Dailyhunt Logo
  • Light mode
    Follow system
    Dark mode
    • Play Story
    • App Story
ಅಕ್ಷರ ಲೋಕದ ಆದಿಬೆಳಕು: ಕನ್ನಡದ ಪ್ರಾಚೀನತೆಯ ಅಮರ ಶಿಲಾಸಾಕ್ಷಿ 'ಹಲ್ಮಿಡಿ ಶಾಸನ'

ಅಕ್ಷರ ಲೋಕದ ಆದಿಬೆಳಕು: ಕನ್ನಡದ ಪ್ರಾಚೀನತೆಯ ಅಮರ ಶಿಲಾಸಾಕ್ಷಿ 'ಹಲ್ಮಿಡಿ ಶಾಸನ'

ಬೇಲೂರು (ಹಾಸನ ಜಿಲ್ಲೆ): ತಾಲ್ಲೂಕಿನ ಹಲ್ಮಿಡಿ ಗ್ರಾಮವು ಕನ್ನಡ ಭಾಷೆಯ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಸುಮಾರು 15 ಶತಮಾನಗಳ ಹಿಂದಿನ ಕನ್ನಡ ಭಾಷೆಯ ಸ್ವರೂಪ, ಅಂದಿನ ಆಡಳಿತ ವ್ಯವಸ್ಥೆ, ವೀರ ಪರಂಪರೆ ಮತ್ತು ಸಾಂಸ್ಕೃತಿಕ ಬದುಕಿನ ಕುರಿತು ಮಹತ್ವದ ಮಾಹಿತಿ ನೀಡುವ ಹಲ್ಮಿಡಿ ಶಾಸನವು ಕರ್ನಾಟಕದ ಅಮೂಲ್ಯ ಐತಿಹಾಸಿಕ ಸಂಪತ್ತು.

ಇದು ಕೇವಲ ಕಲ್ಲಿನ ಮೇಲಿನ ಬರಹವಲ್ಲ; ಕನ್ನಡ ಭಾಷೆಯ ದೀರ್ಘ ಪಯಣಕ್ಕೆ ಸಾಕ್ಷಿಯಾಗಿ ನಿಂತಿರುವ ಇತಿಹಾಸದ ಜೀವಂತ ದಾಖಲೆಯಾಗಿದೆ.

ಇತಿಹಾಸದ ಪುಟ ತೆರೆದ ಶಾಸನ: 1936ರಲ್ಲಿ ಪುರಾತತ್ವ ತಜ್ಞ ಡಾ. ಎಂ.ಎಚ್. ಕೃಷ್ಣ ಅವರು ಹಲ್ಮಿಡಿ ಶಾಸನವನ್ನು ಗುರುತಿಸಿ ಪ್ರಕಟಿಸಿದರು. ಕದಂಬರ ಕಾಲಕ್ಕೆ ಸೇರಿದ ಈ ಶಾಸನದ ಕಾಲನಿರ್ಣಯವನ್ನು, ಅದರಲ್ಲಿರುವ ಐತಿಹಾಸಿಕ ವ್ಯಕ್ತಿಗಳ ಉಲ್ಲೇಖ, ಭಾಷೆಯ ಸ್ವರೂಪ ಮತ್ತು ಲಿಪಿಯ ಲಕ್ಷಣಗಳ ಆಧಾರದ ಮೇಲೆ ಮಾಡಲಾಗಿದೆ. ಕನ್ನಡ ಭಾಷೆಯಲ್ಲಿರುವ ಅತ್ಯಂತ ಪ್ರಾಚೀನ ಪೂರ್ಣ ಪ್ರಮಾಣದ ಶಾಸನಗಳಲ್ಲಿ ಇದಕ್ಕೆ ಪ್ರಮುಖ ಸ್ಥಾನವಿದೆ.

ಕದಂಬರು ಕರ್ನಾಟಕದ ಪ್ರಾಚೀನ ರಾಜವಂಶಗಳಲ್ಲಿ ಪ್ರಮುಖರು. ಅವರ ಕಾಲದಲ್ಲಿ ಕನ್ನಡ ಭಾಷೆಯು ಆಡಳಿತಾತ್ಮಕ ಮತ್ತು ಸಾಮಾಜಿಕ ವ್ಯವಹಾರಗಳಲ್ಲಿ ಬಳಕೆಯಲ್ಲಿದ್ದುದಕ್ಕೆ ಹಲ್ಮಿಡಿ ಶಾಸನವು ಮಹತ್ವದ ಪುರಾವೆಯಾಗಿದೆ. ಕನ್ನಡವು ಕೇವಲ ಜನರ ಆಡುಭಾಷೆಯಾಗಿರದೆ, ಅಧಿಕೃತ ದಾಖಲೆಗಳನ್ನು ರೂಪಿಸುವ ಸಾಮರ್ಥ್ಯ ಹೊಂದಿದ್ದ ಭಾಷೆಯಾಗಿತ್ತು ಎಂಬುದನ್ನು ಈ ಶಾಸನದ ಮೂಲಕ ಅರಿಯಬಹುದು.

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಲ್ಮಿಡಿ ಗ್ರಾಮದ ಹಲ್ಮಿಡಿ ಶಾಸನದ ಹಳೆಯ ಪ್ರತಿಕೃತಿ ಮಂಟಪ

ಭಾಷೆ ಮತ್ತು ಲಿಪಿಯ ವೈಶಿಷ್ಟ್ಯ: ಹಲ್ಮಿಡಿ ಶಾಸನವು 16 ಸಾಲುಗಳನ್ನು ಹೊಂದಿದ್ದು, ಹಳಗನ್ನಡದ ಪ್ರಾಚೀನ ರೂಪ ಮತ್ತು ಅಂದಿನ ಲಿಪಿಯ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಶಾಸನದ ಮೊದಲ ಸಾಲಿನಲ್ಲಿ ಸಂಸ್ಕೃತದಲ್ಲಿ ವಿಷ್ಣುವಿನ ಸ್ತುತಿಯಿದ್ದು, ಉಳಿದ ಭಾಗವು ಕನ್ನಡದಲ್ಲಿದೆ. ಕನ್ನಡದ ಪದರಚನೆ, ವ್ಯಾಕರಣದ ಬಳಕೆ ಮತ್ತು ಸಂಸ್ಕೃತದ ಪ್ರಭಾವವನ್ನು ಅಧ್ಯಯನ ಮಾಡಲು ಇದು ಭಾಷಾಶಾಸ್ತ್ರಜ್ಞರಿಗೆ ಮಹತ್ವದ ಆಕರವಾಗಿದೆ.

ಈ ಶಾಸನದ ಗದ್ಯಶೈಲಿಯು ಅಂದಿನ ಭಾಷೆಯ ಅಭಿವ್ಯಕ್ತಿ ಸಾಮರ್ಥ್ಯವನ್ನು ತೋರಿಸುತ್ತದೆ. ಕನ್ನಡದ ಲಿಖಿತ ಪರಂಪರೆ ಎಷ್ಟು ಹಿಂದಿನಿಂದಲೂ ಬೆಳೆದಿತ್ತು ಎಂಬುದನ್ನು ತಿಳಿಯಲು ಇದು ನೆರವಾಗುತ್ತದೆ. ಹೀಗಾಗಿ, ಹಲ್ಮಿಡಿ ಶಾಸನವು ಕನ್ನಡ ಭಾಷೆಯ ಪ್ರಾಚೀನತೆಯಷ್ಟೇ ಅಲ್ಲದೆ, ಅದರ ಸಾಹಿತ್ಯಿಕ ಮತ್ತು ವ್ಯಾಕರಣಾತ್ಮಕ ಬೆಳವಣಿಗೆಯ ಅಧ್ಯಯನಕ್ಕೂ ಅಮೂಲ್ಯವಾಗಿದೆ.

ಬೇಲೂರು ತಾಲ್ಲೂಕಿನ ಹಲ್ಮಿಡಿ ಗ್ರಾಮದ ಹಲ್ಮಡಿ ಶಾಸನದ ನೂತನ ಪ್ರತಿಕೃತಿ ಮಂಟಪ

ಹಲ್ಮಿಡಿ ಶಾಸನದ ಪಠ್ಯ

1. ಜಯತಿ ಶ್ರೀ ಪರಿಷ್ವಙ್ಗಶ್ಯಾಙ್ರ್ಗ [ವ್ಯಾ] ನತಿರಚ್ಯುತಃ ದಾನವಾಕ್ಷ್ಣೋರ್ಯುಗಾನ್ತಗ್ನಿಃ [ಶಿಷ್ಟಾನಾನ್ತು] ಸುದರ್ಶನ: ||
2. ನಮ: ಶ್ರೀಮತ್ಕದಂಬಪನ್ತ್ಯಾಗಸಂಪನ್ನನ್ಕಲಭೋರ[ನಾ] ಅರಿಕ
3. ಕುಸ್ಥಭಟ್ಟೋರನಾಳೆ ನರಿದಾವಿ[ಳೆ] ನಾಡುಳ್ ಮೃಗೇಶನಾ
4. ಗೇನ್ದ್ರಾಭೀಳಭ್ರ್ಬಟಹರಪ್ಪೋರ್ ಶ್ರೀ ಮೃಗೇಶನಾಗಾಹ್ವಯ
5. ರಿವ್ರ್ವರಾ ಬಟರಿಕುಲಾಮಲವ್ಯೋಮತಾರಾಧಿನಾಥನ್ನಳಪ
6. ಗಣಪಶುಪತಿಯಾ ದಕ್ಷಿಣಾಪಥ ಬಹುಶತಹವನಾ
7. ಹವದು[ಳ್] ಪಶುಪ್ರದಾನ ಶೌಯ್ರ್ಯೋದ್ಯಮಭರಿತೋ [ನ್ದಾನ]ಪ
8. ಶುಪತಿಯೆನ್ದು ಪೊಗಳೆಪ್ಪೊಟ್ಟಣ ಪಶುಪತಿ
9. ನಾಮಧೇಯನಾಸರಕ್ಕೆಲ್ಲಭಟರಿಯಾ ಪ್ರೇಮಾಲಯ
10. ಸುತನ್ಗೆ ಸೇನ್ದ್ರಕಬಣೋಭಯದೇಶದಾ ವೀರಾಪುರುಷ ಸಮಕ್ಷ
11. ದೆ ಕೇಕಯ ಪಲ್ಲವರಂ ಕಾದೆರಿದು ಪೆತ್ತಜಯನಾ ವಿಜ
12. ಅರಸನ್ಗೆ ಬಾಳ್ಗಳ್ಚು ಪಲ್ಮಡಿಉಂ ಮೂಳಿವಳ್ಳಿಉಂ ಕೊ
13. ಟ್ಟಾರ್ ಬಟಾರಿಕುಲದೊನಳುಕದಮ್ಬನ್ಕಳ್ದೋನ್ ಮಹಾಪಾತಕನ್
14. ಇವ್ರ್ವರುಂ ಸಳ್ಬಙ್ಗದರ್ ವಿಜಾರಸರುಂ ಪಲ್ಮಡಿಗೆ ಕುರು
15. ಮ್ಬಿಡಿವಿಟ್ಟಾರ್ ಅದಾನಳಿವೊನ್ಗೆ ಮಹಾಪಾತಕಮ್ ಸ್ವಸ್ತಿ
ಎಡಪಕ್ಕ ಸಾಲು
16. ಭಟ್ಟಗ್ರ್ಗೀಗಳ್ದೆ ಒಡ್ಡಲಿ ಆ ಪತ್ತೊನ್ದಿ ವಿಟ್ಟಾರಕರ

ಹಲ್ಮಿಡಿ ಶಾಸನ

ವೀರನಿಗೆ ಗ್ರಾಮಗಳ ದತ್ತಿ: ಶಾಸನದ ಒಳಾರ್ಥ: ಹಲ್ಮಿಡಿ ಶಾಸನವು ಅಂದಿನ ಸಮಾಜದ ವೀರಪರಂಪರೆ ಮತ್ತು ದಾನಧರ್ಮದ ಪದ್ಧತಿಗಳ ಮೇಲೂ ಬೆಳಕು ಚೆಲ್ಲುತ್ತದೆ. ಯುದ್ಧದಲ್ಲಿ ಶೌರ್ಯದಿಂದ ಹೋರಾಡಿದ ವಿಜ ಅರಸನಿಗೆ ಹಲ್ಮಿಡಿ ಮತ್ತು ಮೂಳಿವಳ್ಳಿ ಎಂಬ ಎರಡು ಗ್ರಾಮಗಳನ್ನು ದತ್ತಿಯಾಗಿ ನೀಡಿದ ವಿಚಾರವನ್ನು ಶಾಸನ ದಾಖಲಿಸಿದೆ. ಕದಂಬರು ಮತ್ತು ಕೇಕಯ-ಪಲ್ಲವರ ನಡುವಿನ ಸಂಘರ್ಷದ ಉಲ್ಲೇಖವೂ ಇದರಲ್ಲಿ ಕಂಡುಬರುತ್ತದೆ. ಇದರಿಂದ ಅಂದಿನ ರಾಜಕೀಯ ಸಂಬಂಧಗಳು, ಯುದ್ಧ ಸಂಸ್ಕೃತಿ ಮತ್ತು ಭೂದಾನದ ಮಹತ್ವದ ಕುರಿತು ತಿಳಿದುಕೊಳ್ಳಬಹುದು.

ಸಂರಕ್ಷಣೆ ಮತ್ತು ಗ್ರಾಮಕ್ಕೆ ಹೊಸ ಗುರುತು: ಹಲ್ಮಿಡಿ ಶಾಸನದ ಮೂಲ ಶಿಲೆಯನ್ನು ಬೆಂಗಳೂರಿನ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗುತ್ತಿದೆ ಎಂದು ಕರ್ನಾಟಕ ಪ್ರವಾಸೋದ್ಯಮದ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ. ಹಲ್ಮಿಡಿ ಗ್ರಾಮದಲ್ಲಿ ಇದರ ಪ್ರತಿಕೃತಿಯನ್ನು ಸ್ಥಾಪಿಸಿರುವುದರಿಂದ ಸ್ಥಳೀಯರು ಮತ್ತು ಪ್ರವಾಸಿಗರು ಶಾಸನದ ಮಹತ್ವವನ್ನು ಅರಿಯಲು ಅವಕಾಶ ದೊರೆತಿದೆ.

ಉದ್ಯಮಿ ಗ್ರಾನೈಟ್ ರಾಜಶೇಖರ್ ಅವರು ಗ್ರಾಮದಲ್ಲಿನ ಶಾಸನದ ಪ್ರತಿಕೃತಿ ಮಂಟಪಕ್ಕೆ ಮೇಲ್ಚಾವಣಿ ನಿರ್ಮಿಸಿ ಅದಕ್ಕೆ ನವೀಕೃತ ರೂಪ ನೀಡಿದ್ದಾರೆ. ಇಂತಹ ಸ್ಥಳೀಯ ಪ್ರಯತ್ನಗಳು ಪರಂಪರೆಯ ಸ್ಮಾರಕಗಳ ಬಗ್ಗೆ ಜನರಲ್ಲಿ ಆಸಕ್ತಿ ಬೆಳೆಸಲು ಸಹಕಾರಿಯಾಗುತ್ತವೆ. ಅದೇ ಸಮಯದಲ್ಲಿ, ಶಾಸನದ ಇತಿಹಾಸವನ್ನು ವಿವರಿಸುವ ಫಲಕಗಳು, ಸ್ವಚ್ಛ ಪರಿಸರ, ಉತ್ತಮ ಪ್ರವೇಶ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳಿಗೆ ಅಧ್ಯಯನ ಸೌಲಭ್ಯಗಳನ್ನು ಕಲ್ಪಿಸುವುದೂ ಅಗತ್ಯವಾಗಿದೆ.

ಕನ್ನಡಿಗರ ಹೆಮ್ಮೆಯ ಶಿಲಾಸಾಕ್ಷಿ

ಹಲ್ಮಿಡಿ ಶಾಸನವು ಒಂದು ಕಾಲಘಟ್ಟದ ದಾಖಲೆ ಆಗಿರುವುದರ ಜೊತೆಗೆ ಕನ್ನಡ ಭಾಷೆಯ ನಿರಂತರ ಬೆಳವಣಿಗೆಯ ಸಂಕೇತವೂ ಆಗಿದೆ. ಕಲ್ಲಿನಲ್ಲಿ ಕೆತ್ತಿದ ಅಕ್ಷರಗಳು ಅಂದಿನ ಜನಜೀವನ, ಆಡಳಿತ ಮತ್ತು ಭಾಷೆಯ ಕುರಿತು ಇಂದಿಗೂ ಮಾತನಾಡುತ್ತಿವೆ. ಶಾಸನದ ಸಂರಕ್ಷಣೆ ಎಂದರೆ ಕೇವಲ ಪುರಾತನ ಕಲ್ಲೊಂದನ್ನು ಉಳಿಸುವುದಲ್ಲ; ಕನ್ನಡಿಗರ ಐತಿಹಾಸಿಕ ನೆನಪು, ಭಾಷಿಕ ಗುರುತು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿಯಾಗಿದೆ.

ಹಲ್ಮಿಡಿಯ ಮಹತ್ವವನ್ನು ಅರಿತುಕೊಳ್ಳುವುದು, ಅದರ ಬಗ್ಗೆ ಅಧ್ಯಯನ ನಡೆಸುವುದು ಮತ್ತು ಈ ಪರಂಪರೆಯನ್ನು ಗೌರವಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ. ಹಲ್ಮಿಡಿ ಶಾಸನವು ಕನ್ನಡದ ಗತವೈಭವವನ್ನು ಸಾರುವ ಸ್ಮಾರಕ ಮಾತ್ರವಲ್ಲ, ಭಾಷೆಯ ಭವಿಷ್ಯವನ್ನು ಕಾಪಾಡುವ ಪ್ರೇರಣೆಯೂ ಹೌದು.

ಹಲ್ಮಿಡಿ ಶಾಸನದ ಮರು ಓದು
Dailyhunt
Disclaimer: This content has not been generated, created or edited by Dailyhunt. Publisher: Prajavani