Dailyhunt Logo
  • Light mode
    Follow system
    Dark mode
    • Play Story
    • App Story
ಐಪಿಎಲ್ ಟೂರ್ನಿ: ವೈಭವ್ ಸಂಭ್ರಮ ಅಮ್ಮನಿಗಾಗಿ...

ಐಪಿಎಲ್ ಟೂರ್ನಿ: ವೈಭವ್ ಸಂಭ್ರಮ ಅಮ್ಮನಿಗಾಗಿ...

ಬೆಂಗಳೂರು: ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಘಟಾನುಘಟಿ ಬೌಲರ್‌ಗಳೆಲ್ಲರಿಗೂ 15 ವರ್ಷದ ವೈಭವ್ ಸೂರ್ಯವಂಶಿ ಬಿಸಿ ಮುಟ್ಟಿಸಿದ್ದಾರೆ.

13 ಪಂದ್ಯಗಳಲ್ಲಿ 579 ರನ್‌ ಗಳಿಸಿದ್ದಾರೆ. 236.33ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗುಡ್ಡೆ ಹಾಕಿ ಆರೆಂಜ್ ಕ್ಯಾಪ್ ಧರಿಸಿದ್ದಾರೆ.

ಬೌಂಡರಿ ಮತ್ತು ಸಿಕ್ಸರ್‌ಗಳ ಅರ್ಧಶತಕಗಳನ್ನೂ ದಾಖಲಿಸಿರುವ 'ಬಿಹಾರಿ ಪೋರ' ವೈಭವ್. ಅವರು ಈಗ ತಮ್ಮ ಬೀಸಾಟದಿಂದಾಗಿ ಕ್ರಿಕೆಟ್ ಪ್ರಿಯರ ಗಮನವನ್ನು ಅಪಾರವಾಗಿ ಸೆಳೆದುಕೊಂಡಿದ್ದಾರೆ. ಆದ್ದರಿಂದ ಅವರ ಪ್ರತಿಯೊಂದು ಚಲನವಲನವೂ ದೊಡ್ಡ ಸುದ್ದಿಯಾಗುತ್ತಿದೆ.

ಮಂಗಳವಾರದ ಪಂದ್ಯದಲ್ಲಿ ಅವರು ಅರ್ಧಶತಕ ಗಳಿಸಿದ ನಂತರ ಸಂಭ್ರಮಾಚರಣೆಯೂ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕೌತುಕದ ಸುದ್ದಿಯಾಗಿ ಹರಿದಾಡುತ್ತಿದೆ. ಅವರು ತಮ್ಮ ಬಲಗೈನ ಎರಡು ಬೆರಳುಗಳ ಮೇಲೆ ಬಲಗೈ ತೋರುಬೆರಳನ್ನು ಇಟ್ಟು ಇಂಗ್ಲಿಷ್‌ ಭಾಷೆಯ 'ಎ' ಅಕ್ಷರದ ಸಂಕೇತವನ್ನು ತೋರಿಸಿದ್ದರು. ಇದು ಅವರ ತಾಯಿ ಆರತಿ ಸೂರ್ಯವಂಶಿ ಯವರಿಗೆ ಕೃತಜ್ಞತೆ ಸಲ್ಲಿಸಲು ತೋರಿದ ಸಂಕೇತ ಎಂದು ರಾಜಸ್ಥಾನ ರಾಯಲ್ಸ್ ತಂಡದ ಇನ್ಸ್ಟಾಗ್ರಾಮ್‌ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

'ಅದು ನನ್ನ ವೈಯಕ್ತಿಕ ಸಂಗತಿಯಾಗಿತ್ತು. ಆದ್ದರಿಂದ ನಾನು ಇದುವರೆಗೆ ಯಾರಿಗೂ ಹೇಳಿರಲಿಲ್ಲ. ಈಗ ನಿಮ್ಮ ಮುಂದೆ ಹೇಳುತ್ತಿರುವೆ. ನನ್ನ ತಾಯಿಗೆ ಸಮರ್ಪಿಸಿದ ಇನಿಂಗ್ಸ್ ಇದು ಎಂಬುದಕ್ಕೆ ಹಾಗೆ ತೋರಿಸಿದ್ದೆ ಅಷ್ಟೇ' ಎಂದು ವೈಭವ್ ಹೇಳಿದ್ದಾರೆ.

ಈ ಪಂದ್ಯದಲ್ಲಿ ಅವರು 93 ರನ್ ಗಳಿಸಿದರು. ತಂಡವು ಲಖನೌ ಸೂಪರ್ ಜೈಂಟ್ಸ್ ಎದುರು 7 ವಿಕೆಟ್‌ಗಳಿಂದ ಜಯಿಸಿತು. ವೈಭವ್ ಪಂದ್ಯಶ್ರೇಷ್ಠ ಗೌರವ ಪಡೆದರು. ಪ್ರಶಸ್ತಿ ಪ್ರದಾನದ ಸಂದರ್ಭದಲ್ಲಿ ನಿರೂಪಕ ಮುರಳಿ ಕಾರ್ತಿಕ್ ಅವರು ಸಂಭ್ರಮಾಚರಣೆಯ ಬಗ್ಗೆ ಕೇಳಿದಾಗ, 'ನನಗೇ ಗೊತ್ತಿಲ್ಲ. ಆ ಹೊತ್ತಿನಲ್ಲಿ ನನಗೆ ಏನು ತಿಳಿಯುತ್ತದೋ ಅದನ್ನು ಮಾಡಿ ಬಿಡುತ್ತೇನೆ. ಏನಾದರೂ ಒಂದು ಹೊಸದನ್ನು ಮಾಡಲು ಪ್ರಯತ್ನಿಸುತ್ತಿರುತ್ತೇನೆ' ಎಂದಿದ್ದ ವೈಭವ್ ನಕ್ಕಿದ್ದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಲಖನೌ ಸೂಪರ್‌ ಜೈಂಟ್ಸ್ ತಂಡವು 20 ಓವರ್‌ಗಳಲ್ಲಿ 5ಕ್ಕೆ 220 ರನ್ ಗಳಿಸಿತ್ತು. ಅದಕ್ಕುತ್ತರವಾಗಿ ರಾಯಲ್ಸ್ ತಂಡವು 19.1 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 225 ರನ್ ಗಳಿಸಿ ಜಯಿಸಿತ್ತು.

ಈ ಐಪಿಎಲ್‌ನಲ್ಲಿ ವೈಭವ್ ಸಾಧನೆ

ಪಂದ್ಯ;13

ರನ್;579

ಬೌಂಡರಿ;50

ಸಿಕ್ಸರ್;53

ಅರ್ಧಶತಕ;3

ಶತಕ;1

ಶ್ರೇಷ್ಠ;103

Dailyhunt
Disclaimer: This content has not been generated, created or edited by Dailyhunt. Publisher: Prajavani