Friday, 20 Nov, 6.02 pm ಪ್ರಜಾವಾಣಿ

ಫುಟ್ಬಾಲ್
ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿ: ಮುಂಬೈ ಸಿಟಿಗೆ ಶುಭಾರಂಭದ ನಿರೀಕ್ಷೆ

ವಾಸ್ಕೊ: ಈ ಬಾರಿ 19 ಆಟಗಾರರನ್ನು ಸೇರಿಸಿಕೊಂಡಿರುವ ಮುಂಬೈ ಸಿಟಿ ಎಫ್‌ಸಿ ತಂಡವು ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಶುಭಾರಂಭದ ನಿರೀಕ್ಷೆಯಲ್ಲಿದೆ. ಮೊದಲ ಬಾರಿ ಪ್ರಶಸ್ತಿ ಗೆಲ್ಲುವ ತವಕದಲ್ಲಿರುವ ಆ ತಂಡವು ಶನಿವಾರ ನಾರ್ತ್‌ಈಸ್ಟ್ ಯುನೈಟೆಡ್‌ ಎಫ್‌ಸಿಯನ್ನು ಎದುರಿಸಲಿದೆ.

ಮುಂಬೈ ಸಿಟಿ ಎಫ್‌ಸಿ ಒಂದು ಬಾರಿಯೂ ಟ್ರೋಫಿಯನ್ನು ಜಯಿಸಿಲ್ಲ. ಈ ಬಾರಿ ನೂತನ ತರಬೇತುದಾರ ಸ್ಪೇನ್‌ನ ಸೆರ್ಜಿಯೊ ಲೋಬೆರೊ ನೇತೃತ್ವದಲ್ಲಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದೆ. 2019ರ ಸಾಲಿನಲ್ಲಿ ಎಫ್‌ಸಿ ಗೋವಾ ತಂಡದಲ್ಲಿದ್ದ ಸೆರ್ಜಿಯೊ ಅವರು ಆ ತಂಡವು ಸೂಪರ್‌ ಕಪ್‌ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

'ಫುಟ್‌ಬಾಲ್‌ನಲ್ಲಿ ಆಕ್ರಮಣಕಾರಿ ಆಟವಾಡುವುದು ಬಹಳ ಮುಖ್ಯ. ನಿಸ್ಸಂಶಯವಾಗಿ ಸಮತೋಲನವೂ ಬೇಕಾಗುತ್ತದೆ. ದಾಳಿ ಮತ್ತು ರಕ್ಷಣೆಯ ನಡುವೆ ಸಮತೋಲನ ಅಗತ್ಯ' ಎಂದು ಲೋಬೆರೊ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆಯಪ್ | ಐಒಎಸ್ ಆಯಪ್

ಮುಂಬೈ ತಂಡದಲ್ಲಿರುವ ಬಾರ್ತಲೋಮಿಯೊ ಒಗ್ಬೆಚೆ ಹಾಗೂ ಆಯಡಂ ಲೇ ಫೋಂಡರ್‌ ಅವರು ಯಾವುದೇ ಎದುರಾಳಿಗೆ ಪೈಪೋಟಿ ನೀಡಬಲ್ಲ ಸಾಮರ್ಥ್ಯ ಹೊಂದಿದವರು. ಮಿಡ್‌ಫೀಲ್ಡರ್‌ಗಳಾದ ಅಹಮ್ಮದ್‌ ಜಾನೊ, ಇಂಗ್ಲೆಂಡ್‌ ಸಂಜಾತ ಜಪಾನ್‌ ಆಟಗಾರ ಸೈ ಗೊಡ್ಡಾರ್ಡ್‌ ಅವರ ಆಟವೂ ಪಂದ್ಯದಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

'ಯಾವುದೇ ಸವಾಲು ಎದುರಿಸಲು ನಾವು ಸಜ್ಜಾಗಿದ್ದೇವೆ. ಪ್ರತಿದಾಳಿ ನಡೆಸುವುದು ಕಷ್ಟವಾದರೂ ಆ ಕುರಿತು ನಾವು ಯೋಜನೆ ಹಾಕಿಕೊಂಡು ಮುನ್ನುಗ್ಗುತ್ತೇವೆ' ಎಂದು ಗೋಲ್‌ಕೀಪರ್‌ ಅಮರಿಂದರ್‌ ಸಿಂಗ್‌ ಹೇಳಿದ್ದಾರೆ.

ಫಾರೂಕ್‌ ಚೌಧರಿ, ಹ್ಯೂಗೊ ಬೊಮೌಸ್‌, ಹೆರ್ನಾನ್‌ ಸ್ಯಾಂಟಾನ, ರೇನಿಯರ್‌ ಫರ್ನಾಂಡಿಸ್‌, ರೌಲಿನ್‌ ಬೋರ್ಗೆಸ್‌ ಹಾಗೂ ಪ್ರಾಂಜಲ್‌ ಭೂಮಿಜ್‌ ಕೂಡ ಮಿಡ್‌ಫೀಲ್ಡ್‌ನಲ್ಲಿ ಕಾಲ್ಚಳಕ ತೋರಬಲ್ಲರು. ಮಂದಾರ ರಾವ್‌ ದೇಸಾಯಿ ಅವರ ಸೇರ್ಪಡೆಯೊಂದಿಗೆ ತಂಡದ ಡಿಫೆನ್ಸ್ ವಿಭಾಗದ ಬಲ ವೃದ್ಧಿಸಿದೆ. ಸಾರ್ಥಕ್‌ ಗೋಲುಯಿ, ಸೆನೆಗಲ್‌ ಮೂಲದ ಮೌರ್ಟಡಾ ಫಾಲ್‌ ಹಾಗೂ ಮೊಹಮ್ಮದ್‌ ರಕೀಪ್ ಕೂಡ ಇವರಿಗೆ ಸಾಥ್‌ ನೀಡಲಿದ್ದಾರೆ.

ಕಳೆದ ಬಾರಿ ಕಳಪೆ ಆಟವಾಡಿದ್ದ ನಾರ್ತ್‌ಈಸ್ಟ್ ಯುನೈಟೆಡ್‌ ಎಫ್‌ಸಿ, ಈ ಬಾರಿ ನೂತನ ಕೋಚ್‌ ಗೆರಾರ್ಡ್‌ ನೂಸ್‌ ನೇತೃತ್ವದಲ್ಲಿ ಸಾಮರ್ಥ್ಯ ಸುಧಾರಿಸಿಕೊಳ್ಳುವ ಉದ್ದೇಶ ಹೊಂದಿದೆ. ಸೆನೆಗಲ್ ಸ್ಟ್ರೈಕರ್‌ ಇದ್ರಿಸ್ಸಾ ಸಿಲ್ಲಾ ಹಾಗೂ ಘಾನಾದ ಮಾಜಿ ರಾಷ್ಟ್ರೀಯ ಆಟಗಾರ ಕ್ವೇಸಿ ಅಪ್ಪಯ್ಯ ಅವರನ್ನು ಆ ತಂಡವು ಹೆಚ್ಚು ಅವಲಂಬಿಸಿದೆ.

ಸಂಪಾದಕರ ಮಾತು | ಪ್ರಜಾವಾಣಿ ಆಂಡ್ರಾಯ್ಡ್ ಮತ್ತು ಐಒಎಸ್ ಆಯಪ್ ಲೋಕಾರ್ಪಣೆ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top