ಮಂಗಳೂರು: ಅಮೆಜಾನ್ ಗ್ರಾಹಕರ ಸಹಾಯವಾಣಿ ನೆಪದಲ್ಲಿ ಮಹಿಳೆಯೊಬ್ಬರ ಬ್ಯಾಂಕ್ ಖಾತೆಯಿಂದ ₹ 1.30 ಲಕ್ಷ ಹಣವನ್ನು ಬೇರೆ ಖಾತೆಗೆ ವರ್ಗಾಯಿಸಿ ವಂಚನೆ ನಡೆಸಿದ ಬಗ್ಗೆ ಇಲ್ಲಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
'ಅ.21ರಂದು ಮನೆಯಲ್ಲಿದ್ದಾಗ ಅಮೆಜಾನ್ ಆಯಪ್‌ನಲ್ಲಿ ಸೀಲಿಂಗ್ ಫ್ಯಾನ್ ಬುಕ್ ಮಾಡಿದ್ದೆ.
ಅದಕ್ಕೆ ಪತಿಯ ಗೂಗಲ್ ಪೇ ಖಾತೆಯಿಂದ ₹ 7903 ಪಾವತಿಸಿದ್ದೆ. ನಂತರ, ನಾನು ಬುಕ್ ಮಾಡಿದ್ದ ಸೀಲಿಂಗ್ ಫ್ಯಾನ್ ಆರ್ಡರ್ ರದ್ದಾಗಿರುವುದು ಅಮೆಜಾನ್ ಆಯಪ್ ಮೂಲಕ ತಿಳಿಯಿತು. ಆದರೆ, ಹಣ ಮರುಪಾವತಿ ಆಗಿರಲಿಲ್ಲ. ಅ.31ರಂದು ಮೊಬೈಲ್ ಬಳಸಿ ಗೂಗಲ್‌ನಲ್ಲಿ ಅಮೆಜಾನ್ ಕಸ್ಟಮರ್ ಕೇರ್ ಸಹಾಯವಾಣಿಗಾಗಿ ಹುಡುಕಿದ್ದೆ. ಆಗ ಅದರಲ್ಲಿ ನಮೂದಾಗಿದ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿದ್ದೆ.'
'ಆರಂಭದಲ್ಲಿ ಕರೆ ಕಡಿತಗೊಂಡಿತು. ಕೆಲ ಹೊತ್ತಿನ ಬಳಿಕ ಅಪರಿಚಿತ ವ್ಯಕ್ತಿ ಅದೇ ಮೊಬೈಲ್ ನಂಬರ್‌ನಿಂದ ನನ್ನ ಮೊಬೈಲ್‌ಗೆ ಕರೆ ಮಾಡಿ, ಅಮೆಜಾನ್ ಕಸ್ಟಮರ್ ಕೇರ್ ಪ್ರತಿನಿಧಿ ಎಂದು ಪರಿಚಯಿಸಿ ಕೊಂಡಿದ್ದ. ಆತನ ಗುರುತಿನ ಸಂಖ್ಯೆಯನ್ನೂ ತಿಳಿಸಿದ್ದ. ಬಳಿಕ ನನಗೆ ತಿಳಿಯದಂತೆ ನನ್ನ ಬ್ಯಾಂಕ್ ಖಾತೆಯಿಂದ ಒಮ್ಮೆ ₹ 80 ಸಾವಿರ ಹಾಗೂ ಇನ್ನೊಮ್ಮೆ ₹ 50 ಸಾವಿರ ಸ್ವಯಂಚಾಲಿತವಾಗಿ ಕಡಿತಗೊಂಡಿದೆ. ಆನ್‌ಲೈನ್‌ನಲ್ಲಿ ವಂಚನೆ ಮಾಡಿದವರ ವಿರುದ್ಧ ಕ್ರಮ ಜರುಗಿಸಬೇಕೆಂದು ಸಂತ್ರಸ್ತ ಮಹಿಳೆ ಒತ್ತಾಯಿಸಿದ್ದಾರೆ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
261104-29-1385421381

