ತಿಪಟೂರು: ನಗರದ ಅಂಬೇಡ್ಕರ್ ಭವನ ಹಾಗೂ ಬಾಬು ಜಗಜೀವನ್ ರಾಮ್ ಭವನಗಳಿಗೆ ಕ್ರೈಸ್ ಸಂಸ್ಥೆಯ ಕಾರ್ಯಪಾಲಕ ಎಂಜಿನಿಯರ್ ಅರುಣಾ ಹಾಗೂ ಸಹಾಯಕ ಎಂಜಿನಿಯರ್ ಹರೀಶ್ ಸೋಮವಾರ ಭೇಟಿ ನೀಡಿ ಉದ್ಘಾಟನೆಗೆ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.
ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ತ್ರಿವೇಣಿ, ಭವನಗಳಲ್ಲಿ ಬಾಕಿ ಇರುವ ಕಾಮಗಾರಿ ಕುರಿತು ಅವರಿಗೆ ಮಾಹಿತಿ ನೀಡಿದರು.
ಎರಡೂ ಭವನಗಳು ನಿರ್ಮಾಣಗೊಂಡಿದ್ದರೂ ಉದ್ಘಾಟನಾ ಭಾಗ್ಯ ಕಾಣದೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕುರಿತು 'ಪ್ರಜಾವಾಣಿ'ಯಲ್ಲಿ ವರದಿ ಪ್ರಕಟವಾಗಿತ್ತು.
ಪರಿಶೀಲನೆ ವೇಳೆ, ಎರಡೂ ಭವನಗಳಲ್ಲಿ ನೀರಿನ ಪೈಪ್‌ಲೈನ್ ವ್ಯವಸ್ಥೆ, ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದ ಸಲಕರಣೆಗಳ ಅಳವಡಿಕೆ ಹಾಗೂ ಶೌಚಾಲಯಗಳ ದುರಸ್ತಿ ಸೇರಿದಂತೆ ಕೆಲವು ಮೂಲಸೌಕರ್ಯಗಳ ಕಾಮಗಾರಿಗಳು ಬಾಕಿ ಉಳಿದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
'ಎರಡೂ ಭವನಗಳಲ್ಲಿ ಬಾಕಿ ಇರುವ ಕಾಮಗಾರಿಗಳನ್ನು 15 ದಿನಗಳ ಒಳಗೆ ಪೂರ್ಣಗೊಳಿಸಲಾಗುವುದು. ಬಳಿಕ ಸಮಾಜ ಕಲ್ಯಾಣ ಇಲಾಖೆಗೆ ಅಧಿಕೃತವಾಗಿ ಹಸ್ತಾಂತರಿಸಲಾಗುವುದು' ಎಂದು ಕ್ರೈಸ್ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.
261104-17-1446096163

