ನವದೆಹಲಿ: ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸರಕುಗಳ ಮೇಲೆ ಶೇ 100ರವರೆಗೆ ಸುಂಕ ವಿಧಿಸುವ ಕ್ರಮ ಜಾರಿಗೆ ಬಂದಲ್ಲಿ ಎರಡೂ ದೇಶಗಳ ನಡುವಿನ ವ್ಯಾಪಾರ ಸಂಬಂಧದಲ್ಲಿ ಅನಿಶ್ಚಿತತೆ ಮೂಡಲಿದೆ ಎಂದು ರಫ್ತುದಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಪ್ರಮಾಣದ ಸುಂಕವು ಜಾರಿಗೆ ಬಂದಲ್ಲಿ ಭಾರತದಿಂದ ಅಮೆರಿಕಕ್ಕೆ ಆಗುವ ರಫ್ತು ವಹಿವಾಟಿಗೆ ಧಕ್ಕೆ ಉಂಟಾಗಲಿದೆ ಎಂದು ಅವರು ಹೇಳಿದ್ದಾರೆ.
ಭಾರತದ ರಫ್ತು ವಹಿವಾಟಿಗೆ ನಿರ್ದಿಷ್ಟವಾಗಿ ಯಾವ ಪ್ರಮಾಣದಲ್ಲಿ ಹಾನಿ ಉಂಟಾಗಲಿದೆ ಎಂಬುದು ಸುಂಕದ ಪ್ರಮಾಣ, ಯಾವೆಲ್ಲ ಸರಕುಗಳಿಗೆ ಅದು ಅನ್ವಯವಾಗುತ್ತದೆ ಹಾಗೂ ಯಾವಾಗಿನಿಂದ ಜಾರಿಗೆ ಬರುತ್ತದೆ ಎಂಬುದು ಪ್ರಕಟವಾದ ನಂತರದಲ್ಲಿ ಗೊತ್ತಾಗಲಿದೆ ಎಂದು ಹೇಳಿದ್ದಾರೆ.
ರಷ್ಯಾದ ಸರಕುಗಳ ಮೇಲೆ ಹಾಗೂ ಆ ದೇಶದಿಂದ ಇಂಧನವನ್ನು ಭಾರಿ ಪ್ರಮಾಣದಲ್ಲಿ ಖರೀದಿಸುವ ದೇಶಗಳ ಸರಕುಗಳ ಮೇಲೆ ಶೇ 100ರವರೆಗೆ ಸುಂಕ ವಿಧಿಸಲು ಅವಕಾಶ ಕಲ್ಪಿಸುವ ಕಾನೂನಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರ ಸಹಿ ಹಾಕಿದ್ದಾರೆ.
'ಅಮೆರಿಕವು ಭಾರತದ ಸರಕುಗಳ ಮೇಲೆ ಭಾರಿ ಪ್ರಮಾಣದ ಸುಂಕ ವಿಧಿಸಿದಲ್ಲಿ ಅಮೆರಿಕಕ್ಕೆ ನಮ್ಮ ರಫ್ತು ವಹಿವಾಟು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ಅಷ್ಟೊಂದು ಸುಂಕ ಪಾವತಿಸಿ ಯಾರೂ ನಮ್ಮ ಸರಕುಗಳನ್ನು ಆಮದು ಮಾಡಿಕೊಳ್ಳುವುದಿಲ್ಲ' ಎಂದು ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟದ (ಎಫ್‌ಐಇಒ) ಅಧ್ಯಕ್ಷ ಎಸ್.ಸಿ. ರಲ್ಹಾನ್ ಹೇಳಿದ್ದಾರೆ.
ಸುಂಕದ ಪ್ರಮಾಣಕ್ಕಿಂತಲೂ ಅನಿಶ್ಚಿತ ಸಂದರ್ಭವು ಹೆಚ್ಚಿನ ಪರಿಣಾಮವನ್ನು ಉಂಟುಮಾಡಲಿದೆ ಎಂದು ಮುಂಬೈ ಮೂಲದ ರಫ್ತುದಾರ ಹಾಗೂ ಟೆಕ್ನೊಕ್ರಾಫ್ಟ್ ಇಂಡಸ್ಟ್ರೀಸ್‌ನ ಸಿಎಂಡಿ ಶರದ್ ಸರಾಫ್ ಹೇಳಿದ್ದಾರೆ. 'ಸುಂಕದ ವಿವರಗಳು ಪ್ರಕಟವಾದ ನಂತರ ನಾವು ಪರಿಣಾಮದ ಬಗ್ಗೆ ಸ್ಪಷ್ಟ ಚಿತ್ರಣ ಹೊಂದಬಹುದು. ನಮ್ಮ ಪ್ರತಿಸ್ಪರ್ಧಿ ದೇಶ ಚೀನಾದ ಸರಕುಗಳ ಮೇಲೆ ಎಷ್ಟು ಸುಂಕ ಜಾರಿಯಾಗುತ್ತದೆ ಎಂಬುದನ್ನೂ ನಾವು ಗಮನಿಸಬೇಕು. ಆರೋಗ್ಯಕರವಾಗಿ ಇದ್ದ ವಾಣಿಜ್ಯ ಸಂಬಂಧದಲ್ಲಿ ಹೊಸ ಕಾನೂನು ಅನಿಶ್ಚಿತತೆಯನ್ನು ಸೃಷ್ಟಿಸುತ್ತಿದೆ' ಎಂದು ಸರಾಫ್ ಅವರು ಹೇಳಿದ್ದಾರೆ.
ನವೆಂಬರ್‌ನಲ್ಲಿ ಅಮೆರಿಕದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದ್ದು, ಟ್ರಂಪ್ ಅವರು ಭಾರತ ಹಾಗೂ ಇತರ ಕೆಲವು ದೇಶಗಳ ಮೇಲೆ ಒತ್ತಡ ಹೇರಲು ಈ ಕಾನೂನನ್ನು ಅಸ್ತ್ರವಾಗಿ ಬಳಸಬಹುದು ಎಂದು ಅವರು ಊಹಿಸಿದ್ದಾರೆ.
ಅಮೆರಿಕದ ಹೊಸ ನಡೆಯು ಭಾರತದ ರಫ್ತುದಾರರ ಪಾಲಿಗೆ ದೊಡ್ಡ ತಲೆಬಿಸಿಯ ವಿಚಾರ ಎಂದು ಭಾರತೀಯ ವ್ಯಾಪಾರ ಉತ್ತೇಜನ ಮಂಡಳಿಯ (ಟಿಪಿಸಿಐ) ಅಧ್ಯಕ್ಷ ಮೋಹಿತ್ ಸಿಂಗ್ಲಾ ಹೇಳಿದ್ದಾರೆ. 'ಈ ಪ್ರಮಾಣದ ಸುಂಕವು ಜಾರಿಗೆ ಬಂದಲ್ಲಿ ಭಾರತ ಮತ್ತು ಅಮೆರಿಕದ ನಡುವಿನ ವಾಣಿಜ್ಯ ಸಂಬಂಧಕ್ಕೆ ಧಕ್ಕೆ ಆಗಬಹುದು' ಎಂದು ಸಿಂಗ್ಲಾ ಅಂದಾಜು ಮಾಡಿದ್ದಾರೆ.

