಜನ ನೆರೆದಿದ್ದರು.
ಹೆಜ್ಜೆ ಹೆಜ್ಜೆಗೂ ಪ್ರಸಾದ ವಿತರಣೆ
ಮೆರವಣಿಗೆ ಹಾದು ಹೋಗುವ ಬಸವೇಶ್ವರ ವೃತ್ತದಿಂದ ಚೌಬಾರ ತನಕ ಹೆಜ್ಜೆ ಹೆಜ್ಜೆಗೂ ಸಾರ್ವಜನಿಕರಿಗೆ ವಿವಿಧ ಸ್ವಯಂ ಸೇವಾ ಸಂಸ್ಥೆಗಳವರು ಕಾಳು, ಅನ್ನ, ಸಿಹಿ ಪ್ರಸಾದ, ಕುಡಿಯುವ ನೀರು ವಿತರಿಸಿದರು.
ಜನ ಓಡಾಡುತ ಮೆರವಣಿಗೆ ಕಣ್ತುಂಬಿಕೊಳ್ಳುತ್ತಲೇ ಪ್ರಸಾದ ಸವಿದರು. ರಸ್ತೆಯ ಬದಿ,ಕಟ್ಟಡಗಳ ಮೇಲೆ ಕುಳಿತುಕೊಂಡು ಮೆರವಣಿಗೆ ಕಣ್ತುಂಬಿಕೊಂಡರು. ಅಲ್ಲಿಂದಲೇ ವಿನಾಯಕನಿಗೆ ಕೈಮುಗಿದು ನಮಸ್ಕರಿಸಿದರು.
ಪೊಲೀಸರ ಕಟ್ಟೆಚ್ಚರ
ಗಣೇಶನ ಮೂರ್ತಿಗಳ ಮೆರವಣಿಗೆ ಸಂಪೂರ್ಣವಾಗಿ ಬೀದರ್ ನ ಓಲ್ಡ್ ಸಿಟಿ ಮೂಲಕ ಹಾದು ಹೋಗಿದ್ದರಿಂದ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದರು.
ಪ್ರಾರ್ಥನಾ ಮಂದಿರಗಳು, ಪ್ರಮುಖ ವೃತಗಳು, ಸೂಕ್ಷ್ಮ. ಪ್ರದೇಶಗಳಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.
ಸಚಿವ ಈಶ್ವರ ಖಂಡ್ರೆ ಚಾಲನೆ
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಬೀದರ್ ನ ಚೌಬಾರ ಮೇಲೆ ವಿನಾಯಕನಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಶಾಸಕರಾದ ರಹೀಂ ಖಾನ್, ಡಾ.ಶೈಲೇಂದ್ರ ಕೆ. ಬೆಲ್ದಾಳೆ,ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಗಿತ್ತೆ ಮಾಧವ್ ವಿಠ್ಠಲರಾವ್, ಎಸ್ಪಿ ಪ್ರದೀಪ್ ಗುಂಟಿ ಹಾಜರಿದ್ದರು.
ಮೆರವಣಿಗೆ ಮಾರ್ಗದಲ್ಲಿ ಕತ್ತಲು
ಗಣೇಶನ ಮೂರ್ತಿಗಳ ಮೆರವಣಿಗೆ ಹಾದು ಹೋಗುವ ಬೀದರ್ ನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ನಯಾಕಮಾನ್ ಸೇರಿದಂತೆ ಹಲವು ಪ್ರಮುಖ ಮಾರ್ಗಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದರಿಂದ ಅಂಧಕಾರ ಆವರಿಸಿಕೊಂಡಿತು.
ಕತ್ತಲಲ್ಲೇ ಗಣೇಶ ಮಹಾಮಂಡಳಿಯವರು ಮೆರವಣಿಗೆ ಮುಂದುವರೆಸಿದರು.ಡಿಜೆ ಸಂಗೀತದ ನಡುವೆ ಜನ ತೀವ್ರ ಸಮಸ್ಯೆ ಎದುರಿಸಿದರು.

