ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ 'ಇಂಗಾಲ ತಡೆ' (ನೆಟ್ ಜೀರೊ) ಕಾರ್ಯಪಡೆ ರಚಿಸಲು ಕರ್ನಾಟಕ ಸರ್ಕಾರ ಉದ್ದೇಶಿಸಿದೆ. ಇಂಗಾಲದ ಹೊರಸೂಸುವಿಕೆಯ ಪ್ರಮಾಣವನ್ನು ತಗ್ಗಿಸುವ, ಬರ-ಪ್ರವಾಹ ಪರಿಸ್ಥಿತಿ ಯನ್ನು ನಿರ್ವಹಿಸುವ, ಹವಾಮಾನ ಹಣಕಾಸು ಕ್ರೋಡೀಕರಿಸುವ ಮತ್ತು ಹಸಿರು ಉದ್ಯೋಗ ಸೃಷ್ಟಿಸುವ ಮಹತ್ತ್ವಾಕಾಂಕ್ಷಿ ಯೋಜನೆಯಿದು.
ನಿವ್ವಳ ಶೂನ್ಯವೆಂದರೆ, ವಾತಾವರಣಕ್ಕೆ ಸೇರುವ ಇಂಗಾಲಾಮ್ಲ ಮತ್ತಿತರೆ ಹಸಿರುಮನೆ ಅನಿಲಗಳ ಪ್ರಮಾಣಕ್ಕೂ, ಕಾಡು, ಮಣ್ಣು, ಸಮುದ್ರದಂತಹ ನೈಸರ್ಗಿಕ ಮೂಲಗಳು ವಾತಾವರಣದಿಂದ ಇಂಗಾಲ ವನ್ನು ಹೀರಿಕೊಳ್ಳುವ ಪ್ರಮಾಣಕ್ಕೂ ಸಮತೋಲನ ಸಾಧಿಸುವ ಕ್ರಿಯೆ. ಒಟ್ಟು ಹೊರಸೂಸುವಿಕೆಯಿಂದ ಹೀರಿಕೆಯನ್ನು ಕಳೆದಾಗ ನಿವ್ವಳ ಮೊತ್ತ ಶೂನ್ಯಕ್ಕೆ ಬರುವ ಸ್ಥಿತಿ. ಇಂಗಾಲಾಮ್ಲ ಹೊರಸೂಸುವಿಕೆಯನ್ನು ಕನಿಷ್ಠಗೊಳಿಸುವುದು ಹಾಗೂ ಅರಣ್ಯ ಸಂರಕ್ಷಣೆ, ಮರುಬಳಕೆ ಇಂಧನ ಮತ್ತು ಇತರ ವಿಧಾನಗಳ ಮೂಲಕವೂ ಇಂಗಾಲವನ್ನು ನಿಯಂತ್ರಿಸಲು ಕಾರ್ಯಪಡೆಯು ವಲಯವಾರು ಮಾರ್ಗಸೂಚಿ ರೂಪಿಸಲಿದೆ. ಈ ಮಹತ್ವಾಕಾಂಕ್ಷಿ ಯೋಜನೆ ಫಲ ನೀಡಬೇಕೆಂದರೆ, ಜಗತ್ತಿನ ಇತರೆಡೆ ನಡೆದ ತಪ್ಪುಗಳಿಂದ ಮತ್ತು ಪಶ್ಚಿಮಘಟ್ಟಗಳಲ್ಲಾದ ಅನುಭವ ದಿಂದ ಪಾಠ ಕಲಿಯಬೇಕಿದೆ.
ಸ್ಕಾಟ್ಲೆಂಡ್‌ನ ಉತ್ತರ ಭಾಗದ ಫ್ಲೋ ಕಂಟ್ರಿ ಎಂಬ ಪ್ರದೇಶದಲ್ಲಿ ಹತ್ತು ಸಾವಿರ ವರ್ಷಗಳಷ್ಟು ಹಳೆಯದಾದ ಜೌಗು ಭೂಮಿಯ ಮಣ್ಣಿನ ಪದರಗಳಲ್ಲಿ ನೂರಾರು ಕೋಟಿ ಟನ್ ಇಂಗಾಲ ಸಹಸ್ರಾರು ವರ್ಷಗಳಿಂದ ಹುದುಗಿ ಕುಳಿತಿತ್ತು. ಜೌಗು ನೆಲದ ನೀರನ್ನು ಬಸಿಗಾಲುವೆಗಳ ಮೂಲಕ ಹೊರಹಾಕಿ ಎಂಬತ್ತರ ದಶಕದಲ್ಲಿ ಸರ್ಕಾರ ಮತ್ತು ಖಾಸಗಿಯವರು ಸ್ಥಳೀಯವಲ್ಲದ ಪೈನ್ ಮರಗಳನ್ನು ನೆಟ್ಟು, ಅರಣ್ಯೀಕರಣ, ಹಸಿರೀಕರಣ ಎಂದು ಬಣ್ಣಿಸಿದರು. ಸಾವಿರಾರು ವರ್ಷಗಳಿಂದ ನೆಲದೊಳಗಿದ್ದ ಇಂಗಾಲ ವಾತಾವರಣಕ್ಕೆ ಸೇರಿತು. ಲೆಕ್ಕ ಹಾಕಿದಾಗ, ಮರಗಳು ಬೆಳೆದು ಹೀರಿಕೊಂಡಿದ್ದ ಇಂಗಾಲಕ್ಕಿಂತ ಹೆಚ್ಚು ಇಂಗಾಲ ನೆಲದಿಂದ ಹೊರಬಂದಿತ್ತು. ಏಕಜಾತಿ ನೆಡುತೋಪು ಸ್ಥಳೀಯ ಪಕ್ಷಿ, ಕೀಟ ಮತ್ತು ಸಸ್ಯಸಂಕುಲವನ್ನು ನಾಶ ಮಾಡಿತು. ನಾಲ್ಕು ದಶಕಗಳ ನಂತರ ಸ್ಕಾಟ್ಲೆಂಡ್ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಆ ಮರಗಳನ್ನು ಕಡಿದು, ಬಸಿಗಾಲುವೆಗಳನ್ನು ಮುಚ್ಚಿ, ನೆಲವನ್ನು ಮತ್ತೆ ಮೊದಲಿನಂತೆ ಜೌಗು ಸ್ಥಿತಿಗೆ ತರುವಲ್ಲಿ ತೊಡಗಿದೆ.
ಪಶ್ಚಿಮಘಟ್ಟದ ಸಂರಕ್ಷಣೆಗಾಗಿ ರೂಪಿಸಲಾದ ಸಮಗ್ರ ನೀತಿ ವೈಜ್ಞಾನಿಕವಾಗಿಲ್ಲ ಮತ್ತು ಸಂರಕ್ಷಣೆಗೆ ಪೂರಕವಾಗಿಲ್ಲ ಎಂದು ತಜ್ಞರೇ ಟೀಕಿಸಿದ್ದಾರೆ. ಗಾಡ್ಗೀಳ್ ಮತ್ತು ಕಸ್ತೂರಿರಂಗನ್ ವರದಿಗಳು ದಶಕದ ಹಿಂದೆಯೇ ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರ್ತಿಸಿ, ಗಣಿಗಾರಿಕೆ, ಕಲ್ಲುಗಣಿ ಮತ್ತು ಅವೈಜ್ಞಾನಿಕ ಅಭಿವೃದ್ಧಿ ಚಟುವಟಿಕೆಗಳ ಮೇಲೆ ಕಡಿವಾಣ ಹಾಕಬೇಕೆಂದು ಶಿಫಾರಸು ಮಾಡಿದ್ದವು. ಪಶ್ಚಿಮಘಟ್ಟದ ರಾಜ್ಯಗಳು ಈ ವರದಿಗಳನ್ನೇ ಅವೈಜ್ಞಾನಿಕ ಎಂದು ತಳ್ಳಿಹಾಕುತ್ತಿವೆ. ಅಧ್ಯಯನಗಳ ಪ್ರಕಾರ, ಪಶ್ಚಿಮಘಟ್ಟದ ನಿತ್ಯಹರಿದ್ವರ್ಣ ಅರಣ್ಯ ಹೊದಿಕೆ 1985ರಲ್ಲಿ ಶೇ 16ರಷ್ಟಿತ್ತು. 2018ರ ವೇಳೆಗೆ ಶೇ 11ಕ್ಕೆ ಕುಸಿದಿದೆ. ಅಕೇಶಿಯಾ, ರಬ್ಬರ್, ನೀಲಗಿರಿ, ಸಾಗುವಾನಿಯಂತಹ ಏಕತಳಿ ವಾಣಿಜ್ಯ ನೆಡುತೋಪುಗಳ ಅವೈಜ್ಞಾನಿಕ ವಿಸ್ತರಣೆಯೇ ಈ ಕುಸಿತಕ್ಕೆ ಪ್ರಮುಖ ಕಾರಣವೆಂದು ಹೇಳಲಾಗಿದೆ. ಇದೇ ಅವಧಿಯಲ್ಲಿ ಒಳನಾಡಿನ ಸಾಂದ್ರ ಅರಣ್ಯ ಪ್ರದೇಶ ಶೇ 37ರಿಂದ ಶೇ 25ಕ್ಕೆ ಕುಸಿದಿದೆ. ಭೂಬಳಕೆಯಲ್ಲಿನ ಬದಲಾವಣೆ ಕೊಡಗು, ವಯನಾಡಿನಂತಹ ಪ್ರದೇಶಗಳಲ್ಲಿ ಪ್ರವಾಹ ಮತ್ತು ಭೂಕುಸಿತದ ಹೆಚ್ಚಳಕ್ಕೂ ಕಾರಣವಾಗಿದೆ. ರಾಜ್ಯ ಸರ್ಕಾರ ಜೀವನೋಪಾಯದ ಹೆಸರಿನಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯನ್ನೇ ವಿರೋಧಿಸುತ್ತಿದೆ. ಇನ್ನೊಂದೆಡೆ, ಅರಣ್ಯ ಇಲಾಖೆಯೇ ಪರಿಸರ ಸೂಕ್ಷ್ಮ ವಲಯಗಳಲ್ಲಿ ಮೂಲಸೌಕರ್ಯ ಯೋಜನೆಗಳಿಗೆ ಅನುಮತಿ ನೀಡುತ್ತಿದೆ. ವರಾಹಿ ಪಂಪ್ಡ್ ಸ್ಟೋರೇಜ್ ಯೋಜನೆ ಮುನ್ನೆಲೆಗೆ ತರುವ ಮೂಲಕ ವಿಜ್ಞಾನಿಗಳ ಎಚ್ಚರಿಕೆಯನ್ನು ಸರ್ಕಾರ ಕಡೆಗಣಿಸುತ್ತಿದೆ.
ಬೃಹತ್ ಗಣಿಗಾರಿಕೆ, ಜಲವಿದ್ಯುತ್, ಮೂಲ ಸೌಕರ್ಯ ಹಾಗೂ ಒತ್ತುವರಿಯಿಂದಷ್ಟೇ ಅರಣ್ಯನಾಶ ಆಗುತ್ತಿಲ್ಲ. ಅರಣ್ಯ ಇಲಾಖೆಗೆ ನೇರವಾಗಿ ಸೇರದ, ಪಶ್ಚಿಮಘಟ್ಟ ಪ್ರದೇಶದ ಪರಿಸರ ವ್ಯವಸ್ಥೆಗೆ ಹೊಂದಿಕೊಂಡಿರುವ ಕಂದಾಯ ಭೂಮಿಗಳಲ್ಲಿ ಶತಮಾನಗಳಷ್ಟು ಹಳೆಯದಾದ ಮರಗಳನ್ನು ಕಡಿದು ಶುಂಠಿಯಂತಹ ವಾಣಿಜ್ಯ ಬೆಳೆ ಬೆಳೆಯುವ ಪ್ರವೃತ್ತಿ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಸೇರಿದಂತೆ ಘಟ್ಟದ ಹಲವು ಜಿಲ್ಲೆಗಳಲ್ಲಿ ಹೆಚ್ಚುತ್ತಿದೆ. ಶುಂಠಿ ರೈತನಿಗೆ ಉತ್ತಮ ಆದಾಯ ತಂದುಕೊಡಬಹುದು. ಅದಕ್ಕಾಗಿ ಕಡಿಯಲಾಗುವ ಶತಮಾನಗಳಷ್ಟು ಹಳೆಯ, ಸ್ಥಳೀಯ ಪ್ರಭೇದದ ಮರ ಮತ್ತು ಅದರ ಸುತ್ತಲಿನ ಅರಣ್ಯದ ನೈಜ ಪರಿಸರ ಮೌಲ್ಯದ ಎದುರು ಶುಂಠಿಯಿಂದ ಬರುವ ಆದಾಯ ನಗಣ್ಯ.
ಕರ್ನಾಟಕದ ಬಂಡೀಪುರ ಸೇರಿದಂತೆ ದೇಶದ ಹತ್ತು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ 'ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ' ಮತ್ತು 'ಭಾರತೀಯ ಅರಣ್ಯ ನಿರ್ವಹಣಾ ಸಂಸ್ಥೆ' ನಡೆಸಿದ ಅಧ್ಯಯನದ ಪ್ರಕಾರ, ಇಂಗಾಲ ಹೀರಿಕೆ, ನೀರು ಶುದ್ಧೀಕರಣ, ಮಣ್ಣಿನ ಸಂರಕ್ಷಣೆ, ಪರಾಗಸ್ಪರ್ಶ, ಔಷಧೀಯ ಸಸ್ಯ, ಪ್ರವಾಸೋದ್ಯಮದಂತಹ ಪರಿಸರ ಸೇವೆಗಳ ಮೂಲಕ ವಾರ್ಷಿಕ ಸುಮಾರು ₹6 ಲಕ್ಷ ಕೋಟಿ ಮೌಲ್ಯದ ಆರ್ಥಿಕ ಪ್ರಯೋಜನ ನೀಡುತ್ತಿವೆಯೆಂದು ತಿಳಿಸಿವೆ. ಅರಣ್ಯ ಸಂರಕ್ಷಣೆಗಾಗಿ ವ್ಯಯಿಸುವ ಪ್ರತಿ ಒಂದು ರೂಪಾಯಿಗೆ ಕೆಲವು ಬಾರಿ ಏಳು ಸಾವಿರ ರೂಪಾಯಿವರೆಗೂ ಪ್ರತಿಫಲ ಸಿಗುತ್ತದೆ ಎಂದು ಅಧ್ಯಯನ ಸಾಬೀತುಪಡಿಸಿದೆ.
ಸರ್ಕಾರ ಕಾನೂನಿನ ಮೂಲಕ ಒತ್ತುವರಿ ತಡೆಯುವುದರ ಜೊತೆಯಲ್ಲಿ, ರೈತರಿಗೆ ಪರ್ಯಾಯ ಜೀವನೋಪಾಯ ಮಾದರಿಯನ್ನು ರೂಪಿಸಬೇಕು. ಅರಣ್ಯದ ಅಂಚಿನಲ್ಲಿ ವಾಸಿಸುವ ರೈತರಿಗೆ ಕಾಫಿ, ಏಲಕ್ಕಿ, ಕಾಳುಮೆಣಸಿನಂತಹ ನೆರಳಿನ ಬೆಳೆ ಬೆಳೆಯಲು ಪ್ರೋತ್ಸಾಹಿಸುವುದು, ಅರಣ್ಯ ಸಂರಕ್ಷಣೆ ಮಾಡುವ ರೈತರಿಗೆ ನಗದು ಪ್ರೋತ್ಸಾಹ ನೀಡುವುದು ಮುಂತಾದ ಪರ್ಯಾಯಗಳನ್ನು ನಿವ್ವಳ ಶೂನ್ಯ ಕಾರ್ಯಪಡೆ ಗಂಭೀರವಾಗಿ ಪರಿಗಣಿಸಬೇಕು.
ಹಸಿರು ಹೊದಿಕೆ ಹೆಚ್ಚಿಸುತ್ತಿದ್ದೇವೆಯೋ ಅಥವಾ ಅರಣ್ಯ ಹೊದಿಕೆ ಹೆಚ್ಚಿಸುತ್ತಿದ್ದೇವೆಯೋ? ಈ ಮೂಲಭೂತ ಪ್ರಶ್ನೆಗೆ ಕಾರ್ಯಪಡೆ ಉತ್ತರ ಕಂಡು ಕೊಳ್ಳಬೇಕಿದೆ. ಸಾಗುವಾನಿ, ಅಕೇಶಿಯಾ, ಮತ್ತು ನೀಲಗಿರಿ ಏಕಜಾತಿಯ ನೆಡುತೋಪುಗಳು ಉಪಗ್ರಹ ಚಿತ್ರದಲ್ಲಿ ಹಸಿರಾಗಿ ಕಾಣಿಸುತ್ತವೆ; ಸರ್ಕಾರದ ವಾರ್ಷಿಕ ವರದಿಯಲ್ಲಿ ಹಸಿರು ಹೊದಿಕೆ ಹೆಚ್ಚಳವಾಗಿದೆಯೆಂಬ ಅಂಕಿ ಅಂಶಗಳು ಕಾಣುತ್ತವೆ. ಇವು ನೂರಾರು ಜಾತಿಯ ಸಸ್ಯ, ಪ್ರಾಣಿ, ಪಕ್ಷಿ, ಕೀಟ, ಶಿಲೀಂಧ್ರ ಇರುವ ನೈಸರ್ಗಿಕ ಅರಣ್ಯದ ಸಂಕೀರ್ಣ ಪರಿಸರ ವ್ಯವಸ್ಥೆಗೆ ಎಂದಿಗೂ ಪರ್ಯಾಯವಾಗಲಾರವು. ನೈಸರ್ಗಿಕ ಅರಣ್ಯದ ಮಣ್ಣಿನಲ್ಲಿ, ಬೇರಿನಲ್ಲಿ, ಎಲೆಗಳ ಪದರದಲ್ಲಿ ಶತಮಾನಗಳಿಂದ ಶೇಖರವಾದ ಇಂಗಾಲವಿರುತ್ತದೆ. ಇಂಗಾಲ ಇಂಗಿಸುವ ಕ್ಷಮತೆ ಹೊಸದಾಗಿ ನೆಡುವ ಸಸಿಗಳಲ್ಲಿರುವುದಿಲ್ಲ. ಆದ್ದರಿಂದ ನಿವ್ವಳ ಶೂನ್ಯ ಗುರಿಯ ಮೊದಲ ಮತ್ತು ಅತಿಮುಖ್ಯ ಆದ್ಯತೆ ಹೊಸ ಸಸಿಗಳನ್ನು ನೆಡುವುದಲ್ಲ; ಈಗಾಗಲೇ ಇರುವ
ನೈಸರ್ಗಿಕ ಅರಣ್ಯವನ್ನು, ಪಶ್ಚಿಮಘಟ್ಟದ ನಿತ್ಯ ಹರಿದ್ವರ್ಣ ಕಾಡುಗಳನ್ನು, ಜೌಗು ಮತ್ತು ಕೆರೆ-ಕಟ್ಟೆ ಪ್ರದೇಶಗಳನ್ನು ಯಾವುದೇ ಕಾರಣಕ್ಕೂ ಕಡಿಯದೆ, ಒತ್ತುವರಿ ಮಾಡದೆ, ಗಣಿಗಾರಿಕೆ-ಜಲವಿದ್ಯುತ್ ಯೋಜನೆಗಳಿಗೆ ಬಲಿಕೊಡದೆ ಉಳಿಸಿಕೊಳ್ಳುವುದು. ಇರುವ ಕಾಡನ್ನು ಉಳಿಸುವುದು ಹೊಸ ಕಾಡು ಬೆಳೆಸುವುದಕ್ಕಿಂತ ಎಷ್ಟೋ ಪಟ್ಟು ಸುಲಭ, ಅಗ್ಗ ಮತ್ತು ಪರಿಣಾಮಕಾರಿ.
ನಿವ್ವಳ ಶೂನ್ಯ ಕಾರ್ಯಪಡೆಯು ಇಂಗಾಲದ ನಿರ್ವಹಣೆಯ ಮಾರುಕಟ್ಟೆಯಲ್ಲಿ ರಾಜ್ಯದ ಪಾಲ್ಗೊಳ್ಳುವಿಕೆ, ಹವಾಮಾನ ಹಣಕಾಸು ಕ್ರೋಡೀಕರಣ ಮತ್ತು ವಲಯವಾರು ಮಾರ್ಗಸೂಚಿ ರೂಪಿಸುವ ಕುರಿತು ಚಿಂತಿಸುತ್ತಿದೆ. ಈ ಸಂದರ್ಭದಲ್ಲಿ, ಪಶ‍್ಚಿಮಘಟ್ಟ ದಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಏಕಜಾತಿಯ ವಾಣಿಜ್ಯ ತೋಪುಗಳನ್ನು ಪ್ರೋತ್ಸಾಹಿಸುವ ಅಪಾಯದ ಬಗ್ಗೆ ಕಾರ್ಯಪಡೆ ಎಚ್ಚರಿಕೆಯಿಂದ ಇರಬೇಕು. ಇಂಗಾಲ ಮಾರುಕಟ್ಟೆಯಲ್ಲಿ ಹಣ ಸಂಪಾದಿಸಬೇಕೆಂಬ ಆತುರದಲ್ಲಿ ಅಸ್ತಿತ್ವದಲ್ಲಿರುವ ಅರಣ್ಯದ ಮೌಲ್ಯವನ್ನೇ ಮರೆತರೆ, ಸ್ಕಾಟ್ಲೆಂಡ್ ಮಾಡಿದ ತಪ್ಪನ್ನೇ ನಾವು ಮಾಡಿದಂತಾಗುತ್ತದೆ.
ಕರ್ನಾಟಕ ಸರ್ಕಾರ ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯನ್ನು ಜೀವನೋಪಾಯಕ್ಕೆ ಅಡ್ಡಿ ಎಂದು ವಿರೋಧಿಸುತ್ತಿರುವುದರ ಜೊತೆಗೆ ನಿವ್ವಳ ಶೂನ್ಯ ಗುರಿಯ ಮೂಲಕ ಜಾಗತಿಕ ಮಟ್ಟ ದಲ್ಲಿ ಹವಾಮಾನ ನಾಯಕತ್ವ ವಹಿಸುವ ಆಶಯ ಹೊಂದಿದೆ. ಎರಡು ನಿಲುವುಗಳ ನಡುವಿನ ವೈರುಧ್ಯವನ್ನು ಸರ್ಕಾರ ಬಗೆಹರಿಸಿಕೊಳ್ಳಬೇಕಿದೆ. ಪಶ‍್ಚಿಮ
ಘಟ್ಟದ ಅರಣ್ಯ ಉಳಿಸದೆ, ಅಲ್ಲಿನ ನದಿ ಮೂಲ ಗಳನ್ನು ಕಾಪಾಡದೆ, ಜಲವಿದ್ಯುತ್ ಮತ್ತು ಗಣಿ ಗಾರಿಕೆ ಯೋಜನೆಗಳಿಗೆ ಕಾಡು ಬಲಿಕೊಡುತ್ತಲೇ ಇಂಗಾಲ ತಟಸ್ಥತೆ ಸಾಧಿಸುವುದು ಅಸಾಧ್ಯ. ನಿವ್ವಳ ಶೂನ್ಯವೆಂಬುದು ಬರೀ ಇಂಧನ ಮತ್ತು ಕೈಗಾರಿಕಾ ವಲಯದ ಲೆಕ್ಕಾಚಾರವಲ್ಲ. ಭೂ ಬಳಕೆ, ಅರಣ್ಯ ನೀತಿ ಮತ್ತು ಜೀವವೈವಿಧ್ಯ ಸಂರಕ್ಷಣೆಯ ಜೊತೆ ಬೆಸೆದುಕೊಂಡ ಸಂಕೀರ್ಣ ವ್ಯವಸ್ಥೆ.
ಕರ್ನಾಟಕದಲ್ಲಿ ಈ ಯೋಜನೆ ಯಶಸ್ವಿ ಯಾಗಬೇಕಾದರೆ ಕೆಲವು ಅಂಶಗಳನ್ನು ಸ್ಪಷ್ಟವಾಗಿ ಮನಗಾಣಬೇಕು. ಹಾಲಿ ಇರುವ ನೈಸರ್ಗಿಕ ಪರಿಸರ ವ್ಯವಸ್ಥೆಯನ್ನು ಯಾವುದೇ ಕಾರಣಕ್ಕೂ ನಾಶ ಮಾಡಬಾರದು. ಜನಪ್ರಿಯತೆಗಾಗಿ ವೈಜ್ಞಾನಿಕ ಆಧಾರವಿಲ್ಲದ ನೀತಿಗಳನ್ನು ಜಾರಿಗೊಳಿಸಬಾರದು. ನಿವ್ವಳ ಶೂನ್ಯವೆಂಬುದು ಸಸಿ ನೆಡುವ, ಸೌರ ಫಲಕ ಅಳವಡಿಸುವ ಯೋಜನೆಗಳ ಪಟ್ಟಿಯಾಗಬಾರದು.

