Dailyhunt Logo
  • Light mode
    Follow system
    Dark mode
    • Play Story
    • App Story
ಅಲಯನ್ಸ್‌ ವಿವಿ ಯುವಜನೋತ್ಸವ: ವಿಜೇತರಿಗೆ ₹25 ಲಕ್ಷ ಬಹುಮಾನ ವಿತರಣೆ

ಅಲಯನ್ಸ್‌ ವಿವಿ ಯುವಜನೋತ್ಸವ: ವಿಜೇತರಿಗೆ ₹25 ಲಕ್ಷ ಬಹುಮಾನ ವಿತರಣೆ

ಆನೇಕಲ್: ಪಟ್ಟಣಕ್ಕೆ ಸಮೀಪದ ಅಲಯನ್ಸ್‌ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಅಂತರ ಕಾಲೇಜು ಯುವಜನೋತ್ಸವ 'ಅಲಯನ್ಸ್‌ ಒನ್‌ -2026'ರಲ್ಲಿ ಸಾಹಿತ್ಯ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆ ಜರುಗಿದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ₹25 ಲಕ್ಷ ಬಹುಮಾನ ವಿತರಿಸಲಾಯಿತು.

ಅಲಯನ್ಸ್‌ ಒನ್‌ ಕಾರ್ಯಕ್ರಮದಲ್ಲಿ 18 ರಾಜ್ಯಗಳ 323 ಶಿಕ್ಷಣ ಸಂಸ್ಥೆಗಳ 5,790 ವಿದ್ಯಾರ್ಥಿಗಳು ಭಾಗವಹಿಸಿದ್ದರು. 68 ಸ್ಪರ್ಧೆ ಆಯೋಜಿಸಲಾಗಿತ್ತು. ಸಾಂಸ್ಕೃತಿಕ ವಿಭಾಗದಲ್ಲಿ ಕ್ರೈಸ್ಟ್‌ ವಿಶ್ವವಿದ್ಯಾಲಯ ಪ್ರಥಮ ಪ್ರಶಸ್ತಿ ಪಡೆಯಿತು. ಕ್ರೀಡಾ ವಿಭಾಗದಲ್ಲಿ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ ಮೊದಲ ಸ್ಥಾನ ಪಡೆಯಿತು.

ಅಲಯನ್ಸ್‌ ಜೆನಿಸಿಸ್‌, ರಸಪ್ರಶ್ನೆ, ವಿಜ್ಞಾನ ವಸ್ತು ಪ್ರದರ್ಶನ, ಕ್ವಾಂಟಮ್‌ ಕಂಪ್ಯೂಟರಿಂಗ್‌ ಮಾದರಿ ಪ್ರದರ್ಶನ, ರೋಬೊಟಿಕ್ಸ್‌ ಪ್ರದರ್ಶನ, ರೋಬೊ ಪಾರ್ಕ್ ಸ್ಥಾಪನೆ, ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದ ಪ್ರದರ್ಶನ, ಕಲಾ ಮತ್ತು ಕರಕುಶಲ ಪ್ರದರ್ಶನ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದ ದೃಶ್ಯ ಗಮನ ಸೆಳೆಯಿತು.

ಉದ್ಯಮ, ಉದ್ಯಮಶೀಲತೆ, ವಿದ್ಯಾರ್ಥಿಗಳ ನಾವೀನ್ಯತೆಯ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿತ್ತು. ಸಂಗೀತ ಗಾಯಕ, ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್‌ ತಂಡದವರು ಸಂಗೀತ ಕಲಾ ಪ್ರದರ್ಶನ ನಡೆಸಿಕೊಟ್ಟರು.

ವಿದ್ಯಾರ್ಥಿಗಳ ಸಾಂಸ್ಕೃತಿಕ ಕಲಾ ಪ್ರದರ್ಶನ ಕಣ್ಮನ ಸೆಳೆಯಿತು. ಕೇರಳದ ಕೂಚುಪುಡಿ, ಮೋಹಿನಿ ಅಟ್ಟಂ, ಕರ್ನಾಟಕದ ಭರತನಾಟ್ಯ, ಯಕ್ಷಗಾನ, ರಾಜಸ್ಥಾನಿ ನೃತ್ಯ ಸೇರಿದಂತೆ ವಿವಿಧ ರಾಜ್ಯಗಳ ನೃತ್ಯಗಳನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು. ಯುವಕರ ಉತ್ಸಾಹ ಮುಗಿಲುಮುಟ್ಟಿತ್ತು. ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿದ್ದರಿಂದ ಅಲಯನ್ಸ್‌ ವಿಶ್ವವಿದ್ಯಾಲಯದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು.

ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಿದ್ದ ಫ್ಯಾಷನ್‌ ಶೋ ನೋಡುಗರ ಗಮನ ಸೆಳೆಯಿತು. ಬಳಕುವ ಬಳ್ಳಿಗಳಂತೆ ಬಗೆ ಬಗೆಯ ಉಡುಗೆಗಳನ್ನು ತೊಟ್ಟು ರ್‍ಯಾಂಪ್‌ ಮೇಲೆ ವಿದ್ಯಾರ್ಥಿಗಳು ಬರುತ್ತಿದ್ದಂತೆ ನೋಡುಗರು ಚಪ್ಪಾಳೆ, ಶಿಳ್ಳೆ ಹಾಕುವ ಮೂಲಕ ಪ್ರೋತ್ಸಾಹ ನೀಡಿದರು. 30ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ಫ್ಯಾಷನ್‌ ಶೋನಲ್ಲಿ ಭಾಗಿಯಾಗಿದ್ದರು.

ಸಪ್ತಗಿರಿ ಕಾಲೇಜ್‌ ಫ್ಯಾಷನ್‌ ಶೋನಲ್ಲಿ ಪ್ರಥಮ ಸ್ಥಾನ ಪಡೆಯಿತು. ವಿನೂತನ ರೀತಿಯ ಉಡುಗೆಗಳನ್ನು ತೊಟ್ಟಿದ್ದು ಗಮನ ಸೆಳೆಯಿತು. ಗೋಣಿ, ಕೃತಕ ನವಿಲು ಗರಿ ಸೇರಿದಂತೆ ವಿವಿಧ ವಸ್ತುಗಳ ಮೂಲಕ ಉಡುಗೆ ಸಿದ್ದಪಡಿಸಿ ಫ್ಯಾಷನ್‌ ಶೋನಲ್ಲಿ ಧರಿಸಿ ರ‍್ಯಾಂಪ್‌ ವಾಕ್‌ ಮಾಡಿದರು. ಮೂರು ದಿನದ ಯುವ ಜನೋತ್ಸವವಕ್ಕೆ ಸೋಮವಾರ ರಾತ್ರಿ ಅದ್ದೂರಿ ತೆರೆ ಬಿದ್ದಿತು.

ಗಮನ ಸೆಳೆದ ಫ್ಯಾಷನ್‌ ಶೋ

261104-15-1714922321

Dailyhunt
Disclaimer: This content has not been generated, created or edited by Dailyhunt. Publisher: Prajavani