Saturday, 28 Nov, 4.55 pm ಪ್ರಜಾವಾಣಿ

ರಾಷ್ಟ್ರೀಯ
ಅಕ್ಬರುದ್ದೀನ್‌ ಒವೈಸಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ವಿರುದ್ಧ ಪ್ರಕರಣ

ಹೈದರಾಬಾದ್‌: ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್‌ ಹಾಗೂ ಟಿಡಿಪಿ ಸಂಸ್ಥಾಪಕ ಎನ್‌.ಟಿ.ರಾಮರಾವ್‌ ಅವರ ಸಮಾಧಿಯ ಕುರಿತ ಹೇಳಿಕೆ ನೀಡಿದ್ದ ಎಐಎಂಐಎಂ ನಾಯಕ ಅಕ್ಬರುದ್ದೀನ್‌ ಒವೈಸಿ ಹಾಗೂ ಈ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ದ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಂಡಿ ಸಂಜಯ್‌ ಕುಮಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಭಾರತೀಯ ದಂಡ ಸಂಹಿತೆ ಸೆಕ್ಷನ್‌ 505ರಡಿ ಇಬ್ಬರ ವಿರುದ್ಧವೂ ಪ್ರಕರಣ ದಾಖಲಸಿಕೊಳ್ಳಲಾಗಿದೆ. ಗ್ರೇಟರ್‌ ಹೈದರಾಬಾದ್‌ ಪಾಲಿಕೆ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್‌ ಒವೈಸಿ ಅವರ ತಮ್ಮ ಅಕ್ಬರುದ್ದೀನ್‌ ಒವೈಸಿ ಅವರು ಸರ್ಕಾರದ ಒತ್ತುವರಿ ತೆರವು ಅಭಿಯಾನದ ಬಗ್ಗೆ ಪ್ರಶ್ನಿಸಿದ್ದರು. 'ಸರ್ಕಾರವು ಕೆರೆಗಳ ಸಮೀಪದ ಒತ್ತುವರಿ ತೆರವುಗೊಳಿಸುವ ಅಭಿಯಾನ ನಡೆಸುತ್ತಿದೆ. ಇಲ್ಲಿ ಬಡವರೇ ವಾಸಿಸುತ್ತಿದ್ದಾರೆ. ತೆರವುಗೊಳಿಸುವುದಿದ್ದರೆ, ಹುಸೈನ್‌ ಸಾಗರ್‌ ಕೆರೆ ದಂಡೆಯಲ್ಲಿ ಇರುವ ಪಿ.ವಿ.ನರಸಿಂಹ ರಾವ್‌ ಹಾಗೂ ಎನ್‌.ಟಿ.ರಾಮರಾವ್‌ ಅವರ ಸಮಾಧಿಯನ್ನೂ ತೆರವುಗೊಳಿಸುತ್ತೀರಾ?' ಎಂದು ಪ್ರಶ್ನಿಸಿದ್ದರು.

ಈ ಹೇಳಿಕೆಯನ್ನು ಆಡಳಿತದಲ್ಲಿರುವ ಟಿಆರ್‌ಎಸ್‌ ಪಕ್ಷ ಹಾಗೂ ಬಿಜೆಪಿ ಖಂಡಿಸಿತ್ತು. ಒವೈಸಿ ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿತ್ತು. 'ಈ ಸಮಾಧಿಗಳನ್ನು ಧ್ವಂಸಗೊಳಿಸಲು ಅವರಿಗೆ ಧೈರ್ಯವಿದೆಯೇ' ಎಂದು ಬಂಡಿ ಸಂಜಯ್‌ ಕುಮಾರ್‌ ಅವರು ಒವೈಸಿ ಅವರ ಹೆಸರನ್ನು ಹೇಳದೆ ಪ್ರತಿಕ್ರಿಯೆ ನೀಡಿದ್ದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top